ನೀಟ್ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ್ದು ಹೇಗೆ? ಸಿಬಿಐ ತನಿಖೆಯಲ್ಲಿ ತಿಳಿದ ರಹಸ್ಯವೇನು?
NEET question paper leak: 94 ಪುಟಗಳ ಸಿಬಿಐ ದಾಖಲೆಯಲ್ಲಿ, ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಜವಾಬ್ದಾರಿ ಹೊಂದಿದ್ದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಂಡದ ಭಾಗವಾಗಿದ್ದ ಮೂವರು ತಜ್ಞರು ಪ್ರಶ್ನೆಗಳನ್ನು ಹೇಗೆ ಸೋರಿಕೆ ಮಾಡಿದರು ಎಂಬುದನ್ನು ವಿವರಿಸುತ್ತದೆ. 2026 ರ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಆರೋಪಿಗಳ ಕಾರ್ಯವೈಖರಿ ಹೀಗಿತ್ತು.
ನೀಟ್ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ್ದು ಹೇಗೆ? -
ನವದೆಹಲಿ, ಆ.7: ಮೇ ಆರಂಭದಲ್ಲಿ ದೇಶವನ್ನೇ ಬೆಚ್ಚಿಬೀಳಿಸಿ, ಬೃಹತ್ ಪ್ರತಿಭಟನೆಯಿಂದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಗೆ ಕಾರಣವಾದ ನೀಟ್ (NEET-UG 2026) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (CBI) ಆರೋಪಪಟ್ಟಿ ಸಲ್ಲಿಸಿದೆ. ಪ್ರಶ್ನೆಗಳನ್ನು ಕಂಠಪಾಠ ಮಾಡುವುದು, ಅವುಗಳನ್ನು ಚೀಟಿಗಳಲ್ಲಿ ಬರೆದಿಡುವುದು ಹಾಗೂ ಪುಸ್ತಕಗಳಲ್ಲಿ ಸಂಬಂಧಿತ ಪ್ಯಾರಾಗಳನ್ನು ಗುರುತಿಸುವುದು. ಸಿಬಿಐ ಸಲ್ಲಿಸಿದ ಆರೋಪಪಟ್ಟಿಯ ಪ್ರಕಾರ, 2026 ರ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಆರೋಪಿಗಳ ಕಾರ್ಯವೈಖರಿ ಹೀಗಿತ್ತು.
94 ಪುಟಗಳ ಸಿಬಿಐ ದಾಖಲೆಯಲ್ಲಿ, ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಜವಾಬ್ದಾರಿ ಹೊಂದಿದ್ದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಂಡದ ಭಾಗವಾಗಿದ್ದ ಮೂವರು ತಜ್ಞರು ಪ್ರಶ್ನೆಗಳನ್ನು ಹೇಗೆ ಸೋರಿಕೆ ಮಾಡಿದರು ಎಂಬುದನ್ನು ವಿವರಿಸುತ್ತದೆ. ಆರೋಪಪಟ್ಟಿಯಲ್ಲಿ ಪಿ.ವಿ. ಕುಲಕರ್ಣಿ, ಮನಿಷಾ ಮಂಧಾರೆ ಮತ್ತು ಮನಿಷಾ ಹವಾಲ್ದಾರ್ ಅವರನ್ನು ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಮುಖ ಮೂಲಗಳೆಂದು ಹೆಸರಿಸಲಾಗಿದೆ.
ಕುಲಕರ್ಣಿ ರಸಾಯನಶಾಸ್ತ್ರ ವಿಷಯದಲ್ಲಿ ತಜ್ಞರಾಗಿದ್ದರೆ, ಮಾಂಧರೆ ಮತ್ತು ಹವಾಲ್ದಾರ್ ಕ್ರಮವಾಗಿ ಸಸ್ಯಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ ತಜ್ಞರಾಗಿದ್ದರು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿ, ಆರೋಪ ಹೊರಿಸಿರುವ 13 ಆರೋಪಿಗಳಲ್ಲಿ ಇವರೂ ಸೇರಿದ್ದಾರೆ.
