ಹೈದರಾಬಾದ್, ಜ. 26: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ತೆಲಂಗಾಣ ಪೊಲೀಸರು ಹನಿ ಟ್ರ್ಯಾಪ್ (Honey Trap Case) ಜಾಲವನ್ನು ಬಯಲಿಗೆಳೆದಿದ್ದಾರೆ. ಕರೀಂನಗರದಲ್ಲಿ ಕಾರ್ಯಾಚರಿಸುತ್ತಿದ್ದ ಈ ಜಾಲವನ್ನು ಗಂಡ-ಹೆಂಡತಿಯೇ ನಿರ್ವಹಿಸುತ್ತಿದ್ದರು (Crime News). ಇಬ್ಬರನ್ನು ವಶಕ್ಕೆ ಪಡೆದ ಕರೀಂನಗರ ಗ್ರಾಮಾಂತರ ಪೊಲೀಸರು ಅವರನ್ನು ಜೈಲಿಗೆ ಕಳುಹಿಸಿದ್ದಾರೆ. ಇವರು ಅಮಾಯಕರನ್ನು ಬಲೆಗೆ ಬೀಳಿಸಿ ಲಕ್ಷಾಂತರ ರುಪಾಯಿ ವಸೂಲಿ ಮಾಡಿರುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಅಚ್ಚರಿ ಎಂದರೆ ಪತಿಯೇ ತನ್ನ ಪತ್ನಿಯನ್ನು ಪರಪುರುಷರ ಬಳಿಗೆ ಕಳುಹಿಸಿ ಅವರ ಏಕಾಂತ ಕ್ಷಣವನ್ನು ಚಿತ್ರೀಕರಿಸುತ್ತಿದ್ದ. ಆ ಮೂಲಕ ಪತ್ನಿಯನ್ನು ಮುಂದಿಟ್ಟು ಹಣ ಮಾಡುತ್ತಿದ್ದ.
ಲಲಿತಾ ಮತ್ತು ಆಕೆಯ ಪತಿ ಬಂಧಿತರು. ಈ ದಂಪತಿ 12 ಲಕ್ಷ ರುಪಾಯಿಗಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಉದ್ಯಮಿ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕಾರ ದಂಪತಿಯ ಈ ಸೆಕ್ಸ್ ರಾಕೆಟ್ ಸುಮಾರು 100 ಮಂದಿಯನ್ನು ಟಾರ್ಗೆಟ್ ಮಾಡಿದೆ. ಸೋಶಿಯಲ್ ಮೀಡಿಯಾ ಬಳಸಿ ಶ್ರೀಮಂತರು, ಉದ್ಯಮಿಗಳನ್ನು ಬಲೆಗೆ ಬೀಳಿಸಿ ಇವರು ಹಣ ಪೀಕಿಸುತ್ತಿದ್ದರು.
ಹನಿಟ್ರ್ಯಾಪ್ ಘಟನೆಯ ವಿವರ:
ಇನ್‌ಸ್ಟಾಗ್ರಾಮ್ ಮೂಲಕ ಟ್ರ್ಯಾಪ್
ಲಲಿತಾ ಸೋಶಿಯಲ್ ಮೀಡಿಯಾ ಅದರಲ್ಲೂ ಇನ್‌ಸ್ಟಾಗ್ರಾಮ್ ಮೂಲಕವೇ ಪುರುಷರನ್ನು ಮರಳು ಮಾಡುತ್ತಿದ್ದಳು. ಇದಕ್ಕಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಆಕರ್ಷಕ ಫೋಟೊ ಹಾಕಿ ಪ್ರೊಫೈಲ್ ಕ್ರಿಯೇಟ್ ಮಾಡುತ್ತಿದ್ದಳು. ಆ ಮೂಲಕ ಪುರುಷರನ್ನು ಸಂಪರ್ಕಿಸುತ್ತಿದ್ದಳು. ಒಮ್ಮೆ ಪರಿಚಯವಾದರೆ ಸಾಕು ಬಳಿಕ ಆತ್ಮೀಯವಾಗಿ ಮಾತನಾಡುತ್ತಿದ್ದಳು. ಪೋಲಿ ಜೋಕ್ ಮೂಲಕ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಳು. ನಂತರ ಅಶ್ಲೀಲ ಫೋಟೊ ಕಳುಹಿಸಿ ಪುರುಷರ ವಿಶ್ವಾಸ ಗಳಿಸುತ್ತಿದ್ದಳು. ಬಲೆಗೆ ಬಿದ್ದರು ಎಂದು ಗೊತ್ತಾದಾಗ ನಿರ್ಜನ ಪ್ರದೇಶದಲ್ಲಿರುವ ಫ್ಲ್ಯಾಟ್‌ಗೆ ಆಹ್ವಾನಿಸುತ್ತಿದ್ದಳು. ಇನ್ನು ಆಕೆಯ ಪತಿ ಹಿಡನ್ ಕ್ಯಾಮರಾ ಇಟ್ಟು ಇವರ ಖಾಸಗಿ ಕ್ಷಣಗಳನ್ನು ಸೆರೆ ಹಿಡಿಯುತ್ತಿದ್ದ.
