ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

2047ರ ವೇಳೆಗೆ ವಿಕಸಿತ ಭಾರತ: ನುಡಿದಂತೆ ನಡೆಯಲು ಸಿದ್ಧ ಎಂದ ಪ್ರಧಾನಿ ಮೋದಿ

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿಗೆ ಪ್ರಧಾನಿ ನರೇಂದ್ರ ಮೋದಿ “ನಾವು ಮಾಡುತ್ತೇವೆ” ಎಂಬ ಹೊಸ ಘೋಷವಾಕ್ಯ ನೀಡಿದ್ದಾರೆ. ಆರ್ಥಿಕತೆ, ಉತ್ಪಾದನೆ, ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ, ಪರಿಸರ ಮತ್ತು ರಫ್ತು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ನಾಯಕತ್ವ ಸಾಧಿಸಬೇಕು ಎಂದು ಕರೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯ ಗುರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೊಸ ಘೋಷವಾಕ್ಯ ನೀಡಿದ್ದಾರೆ. “ನಾವು ಮಾಡುತ್ತೇವೆ” ಎಂಬ ಹೊಸ ಘೋಷವಾಕ್ಯದ ಮೂಲಕ ದೇಶದ ಜನರಿಗೆ ಅಭಿವೃದ್ಧಿಯ ಸವಾಲುಗಳನ್ನು ಒಟ್ಟಾಗಿ ಎದುರಿಸುವಂತೆ ಕರೆ ನೀಡಿದ್ದಾರೆ. ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ‘ವಿಕಸಿತ ಭಾರತ ಸಂಕಲ್ಪ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ದೇಶ ಎದುರಿಸುತ್ತಿರುವ ದೊಡ್ಡ ಸವಾಲುಗಳಲ್ಲಿ ಸಮಾಜವನ್ನು ಮತಗಳ ಆಧಾರದಲ್ಲಿ ವಿಭಜಿಸುವುದೂ ಒಂದಾಗಿದೆ ಎಂದರು.

ಅ.7 ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು 25 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ‘ವಿಕಸಿತ ಭಾರತ ಸಂಕಲ್ಪ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ತಮ್ಮ ಹಿಂದಿನ 25 ವರ್ಷಗಳ ಪಯಣವನ್ನು ಸ್ಮರಿಸಿದ್ದು, ಪ್ರಸ್ತುತ ಸ್ಥಿತಿಗತಿಗಳನ್ನು ವಿವರಿಸುವುದರ ಜೊತೆಗೆ, 2047ರ ಭಾರತದ ಭವಿಷ್ಯದ ಗುರಿಯನ್ನೂ ಮುಂದಿಟ್ಟರು.

ಅಲ್ಲದೇ ಆರ್ಥಿಕತೆ, ಉತ್ಪಾದನಾ ಕ್ಷೇತ್ರ ಸೇರಿದಂತೆ ಹಲವು ವಲಯಗಳಲ್ಲಿ ಬದಲಾವಣೆ ತರಲು ದೇಶ ಮುಂದಾಗಬೇಕು ಎಂದು ಅವರು ಕರೆ ನೀಡಿದ್ದು, ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ ಕ್ಷೇತ್ರ, ಪರಿಸರ ಸಂರಕ್ಷಣೆ, ರಫ್ತು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ಜಾಗತಿಕ ನಾಯಕತ್ವ ವಹಿಸಬೇಕಿದೆ ಎಂದು ಪ್ರಧಾನಿ ಒತ್ತಿ ಹೇಳಿದ್ದಾರೆ.

ಘೋಷವಾಕ್ಯಗಳ ಮೂಲಕ ರಾಜಕೀಯ ಪಯಣ

ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿದು ಜವಾಬ್ದಾರಿ ವಹಿಸಿಕೊಂಡ ಅವರು, 2014ರಲ್ಲಿ ಭಾರತದ ಪ್ರಧಾನಿಯಾಗಿ ಆಯ್ಕೆಗೊಂಡರು. 2013ರಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಘೋಷಿಸಿದ ಬಳಿಕ, ಗುಜರಾತ್‌ನಿಂದ ದೆಹಲಿಯವರೆಗಿನ ಅವರ ರಾಜಕೀಯ ಪಯಣಕ್ಕೆ “ಅಬ್ ಕಿ ಬಾರ್, ಮೋದಿ ಸರ್ಕಾರ್” ಹಾಗೂ “ಅಚ್ಛೇ ದಿನ್ ಆನೇ ವಾಲೇ ಹೈಂ” ಎಂಬ ಘೋಷಣೆಗಳು ಪ್ರಮುಖವಾಗಿ ಕಂಡಬಂದವು.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ ಮೋದಿ ಅವರ ನಾಯಕತ್ವ, ಭಾಷಣ ಕೌಶಲ್ಯ ಹಾಗೂ ಗುಜರಾತ್‌ನ ಆಡಳಿತ ಮಾದರಿ ಪ್ರಮುಖ ಕಾರಣಗಳೆಂದು ಬೆಂಬಲಿಗರು ಅಭಿಪ್ರಾಯಪಟ್ಟಿದ್ದರು. ಆದರೆ ಪ್ರತಿಪಕ್ಷಗಳು ಇದನ್ನು ಬಿಜೆಪಿ ಹಾಗೂ ಅದರ ವೈಚಾರಿಕ ಮೂಲವಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿಂದೂ ರಾಷ್ಟ್ರೀಯವಾದಿ ರಾಜಕೀಯದ ಗೆಲುವು ಎಂದೂ ವ್ಯಾಖ್ಯಾನಿಸಿದ್ದವು.

ಅಧಿಕಾರಕ್ಕೆ ಬಂದ ಬಳಿಕ ಮೋದಿ ಅವರು “ಸಬ್ಕಾ ಸಾಥ್, ಸಬ್ಕಾ ವಿಕಾಸ್” ಎಂಬ ಘೋಷವಾಕ್ಯವನ್ನು ಮುಂದಿಟ್ಟರು. ಎಲ್ಲರ ಸಹಭಾಗಿತ್ವದೊಂದಿಗೆ ಎಲ್ಲರ ಅಭಿವೃದ್ಧಿ ಎಂಬ ಸಂದೇಶವನ್ನು ಸಾರುವ ಉದ್ದೇಶ ಇದಾಗಿತ್ತು. 2019ರಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿದಾಗ ಇದಕ್ಕೆ “ವಿಶ್ವಾಸ್” ಎಂಬ ಪದವನ್ನೂ ಸೇರಿಸಲಾಯಿತು.

174 ಪ್ರಯಾಣಿಕರ ಪ್ರಾಣ ಉಳಿಸಿದ ಫ್ಲೈದುಬೈ ಪೈಲಟ್ ಸ್ಮಿತ್‌ ಮಚ್ಚಾರ್‌ಗೆ ಅಶೋಕ ಚಕ್ರ ಪ್ರಶಸ್ತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ

“ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್”

ಇನ್ನು ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಹಳೆಯ ಮತ್ತು ಅನಗತ್ಯ ಕಾನೂನುಗಳನ್ನು ತೆಗೆದುಹಾಕುವುದು, ಮೂಲಸೌಕರ್ಯ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದು ಹಾಗೂ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳನ್ನು ಜಾರಿಗೆ ತರುವುದು ಪ್ರಮುಖ ಗುರಿಯಾಗಿತ್ತು. ಇದಕ್ಕಾಗಿ “ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್” ಎಂಬ ಘೋಷವಾಕ್ಯವನ್ನು ಬಳಸಲಾಯಿತು. ಆಡಳಿತದಲ್ಲಿನ ಅನಗತ್ಯ ಅಧಿಕಾರಶಾಹಿ ಹಾಗೂ ಕೆಂಪುಪಟ್ಟಿ ವ್ಯವಸ್ಥೆಯನ್ನು ಕಡಿಮೆ ಮಾಡುವ ಸಂದೇಶವನ್ನು ಇದು ಸಾರಿತ್ತು.