ಆರೋಪಪಟ್ಟಿಯ ಪ್ರಕಾರ, ಎನ್‌ಟಿಎ ಕೇಂದ್ರದಲ್ಲಿ ಪ್ರಶ್ನೆಪತ್ರಿಕೆಯ ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ, ತಜ್ಞರು ಪ್ರಶ್ನೆಗಳನ್ನು ಚೀಟಿಗಳಲ್ಲಿ ಬರೆದುಕೊಂಡು, ಎನ್‌ಸಿಇಆರ್‌ಟಿ ಪುಸ್ತಕಗಳಲ್ಲಿ ಪ್ಯಾರಾಗಳನ್ನು ಗುರುತು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಮತ್ತು ಅನುವಾದಿಸುವ ಪ್ರಕ್ರಿಯೆಯ ವೇಳೆ ಆರೋಪಿಗಳಿಗೆ ವಿವಿಧ ವಿಭಾಗಗಳಿಗೆ ಪ್ರವೇಶವಿತ್ತು ಎಂದು ಸಿಬಿಐ ಹೇಳಿದೆ. ಅವರು ಪ್ರಶ್ನೆಗಳನ್ನು ಕಾಗದದ ಚೀಟಿಗಳಲ್ಲಿ ಬರೆದುಕೊಂಡು, ಅದಕ್ಕೆ ಸಂಬಂಧಿಸಿದ ಎನ್‌ಸಿಇಆರ್‌ಟಿ ಅಧ್ಯಾಯಗಳು ಮತ್ತು ಪ್ಯಾರಾಗಳನ್ನು ಗುರುತಿಸಿದರು. ಬಳಿಕ ವಿಶ್ವಾಸಾರ್ಹ ಮಧ್ಯವರ್ತಿಗಳು ಮತ್ತು ತರಬೇತಿ ಜಾಲಗಳ ಮೂಲಕ ಈ ಮಾಹಿತಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು ಎಂದು ಆರೋಪಿಸಲಾಗಿದೆ.
ಪ್ರಶ್ನೆಪತ್ರಿಕೆ ಸೋರಿಕೆಯ ಹಿಂದೆ ಹಣಕಾಸಿನ ಲಾಭದ ಉದ್ದೇಶದ ಜೊತೆಗೆ, ಕೆಲವು ಆರೋಪಿಗಳು ನಡೆಸುತ್ತಿದ್ದ ಟ್ಯೂಷನ್ ತರಗತಿಗಳ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶವೂ ಇತ್ತು ಎಂದು ಹೇಳಲಾಗಿದೆ. ಖಾಸಗಿ ಕೋಚಿಂಗ್ ತರಗತಿಗಳ ವೇಳೆ ಸೋರಿಕೆಯಾದ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೈಬರಹದಲ್ಲಿ ಬರೆದುಕೊಳ್ಳುವಂತೆ ಸೂಚಿಸಲಾಗಿತ್ತು ಎಂದು ಸಿಬಿಐ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಸಿಬಿಐ ನಡೆಸಿದ ಶೋಧ ಕಾರ್ಯಾಚರಣೆಗಳಲ್ಲಿ ಈ ಕೈಬರಹದ ಕೆಲವು ಟಿಪ್ಪಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
13 ಆರೋಪಿಗಳ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ, ಕ್ರಿಮಿನಲ್ ನಂಬಿಕೆ ಉಲ್ಲಂಘನೆ, ಸಾಕ್ಷ್ಯ ನಾಶ ಮತ್ತು ಇತರ ಅಪರಾಧಗಳಿಗಾಗಿ ಬಿಎನ್‌ಎಸ್ ಅಡಿಯಲ್ಲಿ; ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕ್ರಿಮಿನಲ್ ದುಷ್ಕೃತ್ಯದ ಅಪರಾಧಕ್ಕಾಗಿ; ಮತ್ತು ಸಾರ್ವಜನಿಕ ಪರೀಕ್ಷೆ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ, 2024 ರ ಅಡಿಯಲ್ಲಿ ಅಪರಾಧಗಳಿಗಾಗಿ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ.