ಮದುವೆ ಹಾಲ್‌ನಲ್ಲಿ ಸಂಬಂಧಿಕರ ಎದುರೇ ಸರ್‌ಪಂಚ್ ಮೇಲೆ ಗುಂಡಿನ ದಾಳಿ; ಪಂಜಾಬ್‌ನಲ್ಲಿ ಜನಪ್ರತಿನಿಧಿಯ ಭೀಕರ ಹತ್ಯೆ
ಜನಪ್ರತಿನಿಧಿಯೊಬ್ಬರನ್ನು ದುಷ್ಕರ್ಮಿಗಳಿಬ್ಬರು ಮದುವೆ ಹಾಲ್‌ನಲ್ಲಿ ಎಲ್ಲರೆದುರೇ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಮೃತರನ್ನು ಆಡಳಿತರೂಢ ಆಮ್ ಆದ್ಮಿ ಪಾರ್ಟಿಯ ಸರ್‌ಪಂಚ್ (ಗ್ರಾಮ ಪಂಚಾಯತ್ ಅಧ್ಯಕ್ಷ) ಜರ್ನೈಲ್ ಸಿಂಗ್ ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳಿಬ್ಬರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಜರ್ನೈಲ್ ಸಿಂಗ್ (ಸಂಗ್ರಹ ಚಿತ್ರ) -
ಚಂಡೀಗಢ, ಜ. 4: ಆಘಾತಕಾರಿ ಘಟನೆಯೊಂದರಲ್ಲಿ ಜನಪ್ರತಿನಿಧಿಯೊಬ್ಬರನ್ನು ದುಷ್ಕರ್ಮಿಗಳಿಬ್ಬರು ಮದುವೆ ಹಾಲ್‌ನಲ್ಲಿ ಎಲ್ಲರೆದುರೇ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಪಂಜಾಬ್‌ನ ಅಮೃತಸರದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಆಡಳಿತರೂಢ ಆಮ್ ಆದ್ಮಿ ಪಾರ್ಟಿ (Aam Aadmi Party)ಯ ಸರ್‌ಪಂಚ್ (ಗ್ರಾಮ ಪಂಚಾಯತ್ ಅಧ್ಯಕ್ಷ) ಜರ್ನೈಲ್ ಸಿಂಗ್ (Jarnail Singh) ಎಂದು ಗುರುತಿಸಲಾಗಿದೆ. ಸಂಬಂಧಿಕರೊಬ್ಬರ ಮದುವೆಗಾಗಿ ಅಮೃತಸರದ ಮಾರಿಗೋಲ್ಡ್ ರೆಸಾರ್ಟ್‌ಗೆ ಆಗಮನಿಸಿದ ಅವರ ಮೇಲೆ ಅಪರಿಚಿತರಿಬ್ಬರು ಗುಂಡಿನ ಮಳೆಗೆರೆದು ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ತೀವ್ರ ಗಾಯಗೊಂಡ ಜಜರ್ನೈಲ್ ಸಿಂಗ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ʼʼಘಟನೆ ನಡೆದ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ. ಎಲ್ಲ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆʼʼ ಎಂದು ಅಮೃತಸರದ ಡಿಸಿಪಿ ಜಗ್ಜೀತ್ ವಾಲಿಯಾ ಹೇಳಿದ್ದಾರೆ. ʼʼಮೇಲ್ನೋಟಕ್ಕೆ ಇದು ವ್ಯವಸ್ಥಿತ ಸಂಚು ಎನ್ನುವುದು ಗೊತ್ತಾಗಿದೆ. ಜರ್ನೈಲ್ ಸಿಂಗ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದಲೇ ದುಷ್ಕರ್ಮಿಗಳು ಹಾಲ್‌ಗೆ ಪ್ರವೇಶಿಸಿದ್ದಾರೆ. ಎಲ್ಲರೂ ನೋಡ ನೋಡುತ್ತಿದ್ದಂತೆ ಗುಂಡಿನ ದಾಳಿ ನಡೆಸಲಾಗಿದೆʼʼ ಎಂದು ಅವರು ವಿವರಿಸಿದ್ದಾರೆ. ಶೂಟರ್‌ನ ಪತ್ತೆಗೆ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.
ಅಮೃತಸರದಲ್ಲಿ ನಡೆದ ಗುಂಡಿನ ದಾಳಿ:
Strongly condemn the cold-blooded murder of Sarpanch Jarmal Singh of Valtoha village (Tarn Taran), who was shot dead at a wedding function in Amritsar today.
