ಡ್ರೈವಿಂಗ್ ಲೈಸೆನ್ಸ್ ನಿಯಮಗಳಲ್ಲಿ ಬದಲಾವಣೆ ಸಾಧ್ಯತೆ: ಶೇ 75 ಅಂಕ ಕಡ್ಡಾಯ ಸೇರಿ ಹಲವು ನಿಯಮಗಳು ಜಾರಿ?
Driving licence rules: ಕೇಂದ್ರ ಸರ್ಕಾರವು ಚಾಲನಾ ಪರವಾನಗಿ ನಿಯಮಗಳಲ್ಲಿ ಬದಲಾವಣೆ ತರಲು ಯೋಜಿಸಿದೆ. ಈ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಚಾಲನಾ ಪರವಾನಗಿ ಪಡೆಯಲು ಆನ್‌ಲೈನ್ ಮೌಲ್ಯಮಾಪನದಲ್ಲಿ ಉತ್ತೀರ್ಣರಾಗುವುದನ್ನು ಕಡ್ಡಾಯಗೊಳಿಸುವ ನಿಯಮವನ್ನು ಮತ್ತಷ್ಟು ಬಿಗಿಗೊಳಿಸುವ ಸಾಧ್ಯತೆಯಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಅ.23: ಕೇಂದ್ರ ಸರ್ಕಾರವು ಚಾಲನಾ ಪರವಾನಗಿ (Driving licence) ನಿಯಮಗಳಲ್ಲಿ ಬದಲಾವಣೆ ತರಲು ಯೋಜಿಸಿದೆ. ಈ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಇದರ ಪ್ರಕಾರ, ಭಾರತೀಯ ನಾಗರಿಕರು (Indian citizens) ಮತ್ತು ವಿದೇಶಿ ನಾಗರಿಕರಿಗೆ ವಿಭಿನ್ನ ಬಣ್ಣಗಳ ಚಾಲನಾ ಪರವಾನಗಿಗಳನ್ನು ನೀಡುವ ಪ್ರಸ್ತಾವನೆ ಇದೆ. ಅಲ್ಲದೆ, ಚಾಲನಾ ಪರವಾನಗಿ ಪಡೆಯಲು ಆನ್‌ಲೈನ್ ಮೌಲ್ಯಮಾಪನದಲ್ಲಿ ಉತ್ತೀರ್ಣರಾಗುವುದನ್ನು ಕಡ್ಡಾಯಗೊಳಿಸುವ ನಿಯಮವನ್ನು ಮತ್ತಷ್ಟು ಬಿಗಿಗೊಳಿಸುವ ಸಾಧ್ಯತೆಯಿದೆ. ಆದರೆ, ಇವೆಲ್ಲವೂ ಸದ್ಯ ಪ್ರಸ್ತಾವನೆಗಳಷ್ಟೇ ಆಗಿದ್ದು, ಈ ನಿಯಮಗಳನ್ನು ಜಾರಿಗೆ ತರಲು ಸಚಿವಾಲಯವು ಅಂತಿಮ ನಿಯಮಗಳನ್ನು ಪ್ರಕಟಿಸಬೇಕಿದೆ.
ಸಚಿವಾಲಯದ ಪ್ರಸ್ತಾವನೆಯ ಪ್ರಕಾರ, ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಅನ್ನು ಹೊಂದಿರುವ ವ್ಯಕ್ತಿಯ ರಾಷ್ಟ್ರೀಯತೆಯನ್ನು ಸೂಚಿಸುವ ವ್ಯವಸ್ಥೆ ಜಾರಿಗೆ ಬರಬಹುದು. ಇದಕ್ಕಾಗಿ ಭಾರತೀಯರು ಮತ್ತು ವಿದೇಶಿ ನಾಗರಿಕರಿಗೆ ವಿಭಿನ್ನ ಬಣ್ಣದ ಚಾಲನಾ ಪರವಾನಗಿಗಳನ್ನು ನೀಡುವ ಪ್ರಸ್ತಾವನೆ ಮಾಡಲಾಗಿದೆ. ಇದರಿಂದ ಪರವಾನಗಿಯನ್ನು ನೋಡಿದ ತಕ್ಷಣ ಅದರ ಮಾಲೀಕರ ರಾಷ್ಟ್ರೀಯತೆಯನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗಬಹುದು.
