ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Missing Case: ನ್ಯಾಯಾಧೀಶೆಯಾಗಲು ತಯಾರಿ ನಡೆಸುತ್ತಿದ್ದ ಯುವತಿ ನಿಗೂಢ ನಾಪತ್ತೆ!

ಸಿವಿಲ್ ನ್ಯಾಯಾಧೀಶೆಯಾಗಲು ತಯಾರಿ ನಡೆಸುತ್ತಿದ್ದ ಯುವತಿಯೊಬ್ಬಳು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅರ್ಚನಾ ತಿವಾರಿ ಇಂದೋರ್- ಬಿಲಾಸ್ಪುರ್ ನರ್ಮದಾ ಎಕ್ಸ್‌ಪ್ರೆಸ್‌ನಲ್ಲಿ (Indore–Bilaspur Narmada Express) ಪ್ರಯಾಣಿಸುತ್ತಿದ್ದ ವೇಳೆ ನಾಪತ್ತೆಯಾಗಿದ್ದಾಳೆ.

ನ್ಯಾಯಾಧೀಶೆಯಾಗಲು ತಯಾರಿ ನಡೆಸುತ್ತಿದ್ದ ಯುವತಿ ನಿಗೂಢ ನಾಪತ್ತೆ!

ಇಂದೋರ್: ಸಿವಿಲ್ ನ್ಯಾಯಾಧೀಶೆಯಾಗಲು ( Civil Judge Aspirant ) ತಯಾರಿ ನಡೆಸುತ್ತಿದ್ದ ಯುವತಿಯೊಬ್ಬಳು ರೈಲಿನಲ್ಲಿ ಆಗಸ್ಟ್ 7ರಂದು ನಿಗೂಢವಾಗಿ ನಾಪತ್ತೆಯಾದ ಘಟನೆ ಮಧ್ಯಪ್ರದೇಶದಲ್ಲಿ (Madhyapradesh) ನಡೆದಿದೆ. ಅರ್ಚನಾ ತಿವಾರಿ (28) ನಾಪತ್ತೆಯಾದ (Archana Tiwari Missing) ಯುವತಿ. ಈಕೆ ಇಂದೋರ್- ಬಿಲಾಸ್ಪುರ್ ನರ್ಮದಾ ಎಕ್ಸ್‌ಪ್ರೆಸ್‌ನಲ್ಲಿ (Indore–Bilaspur Narmada Express) ತಮ್ಮ ಊರಿಗೆ ತೆರಳುತ್ತಿದ್ದ ಈ ಘಟನೆ ನಡೆದಿದೆ. ರೈಲು ಭೋಪಾಲ್ (Bhopal) ಸಮೀಪ ಇದ್ದಾಗ ಆಕೆ ಮನೆಯವರೊಂದಿಗೆ ಕೊನೆಯದಾಗಿ ಮಾತನಾಡಿದ್ದಳು. ಈ ಕುರಿತು ಕಟ್ನಿ ರೈಲ್ವೆ ಪೊಲೀಸ್ ಠಾಣೆಯಲ್ಲಿ (Katni police station) ಪ್ರಕರಣ ದಾಖಲಿಸಲಾಗಿದೆ.

ಸಿವಿಲ್ ನ್ಯಾಯಾಧೀಶೆಯಾಗಲು ತಯಾರಿ ನಡೆಸುತ್ತಿದ್ದ ಅರ್ಚನಾ ತಿವಾರಿ ಕಟ್ನಿ ರೈಲು ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ಅವಳು ಇಳಿಯದೇ ಇದ್ದುದರಿಂದ ಗಾಬರಿಯಾದ ಪೋಷಕರು ಆಕೆಯನ್ನು ಹುಡುಕಲು ಪ್ರಾರಂಭಿಸಿದರು. ಆದರೆ ರೈಲು ಹೊರಡಲು ಸಿದ್ಧವಾಗಿದ್ದರಿಂದ ಮುಂದಿನ ರೈಲು ನಿಲ್ದಾಣವಾದ ಉಮಾರಿಯದಲ್ಲಿ ಹುಡುಕಲು ಪ್ರಾರಂಭಿಸಿದರು. ಈ ವೇಳೆ ಅವರ ಸಂಬಂಧಿಕರಿಗೆ ಅವಳ ಬ್ಯಾಗ್ ಮಾತ್ರ ಸಿಕ್ಕಿದ್ದು, ಅರ್ಚನಾ ನಾಪತ್ತೆಯಾಗಿದ್ದಳು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಟ್ನಿ ರೈಲ್ವೆ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಅನಿಲ್ ಮರಾವಿ, ಇಂದೋರ್- ಬಿಲಾಸ್ಪುರ್ ನರ್ಮದಾ ಎಕ್ಸ್‌ಪ್ರೆಸ್‌ನಲ್ಲಿ ಅರ್ಚನಾ ಪ್ರಯಾಣ ನಡೆಸುತ್ತಿದ್ದು, ಇಂದೋರ್‌ನಿಂದ ಆಗಸ್ಟ್ 7ರಂದು ಬೆಳಗ್ಗೆ ತನ್ನ ಊರಿಗೆ ಹೊರಟಿದ್ದಳು. ಇದಕ್ಕಾಗಿ ಬಿ -3 ಕೋಚ್ ಹತ್ತಿದ್ದಳು ಎಂದು ತಿಳಿಸಿದ್ದಾರೆ.

