174 ಪ್ರಯಾಣಿಕರ ಪ್ರಾಣ ಉಳಿಸಿದ ಫ್ಲೈದುಬೈ ಪೈಲಟ್ ಸ್ಮಿತ್ ಮಚ್ಚಾರ್‌ಗೆ ಅಶೋಕ ಚಕ್ರ ಪ್ರಶಸ್ತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ
Smit Machchhar: ಕಾಕ್‌ಪಿಟ್‌ನಲ್ಲಿ ಸಹ-ಪೈಲಟ್‌ನಿಂದ ತೀವ್ರ ಇರಿತಕ್ಕೊಳಗಾದರೂ ಧೃತಿಗೆಡದೆ ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ನೆರವಾದ ಪೈಲಟ್ ಸ್ಮಿತ್ ಮಚ್ಚಾರ್ ಅವರಿಗೆ ಭಾರತ ಸರ್ಕಾರ ಅಶೋಕ ಚಕ್ರ ಪ್ರಸಸ್ತಿ ಘೋಷಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.
ಸ್ಮಿತ್ ಮಚ್ಚಾರ್ ಮತ್ತು ಮಿಲಿಂದ್ ದಿಯೋರಾ (ಸಂಗ್ರಹ ಚಿತ್ರ) -
ಮುಂಬೈ, ಅ. 2: ಕಾಕ್‌ಪಿಟ್‌ನಲ್ಲಿ ಸಹ-ಪೈಲಟ್‌ನಿಂದ ತೀವ್ರ ಇರಿತಕ್ಕೊಳಗಾದರೂ ಧೃತಿಗೆಡದೆ ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ (Flydubai Flight) ಪತನಗೊಳ್ಳಲು ಬಿಡದೆ ಸುಮಾರು 174 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತದ ಪೈಲಟ್ ಸ್ಮಿತ್ ಮಚ್ಚಾರ್ (Smit Machchhar) ಸದ್ಯ ರಿಯಲ್ ಹೀರೋ ಆಗಿ ಹೊರ ಹೊಮ್ಮಿದ್ದಾರೆ. ಪ್ರಪಂಚದಾದ್ಯಂತ ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿ ವಿಶ್ವ ನಾಯಕರು ಭಾರತೀಯ ಪೈಲಟ್‌ನ ಸಾಹಸವನ್ನು ಕೊಂಡಾಡಿದ್ದಾರೆ. ಈ ಮಧ್ಯೆ ಅವರಿಗೆ ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿ 'ಅಶೋಕ ಚಕ್ರ' (Ashok Chakra) ನೀಡಬೇಕು ಎಂದು ಶಿವಸೇನೆ ಸಂಸದ ಮಿಲಿಂದ್ ದಿಯೋರಾ (Milind Deora) ಆಗ್ರಹಿಸಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
"ಆಗಸದಲ್ಲಿ ಊಹಿಸಲೂ ಸಾಧ್ಯವಾಗದಂತಹ ಪರಿಸ್ಥಿತಿಯನ್ನು ಎದುರಿಸಿದ ಮಚ್ಚಾರ್, ತೀವ್ರವಾಗಿ ಗಾಯಗೊಂಡಿದ್ದರೂ ಲೆಕ್ಕಿಸದೆ ಇತರರ ಪ್ರಾಣ ರಕ್ಷಣೆಗೆ ಆದ್ಯತೆ ನೀಡಿದರು" ಎಂದು ದಿಯೋರಾ ಬಣ್ಣಿಸಿದ್ದಾರೆ.
ಮಿಲಿಂದ್ ದಿಯೋರಾ ಅವರ ಪತ್ರ:
As an MP from Mumbai & on behalf of @mieknathshinde ji & @Shivsenaofc, I have written to PM @narendramodi ji requesting that @flydubai Captain Smit Machchhar be considered for the Ashok Chakra.
