ಹೊಸ ಕಾರು ಖರೀದಿಸುವ ಮುನ್ನ ಯೋಜನೆ ಹೇಗಿರಬೇಕು? ಈ ಬಗ್ಗೆ ಹಣಕಾಸು ತಜ್ಞರ ಕಿವಿ ಮಾತೇನು?
ಕಾರ್ ಖರೀದಿಸಬೇಕು ಎನ್ನುವ ಕನಸು ಎಲ್ಲರಲ್ಲೂ ಇರುತ್ತದೆ. ಕಾರ್ ಇವತ್ತು ಐಷಾರಾಮಿ ವಸ್ತುವಾಗಿ ಉಳಿದಿಲ್ಲ. ಇದು ದಿನದ ಅವಶ್ಯಕ ವಸ್ತುಗಳಲ್ಲಿ ಒಂದಾಗಿದೆ. ಮಾಧ್ಯಮ ವರ್ಗದ ಜನರು ಕಾರ್ ಖರೀದಿ ಮಾಡಬೇಕಾದರೆ ಯಾವ ರೀತಿಯ ಯೋಜನೆ ಮಾಡಿಕೊಳ್ಳಬೇಕಾಗುತ್ತದೆ ಎಂಬುದರ ಕುರಿತು ಹಣಕಾಸು ತಜ್ಞ ಡಾ. ಜೆ.ಎನ್. ಜಗನ್ನಾಥ್ ನೀಡಿರುವ ಮಾಹಿತಿ ಇಲ್ಲಿದೆ.
ಡಾ. ಜೆ.ಎನ್. ಜಗನ್ನಾಥ್ ಮತ್ತು ಕೇಶವ ಪ್ರಸಾದ್ -
ಬೆಂಗಳೂರು, ಜ. 5: ಮನೆಗೊಂದು ಕಾರ್ (Buy a new car) ಬೇಕು ಎನ್ನುವ ಕನಸು ಎಲ್ಲರಲ್ಲೂ ಇರುತ್ತದೆ. ಆದರೆ ಮಧ್ಯಮ ವರ್ಗದ ಕುಟುಂಬ ಕಾರ್ ಖರೀದಿಸುವ ಮುನ್ನ ಸಾಕಷ್ಟು ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಹಾಗೂ ಸಾಕಷ್ಟು ಯೋಜನೆಯನ್ನು ಕೂಡ ಹಾಕಿಕೊಳ್ಳಬೇಕು ಎಂದು ಹಣಕಾಸು ತಜ್ಞ ಡಾ. ಜೆ.ಎನ್. ಜಗನ್ನಾಥ್ (Dr. J.N. Jagannath) ಹೇಳಿದ್ದಾರೆ. 'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾರ್ ಖರೀದಿ ಮಾಡಬೇಕಾದರೆ ಏನೆಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ಎನ್ನುವುದರ ಕುರಿತು ವಿವರಿಸಿರುವುದು ಹೀಗೆ...
ಭಾರತದಲ್ಲಿ ಮೊದಲು ಅಂಬಾಸಿಡರ್ ಮತ್ತು ಫಿಯೆಟ್ ಕಾರ್ ಮಾತ್ರ ಇತ್ತು. ಬಳಿಕ ಮಾರುತಿ ಬಂತು. ಅನಂತರ ನಾನಾ ಕಂಪನಿಗಳ ಕಾರುಗಳು ಮಾರುಕಟ್ಟೆಗೆ ಬಂದವು. 1978ರಲ್ಲಿ 500 ಕುಟುಂಬಗಳಿಗೆ ಒಂದು ಕಾರು ಇದ್ದದ್ದು ಇವತ್ತು ಮನೆಗೆರೆಡು ಕಾರು ಬಂದು ಬಿಟ್ಟಿದೆ ಎಂದು ಹೇಳಿದರು.
