8 ಕಿ.ಮೀ ಟ್ರಾಫಿಕ್ ಜಾಮ್, ಹೋಟೆಲ್‌ಗಳು ಶೇ. 100 ರಷ್ಟೂ ಭರ್ತಿ; ಮನಾಲಿ ರಸ್ತೆಯಲ್ಲಿ ಸಿಲುಕಿಕೊಂಡ ಪ್ರವಾಸಿಗರ ಪರದಾಟ
Manali Nightmare: ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಭಾರಿ ಹಿಮಪಾತ ಹಾಗೂ ಪ್ರವಾಸಿಗರ ಹೆಚ್ಚಿದ ಆಗಮನದಿಂದ ಪರಿಸ್ಥಿತಿ ಅಸ್ತವ್ಯಸ್ತವಾಗಿದೆ. ಸುಮಾರು 8 ಕಿಲೋಮೀಟರ್ ಉದ್ದದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪ್ರಮುಖ ರಸ್ತೆಗಳ ಮೇಲೆ ವಾಹನಗಳು ಗಂಟೆಗಟ್ಟಲೆ ಸಿಲುಕಿಕೊಂಡಿವೆ. ಹೀಗಾಗಿ ಅನೇಕ ಪ್ರವಾಸಿಗರು ರಸ್ತೆಗಳಲ್ಲೇ ಸಿಲುಕುವಂತಾಗಿದೆ.
ಮನಾಲಿ ದುಃಸ್ವಪ್ನ -
ಮನಾಲಿ, ಜ.25: ಹಿಮಾಚಲ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣವಾದ ಕುಲ್ಲು ಜಿಲ್ಲೆಯ ಮನಾಲಿಗೆ (Manali) ಹೋಗುವ ರಸ್ತೆಗಳು ವಾಹನಗಳಿಂದ ತುಂಬಿ ತುಳುಕುತ್ತಿದ್ದು, ಗಂಟೆಗಟ್ಟಲೆ ಭಾರಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿವೆ. ಕೋಥಿ ಮತ್ತು ಮನಾಲಿಯ ನಡುವಿನ ಒಂದು ಭಾಗದಲ್ಲಿ, ಸಂಚಾರ ದಟ್ಟಣೆಯು (traffic jam) 8 ಕಿ.ಮೀ.ವರೆಗೆ ವಿಸ್ತರಿಸಿದೆ ಎಂದು ತಿಳಿದುಬಂದಿದೆ.
ದೀರ್ಘ ವಾರಾಂತ್ಯ ಮತ್ತು ಸ್ನೋಫಾಲ್‍ನಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನೆರೆದಿದ್ದಾರೆ. ಸುಮಾರು ಮೂರು ತಿಂಗಳ ನಂತರ ತುಂಬಾ ಹಿಮ ಬೀಳುತ್ತಿರುವುದರಿಂದ ಪ್ರವಾಸಿಗರು ಆಕರ್ಷಿತರಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕುಲ್ಲುಗೆ ಭೇಟಿ ನೀಡುತ್ತಿರುವುದರಿಂದ ಮನಾಲಿಯ ಹೋಟೆಲ್‌ಗಳಲ್ಲಿ ಜನದಟ್ಟಣೆ ಶೇ.100 ರಷ್ಟು ಇದೆ. ಹಿಮಪಾತದಿಂದಾಗಿ ಹಲವೆಡೆ ರಸ್ತೆಗಳನ್ನು ನಿರ್ಬಂಧಿಸಲಾಗಿದೆ.
Siachen Avalanche: ಸಿಯಾಚಿನ್‌ನಲ್ಲಿ ಭಾರಿ ಹಿಮಪಾತ; ಮೂವರು ಸೈನಿಕರು ಬಲಿ
ರಾಜ್ಯಾದ್ಯಂತ ನಿರ್ಬಂಧಿಸಲಾದ 685 ರಸ್ತೆಗಳಲ್ಲಿ, ಅತಿ ಹೆಚ್ಚು 292 ರಸ್ತೆಗಳು ಬುಡಕಟ್ಟು ಜಿಲ್ಲೆಗಳಾದ ಲಹೌಲ್ ಮತ್ತು ಸ್ಪಿತಿಯಲ್ಲಿವೆ. ಚಂಬಾದಲ್ಲಿ 132, ಮಂಡಿಯಲ್ಲಿ 126, ಕುಲ್ಲುದಲ್ಲಿ 79, ಸಿರ್ಮೌರ್‌ನಲ್ಲಿ 29, ಕಿನ್ನೌರ್‌ನಲ್ಲಿ 20, ಕಾಂಗ್ರಾದಲ್ಲಿ ನಾಲ್ಕು, ಉನಾದಲ್ಲಿ ಎರಡು ಮತ್ತು ಸೋಲನ್‌ನಲ್ಲಿ ಒಂದು ರಸ್ತೆಯನ್ನು ನಿರ್ಬಂಧಿಸಲಾಗಿದೆ.
