ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿ ಪ್ರಯಾಣ ಬೆಳೆಸಿದ ಅನಿಲ್ ಮೆನನ್; ಯಾರಿವರು? ಹಿನ್ನೆಲೆಯೇನು?

ಕೇರಳ ಮೂಲದ ನಾಸಾ ಗಗನಯಾತ್ರಿ ಅನಿಲ್ ಮೆನನ್ ಅವರು ಸೊಯುಜ್ MS-29 ಬಾಹ್ಯಾಕಾಶ ನೌಕೆಯಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಯಶಸ್ವಿಯಾಗಿ ಪ್ರಯಾಣ ಬೆಳೆಸಿದ್ದಾರೆ. ಅವರ ಸಾಧನೆಗೆ ಕೇರಳ ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಅಭಿನಂದನೆ ಸಲ್ಲಿಸಿದ್ದು, ಇದು ಕೇರಳದ ಜನರಿಗೆ ಹೆಮ್ಮೆಯ ಕ್ಷಣವಾಗಿದೆ.

ಕೇರಳ ಮೂಲದ ನಾಸಾ ಗಗನಯಾತ್ರಿ ಅನಿಲ್ ಮೆನನ್ ಐಎಸ್ಎಸ್‌ಗೆ ಯಶಸ್ವಿ ಹಾರಾಟ

ಗಗನಯಾತ್ರಿ ಅನಿಲ್ ಮೆನನ್ -

Profile
Sushmitha Jain Jul 15, 2026 3:48 PM

ತಿರುವನಂತಪುರಂ: ಕೇರಳ ಮೂಲದ ನಾಸಾ (NASA) ಗಗನಯಾತ್ರಿ ಅನಿಲ್ ಮೆನನ್ ಅವರು ಮಂಗಳವಾರ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಯಶಸ್ವಿಯಾಗಿ ಪ್ರಯಾಣ ಬೆಳೆಸಿದ್ದು, ಕೇರಳದ ಜನರಿಗೆ ಹೆಮ್ಮೆಯ ಕ್ಷಣವಾಗಿದೆ. ಅನಿಲ್ ಮೆನನ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸರ್ ಸಿ. ಶಂಕರನ್ ನಾಯರ್ ಅವರ ಮೊಮ್ಮಗನ ಮಗ (Great-grandson) ಆಗಿದ್ದಾರೆ. ಅವರ ಮೂಲ ನಿವಾಸವು ಪಾಲಕ್ಕಾಡ್ ಜಿಲ್ಲೆಯ ಒಟ್ಟಪ್ಪಾಲಂ ಪ್ರದೇಶದಲ್ಲಿದೆ.

ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್‌ಲೆಕರ್ ಅವರು ಫೇಸ್‌ಬುಕ್ ಮೂಲಕ ಅನಿಲ್ ಮೆನನ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಕಳೆದ ವರ್ಷ ಒಟ್ಟಪ್ಪಾಲಂನಲ್ಲಿರುವ ಚೆಟ್ಟೂರು ಹೌಸ್ ಎಂಬ ಅವರ ಪೂರ್ವಜರ ಮನೆಯನ್ನು ಭೇಟಿ ನೀಡಿ ಸರ್ ಸಿ. ಶಂಕರನ್ ನಾಯರ್ ಅವರಿಗೆ ಗೌರವ ಸಲ್ಲಿಸಿದ್ದನ್ನು ಅವರು ಸ್ಮರಿಸಿದರು.

ಮುಖ್ಯಮಂತ್ರಿ ವಿ. ಡಿ. ಸತೀಶನ್ ಕೂಡ ಅನಿಲ್ ಮೆನನ್ ಹಾಗೂ ಅವರೊಂದಿಗೆ ಪ್ರಯಾಣಿಸುತ್ತಿರುವ ಸಹ ಗಗನಯಾತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು. ಕಝಾಕಿಸ್ತಾನದ ಬೈಕೋನೂರ್ ಕಾಸ್ಮೋಡ್ರೋಮ್ ನಿಂದ ಉಡಾವಣೆಯಾದ ಸೊಯುಜ್ MS-29 ಬಾಹ್ಯಾಕಾಶ ನೌಕೆಯ ಮೂಲಕ ಅವರು ಐಎಸ್ಎಸ್‌ಗೆ ಪ್ರಯಾಣ ಬೆಳೆಸಿದರು. ಇದು 3.5 ಕೋಟಿ ಕೇರಳಿಗರಿಗೆ ಹೆಮ್ಮೆಯ ಕ್ಷಣ ಎಂದು ಮುಖ್ಯಮಂತ್ರಿ ಹೇಳಿದರು.

ಅನಿಲ್ ಮೆನನ್ ಯಾರು?