— Sukhbir Singh Badal (@officeofssbadal) January 4, 2026
This follows an extremely worrisome pattern: yesterday, a young man was gunned down in Bhinder Kalan (Moga) and on Friday… pic.twitter.com/nt01hEeQAn
ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ʼʼಜರ್ನೈಲ್ ಸಿಂಗ್ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ರೆಸಾರ್ಟ್ ಒಳಗೆ ಎಂಟ್ರಿಯಾದರು. ಇದ್ದಕ್ಕಿದ್ದಂತೆ ನುಗ್ಗಿದ ಅಪರಿಚಿತ ಬಂದೂಕುಧಾರಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದರು. 2 ಗುಂಡು ಜರ್ನೈಲ್ ಸಿಂಗ್ ಅವರಿಗೆ ತಾಗಿದೆʼʼ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಸ್ಥಳದಲ್ಲೇ ಅವರು ಕುಸಿದು ಬಿದ್ದಿದ್ದಾರೆ. ಗುಂಡಿನ ದಾಳಿ ನಡೆಯುತ್ತಿದ್ದ ವೇಳೆ ಮದುವೆಗೆ ಬಂದಿದ್ದ ಅತಿಥಿಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಕೂಡಲೇ ಕುಸಿದು ಬಿದ್ದಿದ್ದ ಜರ್‌ಮಾಲ್ ಸಿಂಗ್ ಅವರನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ವೈದ್ಯರ ಸತತ ಪ್ರಯತ್ನದ ಹೊರತಾಗಿಯೂ ಜರ್ನೈಲ್ ಸಿಂಗ್ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಸದ್ಯ ಈ ವಿಚಾರ ಪಂಜಾಬ್‌ನಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಮದುವೆ ಪ್ರಸ್ತಾಪ ನಿರಾಕರಿಸಿದ ಮಹಿಳೆ ಮೇಲೆ ಗುಂಡಿನ ದಾಳಿ
ಹಿಂದೆಯೂ ದಾಳಿ ನಡೆದಿತ್ತು
ಅಚ್ಚರಿಯ ಸಂಗತಿ ಎಂದರೆ ಜರ್ನೈಲ್ ಸಿಂಗ್ ಅವರ ಮೇಲೆ ದಾಳಿ ನಡೆದಿದ್ದು ಇದು ಮೊದಲ ಬಾರಿಯೇನಲ್ಲ. ಕಳೆದ ವರ್ಷ ಮಾರ್ಚ್‌ನಲ್ಲಿ ಅವರ ಸ್ವಗ್ರಾಮ ವಾಲ್ತೋಹದಲ್ಲಿ ಗುಂಡಿನ ದಾಳಿ ನಡೆದಿತ್ತು. ಕಾರಿನಲ್ಲಿ ಸಂಚರಿಸುತ್ತಿದ್ದ ಅವರ ಮೇಲೆ ಆಕ್ರಮಣ ನಡೆಸಲಾಗಿತ್ತು. ಬೈಕ್‌ನಲ್ಲಿ ಹಿಂಬಾಲಿಸಿಕೊಂಡ ಬಂದ ಮೂವರು ಕಾರಿನ ಮೇಲೆ ಗುಂಡು ಮಳೆಗೆರೆದಿದ್ದರು. ಈ ದಾಳಿಯಲ್ಲಿ ಜರ್ನೈಲ್ ಸಿಂಗ್ ಮತ್ತು ಅವರ ಚಾಲಕ ಗಾಯಗೊಂಡಿದ್ದರು. ಇಬ್ಬರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತೀಚೆಗಷ್ಟೇ ಜರ್ನೈಲ್ ಸಿಂಗ್ ಚೇತರಿಸಿಕೊಂಡಿದ್ದರು. ದಾಳಿಯ ಹಿಂದಿನ ಕಾರಣ ಇನ್ನೂ ಗೊತ್ತಾಗಿಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕಲು ಪೊಲೀಸರ ತಂಡ ರಚಿಲಾಗಿದೆ. ಘಟನೆ ಬಗ್ಗೆ ಆಮ್ ಆದ್ಮಿ ಪಕ್ಷ ಆಘಾತ ವ್ಯಕ್ತಪಡಿಸಿದೆ.