ʼʼಅತ್ಯುತ್ತಮ ಒಪ್ಪಂದʼʼ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದೇನು?
India -US Trade Deal: ಭಾರತ–ಅಮೆರಿಕ ಮಧ್ಯೆ ಒಪ್ಪಂದದ ವಿವರಗಳನ್ನು ಸಂಸತ್ತಿನಲ್ಲಿ ಹಂಚಿಕೊಳ್ಳಲು ಬಯಸಿದ್ದೆ. ಆದರೆ ಲೋಕಸಭೆಯಲ್ಲಿ ನಡೆದ ಗದ್ದಲದ ಕಾರಣ ಸಾಧ್ಯವಾಗಲಿಲ್ಲ ಎಂದು ಸಚಿವ ಪಿಯೂಷ್ ಗೋಯಲ್ ಹೇಳಿದರು. ಈ ವೇಳೆ ವಿರೋಧ ಪಕ್ಷದ ನಾಯಕರನ್ನು ತೀವ್ರವಾಗಿ ಟೀಕಿಸಿದ ಅವರು, ರಾಹುಲ್ ಗಾಂಧಿ ನಕಾರಾತ್ಮಕ ಮನಸ್ಥಿತಿಯ ವ್ಯಕ್ತಿ. ಅವರು ದೇಶದ ಬೆಳವಣಿಗೆಯನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪಿಯೂಷ್ ಗೋಯಲ್ -
ನವದೆಹಲಿ, ಫೆ. 3: ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ (India-US Trade Deal) ಸ್ಪಷ್ಟ ವಿವರಗಳ ಕೊರತೆಯ ನಡುವೆಯೇ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ (Piyush Goyal) ಮಂಗಳವಾರ ಈ ಒಪ್ಪಂದವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ಒಪ್ಪಂದವು ರೈತರು, ಮೀನುಗಾರರು, ಕಾರ್ಮಿಕರು ಸೇರಿದಂತೆ ಎಲ್ಲ 140 ಕೋಟಿ ಭಾರತೀಯರಿಗೆ ಲಾಭದಾಯಕವಾಗಲಿದೆ ಎಂದು ಅವರು ಹೇಳಿದ್ದಾರೆ.
''ಭಾರತ–ಅಮೆರಿಕ ಮಧ್ಯೆ ಒಪ್ಪಂದದ ವಿವರಗಳನ್ನು ಸಂಸತ್ತಿನಲ್ಲಿ ಹಂಚಿಕೊಳ್ಳಲು ಬಯಸಿದ್ದೆ, ಆದರೆ ಲೋಕಸಭೆಯಲ್ಲಿ ನಡೆದ ಗದ್ದಲದ ಕಾರಣ ಸಾಧ್ಯವಾಗಲಿಲ್ಲ'' ಎಂದು ಗೋಯಲ್ ಹೇಳಿದರು. ಈ ವೇಳೆ ವಿರೋಧ ಪಕ್ಷದ ನಾಯಕರನ್ನು ತೀವ್ರವಾಗಿ ಟೀಕಿಸಿದ ಅವರು, ''ರಾಹುಲ್ ಗಾಂಧಿ ನಕಾರಾತ್ಮಕ ಮನಸ್ಥಿತಿಯ ವ್ಯಕ್ತಿ, ಅವರು ದೇಶದ ಬೆಳವಣಿಗೆಯನ್ನು ವಿರೋಧಿಸುತ್ತಿದ್ದಾರೆ" ಎಂದು ಆರೋಪಿಸಿದರು.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ರಾಜ್ಯಸಭೆ ಕಲಾಪ ಬಹಿಷ್ಕರಿಸಿ ಹೊರ ನಡೆದ ವಿಪಕ್ಷ
''ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಸ್ನೇಹವನ್ನು ಬಳಸಿಕೊಂಡು, ಅಖಾಡದಲ್ಲಿರುವ ಇತರ ಪ್ರತಿಸ್ಪರ್ಧಿ ರಾಷ್ಟ್ರಗಳಿಗಿಂತ ಉತ್ತಮ ಒಪ್ಪಂದವನ್ನು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ'' ಎಂದು ಗೋಯಲ್ ತಿಳಿಸಿದರು. ʼʼಈ ಮೊದಲು ಭಾರತದ ಸರಕುಗಳ ಮೇಲೆ ಶೇ. 