ಮುಂಬೈ: ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಆಟೋ ಚಾಲಕನೊಬ್ಬ ಮರಾಠಿ (Marathi Row) ಮಾತನಾಡಲು ನಿರಾಕರಿಸಿದ್ದಕ್ಕಾಗಿ ರಾಜ್ ಠಾಕ್ರೆ ಅವರ ಎಂಎನ್‌ಎಸ್ ಬೆಂಬಲಿಗರು ಆಟೋ ಚಾಲಕನಿಗೆ ಸಾರ್ವಜನಿಕವಾಗಿ ಥಳಿಸಿದ್ದಾರೆ. ಸದ್ಯ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಟೋರಿಕ್ಷಾ ಚಾಲಕನೊಬ್ಬ ಉತ್ತರ ಪ್ರದೇಶದ ಭವೇಶ್ ಪಡೋಲಿಯಾ ಜೊತೆ ವಿರಾರ್ ನಿಲ್ದಾಣದಲ್ಲಿ ವಾಗ್ವಾದ ನಡೆಸುತ್ತಿರುವುದನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ. ಮರಾಠಿಯಲ್ಲಿ ಏಕೆ ಮಾತನಾಡುತ್ತಿಲ್ಲ ಎಂದು ಕೇಳಿದಾಗ ಹಿಂದಿಯಲ್ಲಿ ಮಾತ್ರ ಮಾತನಾಡುತ್ತೇನೆ ಎಂದು ಆತ ವಿಡಿಯೋದಲ್ಲಿ ಹೇಳಿದ್ದಾನೆ.
ಪಡೋಲಿಯಾ ಚಾಲಕನನ್ನು ಸಾರ್ವಜನಿಕವಾಗಿ ಮರಾಠಿ ಏಕೆ ಮಾತನಾಡುವುದಿಲ್ಲ ಎಂದು ಕೇಳಿದ್ದರು, ಅದಕ್ಕೆ ಅವರ ಚಾಲಕ ತಾನು ಹಾಗೆ ಮಾಡುವುದಿಲ್ಲ. ತಾನು ಹಿಂದಿ ಹಾಗೂ ಭೋಜಪುರಿ ಮಾತ್ರ ಮಾತನಾಡುತ್ತೇನೆ ಎಂದು ಆತ ಹೇಳಿದ್ದಾನೆ. ಈ ಘಟನೆಯ ಹಿನ್ನೆಲೆಯಲ್ಲಿ, ಶಿವಸೇನಾ ಯುಬಿಟಿ ಮತ್ತು ಎಂಎನ್‌ಎಸ್ ಬೆಂಬಲಿಗರು ರೈಲ್ವೆ ನಿಲ್ದಾಣದ ಬಳಿ ಆಟೋರಿಕ್ಷಾ ಚಾಲಕನ ವಿರುದ್ಧ ವಾಗ್ದಾಳಿ ನಡೆಸಿದರು.
ಘರ್ಷಣೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆ ವ್ಯಕ್ತಿಗಳು ಚಾಲಕನಿಗೆ ಪದೇ ಪದೇ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದಾಗಿದೆ. ಆತನಿಗೆ ಕ್ಷಮೆಯಾಚಿಸುವಂತೆ ಮತ್ತು ಮರಾಠಿಯಲ್ಲಿ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ಮರಾಠಿ ಕೆಲಸಗಾರನಿಗೆ ಹರ್ಯಾನ್ವಿ ಭಾಷೆಯಲ್ಲಿ ಮಾತನಾಡಲು ಹೇಳಿದ ವ್ಯಕ್ತಿ;ಕೊನೆಗೆ ಆಗಿದ್ದೇನು?
ಮಹಾರಾಷ್ಟ್ರದಲ್ಲಿ ಭಾಷಾ ವಿವಾದ ಭುಗಿಲೆದ್ದಿದೆ. ಮರಾಠಿ ಮಾತನಾಡದ ಕಾರಣ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಘಟನೆ ಕಳೆದ ವಾರ ನಡೆದಿತ್ತು. ಅದನ್ನು ಖಂಡಿಸಿ ಮಹಾರಾಷ್ಟ್ರದಲ್ಲಿ ವ್ಯಾಪಾರಿಗಳು ನಡೆಸಿದ ಪ್ರತಿಭಟನೆ ನಡೆಸಿದ್ದರು. ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ ಭಾರೀ ಪ್ರಮಾಣದ ಪ್ರತಿಭಟನೆಯನ್ನು ನಡೆಸಿತು. ಮೀರಾ ಭಯಾಂದರ್ ಪ್ರದೇಶದಿಂದ ಶುರುವಾದ ರ್ಯಾಲಿಯು ಥಾಣೆ ಜಿಲ್ಲೆಯಾದ್ಯಂತ ನಡೆದಿದೆ. ಈ ತಿಂಗಳ ಆರಂಭದಲ್ಲಿ, ಭಯಾಂದರ್ ಪ್ರದೇಶದ ಆಹಾರ ಮಳಿಗೆಯ ಮಾಲೀಕರೊಬ್ಬರು ಮರಾಠಿಯಲ್ಲಿ ಮಾತನಾಡದ ಕಾರಣ ಕೆಲವು ಎಂಎನ್‌ಎಸ್ ಕಾರ್ಯಕರ್ತರು ಕಪಾಳಮೋಕ್ಷ ಮಾಡಿದ್ದರು. ಹಲ್ಲೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವ್ಯಾಪಾರಿ ಸಮುದಾಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.