Mahakumbh Stampede: ಮಹಾ ಕುಂಭಮೇಳದ ಕಾಲ್ತುಳಿತ; ಹೇಗಾಯ್ತು ಈ ದುರಂತ?
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾರೀ ದುರಂತ ಸಂಭವಿಸಿದೆ. ಮೌನಿ ಅಮಾವಾಸ್ಯೆ ದಿನವಾದ ಬುಧವಾರ (ಜ. 29) ಒಮ್ಮಿಂದೊಮ್ಮೆಲೇ ಭಕ್ತ ಪ್ರವಾಹ ಹರಿದು ಬಂದಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಹಲವು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಗ್ಗೆ ಪ್ರಧಾನಿ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ.
ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ (Mahakumbh Mela 2025)ದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ (Mahakumbh Stampede). ಘಟನೆಯಲ್ಲಿ 15 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರ ಬಿದ್ದಿಲ್ಲ. ಮೌನಿ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಶಾಹಿ ಸ್ನಾನಕ್ಕಾಗಿ ಇಂದು (ಜ. 29) ಒಮ್ಮಿಂದೊಮ್ಮೆಲೆ ಭಕ್ತರು ಪ್ರವಾಹೋಪಾದಿಯಲ್ಲಿ ಪ್ರಯಾಗ್‌ರಾಜ್‌ಗೆ ಹರಿದು ಬಂದಿದ್ದರಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಆಘಾತ ವ್ಯಕ್ತಪಡಿಸಿದ್ದಾರೆ.
ಪ್ರಯಾಗ್‌ರಾಜ್‌ನ ಸಂಗಮ್ ಘಾಟ್‌ನಲ್ಲಿ ಇಂದು ಮುಂಜಾನೆ 3ರ ವೇಳೆಗೆ ಕಾಲ್ತುಳಿತ ಸಂಭವಿಸಿದೆ. ಅಂದಾಜು ಪ್ರಕಾರ ಮೌನಿ ಅಮಾವಾಸ್ಯೆಯ ಪವಿತ್ರ ದಿನದಂದು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಸುಮಾರು 10 ಕೋಟಿ ಮಂದಿ ಪ್ರಯಾಗ್‌ರಾಜ್‌ಗೆ ಆಗಮಿಸಿದ್ದಾರೆ. ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಈ ಮಧ್ಯೆ ಸ್ಥಳೀಯ ಆಡಳಿತ ಸಿಬ್ಬಂದಿಯು ಕುಂಭಮೇಳಕ್ಕೆ ಭೇಟಿ ನೀಡಿದ ಗಣ್ಯ ವ್ಯಕ್ತಿಗಳತ್ತ, ಅವರ ಸುರಕ್ಷತೆಯತ್ತ ಮಾತ್ರ ಗಮನ ಹರಿಸಿತ್ತು ಎಂಬ ಆರೋಪವೂ ಕೇಳಿ ಬಂದಿದೆ.
प्रयागराज महाकुंभ में हुआ हादसा अत्यंत दुखद है। इसमें जिन श्रद्धालुओं ने अपने परिजनों को खोया है, उनके प्रति मेरी गहरी संवेदनाएं। इसके साथ ही मैं सभी घायलों के शीघ्र स्वस्थ होने की कामना करता हूं। स्थानीय प्रशासन पीड़ितों की हरसंभव मदद में जुटा हुआ है। इस सिलसिले में मैंने…
— Narendra Modi (@narendramodi) January 29, 2025
ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಸ್ಥಳವಾದ ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ಮೇಳದ ವೇಳೆ ಪವಿತ್ರ ಸ್ನಾನ ಮಾಡಿದರೆ ಪಾಪಗಳೆಲ್ಲ ಕಳೆಯುತ್ತದೆ ಎನ್ನುವ ನಂಬಿಕೆ ಇದೆ. ಅದರಲ್ಲಿಯೂ ಮೌನಿ ಅಮಾವಾಸ್ಯೆಯಂದು ಸ್ನಾನ ಮಾಡುವುದಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಯಾಗ್‌ರಾಜ್‌ನ ದೇಶ-ವಿದೇಶಗಳ ಕೋಟ್ಯಂತರ ಭಕ್ತರು ಆಗಮಿಸಿದ್ದಾರೆ.
ಕಾಲ್ತುಳಿತ ಸಂಭವಿಸಿದ್ದು ಯಾವಾಗ?
ಬುಧವಾರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಗೊಂದಲದ ವಾತಾವರಣ ಮೂಡಿ ಕಾಲ್ತುಳಿತ ಸಂಭವಿಸಿದೆ. ಸುಮಾರು 12 ಕಿ.ಮೀ. ಉದ್ದಕ್ಕೂ ಭಕ್ತರು ಕಿಕ್ಕಿರಿದು ನೆರೆದಿದ್ದರು. ಒಮ್ಮಿಂದೊಮ್ಮೆಲೆ ಭಕ್ತರು ಬ್ಯಾರಿಕೇಡ್ ಬೇಧಿಸಿ ನದಿಯತ್ತ ನುಗ್ಗಲು ಯತ್ನಿಸಿದಾಗ ಕಾಲ್ತುಳಿತ ಸಂಭವಿಸಿದೆ. ಈ ವೇಳೆ ಹಲವು ಮಂದಿ ನದಿ ದಂಡೆಯ ಮೇಲೆ ಮಲಗಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕರೆ ಮಾಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಕೇಂದ್ರದಿಂದ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಯೋಗಿ ಆದಿತ್ಯನಾಥ್ ಕೂಡ ಅಧಿಕಾರಿಗಳ ಸಭೆ ಕರೆದು ಸ್ಥಳದಲ್ಲಿ ಠಿಕಾಣಿ ಹೂಡುವಂತೆ ಸೂಚಿಸಿದ್ದಾರೆ.
ಯಾಕಿಂದು ಇಷ್ಟೊಂದು ಜನ ಪ್ರವಾಹ?
ಮಹಾ ಕುಂಭಮೇಳ ನಡೆಯುವ 6 ವಾರಗಳ ಪೈಕಿ ಮೌನಿ ಅಮಾವಾಸ್ಯೆ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಮೌನಿ ಅಮಾವಾಸ್ಯೆ ಜ. 28ರ ಸಂಜೆ 7.30ಕ್ಕೆ ಅರಂಭವಾಗಿ ಜ. 29ರ ಸಂಜೆ 6.05ಕ್ಕೆ ಮುಗಿಯುತ್ತದೆ. ಮೌನಿಯು ಸಂಸ್ಕೃತ ಪದ ʼಮೌನʼದಿಂದ ಉಂಟಾಗಿದ್ದು, ಈ ದಿನ ಅತ್ಯಂತ ಪವಿತ್ರ ಎನ್ನುವುದು ಹಿಂದೂಗಳ ನಂಬಿಕೆ. ಈ ದಿನದಂದು ಕೆಲವು ಭಕ್ತರು ಮೌನ ವ್ರತವನ್ನೂ ಆಚರಿಸುತ್ತಾರೆ. ಈ ಎಲ್ಲ ಕಾರಣಗಳಿಗೆ ಇಂದು ಪ್ರಯಾಗ್‌ರಾಜ್‌ಗೆ ಸುಮಾರು 10 ಕೋಟಿ ಭಕ್ತರು ಭೇಟಿ ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಮಹಾ ಕುಂಭಮೇಳದ ವೇಳೆ ಒಟ್ಟು 45 ಕೋಟಿ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ.
2013ರಲ್ಲಿ ನಡೆದ ಕುಂಭಮೇಳದ ವೇಳೆ ನಡೆದ ಕಾಲ್ತುಳಿತದಲ್ಲಿ 42 ಮಂದಿ ಮೃತಪಟ್ಟು, 45 ಮಂದಿ ಗಾಯಗೊಂಡಿದ್ದರು.
ಈ ಸುದ್ದಿಯನ್ನೂ ಓದಿ: Mahakumbh 2025: ಮಹಾ ಕುಂಭಮೇಳದಲ್ಲಿ ಕಾಲ್ತುಳಿತ; ಪರಿಸ್ಥಿತಿ ಅವಲೋಕಿಸಿದ ಪ್ರಧಾನಿ ಮೋದಿ
ಮೋದಿ ಸಂತಾಪ
ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ. ʼʼಪ್ರಯಾಗ್‌ರಾಜ್ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಅಪಘಾತ ಅತ್ಯಂತ ನೋವಿನ ಸಂಗತಿ. ಇದರಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಭಕ್ತರಿಗೆ ಸಂತಾಪ ಸೂಚಿಸುತ್ತಿದ್ದೇನೆ. ಇದರೊಂದಿಗೆ, ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತಿದ್ದೇನೆ. ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಹಾಯ ಮಾಡುವಲ್ಲಿ ನಿರತವಾಗಿದೆ. ಈ ನಿಟ್ಟಿನಲ್ಲಿ ನಾನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ನಾನು ರಾಜ್ಯ ಸರ್ಕಾರದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆʼʼ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.