Indian Railway Dept: ಜನದಟ್ಟಣೆ ಕಡಿಮೆ ಮಾಡಲು ರೈಲ್ವೆ ಇಲಾಖೆಯಿಂದ ಮಾಸ್ಟರ್ ಪ್ಲಾನ್; ಪ್ರಾಯೋಗಿಕವಾಗಿ 60 ನಿಲ್ದಾಣಗಳಲ್ಲಿ AI ಬಳಕೆ
ದಟ್ಟಣೆಯ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಜನಸಂದಣಿ ಮತ್ತು ಬಿಕ್ಕಟ್ಟು ನಿರ್ವಹಣೆಗಾಗಿ ಕೃತಕ ಬುದ್ಧಿಮತ್ತೆ (AI) ಅನ್ನು ಬಳಸಲಿದೆ ಎಂದು ಮೂಲಗಳು ತಿಳಿಸಿವೆ. ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳಿಗೆ ತರಬೇತಿಯನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಶನಿವಾರ ರಾತ್ರಿ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದ ಕಾಲ್ತುಳಿತ ಪ್ರಕರಣದ ನಂತರ ರೈಲ್ವೆ ಇಲಾಖೆ (Indian Railway Dept) ಎಚ್ಚೆತ್ತುಕೊಂಡಿದೆ. ಇದೀಗ ಕೆಲ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿ ಮಾಡಿದ್ದು, ಅದರ ಭಾಗವಾಗಿ ವಿಶೇಷ ತಂತ್ರಜ್ಞಾನವನ್ನು ಅಳವಡಿಸಲು ಸಜ್ಜಾಗಿದೆ. ಇದೀಗ 60 ಹೆಚ್ಚಿನ ದಟ್ಟಣೆಯ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಜನಸಂದಣಿ ಮತ್ತು ಬಿಕ್ಕಟ್ಟು ನಿರ್ವಹಣೆಗಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಲಿದೆ ಎಂದು ಮೂಲಗಳು ತಿಳಿಸಿವೆ. ಅತಿಯಾದ ಜನದಟ್ಟಣೆಯನ್ನು ನಿಯಂತ್ರಿಸಲು ರೈಲ್ವೆ ನಿಲ್ದಾಣಗಳಲ್ಲಿ ಇನ್ನು ಮುಂದೆ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಲಾಗುತ್ತದೆ.
ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳಿಗೆ ತರಬೇತಿಯನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಯಾಣಿಕರು ನಿಗದಿತ ಫ್ಲಾಟ್‌ಫಾರಂಗಳಿಗೆ ತಲುಪಲು ಅಲ್ಲಲ್ಲಿ ಬಾಣದ ಗುರುತುಗಳನ್ನು ಅಳವಡಿಸಲಾಗುತ್ತದೆ. ಅಷ್ಟೇ ಅಲ್ಲದೆ ವಿಶೇಷವಾಗಿ ರೈಲು ವಿಳಂಬದ ಸಮಯದಲ್ಲಿ ಜನಸಂದಣಿಯನ್ನು ಮೇಲ್ವಿಚಾರಣೆ ಮಾಡಲು ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನದ ಬಳಕೆಯನ್ನು ಮಾಡಲಾಗುತ್ತದೆ. ಜನಸಂದಣಿ ನಿಯಂತ್ರಣ ಕ್ರಮಗಳ ಭಾಗವಾಗಿ ನಿಲ್ದಾಣದಲ್ಲಿರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲು ಹೆಚ್ಚಿನ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಈಗಾಗಲೇ , ನವದೆಹಲಿ ರೈಲು ನಿಲ್ದಾಣವೊಂದರಲ್ಲಿಯೇ 200 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಜನದಟ್ಟಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಲು ರೈಲ್ವೆ ವಿಶೇಷ ಅಭಿಯಾನವನ್ನು ನಡೆಸಲಿದೆ.
ಶನಿವಾರ ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ (New Delhi Stampede) ಸಂಭವಿಸಿದ್ದು, ಈ ವರೆಗೆ 18 ಮಂದಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಯಾಗ್‌ರಾಜ್‌ಗೆ ತೆರಳುವ ರೈಲು ತಡವಾಗಿ ಬಂದಿದ್ದರಿಂದ ಜನರು ಏಕಾಏಕಿ ಜನರು ರೈಲು ಹತ್ತಲು ಹೋಗಿದ್ದಾರೆ ಆಗ ಉಂಟಾದ ನೂಕು ನುಗ್ಗಲಿನಿಂದಾಗಿ ಕಾಲ್ತುಳಿತ ಸಂಭವಿಸಿದೆ. ಫ್ಲಾಟ್‌ಫಾರ್ಮ್ ನಂಬರ್ 14 ಮತ್ತು 15ರಲ್ಲಿ ಈ ದುರಂತ ಸಂಭವಿಸಿದೆ. ಸದ್ಯ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಗಧ ಎಕ್ಸ್‌ಪ್ರೆಸ್ ನಿಗದಿತ ನಿರ್ಗಮನಕ್ಕೆ ಮುಂಚಿತವಾಗಿ ಪ್ಲಾಟ್‌ಫಾರ್ಮ್ ಸಂಖ್ಯೆ 15 ಕ್ಕೆ ಬಂದಿದೆ. ರೈಲು ಹತ್ತಲು ಅಲ್ಲಿ ಭಾರಿ ಜನಸಮೂಹ ಸೇರಿತ್ತು. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಹಲವಾರು ಜನರು ಹಳಿಗಳನ್ನು ದಾಟಿ ಬೇರೆ ಬೇರೆ ಬೋಗಿಗಳಿಗೆ ನುಗ್ಗಿದರು, ಮತ್ತು ಪ್ಲಾಟ್‌ಫಾರ್ಮ್‌ನಲ್ಲಿದ್ದ ಇತರರು ಸಹ ರೈಲಿನೊಳಗೆ ಹತ್ತಲು ಧಾವಿಸಿದರು, ಇದು ಕಾಲ್ತುಳಿತಕ್ಕೆ ಕಾರಣವಾಯಿತು.
ಈ ಸುದ್ದಿಯನ್ನೂ ಓದಿ :Delhi Stampede: ಒಂದೇ ಹೆಸರಲ್ಲಿ ಎರಡು ರೈಲು; ದೆಹಲಿ ಕಾಲ್ತುಳಿತಕ್ಕೆ ಇದೇ ಕಾರಣವಾಯ್ತಾ?
ಭಾರತೀಯ ರೈಲ್ವೆ ಇಲಾಖೆ ಸಂತ್ರಸ್ತರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದು, ಮೃತರ ಕುಟುಂಬಕ್ಕೆ 10 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂ. ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದೆ.