ಗ್ರಾಮೀಣ ಪ್ರದೇಶದದಲ್ಲಿ LPG ಸಿಲಿಂಡರ್ ಬುಕಿಂಗ್ ಅಂತರ 45 ದಿನಗಳಿಂದ 25 ದಿನಗಳಿಗೆ ಇಳಿಕೆ: ಕೇಂದ್ರದಿಂದ ಮಹತ್ವದ ನಿರ್ಧಾರ ಪ್ರಕಟ
LPG Refill: ಎಲ್ಪಿಜಿ ಪೂರೈಕೆ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶದ LPG ರಿಫಿಲ್ ಬುಕಿಂಗ್ ಅಂತರವನ್ನು 45 ದಿನಗಳಿಂದ 25 ದಿನಗಳಿಗೆ ಇಳಿಸಿದೆ. ಇನ್ಮುಂದೆ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಎಲ್ಲ ಗೃಹಬಳಕೆ LPG ಗ್ರಾಹಕರು 25 ದಿನಗಳ ಅಂತರದಲ್ಲಿ ಸಿಲಿಂಡರ್ ಬುಕ್ ಮಾಡಬಹುದು.
ಸಾಂದರ್ಭಿಕ ಚಿತ್ರ -
ನವದೆಹಲಿ, ಸೆ. 7: ಎಲ್ಪಿಜಿ (LPG) ಪೂರೈಕೆ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮುಂದೆ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಎಲ್ಲಾ ಗೃಹಬಳಕೆ ಎಲ್ಪಿಜಿ ಗ್ರಾಹಕರು 25 ದಿನಗಳ ಅಂತರದಲ್ಲಿ ಸಿಲಿಂಡರ್ ರಿಫಿಲ್ ಬುಕ್ ಮಾಡಬಹುದು. ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಎಲ್ಪಿಜಿ ಪೂರೈಕೆಯ ಮೇಲೆ ಒತ್ತಡ ಉಂಟಾಗಿದ್ದರಿಂದ ಈ ಹಿಂದೆ ನಗರ ಪ್ರದೇಶಗಳಲ್ಲಿ 25 ದಿನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ಅಂತರದಲ್ಲಿ ಮಾತ್ರ ಸಿಲಿಂಡರ್ ಬುಕಿಂಗ್ಗೆ ಅವಕಾಶ ನೀಡಲಾಗಿತ್ತು.
ಪ್ರಸ್ತುತ ಎಲ್ಪಿಜಿ ಪೂರೈಕೆ ಸುಧಾರಿಸಿದ್ದು, ರಿಫಿಲ್ಗಳ ಬಾಕಿ ಬೇಡಿಕೆಯೂ ಗಣನೀಯವಾಗಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ವಿಧಿಸಲಾಗಿದ್ದ 45 ದಿನಗಳ ಬುಕಿಂಗ್ ಅಂತರವನ್ನು 25 ದಿನಗಳಿಗೆ ಇಳಿಸಲಾಗಿದೆ.
LPG Gas Price: ಗುಡ್ನ್ಯೂಸ್... ಗುಡ್ನ್ಯೂಸ್! LPG ಗ್ಯಾಸ್ ಮತ್ತಷ್ಟು ಅಗ್ಗ!
ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಸುರೇಶ್ ಗೋಪಿ ಸೋಮವಾರ ಈ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬದಲಾವಣೆಯನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ಪೆಟ್ರೋಲಿಯಂ ಸಚಿವಾಲಯವು ತೈಲ ಮಾರುಕಟ್ಟೆ ಕಂಪನಿಗಳಿಗೆ (OMCs) ಸೂಚನೆ ನೀಡಿದೆ.
ಇದರಿಂದ ದೇಶಾದ್ಯಂತ ನಗರ–ಗ್ರಾಮೀಣ ಎಂಬ ಭೇದವಿಲ್ಲದೆ ಎಲ್ಲಾ ಗೃಹಬಳಕೆ LPG ಗ್ರಾಹಕರಿಗೂ 25 ದಿನಗಳ ಅಂತರದಲ್ಲಿ ರೀಫಿಲ್ ಬುಕ್ ಮಾಡುವ ಅವಕಾಶ ಲಭ್ಯವಾಗಲಿದೆ.