50ರರೆಗೆ ತೆರಿಗೆ ಹೇರಲಾಗಿತ್ತು. ಅದರಿಂದಾಗಿ ರೈತರು ಹಾಗೂ ಸಮುದ್ರ ಆಹಾರ ರಫ್ತುದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಈ ಹೊಸ ಒಪ್ಪಂದದಿಂದ ಕೃಷಿ, ಹಾಲು ಉತ್ಪಾದನೆ, ಮೀನುಗಾರಿಕೆ, ಬಟ್ಟೆ, ಎಂಜಿನಿಯರಿಂಗ್, ರತ್ನ–ಆಭರಣ ಹಾಗೂ ಸಮುದ್ರ ಉತ್ಪನ್ನ ರಫ್ತು ಕ್ಷೇತ್ರಗಳಿಗೆ ವಿಶೇಷ ಲಾಭವಾಗಲಿದೆʼʼ ಎಂದು ಗೋಯಲ್ ಹೇಳಿದರು. ʼʼಒಪ್ಪಂದದ ತಾಂತ್ರಿಕ ಅಂಶಗಳು ಇನ್ನೂ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಭಾರತ–ಅಮೆರಿಕಾ ಉಭಯ ರಾಷ್ಟ್ರಗಳು ಜಂಟಿಯಾಗಿ ಹೇಳಿಕೆ ಬಿಡುಗಡೆ ಮಾಡಲಿವೆʼʼ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಚಿವ ಪಿಯೂಷ್ ಗೋಯಲ್ ಹೇಳಿಕೆ:
#WATCH | Delhi: On the India-US trade agreement, Union Minister of Commerce and Industry, Piyush Goyal, says, "...Today every Indian across the country is thanking Prime Minister Narendra Modi that he has made a very good trade deal with the United States of America, which the… pic.twitter.com/ji5DHgRQWN
— ANI (@ANI) February 3, 2026
ಇತ್ತ ಅಧ್ಯಕ್ಷ ಟ್ರಂಪ್ ಭಾರತ ಅಮೆರಿಕನ್ ಉತ್ಪನ್ನಗಳ ಮೇಲೆ ಶೂನ್ಯ ತೆರಿಗೆ ವಿಧಿಸಲಿದೆ ಹಾಗೂ 500 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕನ್ ವಸ್ತುಗಳನ್ನು ಖರೀದಿಸಲಿದೆ ಎಂದು ಹೇಳಿರುವುದು ದೇಶದೊಳಗೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಅಮೆರಿಕ ಭಾರತೀಯ ವಸ್ತುಗಳ ಮೇಲಿನ ಪರಸ್ಪರ ತೆರಿಗೆಯನ್ನು ಶೇ. 25ರಿಂದ ಶೇ. 18ಕ್ಕೆ ಇಳಿಸಿರುವುದನ್ನು ಸ್ವತಃ ಟ್ರಂಪ್ ತಿಳಿಸಿದ್ದಾರೆ. ಆದರೆ ಕೃಷಿ ಕ್ಷೇತ್ರದ ಭದ್ರತೆ, ರಷ್ಯನ್ ತೈಲ ಖರೀದಿ ಹಾಗೂ ಒಪ್ಪಂದದ ಸಂಪೂರ್ಣ ಪಠ್ಯ ಕುರಿತಂತೆ ವಿರೋಧ ಪಕ್ಷ ಇನ್ನೂ ಪ್ರಶ್ನೆಗಳನ್ನು ಎತ್ತುತ್ತಿದ್ದು, ಸಂಸತ್ತಿನಲ್ಲಿ ಚರ್ಚೆ ನಡೆಸಬೇಕೆಂದು ಒತ್ತಾಯಿಸಿದೆ.
ಮಂಗಳವಾರ ಮಧ್ಯಾಹ್ನದವರೆಗೂ ಒಪ್ಪಂದದ ಬಗ್ಗೆ ಸರ್ಕಾರ ಸಂಪೂರ್ಣ ವಿವರಗಳನ್ನು ಬಿಡುಗಡೆ ಮಾಡಿರಲಿಲ್ಲ. ಆದರೆ ಕೇಂದ್ರ ಸಚಿವ ಜೆ.ಪಿ. ನಡ್ಡಾ ಈ ಕುರಿತು ಅಧಿಕೃತ ಹೇಳಿಕೆಯೂ ಬಿಡುಗಡೆಯಾಗಲಿದೆ ಹಾಗೂ ಚರ್ಚೆಯೂ ನಡೆಯಲಿದೆ ಎಂದು ಸಂಸತ್ತಿಗೆ ಭರವಸೆ ನೀಡಿದ್ದಾರೆ.