49 ವರ್ಷದ ಅನಿಲ್ ಮೆನನ್ ಅವರು ಅಮೆರಿಕದ ಮಿನಿಯಾಪೊಲಿಸ್ ನಗರದಲ್ಲಿ ಭಾರತೀಯ ಮೂಲದ ತಂದೆ ಹಾಗೂ ಉಕ್ರೇನ್ ಮೂಲದ ತಾಯಿಗೆ ಜನಿಸಿದರು. ಅವರು ನ್ಯೂರೋಬಯಾಲಜಿ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿಷಯಗಳಲ್ಲಿ ಪದವಿ ಪಡೆದಿದ್ದಾರೆ.

ಅವರು ತುರ್ತು ವೈದ್ಯಕೀಯ ತಜ್ಞ (Emergency Medicine Physician) ಆಗಿದ್ದು, ಅಮೆರಿಕದ ಸ್ಪೇಸ್ ಫೋರ್ಸ್‌ನ ಕರ್ನಲ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಅಮೆರಿಕದ ವಾಯುಪಡೆಯಲ್ಲಿದ್ದ ವೇಳೆ ಆಪರೇಷನ್ ಎಂಡ್ಯೂರಿಂಗ್ ಫ್ರೀಡಮ್ ಸಂದರ್ಭದಲ್ಲಿ ಅಫ್ಘಾನಿಸ್ತಾನದಲ್ಲಿ ಸೇವೆ ಸಲ್ಲಿಸಿದ್ದರು. ಜೊತೆಗೆ ಹಿಮಾಲಯನ್ ರೆಸ್ಕ್ಯೂ ಅಸೋಸಿಯೇಷನ್ ಜೊತೆ ಸೇರಿ ಎವರೆಸ್ಟ್ ಪರ್ವತಾರೋಹಿಗಳಿಗೆ ವೈದ್ಯಕೀಯ ನೆರವು ನೀಡಿದ್ದರು.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಭಾರತೀಯ ಮೂಲದ ನಾಸಾ ಗಗನಯಾತ್ರಿ ಅನಿಲ್ ಮೆನನ್

ಒಂದು ವರ್ಷದ ಕಾಲ ಭಾರತದಲ್ಲಿ ರೋಟರಿ ಅಂಬಾಸಿಡೋರಿಯಲ್ ಸ್ಕಾಲರ್ ಆಗಿ ಕಾರ್ಯನಿರ್ವಹಿಸಿ, ಪೋಲಿಯೊ ಲಸಿಕಾ ಅಭಿಯಾನಕ್ಕೆ ಬೆಂಬಲ ನೀಡಿದ್ದರು.

ನಾಸಾ ಮತ್ತು ಸ್ಪೇಸ್‌ಎಕ್ಸ್‌ನಲ್ಲಿ ಸೇವೆ

2014ರಲ್ಲಿ ನಾಸಾದಲ್ಲಿ ಫ್ಲೈಟ್ ಸರ್ಜನ್ ಆಗಿ ಸೇರಿದ್ದ ಅನಿಲ್ ಮೆನನ್, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಗಗನಯಾತ್ರಿಗಳ ಆರೋಗ್ಯದ ಜವಾಬ್ದಾರಿಯನ್ನು ನಿರ್ವಹಿಸಿದರು.

2018ರಲ್ಲಿ ಸ್ಪೇಸ್‌ಎಕ್ಸ್ ಸೇರಿ ಸಂಸ್ಥೆಯ ವೈದ್ಯಕೀಯ ಕಾರ್ಯಕ್ರಮವನ್ನು ಆರಂಭಿಸಿದರು. ಮೊದಲ ಮಾನವಸಹಿತ ಬಾಹ್ಯಾಕಾಶ ಹಾರಾಟಗಳ ಸಿದ್ಧತೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ಸ್ಟಾರ್‌ಶಿಪ್ ಯೋಜನೆಯ ಅಭಿವೃದ್ಧಿಯಲ್ಲೂ ಕಾರ್ಯನಿರ್ವಹಿಸಿದರು.

2021ರ ಡಿಸೆಂಬರ್‌ನಲ್ಲಿ ಅವರು ನಾಸಾ ಗಗನಯಾತ್ರಿಯಾಗಿ ಆಯ್ಕೆಯಾಗಿದ್ದು, ನಂತರ ಎರಡು ವರ್ಷಗಳ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿದರು.

ಅವರ ಪತ್ನಿ ಅನ್ನಾ ವಿಲ್ಹೆಲ್ಮ್ ಕೂಡ ಗಗನಯಾತ್ರಿಯಾಗಿದ್ದು, 2024ರ ಸೆಪ್ಟೆಂಬರ್‌ನಲ್ಲಿ ಸ್ಪೇಸ್‌ಎಕ್ಸ್‌ನ ಖಾಸಗಿ ಮಾನವಸಹಿತ ಬಾಹ್ಯಾಕಾಶ ಯಾನದಲ್ಲಿ ಭಾಗವಹಿಸಿ ಸುಮಾರು ಐದು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಕಳೆದಿದ್ದರು.