ಮುಂಬೈ, ಆ. 6: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat), "ಜೆನ್ ಝೀಗಳು (ಯುವ ಸಮೂಹ) ಪ್ರತಿಭಟನೆ ನಡೆಸಿದರೆ ಅವರನ್ನು ದೇಶದ್ರೋಹಿಗಳು ಎಂದು ಕರೆಯಲಾಗುವುದಿಲ್ಲ. ಅವರು ನಮ್ಮವರೇ" ಎಂದು ಗುರುವಾರ ಹೇಳಿದ್ದಾರೆ. ಮುಂಬೈಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇಂದಿನ ಯುವಪೀಳಿಗೆಯವರು ಹಿರಿಯರನ್ನು ಪ್ರಶ್ನಿಸದೆ ಒಪ್ಪಿಕೊಳ್ಳುತ್ತಿದ್ದ ಹಿಂದಿನ ಪೀಳಿಗೆಯಂತಿಲ್ಲ, ಅವರಿಗೆ ತಾರ್ಕಿಕ ಉತ್ತರಗಳು ಬೇಕಾಗಿವೆ ಎಂದರು.
"ನಾವು ಅವರ ವಯಸ್ಸಿನಲ್ಲಿದ್ದಾಗ ಹಿರಿಯರು ಹೇಳಿದ್ದನ್ನು ಕೇಳುತ್ತಿದ್ದೆವು. ಎಂದಿಗೂ ಪ್ರಶ್ನೆ ಮಾಡುತ್ತಿರಲಿಲ್ಲ. ಆದರೆ ಇಂದಿನ ಜೆನ್ ಝೀ ಪೀಳಿಗೆಗೆ ತಾರ್ಕಿಕ ಉತ್ತರಗಳು ಬೇಕು. ಅವರು ಪ್ರತಿಭಟನೆ ನಡೆಸಿದರೆ ದೇಶದ್ರೋಹಿಗಳಾಗುವುದಿಲ್ಲ. ಅವರು ನಮ್ಮ ಮುಂದಿನ ಪೀಳಿಗೆ. ಇಂದಿನ ಜೆನ್ ಝೀ ಮತ್ತು ಜೆನ್ ಆಲ್ಫಾ ಪೀಳಿಗೆಯು ನಮ್ಮ ಪೀಳಿಗೆಗಿಂತ ಹೆಚ್ಚು ಪ್ರಾಮಾಣಿಕವಾಗಿದೆ. ದೇಶಭಕ್ತಿ ಮತ್ತು ಸೇವೆಯ ನಿಜವಾದ ಕರೆಗೆ ಅವರು ಸ್ಪಂದಿಸುತ್ತಾರೆ" ಎಂದು ಭಾಗವತ್ ಅಭಿಪ್ರಾಯಪಟ್ಟರು.
ಜೆನ್ ಝೀಗಳ ಬಗ್ಗೆ ಮೋಹನ್ ಭಾಗವತ್ ಮಾತು:
ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಯುವ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಹೇಳಿಕೆ ಪ್ರಾಮುಖ್ಯತೆ ಪಡೆದಿದೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ಕುರಿತು ಮಾತನಾಡುತ್ತಾ, "ಲಾಠಿಚಾರ್ಜ್ ಮತ್ತು ಪೆಲೆಟ್ ಗನ್‌ಗಳನ್ನು ಏಕೆ ಬಳಸಲಾಯಿತು? ಇದರ ಹಿಂದಿನ ಕಾರಣಗಳನ್ನು ನಾವು ಅಧ್ಯಯನ ಮಾಡಬೇಕಾಗಿದೆ" ಎಂದರು.
ಶಿಕ್ಷಣ ರಂಗದ ಸುಧಾರಣೆ
ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಯ ಅಗತ್ಯವಿದೆ ಎಂದ ಭಾಗವತ್, "ಶಿಕ್ಷಣವು ವ್ಯಾಪಾರವಲ್ಲ. ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವಂತಾಗಬೇಕು. ಶುಲ್ಕದ ರಚನೆಯನ್ನು ಸರಿಪಡಿಸಬೇಕು" ಎಂದು ಹೇಳುತ್ತಾ, ಭಾರತದ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರದ ಪಾಲು ಶೇಕಡಾ 6ಕ್ಕೆ ಹೆಚ್ಚಾಗಬೇಕು ಎಂಬ ಬೇಡಿಕೆ ಮಂಡಿಸಿದರು.
ಝೆನ್ ಜಿ ಬಗ್ಗೆ ತಿಳಿದುಕೊಳ್ಳಲು ಯುವ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾದ ಬಿಜೆಪಿ
ಪಾಕಿಸ್ತಾನ ಮತ್ತು ಚೀನಾ ಕುರಿತು ಭಿನ್ನ ನಿಲುವು
ದೇಶಗಳ ನಡುವಿನ ಸಂಘರ್ಷಗಳು ದ್ವಿಪಕ್ಷೀಯ ಬಾಂಧವ್ಯವನ್ನು ಶಾಶ್ವತವಾಗಿ ಹಾಳು ಮಾಡಬಾರದು ಎಂದು ಭಾಗವತ್ ಹೇಳಿದರು. ಪಾಕಿಸ್ತಾನ ಮತ್ತು ಚೀನಾದಂತಹ ದೇಶಗಳನ್ನು ಸಂಪೂರ್ಣವಾಗಿ ಭಾರತದ ಶತ್ರುಗಳು ಎಂದು ನೋಡಬಾರದು ಎಂದ ಅವರು ಹೇಳಿದರು.
"ಸಂಘರ್ಷದ ಸಮಯದಲ್ಲಿ ನಾವು ದ್ವಿಪಕ್ಷೀಯ ಸಂಬಂಧಗಳನ್ನು ಸಂಪೂರ್ಣವಾಗಿ ಕಡಿದುಕೊಳ್ಳಬಾರದು. ಸಮಸ್ಯೆ ಬಗೆಹರಿಯುವವರೆಗೆ ಸಂಬಂಧಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಬಹುದೇ ಹೊರತು ಕೊನೆಗೊಳಿಸಲು ಸಾಧ್ಯವಿಲ್ಲ. ಪಾಕಿಸ್ತಾನ ಮತ್ತು ಚೀನಾ ಪೂರ್ಣಪ್ರಮಾಣದಲ್ಲಿ ನಮ್ಮ ಶತ್ರುಗಳು ಎಂದೇನಲ್ಲ, ರಾಜಕೀಯವೂ ಇಲ್ಲಿ ಪಾತ್ರ ವಹಿಸುತ್ತದೆ" ಎಂದರು.
ಸಂಘರ್ಷದ ಸಮಯದಲ್ಲಿ ಜನ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸರ್ಕಾರದ ಜತೆ ನಿಲ್ಲಬೇಕು, ಅಂತಿಮವಾಗಿ ಮಾನವೀಯತೆಯೇ ಎಲ್ಲಕ್ಕಿಂತ ಮಿಗಿಲಾದದ್ದು ಎಂದು ಅವರು ಹೇಳಿದ್ದಾರೆ.