ರೈಲು ಕಟ್ನಿ ನಿಲ್ದಾಣ ತಲುಪಿದಾಗ ಅವಳು ಇಳಿಯದೇ ಇದ್ದುದರಿಂದ ಅವಳ ಕುಟುಂಬ ಸದಸ್ಯರು ಪಕ್ಕದ ನಗರವಾದ ಉಮಾರಿಯಾದಲ್ಲಿ ವಾಸಿಸುವ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಅವರು ರೈಲು ನಿಲ್ದಾಣ ತಲುಪಿ ಅವಳಿದ್ದ ಕೋಚ್ ಗೆ ಹೋಗಿ ಅಲ್ಲಿ ಅವಳ ಬ್ಯಾಗ್ ಅನ್ನು ಪತ್ತೆ ಮಾಡಿದ್ದಾರೆ ಆದರೆ ಅರ್ಚನಾ ಇರಲಿಲ್ಲ.

ಇದರಿಂದ ಗಾಬರಿಗೊಂಡ ಅರ್ಚನಾ ಕುಟುಂಬವು ತಕ್ಷಣವೇ ಕಟ್ನಿಯ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅರ್ಚನಾ ಆ ದಿನ ಬೆಳಗ್ಗೆ 10.15 ರ ಸುಮಾರಿಗೆ ಮನೆಯವರೊಂದಿಗೆ ಕೊನೆಯದಾಗಿ ಮಾತನಾಡಿದ್ದು, ಆಗ ಅವಳು ಭೋಪಾಲ್ ಬಳಿ ರೈಲು ಇದೆ ಎಂದು ಹೇಳಿದ್ದಾಳೆ. ಅನಂತರ ಅವಳ ಫೋನ್ ಕೂಡ ಸ್ವಿಚ್ ಆಫ್ ಆಗಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Tihar Jail: ತಿಹಾರ್ ಜೈಲಿನಲ್ಲಿ ಒಳಚರಂಡಿಗೆ ಜಾರಿ ಬಿದ್ದು ಇಬ್ಬರು ಕೈದಿಗಳು ಸಾವು

ಕೊನೆಯದಾಗಿ ಅರ್ಚನಾ ಭೋಪಾಲ್‌ನ ರಾಣಿ ಕಮಲಪತಿ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಭೋಪಾಲ್ ಬಳಿಕ ಆಕೆಯನ್ನು ಇತರ ಪ್ರಯಾಣಿಕರು ಕೂಡ ನೋಡಲಿಲ್ಲ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿರುವ ರೈಲ್ವೆ ಪೊಲೀಸರು, ತೀವ್ರ ತನಿಖೆ ಪ್ರಾರಂಭಿಸಿದ್ದಾರೆ.

ಕಟ್ನಿ ನ್ಯಾಯಾಲಯದಲ್ಲಿ ವಕೀಲರಾಗಿರುವ ಮತ್ತು ಅರ್ಚನಾ ಅವರ ತಂದೆ ಬಾಬು ಪ್ರಕಾಶ್ ತಿವಾರಿ, ತಮ್ಮ ಮಗಳು ಮೊದಲಿನಿಂದಲೂ ಅಧ್ಯಯನದಲ್ಲಿ ಉತ್ತಮಳಾಗಿದ್ದಳು. ಅವಳು ಜಬಲ್ಪುರದಲ್ಲಿ ಎಲ್‌ಎಲ್‌ಎಂ ಮಾಡಿದ್ದು, ಬಳಿಕ ಮೂರು ವರ್ಷಗಳ ಕಾಲ ಜಬಲ್ಪುರ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಳು. ಕಳೆದ ಎಂಟು ತಿಂಗಳುಗಳಿಂದ ಇಂದೋರ್‌ನಲ್ಲಿಯೇ ಇದ್ದು ಸಿವಿಲ್ ನ್ಯಾಯಾಧೀಶರಾಗಲು ತಯಾರಿ ನಡೆಸುತ್ತಿದ್ದಳು ಎಂದು ತಿಳಿಸಿದ್ದಾರೆ.