ಕಾರ್ ಖರೀದಿಸುವ ಮುನ್ನ ಗಮನಿಸಬೇಕಾದ ಅಂಶಗಳ ಬಗ್ಗೆ ಇಲ್ಲಿದೆ ಮಾಹಿತಿ:
ಕಾರ್ ಖರೀದಿ ಎಂದರೆ ಖರ್ಚು ಹೆಚ್ಚಾಗುತ್ತೆ ಎಂದುಕೊಳ್ಳಬೇಕು. ಇದರಿಂದ ಆದಾಯ ಕಡಿಮೆ. ನಮ್ಮ ಸಂತೋಷಕ್ಕಾಗಿ ಮಾತ್ರ ಕಾರ್ ತೆಗೆದುಕೊಳ್ಳಬಹುದು. ಪ್ರತಿಯೊಬ್ಬರಿಗೂ ಇವತ್ತು ಸಾಲವಿದೆ. ಆವಶ್ಯಕತೆ, ಆಸಕ್ತಿ ಎಂದು ನಮ್ಮ ಸಂಬಳದ ಬಹುಪಾಲು ಹಣವನ್ನು ಖರ್ಚು ಮಾಡುತ್ತೇವೆ. ಇದರೊಂದಿಗೆ ನಾವು ಕಾರ್ ಖರೀದಿಸಿದರೆ ಹತ್ತು ವರ್ಷಕ್ಕೊಮ್ಮೆ ಇದನ್ನು ಬದಲಾಯಿಸಲೇಬೇಕು ಎಂದು ಡಾ. ಜೆ.ಎನ್. ಜಗನ್ನಾಥ್ ಹೇಳಿದರು.
ಕಾರ್ ಖರೀದಿಸುವಾಗ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ನಮ್ಮ ಆದಾಯ. ಕಾರನ್ನು ನಾವು ಯಾಕಾಗಿ ಹೆಚ್ಚು ಉಪಯೋಗಿಸುತ್ತೇವೆ, ಎಷ್ಟು ಜನ ಕಾರ್ ಬಳಸುತ್ತೇವೆ, ಆಫೀಸ್‌ಗೆ ಹೋಗುವಾಗ ಕಾರ್ ಬಳಸುತ್ತೇವೆಯೇ ಇತ್ಯಾದಿ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಹೊಸ ವರ್ಷದಲ್ಲಿ ಹೂಡಿಕೆ ಎಲ್ಲಿ, ಹೇಗೆ ಮಾಡಬೇಕು ?
ಮಾರುಕಟ್ಟೆಯಲ್ಲಿ ಹಲವು ಕಂಪನಿಗಳ ಕಾರ್‌ಗಳಿವೆ. ಇವುಗಳಲ್ಲಿ ನಮ್ಮ ಅವಶ್ಯಕತೆ ಮತ್ತು ಆದಾಯವನ್ನು ನೋಡಿಕೊಂಡು ಕಾರ್ ಖರೀದಿಸಬೇಕು. ಹೊಸ ಕಾರ್ ಖರೀದಿಗೆ ಸಾಲ ಸುಲಭವಾಗಿ ಸಿಗುತ್ತದೆ. ಇದನ್ನು 5- 7 ವರ್ಷ ಕಟ್ಟಬೇಕಾಗುತ್ತದೆ. ಮಧ್ಯಮ ವರ್ಗದವರು ಕಾರ್ ಖರೀದಿ ಮಾಡುವುದಾದರೆ ಮಾರುತಿ ಉತ್ತಮ. ಯಾಕೆಂದರೆ ಎಲ್ಲ ಕಡೆ ಇದಕ್ಕೆ ಸರ್ವಿಸ್ ಇದೆ. ಖರ್ಚು ಕಡಿಮೆ. ಮತ್ತೆ ಮಾರಾಟ ಮಾಡಬೇಕಾದ ಸಮಯ ಬಂದರೆ ಉತ್ತಮ ಬೆಲೆ ಕೂಡ ಸಿಗುತ್ತದೆ ಎಂದು ಹೇಳಿದರು.
ಹೊಸ ಕಾರ್ ಖರೀದಿ ಮಾಡಿದ ಮೇಲೆ ಹತ್ತು ವರ್ಷ ಬಳಸಲೇಬೇಕು. ಇಲ್ಲವಾದರೆ ನಾವು ಹೆಚ್ಚು ಹಣ ಪೋಲು ಮಾಡಿದಂತಾಗುತ್ತದೆ. ಕಾರ್ ಬದಲಾಯಿಸುವುದು ಎಂದರೆ ಮತ್ತೆ ಅಷ್ಟೇ ಖರ್ಚು ಬರುತ್ತದೆ ಎಂಬುದು ನೆನಪಿನಲ್ಲಿರಲಿ ಎಂದರು.
