ಸಿಂದೂ ನದಿ ಮುಟ್ಟಿದರೆ ʼಕೈ ಕತ್ತರಿಸುವ' ಬೆದರಿಕೆ ಹಾಕಿದ್ದ ಪಾಕ್ ಸಚಿವ ದೆಹಲಿಗೆ; ಕೇಂದ್ರದ ವಿರುದ್ಧ ವಿಪಕ್ಷಗಳು ಗರಂ
Civilisational Dialogue Forum: ನವದೆಹಲಿಯಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ಹವಾಮಾನ ಸಚಿವ ಮುಸಾದಿಕ್ ಮಲಿಕ್ ಭಾರತಕ್ಕೆ ಆಗಮಿಸಿರುವುದು ದೇಶದ ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ. ಕಳೆದ ವರ್ಷದ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಭಾರತದ ಸೇನಾ ಕಾರ್ಯಾಚರಣೆ ಆಪರೇಷನ್ ಸಿಂದೂರ್ ಬಳಿಕ ಭಾರತಕ್ಕೆ ಬಹಿರಂಗವಾಗಿ ಬೆದರಿಕೆ ಹಾಕಿದ್ದ ಸಚಿವನಿಗೇ ದೆಹಲಿಯಲ್ಲಿ ಆತಿಥ್ಯ ನೀಡಿರುವುದನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ.
Pak Minister Musadik Malik visits New Delhi for SCO summit -
ನವದೆಹಲಿ, ನ.20: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ 'ಸಿವಿಲೈಸೇಶನಲ್ ಡೈಲಾಗ್ ಫೋರಂ' (Civilisational Dialogue Forum) ಸಭೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ಹವಾಮಾನ ಸಚಿವ ಮುಸಾದಿಕ್ ಮಲಿಕ್ ಭಾರತಕ್ಕೆ ಆಗಮಿಸಿರುವುದು ರಾಷ್ಟ್ರ ರಾಜಕಾರಣದಲ್ಲಿ ಭಾರಿ ವಿವಾದಕ್ಕೆ ನಾಂದಿ ಹಾಡಿದೆ. ಇಂದು ಮುಂಜಾನೆ ದೆಹಲಿಗೆ ಬಂದಿಳಿದ ಮಲಿಕ್ ಅವರ ಭೇಟಿಯನ್ನು ವಿರೋಧಿಸಿರುವ ವಿರೋಧ ಪಕ್ಷಗಳು, ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ವಿರುದ್ಧ ಮುಗಿಬಿದ್ದಿವೆ.
ಕಳೆದ ವರ್ಷದ ಮೇ ತಿಂಗಳಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ 'ಆಪರೇಷನ್ ಸಿಂದೂರ್' ಸೇನಾ ಕಾರ್ಯಾಚರಣೆಯ ನಂತರ ಪಾಕಿಸ್ತಾನದ ಸಚಿವರೊಬ್ಬರು ಭಾರತಕ್ಕೆ ಬರುತ್ತಿರುವುದು ಇದೇ ಮೊದಲು. 2023ರಲ್ಲಿ ಗೋವಾದಲ್ಲಿ ನಡೆದ ಎಸ್ಸಿಒ ಸಭೆಗೆ ಬಿಲಾವಲ್ ಭುಟ್ಟೋ ಬಂದಿದ್ದ ಬಳಿಕ ಪಾಕಿಸ್ತಾನದ ಫೆಡರಲ್ ಸಚಿವರೊಬ್ಬರ ಮೊದಲ ಭಾರತ ಭೇಟಿ ಇದಾಗಿದೆ.
ಪಾಕಿಸ್ತಾನ ಸಚಿವ ಮುಸಾದಿಕ್ ಮಲಿಕ್ ಭಾರತಕ್ಕೆ ಆಗಮಿಸಿರುವುದು ಪೋಸ್ಟ್ ನೋಡಿ
Federal Minister for Climate Change and Environmental Coordination @DrMusadikMalik arrived in New Delhi today. He was received at the Airport by the Chargé d'Affaires @Saadawarraich. @ForeignOfficePk @epwing_official @MoIB_Official https://t.co/hpCOS8Ho0K
— Pakistan High Commission India (@PakinIndia) November 20, 2026
ಅಂತಾರಾಷ್ಟ್ರೀಯ ಸಭೆಗಾಗಿ ಮಾತ್ರ ಭೇಟಿ, ದ್ವಿಪಕ್ಷೀಯ ಮಾತುಕತೆಗಲ್ಲ: ಮಲಿಕ್
