ನ್ಯಾಷನಲ್ ಎಂಟರ್‌ಪ್ರೆನ್ಯೂರ್‌ಶಿಪ್ ನೆಟ್‌ವರ್ಕ್ ಅಧ್ಯಕ್ಷರಾಗಿ ಮನೀಶ್ ದಲಾಲ್ ನೇಮಕ
ದೇಶಾದ್ಯಂತ ಉದ್ಯಮಿಗಳು ಹಾಗೂ ವ್ಯಾಪಾರಸ್ಥರಿಗೆ ತಮ್ಮ ಉದ್ಯಮ, ಆರಂಭಿಸಲು, ಅದನ್ನು ದೊಡ್ಡ ಮಟ್ಟಕ್ಕೆ ಬೆಳೆಸಲು ಮತ್ತು ಆ ಮೂಲಕ ಭವಿಷ್ಯದಲ್ಲಿ ಸುಸ್ಥಿರ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಪ್ರಗತಿಯನ್ನು ಸಾಧಿಸಲು ಎನ್‌ಇಎನ್ ಶ್ರಮಿಸುತ್ತಿದೆ. ಸಂಸ್ಥೆಯ ಮುಂದಿನ ಹಂತದ ಬೆಳವಣಿಗೆಯನ್ನು ಮನೀಶ್ ದಲಾಲ್ ಅವರು ಮುನ್ನಡೆಸಲಿದ್ದಾರೆ.
-
ದೆಹಲಿ: ಭಾರತದಲ್ಲಿ ಉದ್ಯಮಶೀಲತೆ ಮತ್ತು ನವೋದ್ಯಮಗಳ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಲಾಭರಹಿತ ಸಂಸ್ಥೆ 'ನ್ಯಾಷನಲ್ ಎಂಟರ್ ಪ್ರೆನ್ಯೂರ್ ಶಿಪ್ ನೆಟ್‌ವರ್ಕ್' (ಎನ್‌ಇಎನ್) ನೂತನ ಅಧ್ಯಕ್ಷರಾಗಿ ಮನೀಶ್ ದಲಾಲ್ ನೇಮಕವಾಗಿದ್ದಾರೆ.
ದೇಶಾದ್ಯಂತ ಉದ್ಯಮಿಗಳು ಹಾಗೂ ವ್ಯಾಪಾರಸ್ಥರಿಗೆ ತಮ್ಮ ಉದ್ಯಮ, ಆರಂಭಿಸಲು, ಅದನ್ನು ದೊಡ್ಡ ಮಟ್ಟಕ್ಕೆ ಬೆಳೆಸಲು ಮತ್ತು ಆ ಮೂಲಕ ಭವಿಷ್ಯದಲ್ಲಿ ಸುಸ್ಥಿರ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಪ್ರಗತಿಯನ್ನು ಸಾಧಿಸಲು ಎನ್‌ಇಎನ್ ಶ್ರಮಿಸುತ್ತಿದೆ. ಸಂಸ್ಥೆಯ ಮುಂದಿನ ಹಂತದ ಬೆಳವಣಿಗೆಯನ್ನು ಮನೀಶ್ ದಲಾಲ್ ಅವರು ಮುನ್ನಡೆಸಲಿದ್ದಾರೆ.
ಮನೀಶ್ ದಲಾಲ್ ಅವರು ಮ್ಯಾನೇಜ್‌ಮೆಂಟ್, ಬ್ಯುಸಿನೆಸ್ ಡೆವಲಪ್‌ಮೆಂಟ್, ಎಐ, ಸಾಸ್ ಮತ್ತು ಕ್ಲೌಡ್ ವಲಯಗಳಲ್ಲಿ 25ಕ್ಕೂ ಹೆಚ್ಚಿನ ವರ್ಷಗಳ ಅನುಭವ ಹೊಂದಿದ್ದಾರೆ. ಅಮೆರಿಕ ಹಾಗೂ ಏಷ್ಯಾ-ಪೆಸಿಫಿಕ್ (ಎಪಿಎಸಿ) ರಾಷ್ಟ್ರಗಳಲ್ಲಿ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದಾಗಿದೆ.
ಇದನ್ನೂ ಓದಿ: CM Siddaramaiah's Delhi visit: ಇಂದು ಸಂಜೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಪ್ರಯಾಣ; ಹೈಕಮಾಂಡ್ ಬುಲಾವ್ ಬಗ್ಗೆ ಹೇಳಿದ್ದೇನು?