— Milind Deora | मिलिंद देवरा (@milinddeora) October 2, 2026
A son of Mumbai who showed extraordinary courage when it mattered most. 🇮🇳 pic.twitter.com/ohEQfSBA67
ಘಟನೆ ವಿವರ
ಬುಧವಾರ (ಸೆಪ್ಟೆಂಬರ್ 30) ದುಬೈಯಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಅನಿರೀಕ್ಷಿತ ಘಟನೆ ನಡೆದಿತ್ತು. ಪೈಲಟ್ ಮಚ್ಚಾರ್ ಅವರ ಮೇಲೆ ಸಹ-ಪೈಲಟ್ ದಾಳಿ ನಡೆಸಿದ್ದ. ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಮಚ್ಚಾರ್ FZ-1073 ವಿಮಾನದ ಕಾಕ್‌ಪಿಟ್ ಬಾಗಿಲನ್ನು ತೆರೆದಿದ್ದರು. ಇದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿ ದಾಳಿಕೋರನನ್ನು ನಿಯಂತ್ರಿಸಿದರು. ವಿಮಾನದಲ್ಲಿದ್ದ ಹೆಚ್ಚುವರಿ ಸಿಬ್ಬಂದಿ 174 ಪ್ರಯಾಣಿಕರಿದ್ದ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದರು. ಆ ಮೂಲಕ ಬಹುದೊಡ್ಡ ವೈಮಾನಿಕ ದುರಂತವೊಂದು ತಪ್ಪಿತ್ತು.
174 ಮಂದಿಯ ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಸೌದಿ ಅರೇಬಿಯಾದಿಂದ ಅಬು ಧಾಬಿಗೆ ಏರ್‌ಲಿಫ್ಟ್
ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಗುರುವಾರ ಮಾತನಾಡಿದ ಪ್ರಧಾನಿ ಮೋದಿ, ʼʼಕ್ಯಾಪ್ಟನ್ ಮಚ್ಚಾರ್ 9/11 ಮಾದರಿಯ ದುರಂತವೊಂದನ್ನು ತಪ್ಪಿಸಿದ್ದಾರೆ. ಅವರು ನಿಜವಾದ ಹೀರೋʼʼ ಎಂದು ಕರೆದಿದ್ದರು. ಅಲ್ಲದೆ ಶುಕ್ರವಾರ ಯುಎಇಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಚ್ಚಾರ್ ಜತೆ ವಿಡಿಯೊ ಕಾಲ್ ಮೂಲಕ ಮಾತನಾಡಿದ್ದರು.
ಮಿಲಿಂದ್ ದಿಯೋರಾ ಪತ್ರದಲ್ಲಿ ಏನಿದೆ?
ಇದೀಗ ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ, ಮಚ್ಚಾರ್ ಧೈರ್ಯವನ್ನು ಭಾರತದಲ್ಲಿ ಮಾತ್ರವಲ್ಲದೆ, ಜಗತ್ತಿನಾದ್ಯಂತ ಗುರುತಿಸಲಾಗಿದೆ ಎಂದು ದಿಯೋರಾ ಹೇಳಿದ್ದಾರೆ. "ಅಂತಹ ಕಾರ್ಯವನ್ನು ಅಧಿಕೃತವಾಗಿ ಗುರುತಿಸುವುದು ಒಬ್ಬ ವ್ಯಕ್ತಿಗೆ ನೀಡುವ ಗೌರವಕ್ಕಿಂತಲೂ ಮಿಗಿಲಾದ ಮಹತ್ವವನ್ನು ಹೊಂದಿರುತ್ತದೆ ಎಂದು ನಾನು ನಂಬುತ್ತೇನೆ. ಧೈರ್ಯವು ಕೇವಲ ಯುದ್ಧಭೂಮಿಗೆ ಅಥವಾ ನಿರ್ದಿಷ್ಟ ವೃತ್ತಿಗೆ ಮಾತ್ರ ಸೀಮಿತವಾಗಿಲ್ಲ ಎಂಬ ಪ್ರಬಲ ಸಂದೇಶವನ್ನು ಇದು ಯುವಜನರಿಗೆ ರವಾನಿಸುತ್ತದೆ. ಪೈಲಟ್, ವೈದ್ಯ, ಶಿಕ್ಷಕ, ಪೊಲೀಸ್ ಅಧಿಕಾರಿ, ಉದ್ಯಮಿ, ಅಧಿಕಾರಿ, ರಾಜಕಾರಣಿ, ವಿದ್ಯಾರ್ಥಿ ಅಥವಾ ಸಾಮಾನ್ಯ ನಾಗರಿಕ - ಹೀಗೆ ಯಾರಾದರೂ ಒಂದು ದಿನ ತಮ್ಮ ಸುರಕ್ಷತೆ ಮತ್ತು ಜೀವಕ್ಕಿಂತ ಇತರರ ಸುರಕ್ಷತೆ ಹಾಗೂ ಜೀವಕ್ಕೆ ಆದ್ಯತೆ ನೀಡಬೇಕಾದ ಪರಿಸ್ಥಿತಿ ಎದುರಾಗಬಹುದು. ಆಗ ಯಾವ ರೀತಿ ಧೈರ್ಯ ಪ್ರದರ್ಶಿಸಬೇಕು ಎಂಬುದನ್ನು ಕ್ಯಾಪ್ಟನ್ ಮಚ್ಚಾರ್ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ" ಎಂದು ದಿಯೋರಾ ಹೇಳಿದ್ದಾರೆ.
