#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಹೈದರಾಬಾದ್‌ನ ದೇಗುಲದಲ್ಲಿ ಮಾಂಸದ ಚೂರು ಪತ್ತೆ; ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಿದ ಪೊಲೀಸರಿಗೆ ಕಾದಿತ್ತು ಅಚ್ಚರಿ

ಹೈದರಾಬಾದ್‌ನ ಟಪ್ಪಾಚಬುತ್ರ ಪ್ರದೇಶದ ದೇವಸ್ಥಾನವೊಂದರಲ್ಲಿ ಬುಧವಾರ (ಫೆ. 12) ಬೆಳಗ್ಗೆ ಮಾಂಸದ ತುಂಡು ಪತ್ತೆಯಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಕೊನೆಗೂ ಅಪರಾದಿಯನ್ನು ಪತ್ತೆ ಹಚ್ಚಿದ್ದು, ಪರಿಸ್ಥಿತಿ ತಿಳಿಯಾಗಿದೆ. ಹಾಗಾದರೆ ಯಾರು ಆ ಅಪರಾಧಿ?

ಹೈದರಾಬಾದ್‌ನ ದೇಗುಲದಲ್ಲಿ ಮಾಂಸದ ಚೂರು ಪತ್ತೆ

ಸಾಂದರ್ಭಿಕ ಚಿತ್ರ.

Profile Ramesh B Feb 12, 2025 11:25 PM

ಹೈದರಾಬಾದ್‌: ಇಲ್ಲಿನ ಟಪ್ಪಾಚಬುತ್ರ (Tappachabutra) ಪ್ರದೇಶದ ದೇವಸ್ಥಾನವೊಂದರಲ್ಲಿ ಬುಧವಾರ (ಫೆ. 12) ಬೆಳಗ್ಗೆ ಮಾಂಸದ ತುಂಡು ಪತ್ತೆಯಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರೆಲ್ಲ ಸೇರಿ ದೇವಸ್ಥಾನದ ಮುಂದೆ ಜಮಾಯಿಸಿ ಘಟನೆಗೆ ಆಕ್ರೋಶ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು. ಹಿಂದೂ ಸಂಘಟನೆಯ ಸದಸ್ಯರೂ ಜಮಾಯಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಕೊನೆಗೂ ತಪ್ಪಿತಸ್ಥನನ್ನು ಕಂಡುಕೊಂಡಿದ್ದಾರೆ. ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಅಚ್ಚರಿಯ ಸತ್ಯ ಬೆಳಕಿಗೆ ಬಂದಿದೆ. ಈ ಘಟನೆಗೆ, ಇಷ್ಟೊಂದು ಗೊಂದಲಕ್ಕೆ ಕಾರಣವಾಗಿದ್ದು ಬೇರೆ ಯಾರೂ ಅಲ್ಲ, ಬೆಕ್ಕು ಎಂದರೆ ನಂಬುತ್ತೀರಾ? ಹಾಗಾದರೆ ಏನಿದು ಘಟನೆ? ಇಲ್ಲಿದೆ ವಿವರ.

ಟಪ್ಪಾಚಬುತ್ರದ ಹನುಮಾನ್‌ ದೇಗುಲದ ಶಿವಲಿಂಗದ ಬಳಿ ಮಾಂಸದ ಚೂರು ಕಂಡು ಬಂದಿತ್ತು. ಅರ್ಚಕರು ಎಂದಿನಂತೆ ಪೂಜೆ ಮಾಡಲು ದೇವಸ್ಥಾನಕ್ಕೆ ಪ್ರವೇಶಿಸಿದಾಗ ಈ ಘಟನೆ ನಡೆದಿತ್ತು. ಕೂಡಲೇ ದೇವಸ್ಥಾನದ ಮುಂದೆ ಜಮಾಯಿಸಿದ ಜನರ ಗುಂಪು ಆಕ್ರೋಶ ವ್ಯಕ್ತಪಡಿಸಿತ್ತು. ತನಿಖೆ ನಡೆಸಿದ ಪೊಲೀಸರು ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಬೆಕ್ಕೊಂದು ಕುರಿಯ ಮಾಂಸವನ್ನು ಕಚ್ಚಿಕೊಂಡು ದೇವಸ್ಥಾನದೊಳಗೆ ಪ್ರವೇಶಿಸುತ್ತಿರುವುದು ಕಂಡು ಬಂದಿದೆ.