ಈ ಭೇಟಿಯು ಕೇವಲ ಬಹುಪಕ್ಷೀಯ ಅಂತಾರಾಷ್ಟ್ರೀಯ ಸಭೆಯೇ ಹೊರತು ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಮಾತುಕತೆಯಲ್ಲ ಎಂದು ಮುಸಾದಿಕ್ ಮಲಿಕ್ ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಹಿಂದೆ ಇದೇ ಮಲಿಕ್ ಭಾರತದ ವಿರುದ್ಧ ನೀಡಿದ್ದ ಉದ್ಧಟತನದ ಹೇಳಿಕೆಗಳನ್ನು ವಿಪಕ್ಷಗಳು ಈಗ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಪಹಲ್ಗಾಮ್ ದಾಳಿಯ ನಂತರ ಭಾರತವು 1960ರ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸಿದ್ದಾಗ, ಇದೇ ಮುಸಾದಿಕ್ ಮಲಿಕ್ "ನಮ್ಮ ನೀರನ್ನು ಯಾರೇ ಮುಟ್ಟಿದರೂ ಅವರ ಕೈಗಳನ್ನು ಕತ್ತರಿಸುತ್ತೇವೆ" ಎಂದು ಭಾರತಕ್ಕೆ ಬಹಿರಂಗ ಬೆದರಿಕೆ ಹಾಕಿದ್ದರು. ಅಂತಹ ವ್ಯಕ್ತಿಗೆ ಈಗ ದೆಹಲಿಯಲ್ಲಿ ಆತಿಥ್ಯ ನೀಡಿರುವುದು ಏಕೆ ಎಂದು ವಿಪಕ್ಷ ನಾಯಕರು ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಪಕ್ಷಗಳ ತೀವ್ರ ವಾಗ್ದಾಳಿ, ಕೇಂದ್ರದ ವಿದೇಶಾಂಗ ನೀತಿಗೆ ವಿರೋಧ
ಮಲಿಕ್ ಆಗಮನದ ವಿರುದ್ಧ ಕಿಡಿಕಾರಿರುವ ಸಮಾಜವಾದಿ ಪಕ್ಷದ ನಾಯಕ ಫಕ್ರುಲ್ ಹಸನ್ ಚಂದ್, "ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂದು ಬಿಜೆಪಿ ಯಾವಾಗಲೂ ಹೇಳುತ್ತದೆ. ಆದರೆ ಈಗ ಪಾಕಿಸ್ತಾನದ ಸಚಿವರೇ ಎಸ್ಸಿಒ ಸಭೆಗಾಗಿ ಭಾರತಕ್ಕೆ ಬರುತ್ತಿದ್ದಾರೆ. ಬಿಜೆಪಿಯ ವಿದೇಶಾಂಗ ನೀತಿ ಸಂಪೂರ್ಣ ಗೊಂದಲಮಯವಾಗಿದೆ" ಎಂದು ಟೀಕಿಸಿದ್ದಾರೆ. ಶರದ್ ಪವಾರ್ ಬಣದ ನಾಯಕರಾಗಿರುವ ಕ್ಲೈಡ್ ಕ್ರಾಸ್ಟೊ ಅವರು, "ಬಿಜೆಪಿಯದ್ದು ದ್ವಂದ್ವ ನೀತಿ. ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಅವರು ವಿದೇಶಾಂಗ ನೀತಿಯನ್ನು ಬದಲಾಯಿಸಿಕೊಳ್ಳುತ್ತಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ನಮ್ಮ ನೀರು ಮುಟ್ಟಿದರೆ ಕೈ ಕತ್ತರಿಸುತ್ತೇವೆ" ; ಭಾರತಕ್ಕೆ ಮತ್ತೆ ಗೊಡ್ಡು ಬೆದರಿಕೆ ಹಾಕಿದ ಪಾಕಿಸ್ತಾನ
ಇತ್ತ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನೇರ ಆರೋಪ ಮಾಡಿದ್ದು, ಕಾಂಗ್ರೆಸ್ ನಾಯಕ ಸುರೇಂದ್ರ ರಜಪೂತ್ ಮಾತನಾಡಿ, "ಬಿಜೆಪಿ ಮತ್ತು ಪ್ರಧಾನಿ ಮೋದಿ ಗೊಂದಲದಲ್ಲಿದ್ದಾರೆ. ಮೊದಲು ಪಾಕಿಸ್ತಾನ ತಂಡದೊಂದಿಗೆ ಕ್ರಿಕೆಟ್ ಆಡುವಂತೆ ನಮ್ಮ ಆಟಗಾರರಿಗೆ ಹೇಳುತ್ತಾರೆ, ಈಗ ಪಾಕ್ ಸಚಿವರನ್ನೇ ಭಾರತಕ್ಕೆ ಕರೆಸುತ್ತಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡಕ್ಕೆ ಮಣಿದು ಪ್ರಧಾನಿ ಮೋದಿ ಕೆಲಸ ಮಾಡುತ್ತಿದ್ದು, ದೇಶದ ವಿದೇಶಾಂಗ ನೀತಿಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ" ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, "ಭಯೋತ್ಪಾದನೆ ಮತ್ತು ಮಾತುಕತೆ ಜೊತೆಯಾಗಿ ಸಾಗಲ್ಲ. ಆಪರೇಷನ್ ಸಿಂದೂರ್ ಸಮಯದಲ್ಲಿ ಮಲಿಕ್ ಬಳಸಿದ್ದ ಭಾಷೆ ಒಬ್ಬ ಸಚಿವನ ಭಾಷೆಯಾಗಿರಲಿಲ್ಲ, ಅದು ಭಯೋತ್ಪಾದಕರ ಭಾಷೆಯಾಗಿತ್ತು" ಎಂದು ಕಿಡಿಕಾರಿದ್ದಾರೆ.