Mohan Bhagwat: ಮನೆಯ ಕೋಣೆ ಕಳ್ಳರು ನುಗ್ಗಿದ್ದಾರೆ, ಅದನ್ನು ವಾಪಸ್ ಪಡೆಯಬೇಕಿದೆ; ಪಿಒಕೆ ಕುರಿತು ಮೋಹನ್ ಭಾಗ್ವತ್ ಮಾತು
ಆರ್‌ಎಸ್‌ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಪಾಕ್ ಆಕ್ರಮಿತ ಕಾಶ್ಮೀರದ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. ಮಧ್ಯಪ್ರದೇಶದ (Madhya Pradesh) ಸತ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಿಒಕೆ ಭಾರತ ಎಂಬ ಮನೆಯೊಳಗಿನ ಕೋಣೆ ಎಂದು ಕರೆದಿದ್ದಾರೆ.

-

ಭೋಫಾಲ್: ಆರ್‌ಎಸ್‌ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ಪಾಕ್ ಆಕ್ರಮಿತ ಕಾಶ್ಮೀರದ (POK) ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. ಮಧ್ಯಪ್ರದೇಶದ ಸತ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಿಒಕೆ ಭಾರತ ಎಂಬ ಮನೆಯೊಳಗಿನ ಕೋಣೆ ಎಂದು ಕರೆದಿದ್ದಾರೆ. ಇಲ್ಲಿ ಅನೇಕ ಸಿಂಧಿ ಸಹೋದರರು ಕುಳಿತಿದ್ದಾರೆ. ನನಗೆ ತುಂಬಾ ಸಂತೋಷವಾಗಿದೆ. ಅವರು ಪಾಕಿಸ್ತಾನಕ್ಕೆ ಹೋಗಲಿಲ್ಲ; ಅವರು ಅವಿಭಜಿತ ಭಾರತವನ್ನು ಆಯ್ಕೆ ಮಾಡಿಕೊಂಡರು ಎಂದು ಅವರು ಹೇಳಿದ್ದಾರೆ.
ಇಡೀ ಭಾರತ ಒಂದೇ ಮನೆ, ಆದರೆ ಯಾರೋ ನಮ್ಮ ಮನೆಯ ಒಂದು ಕೋಣೆಯನ್ನು ತೆಗೆದು ಹಾಕಿದ್ದಾರೆ, ಅಲ್ಲಿ ನನ್ನ ಮೇಜು, ಕುರ್ಚಿ ಮತ್ತು ಬಟ್ಟೆಗಳನ್ನು ಇಡಲಾಗುತ್ತಿತ್ತು. ಅವರು ಅದನ್ನು ಆಕ್ರಮಿಸಿಕೊಂಡಿದ್ದಾರೆ. ನಾಳೆ, ನಾನು ಅದನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಭಾಗವತ್ ಈ ಮಾತನ್ನು ಹೇಳುತ್ತಿದ್ದಂತೆ ಪ್ರೇಕ್ಷಕರು ಚಪ್ಪಾಳೆಯಿಂದ ಸಮ್ಮತಿ ಸೂಚಿಸಿದ್ದಾರೆ. ಪಾಕಿಸ್ತಾನಿ ಆಡಳಿತದ ವಿರುದ್ಧ ಸ್ಥಳೀಯರು ಬಂಡಾಯವೆದ್ದ ಕಾರಣ ಪಿಒಕೆಯಲ್ಲಿ ಉದ್ವಿಗ್ನತೆ ಉಂಟಾಗಿರುವ ಮಧ್ಯೆ ಆರ್‌ಎಸ್‌ಎಸ್ ಮುಖ್ಯಸ್ಥರ ಈ ಹೇಳಿಕೆ ಬಂದಿದೆ.
ಮೋಹನ್ ಭಾಗವತ್ ಅವರ ಭಾಷಣ
#WATCH | Satna, MP | RSS Chief Mohan Bhagwat says, "Many Sindhi brothers are sitting here. I am very happy. They did not go to Pakistan; they went to undivided India....Circumstances have sent us here from that home because that home and this home are not different. The whole of… pic.twitter.com/CdNaLdzwQc
— ANI (@ANI) October 5, 2025
ಕೆಲ ದಿನಗಳ ಹಿಂದಷ್ಟೇ ಮೋಹನ್ ಭಾಗವತ್ ಅವರು ಭದ್ರತಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಅಗತ್ಯದ ಬಗ್ಗೆಯೂ ಮಾತನಾಡಿದ್ದರು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಅಂತರರಾಷ್ಟ್ರೀಯ ಪ್ರತಿಕ್ರಿಯೆಯು ಭಾರತದ ಜಾಗತಿಕ ಸ್ನೇಹಸಂಬಂಧಗಳ ನಿಜವಾದ ಸ್ವರೂಪವನ್ನು ತೋರಿಸಿದೆ ಎಂದು ಹೇಳಿದ್ದರು. ಇತರ ದೇಶಗಳ ಪ್ರತಿಕ್ರಿಯೆಗಳು "ಜಾಗತಿಕ ವೇದಿಕೆಯಲ್ಲಿ ನಮ್ಮ ಸ್ನೇಹಿತರು ಯಾರು ಮತ್ತು ಅವರು ಯಾವ ಮಟ್ಟಿಗೆ ನಮ್ಮೊಂದಿಗೆ ನಿಲ್ಲಲು ಸಿದ್ಧರಿದ್ದಾರೆ" ಎಂಬುದರ ಪರೀಕ್ಷೆಯಾಗಿತ್ತು ಎಂದು ಭಾಗವತ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Mohan Bhagwat: ʼʼಯಾವುದೇ ಸಂಘರ್ಷವಿಲ್ಲದಂತೆ ಭಾರತ 3,000 ವರ್ಷ ಜಗತ್ತನ್ನು ಮುನ್ನಡೆಸಿದೆʼʼ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಕಳೆದ ಮೂರು ದಿನಗಳಲ್ಲಿ, ಪಾಕಿಸ್ತಾನಿ ಪಡೆಗಳು ಹಾಗೂ ಪ್ರತಿಭಟನಾಕಾರ ನಡುವೆ ನಡೆದ ಘರ್ಷಣೆಯಲ್ಲಿ ಪಿಒಕೆಯಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಧೀರ್ಕೋಟ್ (ಬಾಗ್ ಜಿಲ್ಲೆ) ಒಂದರಲ್ಲೇ, ನಾಲ್ವರು ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಲ್ಲಲಾಗಿದ್ದು, ಪಿಒಕೆಯ ಮುಜಫರಾಬಾದ್, ದಡಿಯಾಲ್ (ಮಿರ್ಪುರ್) ಮತ್ತು ಕೊಹಾಲಾ ಬಳಿಯ ಚಾಮ್ಯತಿಯಲ್ಲಿಯೂ ಸಾವುನೋವುಗಳು ವರದಿಯಾಗಿವೆ.