ಘಟನೆ ವಿವರ

ದೇಗುಲದೊಳಗೆ ಮಾಂಸದ ಚೂರು ಇರುವ ಬಗ್ಗೆ ಪೊಲೀಸರಿಗೆ ಬುಧವಾರ ಬೆಳಗ್ಗೆ ಮಾಹಿತಿ ಸಿಕ್ಕಿತು. ಇದು ಸೂಕ್ಷ್ಮ ವಿಷಯವಾಗಿದ್ದರಿಂದ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ದೇವಾಲಯಕ್ಕೆ ಭೇಟಿ ನೀಡಿದರು. ನಂತರ ಪೊಲೀಸರು ಮಾಂಸದ ತುಂಡನ್ನು ವಶಪಡಿಸಿಕೊಂಡರು. ಪರಿಶೀಲಿಸಿದಾಗ 250 ಗ್ರಾಂ ತೂಕದ ಮಟನ್ ಎನ್ನುವುದು ತಿಳಿದು ಬಂತು.

ಮಾಂಸವನ್ನು ಎಸೆದ ಅಪರಾಧಿ ಯಾರು ಎಂದು ಕಂಡುಹಿಡಿಯಲು ಪೊಲೀಸರು ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಲು 4 ತಂಡಗಳನ್ನು ರಚಿಸಿದರು. ದೇವಾಲಯದ ಬಳಿಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳಲ್ಲಿ ಬೆಕ್ಕು ಮಾಂಸವನ್ನು ಬಾಯಿಯಲ್ಲಿ
ಹೊತ್ತುಕೊಂಡು ದೇವಾಲಯದ ಆವರಣಕ್ಕೆ ಪ್ರವೇಶಿಸುವುದನ್ನು ಸ್ಪಷ್ಟವಾಗಿ ಕಂಡು ಬಂದಿದೆ. ಸದ್ಯ ಇಲ್ಲಿನ ಪರಿಸ್ಥಿತಿ ತಿಳಿಯಾಗಿದೆ.

ಈ ಸುದ್ದಿಯನ್ನೂ ಓದಿ: Viral Video: ಪ್ರೀತಿ ನಿರಾಕರಿಸಿದ ಯುವತಿಯ ಮೇಲೆ ನಡುರಸ್ತೆಯಲ್ಲಿ ಪೆಟ್ರೋಲ್‌ ಸುರಿದ ಯುವಕ; ಭಯಾನಕ ವಿಡಿಯೊ ವೈರಲ್‌

ಭುಗಿಲೆದ್ದ ಆಕ್ರೋಶ

ಬುಧವಾರ ಬೆಳಗ್ಗೆ ಟಪ್ಪಾಚಬುತ್ರ ಪ್ರದೇಶದ ಜೀರಾ ಹನುಮಾನ್ ದೇವಸ್ಥಾನದೊಳಗೆ ಪ್ರವೇಶಿಸಿದಾಗ ಅರ್ಚಕರಿಗೆ ಶಿವಲಿಂಗದ ಬಳಿ ಮಾಂಸದ ತುಂಡು ಕಂಡು ಬಂದಿದೆ. ಕೂಡಲೇ ಅವರು ದೇವಸ್ಥಾನದ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದರು. ಸುದ್ದಿ ಹರಡಿದ ತಕ್ಷಣ, ದೇವಾಲಯದ ಹೊರಗೆ ಜನಸಮೂಹ ಜಮಾಯಿಸಿತು. ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರು ದೇವಾಲಯದಲ್ಲಿ ಸಭೆ ಸೇರಿದರು.

ಸ್ಥಳೀಯರು ಮತ್ತು ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಸದಸ್ಯರು ದೇವಾಲಯದ ಮುಂದೆ ಜಮಾಯಿಸಿ ಘಟನೆಯನ್ನು ಖಂಡಿಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡರು. ಇದೀಗ ಘಟನೆಯ ವಾಸ್ತವಾಂಶ ಹೊರ ಬಿದ್ದಿದ್ದು, ಬಿಗುವಿನಿಂದ ಕೂಡಿದ ವಾತಾವಣ ತಿಳಿಯಾಗಿದೆ. ಒಟ್ಟಿನಲ್ಲಿ ಒಂದು ಬೆಕ್ಕಿನಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ನೋಡಿ ಜನರು ಅಚ್ಚರಿಗೊಳಗಾಗಿದ್ದಂತು ಸತ್ಯ.