ಎರಡು ಕಾರ್ ಒಟ್ಟಿಗೆ ಬಳಸುವುದು ಕಷ್ಟ. ಅವಶ್ಯಕತೆ ಇದ್ದರೆ ಮಾತ್ರ ನಮ್ಮ ಅನುಕೂಲಕ್ಕೆ ತಕ್ಕಂತೆ ಎರಡನೇ ಕಾರ್ ಖರೀದಿ ಮಾಡುವ ಬಗ್ಗೆ ಯೋಚಿಸಿ. ಎರಡನೇ ಕಾರ್ ತೆಗೆದುಕೊಳ್ಳಬೇಕು ಎಂದರೆ ನಿರ್ವಹಣೆ ಖರ್ಚು ಕೂಡ ಅಷ್ಟೇ ಬರುತ್ತದೆ. ಕಾರುಗಳಿಗೆ ಅದರದ್ದೇ ಆದ ಖರ್ಚುಗಳಿವೆ. ಸಾಮಾನ್ಯವಾಗಿ ಮನೆಯಲ್ಲಿ ಒಂದಿಬ್ಬರು ಮಾತ್ರ ಕಾರ್ ಬಳಸುವವರಾದರೆ ಸಣ್ಣ ಕಾರ್ ತೆಗೆದುಕೊಳ್ಳಬಹುದು. ಹಿರಿಯ ನಾಗರಿಕರಿಗೆ ಆದರೆ ಫುಲ್ ಆಟೋಮ್ಯಾಟಿಕ್ ಹೆಚ್ಚು ಸುರಕ್ಷಿತವಾಗಿರುತ್ತದೆ ಎಂದು ತಿಳಿಸಿದರು.
ಇನ್ನು ಬಜೆಟ್ ಅಂಶವನ್ನು ಗಮನಿಸಿದರೆ 30 ಲಕ್ಷ ರುಪಾಯಿ ಮೌಲ್ಯದ ಕಾರ್ ಖರೀದಿ ಮಾಡುವುದರ ಬದಲು 10 ಲಕ್ಷ ರುಪಾಯಿಯ ಕಾರ್ ತೆಗೆದುಕೊಂಡು ಉಳಿದ 20 ಲಕ್ಷ ರುಪಾಯಿಗೆ ಬರುವ ಬಡ್ಡಿ ಹಣದಲ್ಲೇ ಕಾರಿನ ನಿರ್ವಹಣೆ ಮಾಡಬಹುದು ಎಂದು ಅವರು ಹೇಳಿದರು.
ಸಿಗರೇಟ್ ಮೇಲೆ ಹೆಚ್ಚಿದ ಅಬಕಾರಿ ಸುಂಕ; ಐಟಿಸಿ ಮಾರುಕಟ್ಟೆ ಮೌಲ್ಯ 63,000 ಕೋಟಿ ಕುಸಿತ
ಇವತ್ತು ದೇಶದಲ್ಲಿ ಕಾರ್‌ಗಳ ದಟ್ಟಣೆ ಹೆಚ್ಚಾಗಿದೆ. ಟ್ರಾಫಿಕ್ ಜಾಮ್ ನಿಯಂತ್ರಿಸಲು ವಿದೇಶಗಳಲ್ಲಿ ಇರುವ ಕೆಲವೊಂದು ನಿಯಮಗಳನ್ನು ನಾವು ಕೂಡ ಜಾರಿಗೆ ತಂದರೆ ಒಳ್ಳೆಯದು. ಉದಾಹರಣೆಗೆ ಕಾರ್ ಪೂಲಿಂಗ್, ಸಮ, ಬೆಸ ಸಂಖ್ಯೆಯ ಕಾರ್‌ಗಳನ್ನು ರಸ್ತೆಗಿಳಿಸುವುದು, ಸಾರ್ವಜನಿಕ ಸಾರಿಗೆಗಳಿಗೆ ಆದ್ಯತೆ ನೀಡುವುದು ಇತ್ಯಾದಿ. ಅಭಿವೃದ್ಧಿ ಎಂದರೆ ಈಗ ಟ್ರಾಫಿಕ್ ಜಾಮ್ ಮತ್ತು ಡಿವೋರ್ಸ್ ಎಂಬಂತಾಗಿದೆ. 90ರ ದಶಕದಲ್ಲಿದ್ದ ಜೀವನ ಈಗ ಇಲ್ಲ. ಇದರಿಂದ ನಾವು ಆರೋಗ್ಯ ಮತ್ತು ನೆಮ್ಮದಿಯನ್ನು ಕಳೆದುಕೊಂಡಿದ್ದೇವೆ ಎಂದು ಅವರು ಹೇಳಿದರು.