ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಭಾರತೀಯ ಮೂಲದ ನಾಸಾ ಗಗನಯಾತ್ರಿ ಅನಿಲ್ ಮೆನನ್
ಭಾರತೀಯ ಮೂಲದ ನಾಸಾ ಗಗನಯಾತ್ರಿ ಅನಿಲ್ ಮೆನನ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದಾರೆ. ಸೋಯುಜ್ ಎಂಎಸ್-29 ಬಾಹ್ಯಾಕಾಶ ನೌಕೆಯಲ್ಲಿ ಅವರು ಮಂಗಳವಾರ ಬಾಹ್ಯಾಕಾಶಕ್ಕೆ ಹಾರಿದ್ದು, ಅದು ಬುಧವಾರ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. ಈ ಕುರಿತು ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಂಗ್ರಹ ಚಿತ್ರ -
ವಾಷಿಂಗ್ಟನ್: ರಷ್ಯಾದ ಸೋಯುಜ್ ಎಂಎಸ್-29 ಬಾಹ್ಯಾಕಾಶ ನೌಕೆಯಲ್ಲಿ ( Russia's Soyuz MS-29 spacecraft) ಮಂಗಳವಾರ ಬಾಹ್ಯಾಕಾಶಕ್ಕೆ ತೆರಳಿರುವ ಭಾರತೀಯ ಮೂಲದ ನಾಸಾ ಗಗನಯಾತ್ರಿ ಅನಿಲ್ ಮೆನನ್ (astronaut Anil Menon) ಅವರು ಬುಧವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸುರಕ್ಷಿತವಾಗಿ ಇಳಿದಿದ್ದಾರೆ. ಈ ಕುರಿತು ಮಾಹಿತಿಯನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಾಹ್ಯಾಕಾಶ ಹಾರಾಟಕ್ಕೆ ಅವರು ಸುಮಾರು ಎಂಟು ತಿಂಗಳಿನಿಂದ ತಯಾರಿ ನಡೆಸುತ್ತಿದ್ದರು. ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನ ಪ್ರದರ್ಶನಗಳ ಭಾಗವಾಗಿರುವ ಈ ಕಾರ್ಯಾಚರಣೆಯಲ್ಲಿ ಅನಿಲ್ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಿದ್ದಾರೆ.
ಅನಿಲ್ ಮೆನನ್ ಅವರು ರೋಸ್ಕೋಸ್ಮೋಸ್ ಗಗನಯಾತ್ರಿಗಳಾದ ಪಯೋಟರ್ ಡುಬ್ರೊವ್ ಮತ್ತು ಅನ್ನಾ ಕಿಕಿನಾ ಅವರೊಂದಿಗೆ ಸೋಯುಜ್ ಬಾಹ್ಯಾಕಾಶ ನೌಕೆಯ ಮೂಲಕ ಕಝಾಕಿಸ್ತಾನ್‌ನ ಬೈಕೊನೂರ್ ಕಾಸ್ಮೋಡ್ರೋಮ್‌ನಿಂದ ಅವರು ಬಾಹ್ಯಾಕಾಶಕ್ಕೆ ಹಾರಿದ್ದರು. ಸುಮಾರು ಮೂರು ಗಂಟೆಗಳ ಎರಡು ಕಕ್ಷೆಯ ಪ್ರಯಾಣದ ಬಳಿಕ ಅವರು ಬುಧವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದಾರೆ.
ಅನಿಲ್ ಸೇರಿದಂತೆ ಮೂವರು ಗಗನಯಾತ್ರಿಗಳು ಮಂಗಳವಾರ ಬೆಳಗ್ಗೆ 10.47ಕ್ಕೆ (ಸ್ಥಳೀಯ ಸಮಯ ಸಂಜೆ 7.47) ಸೋಯುಜ್ ಎಂಎಸ್-29 ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣ ಆರಂಭಿಸಿದ್ದರು. ಶೀಘ್ರದಲ್ಲೇ ಇವರನ್ನು ಇನ್ನೊಂದು ಗಗನಯಾತ್ರಿಗಳ ತಂಡ ಸೇರಿಕೊಳ್ಳಲಿದೆ. ಒಟ್ಟು 10 ಗಗನಯಾತ್ರಿಗಳು ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನ ಪ್ರದರ್ಶನಗಳಲ್ಲಿ ಭಾಗಿಯಾಗಲಿದ್ದಾರೆ.
ಬಾಹ್ಯಾಕಾಶ ಪ್ರಯಾಣಕ್ಕೂ ಮೊದಲು ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡ ಅನಿಲ್ ಮೆನನ್, ಯುನೈಟೆಡ್ ಸ್ಟೇಟ್ಸ್ ಬಾಹ್ಯಾಕಾಶ ಪಡೆಗೆ ಸೇವೆ ಸಲ್ಲಿಸಲು ಮತ್ತು ನಾಸಾ ಅಂತಾರಾಷ್ಟ್ರೀಯ ಪಾಲುದಾರರಿಗೆ ಬೆಂಬಲವಾಗಿ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲು ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.