ಈ ಹಿಂದೆ ಮೊಟೊರೊಲಾ, ಯಾಹೂ, ವೆರಿಸೈನ್, ಎಂಡ್ಯೂರೆನ್ಸ್ ಮತ್ತು ನೆಕ್ಸ್ಟಿವಾದಂತಹ ಜಾಗತಿಕ ಟೆಕ್ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಈ ಸಂಸ್ಥೆಗಳಲ್ಲಿ ಇವರು ಏಷ್ಯಾ-ಪೆಸಿಫಿಕ್ ವಲಯದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಹಾಗೂ ಗ್ಲೋಬಲ್ ಸ್ಟ್ರಾಟಜಿ ವಿಭಾಗದ ಮುಖ್ಯಸ್ಥರಾಗಿಯೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಅಧ್ಯಕ್ಷರಾಗಿ ಮನೀಶ್ ಅವರು ಎನ್‌ಇಎನ್‌ನ ಹಲವು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಮುನ್ನಡೆಸಲಿದ್ದಾರೆ. ವಾಧ್ವಾನಿ ಇಗ್ನೈಟ್, ವಾಧ್ವಾನಿ ಲಿಫ್ಟ್ಆಫ್, ವಾಧ್ವಾನಿ ಆಕ್ಸಿಲರೇಟ್, ವಾಧ್ವಾನಿ ಆಂಟ್ರಪ್ರೆನರ್.ಎಐ, ರೈತ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒ) ಉದ್ಯಮಶೀಲತೆ ಮತ್ತು ಸ್ವಸಹಾಯ ಸಂಘಗಳ (ಎಸ್‌ಎಚ್‌ಜಿ) ಸಣ್ಣ ಉದ್ಯಮಶೀಲತೆ ಯೋಜನೆಗಳು ಇವರ ಉಸ್ತುವಾರಿ ಯಲ್ಲಿ ನಡೆಯಲಿವೆ. ಜೊತೆಗೆ, ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಲು ಎಐ ತಂತ್ರಜ್ಞಾನವನ್ನು ಬಳಸುವ 'ವಾಧ್ವಾನಿ ಗವರ್ನಮೆಂಟ್ ಎಐ ಪ್ಲಾಟ್ ಫಾರ್ಮ್ಸ್'ನ ಸಾರಥ್ಯವನ್ನೂ ಇವರು ವಹಿಸಲಿದ್ದಾರೆ.
ʼಭಾರತದ ಉದ್ಯಮಶೀಲತೆಗೆ ಇದು ನಿರ್ಣಾಯಕ ಘಟ್ಟʼ: ತಮ್ಮ ನೇಮಕದ ನಂತರ ಮಾತನಾಡಿದ ಮನೀಶ್ ದಲಾಲ್, "ಭಾರತದಲ್ಲಿ ಉದ್ಯಮಶೀಲತೆಗೆ ಇದು ಅತ್ಯಂತ ನಿರ್ಣಾಯಕ ಹಾಗೂ ಮಹತ್ವದ ಘಟ್ಟ. ಕೇವಲ ವ್ಯಾಪಾರ ಬೆಳೆಸುವುದಷ್ಟೇ ಅಲ್ಲ, ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ಉದ್ಯಮಗಳನ್ನು ಕಟ್ಟುವ ಅವಕಾಶ ನಮಗಿದೆ. ವಿದ್ಯಾರ್ಥಿ ದೆಸೆಯಿಂದ ಹಿಡಿದು ಹೊಸ ಕಂಪನಿ ಕಟ್ಟುವ ಸಂಸ್ಥಾಪಕರವರೆಗೆ ಹಾಗೂ ಈಗಾಗಲೇ ಇರುವ ಉದ್ಯಮಗಳನ್ನು ದೊಡ್ಡ ಮಟ್ಟಕ್ಕೆ ಬೆಳೆಸುವವರೆಗೆ ಪ್ರತಿಯೊಬ್ಬರಿಗೂ ಎನ್‌ಇಎನ್ ಬೆಂಬಲ ನೀಡುತ್ತದೆ. ತಂತ್ರಜ್ಞಾನ, ಕೌಶಲ ಮತ್ತು ಸರಿಯಾದ ಮಾರ್ಗದರ್ಶನದ ಮೂಲಕ ಉದ್ಯಮಿಗಳಿಗೆ ನೆರವಾಗು ವುದು ನನ್ನ ಪ್ರಮುಖ ಗುರಿಯಾಗಿದೆ,” ಎಂದು ಹೇಳಿದರು.
ಎನ್‌ಇಎನ್ ಟ್ರಸ್ಟ್ ಭಾರತದಲ್ಲಿ ಉದ್ಯಮಶೀಲತೆ, ನಾವೀನ್ಯತೆ ಮತ್ತು ಉದ್ಯಮಗಳ ಅಭಿವೃದ್ಧಿ ಯನ್ನು ಬೆಂಬಲಿಸುವ ಸ್ವತಂತ್ರ ಹಾಗೂ ಲಾಭರಹಿತ ಸಂಸ್ಥೆಯಾಗಿದೆ. ವಾಧ್ವಾನಿ ಆಪರೇಟಿಂಗ್ ಫೌಂಡೇಶನ್‌ನ ನಿಧಿ ಮತ್ತು ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ. ಶಿಕ್ಷಣ ಸಂಸ್ಥೆಗಳು, ನವೋದ್ಯಮಿಗಳು, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು (ಎಸ್‌ಎಂಇ), ಹೂಡಿಕೆದಾರರು ಹಾಗೂ ಸರ್ಕಾರದ ಜೊತೆಗೂಡಿ ಭಾರತದ ಆರ್ಥಿಕತೆಗೆ ಬಲ ತುಂಬುವ ಕೆಲಸವನ್ನು ಈ ಸಂಸ್ಥೆ ನಿರಂತರವಾಗಿ ಮಾಡುತ್ತಿದೆ.