ಬೆಂಗಳೂರಲ್ಲಿ 68ರ ವೃದ್ಧನಿಗೆ ಯುವತಿ ಹನಿ ಟ್ರ್ಯಾಪ್; 2 ಕೋಟಿ ನೀಡುವಂತೆ ಬೇಡಿಕೆ!
ಬ್ಲ್ಯಾಕ್‌ಮೇಲ್ ಮೂಲಕ ಹಣದ ಆಮಿಷ
ಅಲ್ಲಿಗೆ ಅವರ ಒಂದು ಹಂತದ ಕಾರ್ಯಾಚರಣೆ ಮುಗಿಯುತ್ತದೆ. ಅದಾದ ನಂತರದ್ದೇ ಮಹತ್ವದ ಹಂತ. ಲಲಿತಾ ಜತೆ ಅಶ್ಲೀಲ ಭಂಗಿಯಲ್ಲಿದ್ದ ಫೋಟೊ, ವಿಡಿಯೊ ಕಳುಹಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹಣ ನೀಡದಿದ್ದರೆ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಹೀಗೆ ಲಕ್ಷಾಂತರ ರುಪಾಯಿ ದೋಚಿದ್ದ ದಂಪತಿಯ ಗ್ರಹಚಾರ ಇತ್ತೀಚೆಗೆ ಕೆಟ್ಟಿತು. ದೂರು ನೀಡಿದ್ದ ಉದ್ಯಮಿಯ ಬಳಿ ದಂಪತಿ 12 ಲಕ್ಷ ರುಪಾಯಿ ಬೇಡಿಕೆ ಇಟ್ಟಿದ್ದರು. ಆತ ಹಂತ ಹಂತವಾಗಿ 5 ಲಕ್ಷ ರುಪಾಯಿಯಂತೆ ಪಾವತಿಸುವುದಾಗಿ ತಿಳಿಸಿದ್ದ. ಇಷ್ಟಕ್ಕೆ ತೃಪ್ತರಾಗದ ದಂಪತಿ ಹೆಚ್ಚುವರಿ 5 ಲಕ್ಷ ರುಪಾಯಿಗೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸೆತ್ತ ಸಂತ್ರಸ್ತ ಪೊಲೀಸರ ಮೊರೆ ಹೋಗಿದ್ದ. ಬಳಿಕ ಪೊಲೀಸರು ಸ್ಟಿಂಗ್ ಆಪರೇಷನ್ ನಡೆಸಿ ದಂಪತಿಯ ಜಾಲವನ್ನು ಬಯಲಿಗೆಳೆದರು.
ದಾಳಿ ವೇಳೆ ಪೊಲೀಸರು ದಂಪತಿಯ ಬಳಿಯಿಂದ ಅಶ್ಲೀಲ ವಿಡಿಯೊಗಳನ್ನು ಒಳಗೊಂಡ ಹಲವು ಸ್ಮಾರ್ಟ್ ಫೋನ್, ಬ್ಯಾಂಕ್ ಚೆಕ್, ನಗದು ಮತ್ತು ಐಷಾರಾಮಿ ಕಾರು ವಶಕ್ಕೆ ಪಡೆದಿದ್ದಾರೆ. ಮಂಚೇರಿಯಲ್ ಮೂಲದ ಈ ದಂಪತಿ ಉದ್ಯಮದಲ್ಲಿ ನಷ್ಟ ಅನುಭವಿಸಿದ ಬಳಿಕ ಕರೀಂನಗರಕ್ಕೆ ವಲಸೆ ಬಂದಿದ್ದರು. ವ್ಯವಹಾರ ನಷ್ಟದಿಂದ ಉಂಟಾದ ಸಾಲ ತೀರಿಸಲು ತ್ವರಿತವಾಗಿ ಹಣ ಮಾಡಬಹುದು ಎನ್ನುವ ಕಾರಣಕ್ಕೆ ಹನಿ ಟ್ರ್ಯಾಪ್‌ಗೆ ಇಳಿದಿದ್ದರು ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ. ಯೂಟ್ಯೂಬ್ ಮೂಲಕ ಇವರು ಹನಿಟ್ರ್ಯಾಪ್ ಬಗ್ಗೆ ತಿಳಿದುಕೊಂಡಿದ್ದರು ಎನ್ನಲಾಗಿದೆ.