ಪ್ರಸಿದ್ಧ ಸಿಹಿ ತಿಂಡಿ ಅಂಗಡಿಯ ಗುಲಾಬ್ ಜಾಮೂನ್ ಪಾತ್ರೆಯಲ್ಲಿ ಈಜಾಡಿದ ಇಲಿ; ವಿಡಿಯೊ ಇಲ್ಲಿದೆ
Viral Video: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯಲ್ಲಿರುವ ಸಿಹಿ ತಿಂಡಿ ಅಂಗಡಿಯೊಂದರಲ್ಲಿ ಜಾಮೂನ್ ಪಾತ್ರೆಯೊಳಗೆ ಇಲಿ ಈಜಾಡುತ್ತಿರುವ ದೃಶ್ಯ ವೈರಲ್ ಆಗಿದೆ. ನಂತರ ಮಹಾರಾಷ್ಟ್ರದ ಆಹಾರ ಸುರಕ್ಷತಾ ನಿಯಂತ್ರಣ ಪ್ರಾಧಿಕಾರವು ಅಂಗಡಿ ಮೇಲೆ ದಾಳಿ ನಡೆಸಿ ವ್ಯಾಪಾರ ಸ್ಥಗಿತಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಮಹಾರಾಷ್ಟ್ರದ ಥಾಣೆಯಲ್ಲಿನ ಗುಲಾಬ್ ಜಾಮೂನ್ ಅಂಗಡಿ -
ಮುಂಬೈ, ಅ. 9: ಹೊರಗೆ ಖರೀದಿಸುವ ಆಹಾರ ರುಚಿಯಾಗಿದ್ದರೂ ನಮ್ಮ ಆರೋಗ್ಯಕ್ಕೆ ಸೂಕ್ತವೇ? ಎಂದು ಪ್ರಶ್ನೆ ಮೂಡುವಂತಾಗಿದೆ. ಬೀದಿ ಬದಿ ತಯಾರಿಸುವ ಆಹಾರ ಮಳಿಗೆಯಲ್ಲಿ ನೈರ್ಮಲ್ಯ ಕಾಪಾಡದೆ ಇರುವುದು, ಕೊಳೆತ ಆಹಾರ ಪದಾರ್ಥಗಳನ್ನು ಉಪಯೋಗಿಸುವುದು ಹೀಗೆ ಗುಣಮಟ್ಟದ ಬಗ್ಗೆ ಅನೇಕ ದೂರು ಕೇಳಿಬರುತ್ತಿವೆ. ಈ ನಡುವೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯಲ್ಲಿರುವ ಅಂಗಡಿಯೊಂದರಲ್ಲಿ ಜಾಮೂನ್ ಪಾತ್ರೆಯೊಳಗೆ ಇಲಿ ಈಜಾಡುತ್ತಿರುವ ದೃಶ್ಯವೊಂದು ವೈರಲ್ (Viral News) ಆಗಿದೆ. ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಮಹಾರಾಷ್ಟ್ರದ ಆಹಾರ ಸುರಕ್ಷತಾ ನಿಯಂತ್ರಣ ಪ್ರಾಧಿಕಾರವು ಥಾಣೆಯ ಭಿವಂಡಿ ನಗರದಲ್ಲಿರುವ ಅಂಗಡಿಗೆ ದಾಳಿ ನಡೆಸಿ, ವ್ಯಾಪಾರವನ್ನು ಸ್ಥಗಿತಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ರಸ್ತೆ ಬದಿಯಲ್ಲಿ ದೀರ್ಘಕಾಲ ತೆರೆದಿಟ್ಟಿರುವ ಆಹಾರದಲ್ಲಿ ಧೂಳು, ನೊಣಗಳ ಓಡಾಟ ಹೀಗೆ ಶುಚಿತ್ವ ಕಾಪಾಡದೇ ಆರೋಗ್ಯ ಹದಗೆಟ್ಟ ಘಟನೆಗಳು ನಡೆದಿವೆ. ಇದೀಗ ಮಹಾರಾಷ್ಟ್ರದಲ್ಲಿ ಜಾಮೂನ್ ಪಾತ್ರೆಯೊಳಗೆ ಇಲಿ ಈಜಾಡುತ್ತಿರುವ ವಿಡಿಯೊ ವೈರಲ್ ಆಗುತ್ತಿದ್ದಂತೆ ಗ್ರಾಹಕರು ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ವಿಡಿಯೊ ನೋಡಿ:
