ಮತ ಎಣಿಕೆಗೆ 3 ದಿನ ಬಾಕಿ ಇರುವಾಗಲೇ ಪಶ್ಚಿಮ ಬಂಗಾಳದಲ್ಲಿ ಹೈಡ್ರಾಮ; ಭವಾನಿಪುರ ಸ್ಟ್ರಾಂಗ್ ರೂಂಗೆ ಮಮತಾ ಬ್ಯಾನರ್ಜಿ ಭೇಟಿ: ಮತ ಎಣಿಕೆ ಅಕ್ರಮಗಳ ಬಗ್ಗೆ ಎಚ್ಚರಿಕೆ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಾನಿಪುರ ಸ್ಟ್ರಾಂಗ್ ರೂಮ್‌ಗೆ ಭೇಟಿ ನೀಡಿ ಮತ ಎಣಿಕೆಯಲ್ಲಿ ಅಕ್ರಮಗಳ ಬಗ್ಗೆ ಎಚ್ಚರಿಕೆ ನೀಡಿ, ಪಾರದರ್ಶಕತೆ ಕಾಪಾಡುವಂತೆ ಸೂಚಿಸಿದ್ದಾರೆ. ಭವಾನಿಪುರ ಕ್ಷೇತ್ರದ ಇವಿಎಂ ಸ್ಟ್ರಾಂಗ್ ರೂಂಗೆ ಭೇಟಿ ನೀಡಿದ ನಂತರ ಅವರು ಈ ಗಂಭೀರ ಆರೋಪ ಮಾಡಿದ್ದಾರೆ.
ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ) -
ಕೋಲ್ಕತ್ತಾ, ಮೇ 1: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಶುಕ್ರವಾರ ಮುಂಜಾನೆ ಮತ ಎಣಿಕೆ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಅಕ್ರಮ ಎಸಗುವ ಪ್ರಯತ್ನಗಳ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದಾರೆ. ದಕ್ಷಿಣ ಕೋಲ್ಕತ್ತಾದ ಸಖಾವತ್ ಮೆಮೋರಿಯಲ್ ಶಾಲೆಯಲ್ಲಿರುವ ಭವಾನಿಪುರ (Bhavanipur) ಕ್ಷೇತ್ರದ ಇವಿಎಂ ಸ್ಟ್ರಾಂಗ್ ರೂಂಗೆ ಭೇಟಿ ನೀಡಿದ ನಂತರ ಅವರು ಈ ಗಂಭೀರ ಆರೋಪ ಮಾಡಿದ್ದಾರೆ.
ಸುಮಾರು ನಾಲ್ಕು ಗಂಟೆಗಳ ಕಾಲ ಎಣಿಕೆ ಕೇಂದ್ರದಲ್ಲಿದ್ದ ಅವರು ಮಧ್ಯರಾತ್ರಿ 12:07ರ ಸುಮಾರಿಗೆ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದರು. ನಿಗದಿಪಡಿಸಿದ ಎಣಿಕೆ ಪ್ರದೇಶದ ಒಳಗೆ ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದರು. "ಮೇಲ್ಭಾಗದಲ್ಲಿ ಅಭ್ಯರ್ಥಿ ಅಥವಾ ಒಬ್ಬ ಏಜೆಂಟ್ ಮಾತ್ರ ಇರಬಹುದು. ಮಾಧ್ಯಮಗಳಿಗಾಗಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸುವಂತೆ ನಾನು ಸಲಹೆ ನೀಡಿದ್ದೇನೆ" ಎಂದು ಅವರು ಹೇಳಿದರು. ಮತ ಎಣಿಕೆಯಲ್ಲಿ ಪಾರದರ್ಶಕತೆ ಕಾಪಾಡುವುದು ಅತ್ಯಗತ್ಯ ಎಂದು ಒತ್ತಿಹೇಳಿದ ಅವರು, ಜನರ ಮತಗಳನ್ನು ರಕ್ಷಿಸಬೇಕು ಎಂದು ತಿಳಿಸಿದರು.
ʼʼಕೆಲವು ದೂರು ಬಂದ ಹಿನ್ನೆಲೆಯಲ್ಲಿ ನಾನು ಇಲ್ಲಿಗೆ ಬಂದಿದ್ದೇನೆ. ಆದರೆ ಆರಂಭದಲ್ಲಿ ಕೇಂದ್ರ ಪಡೆಗಳು ನನ್ನನ್ನು ಒಳಗೆ ಬಿಡಲಿಲ್ಲʼʼ ಎಂದು ಮಮತಾ ದೂರಿದ್ದಾರೆ. ʼʼಮೇ 4ರಂದು ಮತ ಎಣಿಕೆ ನಡೆಯಲಿದ್ದು, ಈ ಪ್ರಕ್ರಿಯೆಯಲ್ಲಿ ಯಾವುದೇ ಹಸ್ತಕ್ಷೇಪವನ್ನು ಸಹಿಸುವುದಿಲ್ಲʼʼ ಎಂದು ಅವರು ಎಚ್ಚರಿಸಿದ್ದಾರೆ. ಇವಿಎಂ ಯಂತ್ರಗಳನ್ನು ದುರುಪಯೋಗಪಡಿಸಿಕೊಳ್ಳುವ ಸಂಶಯವಿದೆ ಎಂದು ಅವರು ಗುರುವಾರ ಸಂಜೆಯೇ ಸ್ಥಳಕ್ಕೆ ಧಾವಿಸಿದ್ದರು.
ಪಶ್ಚಿಮ ಬಂಗಾಳ ಚುನಾವಣೆ: ಮಮತಾ ಬ್ಯಾನರ್ಜಿಯ ಭದ್ರ ಕೋಟೆಯನ್ನು ಭೇದಿಸುವುದೇ ಬಿಜೆಪಿ?
ಇದೇ ವೇಳೆ ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಕೂಡ ಸ್ಥಳಕ್ಕೆ ಆಗಮಿಸಿದ್ದರು. ಮತ್ತೊಂದೆಡೆ, ಉತ್ತರ ಕೋಲ್ಕತ್ತಾದಲ್ಲಿ ಟಿಎಂಸಿ ನಾಯಕರಾದ ಕುನಾಲ್ ಘೋಷ್ ಮತ್ತು ಶಶಿ ಪಾಂಜಾ ಇವಿಎಂ ಅಕ್ರಮಗಳನ್ನು ಆರೋಪಿಸಿ ಧರಣಿ ನಡೆಸಿದರು. ಬಿಜೆಪಿ ಇವಿಎಂಗಳನ್ನು ಟ್ಯಾಂಪರ್ ಮಾಡಲು ಪ್ರಯತ್ನಿಸಬಹುದು, ಆದ್ದರಿಂದ ಪಕ್ಷದ ಕಾರ್ಯಕರ್ತರು ಮತ್ತು ಏಜೆಂಟರು ಸ್ಟ್ರಾಂಗ್ ರೂಮ್‌ಗಳ ಮೇಲೆ 24 ಗಂಟೆಗಳ ನಿರಂತರ ನಿಗಾ ಇರಿಸಬೇಕು ಎಂದು ಮಮತಾ ಬ್ಯಾನರ್ಜಿ ಈ ಹಿಂದೆಯೇ ಕರೆ ನೀಡಿದ್ದರು. ರಾಜ್ಯದಲ್ಲಿ ತೀವ್ರ ರಾಜಕೀಯ ಸಂಘರ್ಷದ ನಡುವೆ ಈ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.