ಬೆಂಗಳೂರು: ರಾಜ್ಯದಲ್ಲಿ 79 ನೇ ಸ್ವಾತಂತ್ರ್ಯೋತ್ಸವದ (79th Independence Day) ಸಂಭ್ರಮಾಚರಣೆ ಕಳೆಗಟ್ಟಿದೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ, ಕವಾಯತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಲಿದ್ದು, ಬಳಿಕ ತೆರೆದ ಜೀಪ್‌ನಲ್ಲಿ ನಿಂತು ಪರೇಡ್ ವೀಕ್ಷಿಸಿ, ಗೌರವರಕ್ಷೆ ಸ್ವೀಕರಿಸಲಿದ್ದಾರೆ. ಮೈದಾನ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ 2 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಭದ್ರತೆ ವಹಿಸಲಿದ್ದಾರೆ.
ಈ ಬಾರಿ ಸ್ವಾತಂತ್ರ್ಯೋತ್ಸವ ಪರೇಡ್‌ನಲ್ಲಿ ಒಟ್ಟು 30 ತುಕಡಿಗಳಿಂದ ಸುಮಾರು 1 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಲಿದ್ದು, ಗೋವಾ ಪೊಲೀಸರ ವಿಶೇಷ ತಂಡ ಕೂಡ ಪರೇಡ್‌ನಲ್ಲಿ ಭಾಗಿಯಾಗಲಿದೆ. ಕೆಸ್ಆರ್ಪಿ (KSRP), ಬಿಎಸ್ಎಫ್ (BSF) ಮತ್ತು ಸಿಎಆರ್ (CAR), ಟ್ರಾಫಿಕ್ ಪೊಲೀಸ್, ಡಾಗ್ ಸ್ಕ್ವಾಡ್, ಪೊಲೀಸ್ ಬ್ಯಾಂಡ್ ಸೇರಿದಂತೆ ವಿವಿಧ ತಂಡಗಳು ಗೌರವ ರಕ್ಷೆ ಸ್ವೀಕರಿಸಲಿದ್ದು, ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಗಳನ್ನ ನಡೆಸಿಕೊಡಲಿದ್ದಾರೆ. ಇನ್ನು ಭದ್ರತಾ ದೃಷ್ಟಿಯಿಂದ ಮೈದಾನದ ಸುತ್ತ 100 ಸಿಸಿಟಿವಿ ಅಳವಡಿಸಲಾಗಿದ್ದು, 2 ಬ್ಯಾಗೇಜ್ ಸ್ಕ್ಯಾನರ್‌ಗಳನ್ನ ಅಳವಡಿಸಲಾಗಿದೆ. ಅಲ್ಲದೇ ಕಾರ್ಯಕ್ರಮಕ್ಕೆ ಬರುವವರಿಗೆ ಕಾರ್ಯಕ್ರಮ ನಡೆಯುವ ಜಾಗದಲ್ಲಿ ಮೊಬೈಲ್ ಬಳಕೆಯನ್ನ ಕೂಡ ನಿಷೇಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವವರು ತಮ್ಮ ತಮ್ಮ ಪಾಸ್‌ಗಳಲ್ಲಿ ನಮೂದಿಸಲ್ಪಟ್ಟ ಗೇಟ್‌ನ ಮೂಲಕ ಮೈದಾನದೊಳಗೆ ಪ್ರವೇಶಿಸಬೇಕು. ಆಗಸ್ಟ್ 15ರಂದು ಬೆಳಗ್ಗೆ 8 ಗಂಟೆಯಿಂದ 11ರವರೆಗೆ ಕಬ್ಬನ್ ರಸ್ತೆಯಲ್ಲಿನ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ ಎರಡೂ ದಿಕ್ಕುಗಳಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದಷ್ಟು ಸಾರ್ವಜನಿಕ ಸಾರಿಗೆ ವಾಹನಗಳಾದ ಬಿಎಂಟಿಸಿ, ಮೆಟ್ರೋ ಸೇವೆಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: 79th Independence Day: 79ನೇ ಸ್ವಾತಂತ್ರ್ಯ ದಿನಾಚರಣೆಗೆ ಜಿಲ್ಲಾಡಳಿತ ಸಜ್ಜು: ಸರ್.ಎಂ.ವಿ ಜಿಲ್ಲಾಕ್ರೀಡಾಂಗಣದಲ್ಲಿ ತಾಲೀಮು ಜೋರು
ಈ ವರ್ಷ ರಾಜ್ಯದ ಗ್ಯಾರಂಟಿ ಸ್ಕಿಮ್ಗಳ ಬಗ್ಗೆ ಗಮನ ಸೆಳೆಯಲು ಸರ್ಕಾರ ಸಜ್ಜಾಗಿದ್ದು, ಗ್ಯಾರಂಟಿ ಸ್ಕಿಮ್ಗಳ ಮಹತ್ವ ಸಾರುವ ನೃತ್ಯ ರೂಪಕಗಳನ್ನ ಬಿಬಿಎಂಪಿಯ ಶಾಲಾ ವಿದ್ಯಾರ್ಥಿಗಳು ಪ್ರದರ್ಶನ ನೀಡಲಿದ್ದಾರೆ. ಇತ್ತ ಈಗಾಗಲೇ ಮಾಣಿಕ್ ಷಾ ಮೈದಾನದಲ್ಲಿ ಸಿದ್ಧತೆಗಳು ಪೂರ್ಣಗೊಂಡಿದ್ದು, ಬಿಬಿಎಂಪಿಯ ವತಿಯಿಂದ ಎಲ್ಲಾ ವ್ಯವಸ್ಥೆ ಮೇಲ್ವಿಚಾರಣೆ ಮಾಡಲಾಗಿದೆ.