ತಾಜ್ ಮಹಲ್ ವೀಕ್ಷಣೆಗೆ ಓಕೆ, ನಿಜಾಮುದ್ದೀನ್ ದರ್ಗಾಕ್ಕೆ ನೋ ಎಂಟ್ರಿ ಎಂದ ಕೇಂದ್ರ: ಪಾಕಿಸ್ತಾನ ಸಚಿವ ಮುಸಾದಿಕ್ ಮಲಿಕ್ ಪ್ರವಾಸಕ್ಕೆ ಕಂಡಿಷನ್ಸ್ ಅಪ್ಲೈ
Pakistan Minister Musadik Malik: ಶಾಂಘೈ ಸಹಕಾರ ಸಂಘಟನೆ ಸಮ್ಮೇಳನದಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ ಅವರ ಪ್ರವಾಸದ ಪಟ್ಟಿಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತಂದಿದೆ. ಆಗ್ರಾದ ತಾಜ್ ಮಹಲ್ ಮತ್ತು ದೆಹಲಿಯ 3 ಐತಿಹಾಸಿಕ ತಾಣಗಳಿಗೆ ಭೇಟಿ ನೀಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ನಿಜಾಮುದ್ದೀನ್ ದರ್ಗಾ ಭೇಟಿಯನ್ನು ಭದ್ರತಾ ಕಾರಣಗಳಿಂದ ತಿರಸ್ಕರಿಸಿದೆ.
ಪಾಕ್ ಸಚಿವ ಮುಸಾದಿಕ್ ಮಲಿಕ್ ಮತ್ತು ತಾಜ್ ಮಹಲ್ (ಸಂಗ್ರಹ ಚಿತ್ರ) -
ನವದೆಹಲಿ, ನ. 21: ನವದೆಹಲಿಯಲ್ಲಿ ನಡೆಯುತ್ತಿರುವ ಮೊದಲ ಶಾಂಘೈ ಸಹಕಾರ ಸಂಘಟನೆ (SCO) ನಾಗರಿಕತಾ ಸಂವಾದ ವೇದಿಕೆ (Civilisational Dialogue Forum) ಸಮ್ಮೇಳನದಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಲಿಕ್ (Musadik Malik) ಅವರಿಗೆ ಆಗ್ರಾದ ವಿಶ್ವವಿಖ್ಯಾತ ತಾಜ್ ಮಹಲ್ ವೀಕ್ಷಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ತಾಜ್ ಮಹಲ್ ಜತೆಗೆ ದೆಹಲಿಯ ನಾಲ್ಕು ಪ್ರಮುಖ ತಾಣಗಳಿಗೆ ಭೇಟಿ ನೀಡಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ.
ನವೆಂಬರ್ 20ರಿಂದ 22ರವರೆಗೆ ದೆಹಲಿಯ ಪುರಾಣ ಕಿಲಾದಲ್ಲಿ ನಡೆಯುತ್ತಿರುವ ಈ ಎಸ್ಸಿಒ ಸಮ್ಮೇಳನಕ್ಕಾಗಿ ಮುಸಾದಿಕ್ ಮಲಿಕ್ ಈಗಾಗಲೇ ದೆಹಲಿಗೆ ಬಂದಿಳಿದಿದ್ದಾರೆ. ಶುಕ್ರವಾರ ಅವರು ತಾಜ್ ಮಹಲ್ ಮತ್ತು ನಿಜಾಮುದ್ದೀನ್ ದರ್ಗಾ ಸೇರಿ ಹಲವು ಸ್ಥಳಗಳಿಗೆ ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಸಮ್ಮೇಳನದ ಹೊರತಾಗಿ ಬೇರೆ ಯಾವುದೇ ಪ್ರವಾಸಕ್ಕೆ ಅನುಮತಿ ಇಲ್ಲ ಎಂದು ವರದಿಯಾಗಿತ್ತು. ಆದರೆ ಭದ್ರತಾ ಪರಿಶೀಲನೆಯ ನಂತರ ಕೇಂದ್ರ ವಿದೇಶಾಂಗ ಸಚಿವಾಲಯವು ತಾಜ್ ಮಹಲ್ ಮತ್ತು ದೆಹಲಿಯ ಮೂರು ಪ್ರಮುಖ ತಾಣಗಳಿಗೆ ಭೇಟಿ ನೀಡಲು ಷರತ್ತುಬದ್ಧ ಅನುಮತಿ ನೀಡಿದ್ದು, ಜನನಿಬಿಡ ನಿಜಾಮುದ್ದೀನ್ ದರ್ಗಾ ಭೇಟಿಗೆ ಬ್ರೇಕ್ ಹಾಕಿದೆ.
