ʼʼರೀಲ್ಸ್ ಕ್ರಿಯೇಟರ್, ಡಮ್ಮಿ ಸಿಎಂ”: ಉದಯನಿಧಿ ಸ್ಟಾಲಿನ್ ಬಿಡುಗಡೆ ಬೆನ್ನಲ್ಲೇ ತಮಿಳುನಾಡು ವಿಜಯ್ ವಿರುದ್ಧ ಎಂ.ಕೆ. ಸ್ಟಾಲಿನ್ ವಾಗ್ದಾಳಿ
MK Stalin Slams Vijay: ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಟಿವಿಕೆ ವಿರುದ್ಧ ಡಿಎಂಕೆ ವಾಗ್ದಾಳಿ ನಡೆಸಿದೆ. “ಅಹಂಕಾರವು ವಿನಾಶಕ್ಕೆ ಕಾರಣವಾಗುತ್ತದೆ. ನಿರಂತರ ದುರಹಂಕಾರವು ಆ ವಿನಾಶವನ್ನು ಇನ್ನಷ್ಟು ವೇಗಗೊಳಿಸುತ್ತದೆ” ಎಂದು ಎಂಕೆ ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ.
ಉದಯನಿಧಿ ಸ್ಟಾಲಿನ್, ವಿಜಯ್ ಮತ್ತು ಎಂ.ಕೆ. ಸ್ಟಾಲಿನ್ (ಸಂಗ್ರಹ ಚಿತ್ರ) -
ಚೆನ್ನೈ, ಆ. 4: ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಟಿವಿಕೆ (Tamilaga Vettri Kazhagam) ವಿರುದ್ಧ ಡಿಎಂಕೆ ವಾಗ್ದಾಳಿ ನಡೆಸಿದೆ. ಆಡಳಿತ ಪಕ್ಷವು ದುರಹಂಕಾರದಿಂದ ವರ್ತಿಸುತ್ತಿದೆ ಎಂದು ಡಿಎಂಕೆ ಆರೋಪಿಸಿದೆ. “ಅಹಂಕಾರವು ವಿನಾಶಕ್ಕೆ ಕಾರಣವಾಗುತ್ತದೆ. ನಿರಂತರ ದುರಹಂಕಾರವು ಆ ವಿನಾಶವನ್ನು ಇನ್ನಷ್ಟು ವೇಗಗೊಳಿಸುತ್ತದೆ” ಎಂದು ಪಕ್ಷದ ಅಧ್ಯಕ್ಷ ಹಾಗೂ ಉದಯನಿಧಿ ಸ್ಟಾಲಿನ್ ಅವರ ತಂದೆ ಎಂ.ಕೆ. ಸ್ಟಾಲಿನ್ (M.K. Stalin) ಹೇಳಿದ್ದಾರೆ.
ಜನಪ್ರಿಯ ನಟಿ ತ್ರಿಷಾ ಕೃಷ್ಣನ್ ಅವರನ್ನು ಉಲ್ಲೇಖಿಸಿ ದ್ವಂದ್ವಾರ್ಥ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾದ ಸುಮಾರು ನಾಲ್ಕು ಗಂಟೆಗಳ ನಂತರ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡಲಾಯಿತು. ತಮ್ಮ ಭಾಷಣ ಅಸಭ್ಯ ಎಂಬ ಆರೋಪವನ್ನು ನಿರಾಕರಿಸಿದ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್, ಟಿವಿಕೆ ಸರ್ಕಾರವು ಆಡಳಿತಾತ್ಮಕ ವೈಫಲ್ಯ ಮತ್ತು ಕಾವೇರಿ ನೀರನ್ನು ಪಡೆಯಲು ಅಥವಾ ಮೇಕೆದಾಟು ಅಣೆಕಟ್ಟನ್ನು ವಿರೋಧಿಸಲು ಅಸಮರ್ಥವಾಗಿದೆ ಎಂದು ಆರೋಪಿಸಿದರು. ಅಲ್ಲದೆ ವಿಜಯ್ ಅವರನ್ನು ರೀಲ್ಸ್ ಕ್ರಿಯೇಟರ್, ಡಮ್ಮಿ ಸಿಎಂ ಎಂದು ಎಂ.ಕೆ. ಸ್ಟಾಲಿನ್ ವ್ಯಂಗ್ಯವಾಡಿದರು.