Live Rat Spotted Swimming In Gulab Jamuns, FDA Acts; Bhiwandi Shop Served stop Bussines Notice https://t.co/DYMpX3pOpy
— RJ ALOK (@OYERJALOK) October 8, 2026
ಭಿವಂಡಿಯ ಶಾಂತಿ ನಗರದ ನಾಗಾ ರಸ್ತೆಯಲ್ಲಿರುವ ಹರೀಶ್ ಗುಲಾಬ್ ಜಾಮೂನ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಪಾತ್ರೆಯಲ್ಲಿ ಗುಲಾಬ್ ಜಾಮೂನ್‌ಗಳ ನಡುವೆ ಇಲಿಯೊಂದು ರಾಜ ರೋಷವಾಗಿ ಈಜಾಡುತ್ತಿದೆ. ವಿಡಿಯೊ ವೈರಲ್ ಬೆನ್ನಲ್ಲೇ ಆಹಾರ ಸುರಕ್ಷತಾ ಅಧಿಕಾರಿ ಪ್ರವೀಣ್ ಶಿಂಧೆ ಅಂಗಡಿಯನ್ನು ಪರಿಶೀಲಿಸಿ, ವ್ಯಾಪಾರವನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಬ್ಲಿಂಕ್‌ಇಟ್ ಉಚಿತ ಆಂಬ್ಯುಲೆನ್ಸ್ ಸೇವೆಯಿಂದ ಉಳಿಯಿತು ವೃದ್ಧೆಯ ಪ್ರಾಣ
ಪರಿಶೀಲನೆ ನಡೆಸಿದಾಗ ಇದು 5x6 ಅಡಿ ವಿಸ್ತೀರ್ಣದ ಜಾಗದಲ್ಲಿ ನಡೆಯುತ್ತಿರುವ ಹೊಸ ಅಂಗಡಿ ಎನ್ನುವುದು ಪತ್ತೆಯಾಗಿದೆ. ಇಲ್ಲಿ ಯಾವುದೇ ಉತ್ಪನ್ನಗಳನ್ನು ತಯಾರಿಸುತ್ತಿರಲಿಲ್ಲ. ಬದಲಾಗಿ, ಕಲ್ಯಾಣ್‌ನಲ್ಲಿ ಸಿದ್ಧಪಡಿಸಿದ ಗುಲಾಬ್ ಜಾಮೂನ್‌ಗಳನ್ನು ಖರೀದಿಸಿ ಇಲ್ಲಿ ಮರುಮಾರಾಟ ಮಾಡಲಾಗುತ್ತಿತ್ತು. ಪರಿಶೀಲನಾ ಅಧಿಕಾರಿ ಅಲ್ಲಿಗೆ ಭೇಟಿ ನೀಡಿದಾಗ ಅವರಿಗೆ ಇಲಿ ಕಂಡುಬರಲಿಲ್ಲ, ಆದರೆ ನಿರ್ವಾಹಕರ ಬಳಿ ಯಾವುದೇ ದಾಖಲೆಗಳಿರಲಿಲ್ಲ ಅಥವಾ ವ್ಯವಹಾರದ ನೋಂದಣಿ ಪ್ರಮಾಣಪತ್ರವೂ ಇರಲಿಲ್ಲ. ಜತೆಗೆ ನೈರ್ಮಲ್ಯ ನಿಯಮಗಳ ಉಲ್ಲಂಘನೆಯೂ ಕಂಡುಬಂದಿತ್ತು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಜಾಮೂನ್ ಪಾತ್ರೆಗೆ ಭಾರವಾದ ಮುಚ್ಚಳವಿದ್ದರೂ ಇಲಿ ಒಳಗೆ ಹೇಗೆ ಹೋಯಿತು ಎಂಬುದು ಸ್ಪಷ್ಟವಾಗಿಲ್ಲ. ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು ಶುಚಿತ್ವ ಕಾಪಾಡುವುದು ಮಾಲಕರ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.