ದೆಹಲಿ ಗಲಭೆ ಆರೋಪಿ ಮೀರಾನ್ ಹೈದರ್ ಜಾಮೀನು ಷರತ್ತು ಸಡಿಲಿಕೆಗೆ ಸುಪ್ರೀಂ ಕೋರ್ಟ್ ನಕಾರ
Meeran Haider: 2020ರ ದೆಹಲಿ ಗಲಭೆ ಪ್ರಕರಣದ ಆರೋಪಿ ಮೀರಾನ್ ಹೈದರ್‌ನ ಜಾಮೀನು ಷರತ್ತುಗಳನ್ನು ಸಡಿಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕಾರ್ಯಕ್ರಮ, ಸಭೆ, ರ‍್ಯಾಲಿಗಳಲ್ಲಿ ಭಾಗವಹಿಸುವುದು ಹಾಗೂ ಪೋಸ್ಟರ್, ಬ್ಯಾನರ್ ಅಥವಾ ಕರಪತ್ರಗಳನ್ನು ಹಂಚುವುದರ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಆದರೆ ವಾರಕ್ಕೆ ಎರಡು ಬಾರಿ ಪೊಲೀಸ್ ಠಾಣೆಗೆ ಹಾಜರಾಗಬೇಕಿದ್ದ ಷರತ್ತನ್ನು ಬದಲಿಸಿ, ಇನ್ನು ಮುಂದೆ ಪ್ರತಿ ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.
ಮೀರಾನ್ ಹೈದರ್ (ಸಂಗ್ರಹ ಚಿತ್ರ) -
ನವದೆಹಲಿ, ಸೆ. 25: 2020ರ ದೆಹಲಿ ಗಲಭೆ (Delhi Riots) ಪ್ರಕರಣದ ಆರೋಪಿ ಮೀರಾನ್ ಹೈದರ್ (Meeran Haider)ಗೆ ವಿಧಿಸಲಾಗಿದ್ದ ಜಾಮೀನು ಷರತ್ತುಗಳ ಪೈಕಿ ಬಹುತೇಕ ಷರತ್ತುಗಳನ್ನು ಸಡಿಲಿಸಲು ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ನಿರಾಕರಿಸಿದೆ. ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಸಭೆ, ರ‍್ಯಾಲಿ ಅಥವಾ ಕೂಟದಲ್ಲಿ ಹಾಜರಾಗುವುದು ಅಥವಾ ಭಾಷಣ ಮಾಡುವುದು ಹಾಗೂ ಯಾವುದೇ ರೀತಿಯ ಪೋಸ್ಟರ್, ಬ್ಯಾನರ್, ಕರಪತ್ರಗಳನ್ನು ಹಂಚುವುದರ ಮೇಲಿನ ನಿರ್ಬಂಧ ಮುಂದುವರಿಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಂಚೋಲಿ ಅವರ ಪೀಠ ಈ ವಿಚಾರಣೆ ನಡೆಸಿದ್ದು, ಮೀರಾನ್ ಹೈದರ್ ಪರ ಹಿರಿಯ ವಕೀಲ ಸಿದ್ಧಾರ್ಥ್ ಅಗರ್ವಾಲ್ ಜಾಮೀನು ಷರತ್ತುಗಳಲ್ಲಿ ಮೂರು ಬದಲಾವಣೆಗಳನ್ನು ಮಾಡುವಂತೆ ಮನವಿ ಮಾಡಿದ್ದರು.
ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ
ಜಾಮೀನು ಷರತ್ತುಗಳ ಪ್ರಕಾರ, ವಿಚಾರಣೆ ಮುಗಿಯುವವರೆಗೆ ಹೈದರ್ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಯಾವುದೇ ಸಭೆ, ರ‍್ಯಾಲಿ ಅಥವಾ ಕೂಟದಲ್ಲಿ ನೇರವಾಗಿ ಅಥವಾ ಆನ್‌ಲೈನ್ ಮೂಲಕ ಹಾಜರಾಗುವುದಕ್ಕೂ ನಿರ್ಬಂಧವಿದೆ.
ಅಲ್ಲದೆ, ಎಲೆಕ್ಟ್ರಾನಿಕ್ ಅಥವಾ ಭೌತಿಕ ರೂಪದಲ್ಲಿ ಯಾವುದೇ ಪೋಸ್ಟ್, ಕರಪತ್ರ, ಪೋಸ್ಟರ್, ಬ್ಯಾನರ್ ಸೇರಿ ಯಾವುದೇ ಪ್ರಚಾರ ಸಾಮಗ್ರಿಗಳನ್ನು ಹಂಚುವಂತಿಲ್ಲ. ಈ ಷರತ್ತುಗಳನ್ನು ಪ್ರಸ್ತುತ ದೆಹಲಿ ಗಲಭೆ ಪ್ರಕರಣಕ್ಕೆ ಮಾತ್ರ ಸೀಮಿತಗೊಳಿಸುವಂತೆ ಹೈದರ್ ಪರ ವಕೀಲರು ಮನವಿ ಮಾಡಿದರು. ಆದರೆ ಇದನ್ನು ಪೀಠ ತಿರಸ್ಕರಿಸಿತು.