"ಮುಂಬೈ ನಿವಾಸಿಯಾಗಿ, ಕ್ಯಾಪ್ಟನ್ ಮಚ್ಚಾರ್ ನಮ್ಮ ನಗರದವರು ಎಂಬುದು ನನಗೆ ವಿಶೇಷ ಹೆಮ್ಮೆಯ ವಿಷಯ. ಅವರನ್ನು 'ಅಶೋಕ ಚಕ್ರ' ಪ್ರಶಸ್ತಿಗೆ ಪರಿಗಣಿಸಬೇಕೆಂಬ ಸಾರ್ವಜನಿಕ ಆಗ್ರಹವೂ ಕೇಳಿಬರುತ್ತಿದೆ. ʼಅಶೋಕ ಚಕ್ರʼ ಪ್ರಶಸ್ತಿಯು ಶಾಂತಿಕಾಲದಲ್ಲಿ ನೀಡಲಾಗುವ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿ ಮತ್ತು ಮುಖ್ಯವಾಗಿ ನಾಗರಿಕರೂ ಸಹ ಇದಕ್ಕೆ ಅರ್ಹರಾಗಿರುತ್ತಾರೆ. ಶತ್ರುಗಳ ವಿರುದ್ಧದ ಹೋರಾಟದ ಹೊರತಾಗಿಯೂ ಪ್ರದರ್ಶಿಸಲಾದ ಅತ್ಯಂತ ಅಸಾಧಾರಣ ಧೈರ್ಯ, ಸಾಹಸ , ಶ್ರೇಷ್ಠ ಶೌರ್ಯ ಅಥವಾ ತ್ಯಾಗವನ್ನು ಗುರುತಿಸಲು ಇದನ್ನು ವಿಶೇಷವಾಗಿ ನೀಡಲಾಗುತ್ತದೆ" ಎಂದು ಅವರು ಹೇಳಿದ್ದಾರೆ.
ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಸಾಹಸ ಶ್ಲಾಘಿಸಿದ ಇಸ್ರೇಲ್‌ನ ದಕ್ಷಿಣ ಭಾರತದ ಕಾನ್ಸುಲೇಟ್ ಜನರಲ್
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿ ಇತಿಹಾಸ ನಿರ್ಮಿಸಿದ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಮತ್ತು ಗಗನಯಾತ್ರಿ ಶುಭಾಂಶು ಶುಕ್ಲಾ ಅವರಿಗೆ 2026ರಲ್ಲಿ ಅಶೋಕ ಚಕ್ರ ಪ್ರಶಸ್ತಿಯನ್ನು ನೀಡಲಾಗಿತ್ತು. ಮಚ್ಚಾರ್ ಅವರನ್ನು ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಪರಿಗಣಿಸುವಂತೆ ಫೆಡರೇಶನ್ ಆಫ್ ಇಂಡಿಯನ್ ಪೈಲಟ್ಸ್ (FIP) ಕೂಡ ಆಗ್ರಹಿಸಿದೆ.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.