ಡ್ರೈವಿಂಗ್ ಲೈಸೆನ್ಸ್ ಪಡೆಯಲು ಶೇ. 75 ಅಂಕ ಕಡ್ಡಾಯ?
ಚಾಲನಾ ಪರವಾನಗಿಗೆ ಸಂಬಂಧಿಸಿದ ಆನ್‌ಲೈನ್ ಸುರಕ್ಷಿತ ಚಾಲನಾ ಟ್ಯುಟೋರಿಯಲ್ ಮೌಲ್ಯಮಾಪನ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಪ್ರಸ್ತುತ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಶೇ. 60 ಅಂಕ ಪಡೆಯುವುದು ಅಗತ್ಯವಾಗಿದೆ. ಆದರೆ, ಹೊಸ ಪ್ರಸ್ತಾವನೆಯ ಪ್ರಕಾರ ಈ ಕನಿಷ್ಠ ಅಂಕಗಳ ಮಿತಿಯನ್ನು ಶೇ. 75ಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ. ವಾಹನವನ್ನು ಸುರಕ್ಷಿತವಾಗಿ ಹೇಗೆ ಚಲಾಯಿಸಬೇಕು ಎಂಬ ಬಗ್ಗೆ ಕಟ್ಟುನಿಟ್ಟಾಗಿ ಪರೀಕ್ಷಿಸುವುದು ಸರ್ಕಾರದ ಉದ್ದೇಶವಾಗಿದೆ.
ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ನೋಟರಿ ಮುಂದೆ ಸಲ್ಲಿಸುವ ಅಫಿಡವಿಟ್‌ಗಳನ್ನು ವಯಸ್ಸು ಮತ್ತು ವಿಳಾಸದ ಪುರಾವೆಯಾಗಿ ಬಳಸುವುದಕ್ಕೆ ಮಿತಿ ವಿಧಿಸುವ ಪ್ರಸ್ತಾವನೆಯನ್ನು ಕರಡು ನಿಯಮಗಳಲ್ಲಿ ಮಾಡಲಾಗಿದೆ. ನಕಲಿ ದಾಖಲೆಗಳ ಮೂಲಕ ಚಾಲನಾ ಪರವಾನಗಿ ಪಡೆಯುವುದನ್ನು ತಡೆಯುವುದು ಮತ್ತು ಅಫಿಡವಿಟ್‌ಗಳ ದುರ್ಬಳಕೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.
ಚಾಲನಾ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವವರು ತಮ್ಮ ರಕ್ತದ ಗುಂಪು, ಮೊಬೈಲ್ ಸಂಖ್ಯೆ ಹಾಗೂ ತುರ್ತು ಸಂದರ್ಭದಲ್ಲಿ ಸಂಪರ್ಕಿಸಬೇಕಾದ ವ್ಯಕ್ತಿಯ ಮಾಹಿತಿಯನ್ನು ನೀಡುವುದನ್ನು ಕಡ್ಡಾಯಗೊಳಿಸುವ ಸಾಧ್ಯತೆಯಿದೆ. ಇದಲ್ಲದೆ, ಹೆಸರು, ವಿಳಾಸ ಮತ್ತು ಸಂಪರ್ಕ ಸಂಖ್ಯೆಯನ್ನು ಬದಲಾಯಿಸುವಂತಹ ಕೆಲವು ಸೇವೆಗಳಿಗೆ ಶುಲ್ಕ ವಿನಾಯಿತಿ ನೀಡುವ ಪ್ರಸ್ತಾವನೆಯನ್ನೂ ಸಚಿವಾಲಯ ಮುಂದಿಟ್ಟಿದೆ. ಆಧಾರ್ ಮೂಲಕ ಆನ್‌ಲೈನ್ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ ಈ ಸೇವೆಗಳನ್ನು ಪಡೆಯಲು ಅವಕಾಶ ಕಲ್ಪಿಸುವ ಸಾಧ್ಯತೆಯಿದೆ.