ಸರ್ಕಾರದ ವಿವಿಧ ಯೋಜನೆಗಳನ್ನೂ ಜನರಿಗೆ ತಲುಪಿಸಲು ಮೋದಿ ಅವರು ಘೋಷವಾಕ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತು ಜಾಗೃತಿ ಮೂಡಿಸಲು “ಸ್ವಚ್ಛ ಭಾರತ ಅಭಿಯಾನ”, ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲು “ಮೇಕ್ ಇನ್ ಇಂಡಿಯಾ”, ಹೆಣ್ಣು ಭ್ರೂಣಹತ್ಯೆ ತಡೆ ಹಾಗೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು “ಬೇಟಿ ಬಚಾವೋ, ಬೇಟಿ ಪಢಾವೋ” ಅಭಿಯಾನಗಳನ್ನು ಮುನ್ನಡೆಸಲಾಯಿತು.

‘ಆತ್ಮನಿರ್ಭರ ಭಾರತ’ದಿಂದ ‘ವೋಕಲ್ ಫಾರ್ ಲೋಕಲ್’ವರೆಗೆ

ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶೀಯ ಉತ್ಪಾದನೆ ಹಾಗೂ ಬಳಕೆಗೆ ಉತ್ತೇಜನ ನೀಡಲು “ಆತ್ಮನಿರ್ಭರ ಭಾರತ” ಮತ್ತು “ವೋಕಲ್ ಫಾರ್ ಲೋಕಲ್” ಎಂಬ ಘೋಷಣೆಗಳು ಪ್ರಮುಖವಾಗಿದ್ದವು. ಆಮದು ಅವಲಂಬನೆಯನ್ನು ಕಡಿಮೆ ಮಾಡಿ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಸಂದೇಶವನ್ನು ಇವು ಸಾರಿದವು.

ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದ ಜಾಗತಿಕ ಪೂರೈಕೆ ಸರಪಳಿಯಲ್ಲಿ ಉಂಟಾದ ವ್ಯತ್ಯಯ ಹಾಗೂ ಕಚ್ಚಾ ತೈಲ, ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸಂದರ್ಭದಲ್ಲೂ ಈ ಘೋಷಣೆಗಳಿಗೆ ಮತ್ತಷ್ಟು ಒತ್ತು ನೀಡಲಾಯಿತು.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಪ್ರಸ್ತಾವನೆಯಾದ “ಒಂದು ದೇಶ, ಒಂದು ಚುನಾವಣೆ” ಸೇರಿದಂತೆ ರಾಜಕೀಯವಾಗಿ ಮಹತ್ವದ ಹಾಗೂ ವಿವಾದಾತ್ಮಕ ನಿರ್ಧಾರಗಳಿಗೂ ಘೋಷವಾಕ್ಯಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಯಿತು.

ಮೋದಿಗೆ “ಚೌಕಿದಾರ್” ಎಂಬ ಬಿರುದು ಬಂದಿತ್ತು, “ಮೋದಿ ಹೈ ತೋ ಮುಮ್ಕಿನ್ ಹೈ” ಎಂಬ ಘೋಷಣೆಯ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸಿದ್ದರು. ಇದೀಗ 2047ರ ಅಭಿವೃದ್ಧಿ ಭಾರತದ ಗುರಿಗೆ “ನಾವು ಮಾಡುತ್ತೇವೆ” ಎಂಬ ಹೊಸ ಘೋಷವಾಕ್ಯದೊಂದಿಗೆ ಮುಂದಿನ ರಾಜಕೀಯ ಮತ್ತು ಅಭಿವೃದ್ಧಿ ಕಾರ್ಯಸೂಚಿಯನ್ನು ಮುಂದಿಟ್ಟಿದ್ದಾರೆ.