ಜೂನ್ನಲ್ಲಿ ವಾಣಿಜ್ಯ LPG ನಿರ್ಬಂಧ ಸಡಿಲಿಕೆ
ಇದಕ್ಕೂ ಮೊದಲು ಜೂನ್ನಲ್ಲಿ ಭಾರತವು ವಾಣಿಜ್ಯ LPG ಪೂರೈಕೆಯ ಮೇಲಿದ್ದ ಕೆಲವು ನಿರ್ಬಂಧಗಳನ್ನು ಹಿಂಪಡೆದಿತ್ತು. ಯುದ್ಧಕ್ಕೂ ಮುನ್ನ ಇದ್ದ ಸಾಮಾನ್ಯ ಮಟ್ಟದಲ್ಲಿ ಗೃಹೇತರ ಪ್ಯಾಕೇಜ್ಡ್ LPG ಪೂರೈಸುವಂತೆ ಪೆಟ್ರೋಲಿಯಂ ಸಚಿವಾಲಯವು OMCಗಳಿಗೆ ಸೂಚಿಸಿತ್ತು.
ಕೈಗಾರಿಕೆಗಳು ಮತ್ತು ವಾಣಿಜ್ಯ ವಲಯಗಳ ಕಾರ್ಯಾಚರಣೆಗೆ ತೊಂದರೆಯಾಗದಂತೆ, ಸಂಕಷ್ಟಕ್ಕೂ ಮುನ್ನದ ಬಳಕೆಯ ಮಟ್ಟದ 50%ವರೆಗೆ LPG ಪೂರೈಕೆಗೆ ಅವಕಾಶ ನೀಡುವ ಮೂಲಕ ಸರ್ಕಾರ ಪೂರೈಕೆ ನಿರ್ಬಂಧಗಳನ್ನೂ ಹಂತಹಂತವಾಗಿ ಸಡಿಲಿಸಿತ್ತು.
US–Iran ಯುದ್ಧದಿಂದ LPG ಬೆಲೆ ಏರಿಕೆ
ಫೆಬ್ರವರಿಯಲ್ಲಿ ಅಮೆರಿಕ–ಇಸ್ರೇಲ್ ಸಂಘರ್ಷ ಇರಾನ್ನೊಂದಿಗೆ ಯುದ್ಧದ ರೂಪ ಪಡೆದ ಬಳಿಕ ಹಾಗೂ ಹೋರ್ಮುಜ್ ಜಲಸಂಧಿ ಬಂದ್ ಆಗಿರುವ ಹಿನ್ನೆಲೆಯಲ್ಲಿ ಜಾಗತಿಕ ತೈಲ ಮತ್ತು ಇಂಧನ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾಗಿತ್ತು. ದೇಶದಲ್ಲಿ LPG ಕೊರತೆ ಉಂಟಾಗದಂತೆ ಕೇಂದ್ರ ಸರ್ಕಾರ Essential Commodities Act ಅಡಿಯಲ್ಲಿ ಹಲವು ಕ್ರಮಗಳನ್ನು ಕೈಗೊಂಡಿತ್ತು.
LPG ಪೂರೈಕೆಗೆ ಅಗತ್ಯವಿರುವ C3 ಮತ್ತು C4 ಅನಿಲಗಳನ್ನು LPG ಉತ್ಪಾದನೆಗಾಗಿಯೇ ಬಳಸುವಂತೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಜಾಗತಿಕ ಇಂಧನ ಬೆಲೆ ಏರಿಕೆಯ ಪರಿಣಾಮ ಭಾರತದಲ್ಲೂ ಗೃಹಬಳಕೆಯ LPG ಬೆಲೆ ಹೆಚ್ಚಾಗಿತ್ತು. ಮಾರ್ಚ್ನಲ್ಲಿ 14.2 ಕೆ.ಜಿ. ಸಿಲಿಂಡರ್ ಬೆಲೆಯನ್ನು ₹60 ಹೆಚ್ಚಿಸಲಾಗಿತ್ತು. ಬಳಿಕ ಜೂನ್ನಲ್ಲಿ ಮತ್ತೆ ₹29 ಏರಿಕೆ ಮಾಡಲಾಗಿದ್ದು, ದೆಹಲಿಯಲ್ಲಿ 14.2 ಕೆ.ಜಿ. ಗೃಹಬಳಕೆಯ LPG ಸಿಲಿಂಡರ್ ಬೆಲೆ ₹942ಕ್ಕೆ ತಲುಪಿತ್ತು.