ಶುಕ್ರವಾರ ಸಂಜೆ ಆರಂಭವಾದ ಸಂಚಾರ ದಟ್ಟಣೆ 24 ಗಂಟೆಗಳಾದರೂ ನಿವಾರಣೆಯಾಗದ ಕಾರಣ, ಸಾವಿರಾರು ಪ್ರವಾಸಿಗರು ತಮ್ಮ ವಾಹನಗಳಲ್ಲಿ ಸಿಲುಕಿಕೊಂಡು ಪರದಾಡುವಂತಾಯಿತು. ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ವರದಿಗಳು ತಿಳಿಸಿವೆ.
ವಿಡಿಯೊ ವೀಕ್ಷಿಸಿ:
This is insane stupidity. Huge rush of people on long weekend to manali hearing snow news, resulting in complete mess on roads, people spent entire night in their vehicles in snow freezing temperatures.
— Dr. Vineet Kumar (@vineet_mausam) January 24, 2026
Snow you can see anytime in life dont risk ur life for it. Choose wisely pic.twitter.com/FAPYW3r8Dx
ಜನವರಿ 26 ಮತ್ತು 28 ರ ನಡುವೆ ರಾಜ್ಯಾದ್ಯಂತ ಭಾರಿ ಹಿಮಪಾತ ಮತ್ತು ಮಳೆಯಾಗುವ ಸಾಧ್ಯತೆಯಿರುವುದರಿಂದ ಹಿಮಾಚಲ ಪ್ರದೇಶ ಸರ್ಕಾರವು ರಾಜ್ಯವ್ಯಾಪಿ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಹನಗಳು ದಟ್ಟವಾದ ಹಿಮದ ಹೊದಿಕೆಯಿಂದ ಆವೃತವಾಗಿರುವುದರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಶಿಮ್ಲಾದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಢಲ್ಲಿಯ ಆಚೆಗಿನ ಹಿಂದೂಸ್ತಾನ್-ಟಿಬೆಟ್ ರಸ್ತೆಯು ದಟ್ಟವಾದ ಹಿಮದ ಹಾಸಿನಿಂದ ಸಂಪೂರ್ಣವಾಗಿ ಮುಚ್ಚಿಕೊಂಡಿತ್ತು. ಇದರಿಂದ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಇಡೀ ಕಿನ್ನೌರ್ ಜಿಲ್ಲೆ ಮತ್ತು ಶಿಮ್ಲಾ ಜಿಲ್ಲೆಯ ಪಟ್ಟಣಗಳಾದ ನರ್ಕಂಡ, ಜುಬ್ಬಲ್, ಕೊಟ್‌ಖೈ, ಕುಮಾರಸೈನ್, ಖರಪಥರ್, ರೋಹ್ರು ಮತ್ತು ಚೋಪಾಲ್ ಭಾರಿ ಹಿಮದಿಂದಾಗಿ ಸಂಪರ್ಕ ಕಡಿತಗೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೆಡಿಟೆರೇನಿಯನ್–ಕ್ಯಾಸ್ಪಿಯನ್ ಸಮುದ್ರ ಪ್ರದೇಶದಿಂದ ಉದ್ಭವಿಸಿ ಅಫ್ಘಾನಿಸ್ತಾನ–ಪಾಕಿಸ್ತಾನ ಪ್ರದೇಶದ ಮೂಲಕ ಸಾಗುವ ಚಂಡಮಾರುತವು (ವೆಸ್ಟರ್ನ್ ಡಿಸ್ಟರ್ಬನ್ಸ್) ಭಾನುವಾರವರೆಗೆ (ಜನವರಿ 25) ಸಕ್ರಿಯವಾಗಿರಲಿದೆ. ಇದರಿಂದ ಇನ್ನಷ್ಟು ಮಳೆ ಹಾಗೂ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಾಳೆ ಕಾಂಗ್ರಾ, ಮಂಡಿ, ಸೋಲನ್, ಉನಾ, ಬಿಲಾಸ್ಪುರ, ಹಮೀರ್‌ಪುರ್ ಮತ್ತು ಸಿರ್ಮೌರ್ ಜಿಲ್ಲೆಗಳಿಗಾಗಿ ದಟ್ಟ ಮಂಜು ಹಾಗೂ ಶೀತ ಅಲೆ ಇರುವುದರಿಂದ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.