“ನಾವು ಒಂದು ಷರತ್ತನ್ನು ಹೊರತುಪಡಿಸಿ ಯಾವುದೇ ಷರತ್ತನ್ನು ಸಡಿಲಿಸುವುದಿಲ್ಲ” ಎಂದು ಪೀಠ ತಿಳಿಸಿತು. ಈ ನಿರ್ಬಂಧಗಳನ್ನು ಪ್ರಕರಣಕ್ಕೆ ಮಾತ್ರ ಸೀಮಿತಗೊಳಿಸದೆ ವ್ಯಾಪಕವಾಗಿ ವಿಧಿಸಲಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಸಲ್ವಾರ್ ತೆಗೆಯುವುದು, ಎದೆ ಒತ್ತುವುದು ಲೈಂಗಿಕ ದೌರ್ಜನ್ಯವಲ್ಲ ಎಂದ ಪಾಟ್ನಾ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ತರಾಟೆ
ವಾರಕ್ಕೆ ಎರಡು ಬಾರಿ ಬದಲು ಶನಿವಾರ ಹಾಜರಿ
ಪೊಲೀಸ್ ಠಾಣೆಗೆ ಹಾಜರಾಗಬೇಕೆಂಬ ಷರತ್ತಿನಲ್ಲಿ ಹೈದರ್‌ಗೆ ಭಾಗಶಃ ಪರಿಹಾರ ದೊರೆತಿದೆ. ಈ ಹಿಂದೆ ಪ್ರತಿ ಸೋಮವಾರ ಮತ್ತು ಗುರುವಾರ ಪೊಲೀಸ್ ಠಾಣೆಗೆ ಹಾಜರಾಗಬೇಕಿತ್ತು. ಹೈದರ್ ಉದ್ಯೋಗ ಹುಡುಕುತ್ತಿರುವುದರಿಂದ ವಾರದ ದಿನಗಳಲ್ಲಿ ಕೆಲಸದ ಸಮಯದ ಕಾರಣ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಆತನ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಇದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಇನ್ನು ಮುಂದೆ ಪ್ರತಿ ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ದೆಹಲಿ ಪೊಲೀಸರ ಅಪರಾಧ ವಿಭಾಗದ ಠಾಣೆಯ ಠಾಣಾಧಿಕಾರಿ (SHO) ಮುಂದೆ ಹಾಜರಾಗಿ ಸಹಿ ದಾಖಲಿಸುವಂತೆ ಸೂಚಿಸಿದೆ.
ಅಕ್ಟೋಬರ್ 17 ಮತ್ತು 24ರಂದು ಪೊಲೀಸ್ ಠಾಣೆಗೆ ಹಾಜರಾಗುವುದರಿಂದಲೂ ಹೈದರ್‌ಗೆ ವಿನಾಯಿತಿ ನೀಡಲಾಗಿದೆ. ಅಕ್ಟೋಬರ್ 17ರಿಂದ ಆರಂಭವಾಗುವ ವಾರದಲ್ಲಿ ಆತನ ವಿವಾಹ ಇರುವ ಹಿನ್ನೆಲೆಯಲ್ಲಿ ಈ ವಿನಾಯಿತಿ ನೀಡಲಾಗಿದೆ.
ದೆಹಲಿ ಪೊಲೀಸರ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಈ ಬದಲಾವಣೆಗೆ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಇನ್ನು ದೆಹಲಿ ವ್ಯಾಪ್ತಿಯಲ್ಲೇ ಉಳಿಯಬೇಕೆಂಬ ಮತ್ತೊಂದು ಷರತ್ತನ್ನು ಬದಲಾಯಿಸುವಂತೆ ಹೈದರ್ ಪರ ವಕೀಲರು ಮನವಿ ಮಾಡಿದರು. ಈ ವಿಚಾರವನ್ನು ಜನವರಿ 5ರ ತೀರ್ಪಿನ ಅನುಸಾರ ವಿಚಾರಣಾ ನ್ಯಾಯಾಲಯದಲ್ಲಿ ಪರಿಗಣಿಸಬಹುದು ಎಂದು ಅವರು ತಿಳಿಸಿದರು.
ಜನವರಿಯಲ್ಲಿ ಐವರಿಗೆ ಜಾಮೀನು
ಜನವರಿ 5ರಂದು ಸುಪ್ರೀಂ ಕೋರ್ಟ್ ಮೀರಾನ್ ಹೈದರ್, ಗುಲ್ಫಿಶಾ ಫಾತಿಮಾ, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಂ ಖಾನ್ ಮತ್ತು ಶಾದಾಬ್ ಅಹ್ಮದ್‌ಗೆ ಜಾಮೀನು ನೀಡಿತ್ತು. ಆದರೆ ಜೆಎನ್‌ಯು ಮಾಜಿ ಸಂಶೋಧಕ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್‌ಗೆ ಜಾಮೀನು ನೀಡಲು ನಿರಾಕರಿಸಿತ್ತು.
2020ರ ದೆಹಲಿ ಗಲಭೆ ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಸೇರಿ ವಿವಿಧ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.