ಸಿಂದೂ ನದಿ ಮುಟ್ಟಿದರೆ ʼಕೈ ಕತ್ತರಿಸುವ' ಬೆದರಿಕೆ ಹಾಕಿದ್ದ ಪಾಕ್ ಸಚಿವ ದೆಹಲಿಗೆ
ದೆಹಲಿಯ ನಾಲ್ಕು ತಾಣಗಳಿಗೆ ಭೇಟಿ ನೀಡಲು ಅವಕಾಶ
ಸಚಿವ ಮುಸಾದಿಕ್ ಮಲಿಕ್ ಅವರಿಗೆ ತಾಜಮಹಲ್ ಜತೆಗೆ ದೆಹಲಿಯ ಪ್ರಮುಖ ತಾಣಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದ್ದು, ಅವುಗಳಲ್ಲಿ ಹುಮಾಯೂನ್ ಸಮಾಧಿ, ದಿಲ್ಲಿ ಹಾತ್ ಮತ್ತು ಕಿಲಾ ರಾಯ್ ಪಿಥೋರಾ ತಾಣ ಸೇರಿದೆ. ಆದರೆ ದೆಹಲಿಯ ಪ್ರಸಿದ್ಧ ಹಜರತ್ ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡಲು ಅವರು ಸಲ್ಲಿಸಿದ್ದ ಮನವಿಯನ್ನು ಭದ್ರತಾ ಕಾರಣಗಳಿಂದಾಗಿ ಕೇಂದ್ರ ಸರ್ಕಾರ ತಿರಸ್ಕರಿಸಿದೆ.
3 ವರ್ಷಗಳ ಬಳಿಕ ಭಾರತಕ್ಕೆ ಪಾಕ್ ಸಚಿವರ ಭೇಟಿ
2025ರಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಭಾರತದ 'ಆಪರೇಷನ್ ಸಿಂದೂರ್' ಬಳಿಕ ಭಾರತಕ್ಕೆ ಭೇಟಿ ನೀಡುತ್ತಿರುವ ಪಾಕಿಸ್ತಾನದ ಮೊದಲ ಕೇಂದ್ರ ಸಚಿವ ಇವರಾಗಿದ್ದಾರೆ. ಅಲ್ಲದೆ, 2023ರ ಮೇಯಲ್ಲಿ ಗೋವಾದಲ್ಲಿ ನಡೆದ ಎಸ್ಸಿಒ ಸಭೆಗೆ ಅಂದಿನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಬಂದಿದ್ದ ನಂತರ, ಬರೋಬ್ಬರಿ ಮೂರು ವರ್ಷಗಳ ಬಳಿಕ ಪಾಕಿಸ್ತಾನದ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಮುಸಾದಿಕ್ ಮಲಿಕ್, "ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಸುಧಾರಿಸುತ್ತವೆ ಎಂಬ ಭರವಸೆಯಿದೆ" ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ನಿರ್ಧಾರಕ್ಕೆ ವಿಪಕ್ಷಗಳ ಆಕ್ರೋಶ, ವಿದೇಶಾಂಗ ಸಚಿವಾಲಯದ ಸ್ಪಷ್ಟನೆ
ಮತ್ತೊಂದೆಡೆ, ಪಾಕಿಸ್ತಾನದ ಸಚಿವರನ್ನು ಭಾರತಕ್ಕೆ ಆಹ್ವಾನಿಸಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಪಹಲ್ಗಾಮ್ ದಾಳಿಯ ನಂತರ ಮತ್ತು ಸಿಂಧೂ ನದಿ ನೀರು ಒಪ್ಪಂದವನ್ನು ಭಾರತ ಅಮಾನತುಗೊಳಿಸಿದಾಗ ಪಾಕಿಸ್ತಾನಕ್ಕೆ ಬೆದರಿಕೆ ಹಾಕಿದ್ದ ಇದೇ ಮುಸಾದಿಕ್ ಮಲಿಕ್ ಅವರಿಗೆ ಈಗ ಆತಿಥ್ಯ ನೀಡುತ್ತಿರುವುದೇಕೆ ಎಂದು ವಿಪಕ್ಷಗಳು ಪ್ರಶ್ನಿಸಿವೆ. ಆದರೆ ಎಸ್ಸಿಒ ಸದಸ್ಯ ರಾಷ್ಟ್ರವಾಗಿರುವುದರಿಂದ ಶಿಷ್ಟಾಚಾರದ ಪ್ರಕಾರ ಎಲ್ಲಾ ಸದಸ್ಯ ದೇಶಗಳಿಗೂ ಆಹ್ವಾನ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ಪಷ್ಟಪಡಿಸಿದ್ದಾರೆ.