ಇನ್ನೊಂದು ಪೋಸ್ಟ್ ನಲ್ಲಿ ಅವರು ಕಝಾಕಿಸ್ತಾನ್‌ನಿಂದ ಸೋಯುಜ್ ಎಂಎಸ್-29 ನಲ್ಲಿ ಉಡಾವಣೆ ಮಾಡಲು ಮತ್ತು ನಾಸಾ ಮತ್ತು ಎಕ್ಸ್‌ಪೆಡಿಶನ್ 74/75 ಅನ್ನು ಬೆಂಬಲಿಸುವ ಎಂಟು ತಿಂಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಉತ್ಸುಕನಾಗಿದ್ದೇನೆ. ನಾಸಾ ಸಮುದಾಯ, ಸ್ನೇಹಿತರು, ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಕೃತಜ್ಞನಾಗಿರುತ್ತೇನೆ ಎಂದು ತಿಳಿಸಿದ್ದಾರೆ.
ಅನಿಲ್ ಮೆನನ್, ಡುಬ್ರೋವ್ ಮತ್ತು ಕಿಕಿನಾ ಅವರು 2027ರ ಏಪ್ರಿಲ್ ವರೆಗೆ ಕಕ್ಷೆಯ ಪ್ರಯೋಗಾಲಯದಲ್ಲಿ ಉಳಿಯಲಿದ್ದಾರೆ. ಇದು ಮೆನನ್ ಅವರ ಮೊದಲ ಬಾಹ್ಯಾಕಾಶ ಪ್ರಯಾಣ ಮತ್ತು ಡುಬ್ರೋವ್ ಮತ್ತು ಕಿಕಿನಾ ಇಬ್ಬರಿಗೂ ಎರಡನೇ ಕಾರ್ಯಾಚರಣೆಯಾಗಿದೆ ಎಂದು ನಾಸಾ ಹೇಳಿದೆ.
ಅನಿಲ್ ಮೆನನ್ ಅವರು ಮಾನವ ಬಾಹ್ಯಾಕಾಶ ಪರಿಶೋಧನೆಯನ್ನು ಮುನ್ನಡೆಸುವ ಮತ್ತು ಭೂಮಿಯ ಮೇಲಿನ ಜೀವಕ್ಕೆ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿರುವ ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನ ಪ್ರದರ್ಶನಗಳನ್ನು ನಡೆಸಲಿದ್ದಾರೆ. ಇದು ಭವಿಷ್ಯದಲ್ಲಿ ಬಾಹ್ಯಾಕಾಶ ಯಾತ್ರಿಕರಿಗೆ ಅಲ್ಲಿಯೇ ವೈದ್ಯಕೀಯ ಬೆಂಬಲ ಪಡೆಯಲು ಸಹಾಯವಾಗಲಿದೆ. ಮೆನನ್ ಅವರು ಬಾಹ್ಯಾಕಾಶದಲ್ಲಿ ರಕ್ತದ ಹರಿವು ಹೇಗೆ ಬದಲಾಗುತ್ತದೆ ಎಂಬುದನ್ನು ಅಧ್ಯಯನ ನಡೆಸಲಿದ್ದಾರೆ ಎಂದು ನಾಸಾ ತಿಳಿಸಿದೆ.
ಪ್ರಾಚೀನತೆಯಿಂದ ಆಧುನಿಕತೆಯತ್ತ ಭಾರತ-ಇಂಡೋನೇಷ್ಯಾ ಸಹಭಾಗಿತ್ವ
ಜುಲೈ 25 ರಂದು ಗಗನಯಾತ್ರಿಗಳಾದ ಕ್ರಿಸ್ ವಿಲಿಯಮ್ಸ್, ರೋಸ್ಕೋಸ್ಮೋಸ್ ಗಗನಯಾತ್ರಿಗಳಾದ ಸೆರ್ಗೆ ಕುಡ್-ಸ್ವೆರ್ಚ್‌ಕೋವ್, ಸೆರ್ಗೆಯ್ ಮಿಕೇವ್ ಅವರು ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲಿದ್ದಾರೆ. ಅನಿಲ್ ಮೆನನ್ ಅವರ ಬಾಹ್ಯಾಕಾಶ ಯಾತ್ರೆಗೆ ಹಲವಾರು ಸಂಸ್ಥೆಗಳು ಮತ್ತು ಬೆಂಬಲಿಗರು ಅಭಿನಂದನಾ ಸಂದೇಶಗಳನ್ನು ಕಳುಹಿಸಿದ್ದಾರೆ.