ಎಂ.ಕೆ. ಸ್ಟಾಲಿನ್ ಎಕ್ಸ್ ಪೋಸ್ಟ್:
எதிர்க்கட்சித் தலைவர் உதயநிதி கைது: ஆணவம், அழிவுக்கு வழிவகுக்கும்; தொடர்ச்சியான ஆணவம், அழிவை விரைவுபடுத்தும்!#தொடைநடுங்கி_அரசு pic.twitter.com/bsF6gm0PzT
— M.K.Stalin (@mkstalin) August 4, 2026
ಕಾವೇರಿ ಸಮಸ್ಯೆಗೆ ಸಂಬಂಧಿಸಿದ ಆರೋಪಗಳಿಗೆ ಸರ್ಕಾರ ಉತ್ತರ ನೀಡಲು ವಿಫಲವಾಗಿದೆ. ಅದರ ಬದಲಿಗೆ ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಿದೆ ಎಂದು ಎಂ.ಕೆ. ಸ್ಟಾಲಿನ್ ಆರೋಪಿಸಿದರು. ರಾಜ್ಯ ಬಜೆಟ್ ಅಧಿವೇಶನ ಆರಂಭವಾಗುವ ಒಂದು ದಿನ ಮೊದಲು ಬಂಧಿಸಿರುವುದು, ವಿಧಾನಸಭೆಯಿಂದ ವಿರೋಧ ಪಕ್ಷದ ನಾಯಕರನ್ನು ದೂರವಿಡುವ ಉದ್ದೇಶ ಎಂದು ಅವರು ಹೇಳಿದರು.
ತ್ರಿಷಾ ಕುರಿತು ಅಸಭ್ಯ ಹೇಳಿಕೆ ವಿವಾದ; ಉದಯನಿಧಿ ಸ್ಟಾಲಿನ್‌ಗೆ ರಿಲೀಫ್: ರಿಲೀಸ್‌ಗೆ ಮದ್ರಾಸ್ ಹೈಕೋರ್ಟ್ ಸೂಚನೆ
“ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೇ ಚುನಾವಣಾ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸುವ ಬದಲು, ಕೇವಲ ರೀಲ್ಸ್ ಕ್ರಿಯೇಟರ್‌ನಂತೆ ಸುತ್ತಾಡುವುದರಲ್ಲಿ ತೃಪ್ತಿಪಟ್ಟಿರುವ ಮುಖ್ಯಮಂತ್ರಿ ವಿಜಯ್ ಈಗಾದರೂ ತಮ್ಮ ಜವಾಬ್ದಾರಿಗಳನ್ನು ಅರಿತು ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು” ಎಂದು ಅವರು ಹೇಳಿದರು.
"ಅಧಿಕಾರಕ್ಕೆ ಬಂದ ದಿನದಿಂದಲೂ ಮುಖ್ಯಮಂತ್ರಿ ವಿಜಯ್ ತಮ್ಮನ್ನು, ತಮ್ಮ ಸಚಿವರನ್ನು ಅಥವಾ ತಮ್ಮ ಸರ್ಕಾರವನ್ನು ಟೀಕಿಸುವವರನ್ನು ಬಂಧಿಸುವ ಕೆಲಸವನ್ನೇ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಅಥವಾ ವಿಡಿಯೊ ಹೇಳಿಕೆಗಳಿಗೂ ಬಂಧನವೇ ಉತ್ತರವಾಗುತ್ತಿದೆ. ಇಂತಹ ಕ್ರಮಗಳಿಗೆ ವಿಧಾನಸಭಾ ಸದಸ್ಯರಾದ ಅನಿತಾ ರಾಧಾಕೃಷ್ಣನ್ ಮತ್ತು ಮಾರ್ಕಂಡೇಯನ್ ಕೂಡ ಗುರಿಯಾಗಿದ್ದಾರೆ” ಎಂದು ಅವರು ಆರೋಪಿಸಿದರು.
ರಾಜಕೀಯ ವಿಮರ್ಶಕರು, ವಿರೋಧ ಪಕ್ಷದ ನಾಯಕರು, ವಿದ್ಯಾರ್ಥಿಗಳು, ರೈತರು ಮತ್ತು ಪ್ರತಿಭಟನಾಕಾರರನ್ನು ಮೌನಗೊಳಿಸಲು ಟಿವಿಕೆ ಸರ್ಕಾರ ಪದೇ ಪದೆ ಬಂಧಿಸುವ ಕೆಲಸವನ್ನು ಮಾಡುತ್ತಿದೆ ಎಂದು ಡಿಎಂಕೆ ನಾಯಕರು ಆರೋಪಿಸಿದ್ದಾರೆ. ರಾಜ್ಯಾದ್ಯಂತ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಬಂಧಿಸಲಾದ ಎಲ್ಲ ಪಕ್ಷದ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.