ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್‌ ನಬಿನ್ ಅವಿರೋಧ ಆಯ್ಕೆ

Nitin Nabin: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್‌ ನಬಿನ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜನವರಿ 20ರಂದು ಅವರು ದೆಹಲಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ನಿತಿನ್‌ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಅಲಂಕರಿಸಿದ ಅತ್ಯಂತ ಕಿರಿಯ ಮುಖಂಡ ಎನಿಸಿಕೊಂಡಿದ್ದಾರೆ.

ನಿತಿನ್‌ ನಬಿನ್‌ (ಸಂಗ್ರಹ ಚಿತ್ರ)

ದೆಹಲಿ, ಜ. 19: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್‌ ನಬಿನ್‌ (Nitin Nabin) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜನವರಿ 20ರಂದು ಅವರು ದೆಹಲಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರ ಆಯ್ಕೆಯನ್ನು ಅನುಮೋದಿಸಿ ಸಲ್ಲಿಕೆಯಾದ ಎಲ್ಲ 37 ನಾಮಪತ್ರಗಳು ಮಾನ್ಯವಾದ ಹಿನ್ನೆಲೆಯಲ್ಲಿ ನೇಮಕಾತಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಜೆ.ಪಿ. ನಡ್ಡಾ ಅವರಿಂದ ತೆರವಾದ ಹುದ್ದೆಯನ್ನು ಬಿಹಾರದ ಶಾಸಕ ನಿತಿನ್‌ ನಬಿನ್‌ ಅಲಂಕರಿಸಲಿದ್ದಾರೆ. ಸೋಮವಾರ ಬಿಜೆಪಿಯ ಹಿರಿಯ ನಾಯಕ ಮತ್ತು ಚುನಾವಣಾಧಿಕಾರಿ ಕೆ. ಲಕ್ಷ್ಮಣ್ ಮಾತನಾಡಿ, ʼʼಪಕ್ಷದ ಉನ್ನತ ಹುದ್ದೆಗೆ ಏಕೈಕ ಅಭ್ಯರ್ಥಿಯಾಗಿ ನಿತಿನ್ ನಬಿನ್ ನಾಮಪತ್ರ ಸಲ್ಲಿಸಿದ್ದಾರೆʼʼ ಎಂದು ಮಾಹಿತಿ ನೀಡಿದರು. ಸದ್ಯ ನಿತಿನ್‌ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಅಲಂಕರಿಸಿದ ಅತ್ಯಂತ ಕಿರಿಯ ಮುಖಂಡ ಎನಿಸಿಕೊಂಡಿದ್ದಾರೆ.

ಇತ್ತೀಚೆಗೆ ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್‌ ನಬಿನ್‌ ನೇಮಕಗೊಂಡಿದ್ದರು. 4 ಬಾರಿ ಬಂಕಿಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ 45 ವರ್ಷದ ನಿತಿನ್‌ ನಬಿನ್‌ ಬಿಹಾರ ಸರ್ಕಾದಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. ನಿತಿನ್‌ ತಂದೆ ಬಿಜೆಪಿಯ ಹಿರಿಯ ನಾಯಕ ನವೀನ್‌ ಕಿಶೋರ್‌ ಸಿನ್ಹಾ. ಅವರ ನಿಧನದ ಬಳಿಕ ತೆರವಾದ ಪಾಟ್ನಾ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ನಬಿನ್‌ ವಿಧಾನಸಭೆ ಪ್ರವೇಶಿಸಿದರು.

ಬಿ.ಎಲ್‌. ಸಂತೋಷ್‌ ಅವರ ಎಕ್ಸ್‌ ಪೋಸ್ಟ್‌:



ನಿತಿನ್‌ ನಬಿನ್‌ ಹಿನ್ನೆಲೆ

ನಿತಿನ್‌ 1980ರ ಮೇ 23ರಂದು ರಾಂಚಿಯಲ್ಲಿ ಜನಿಸಿದರು. ಬಾಲ್ಯದಲ್ಲೇ ಅವರು ಪಾಲಕರೊಂದಿಗೆ ಪಾಟ್ನಾಕ್ಕೆ ತಮ್ಮ ವಾಸ ಸ್ಥಾನ ಬದಲಾಯಿಸಿದರು. ಅವರ ತಂದೆ ಬಿಜೆಪಿಯ ಹಿರಿಯ ನಾಯಕರಾಗಿದ್ದರಿಂದ ನಿತಿನ್‌ ಚಿಕ್ಕಂದಿನಿಂದಲೇ ರಾಜಕೀಯವನ್ನು ಅರೆದು ಕುಡಿದಿದ್ದಾರೆ. 1998ರಲ್ಲಿ ಪಿಯುಸಿ (XII) ಶಿಕ್ಷಣ ಮುಗಿಸಿದ ನಿತಿನ್‌ ಬಳಿಕ ಸಕ್ರಿಯ ರಾಜಕೀಯ ಧುಮುಕಿದರು.

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್‌ ನಬಿನ್‌ ಆಯ್ಕೆ

2006ರಲ್ಲಿ ಪಾಟ್ನಾ ಪಶ್ಚಿಮ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ತಮ್ಮ 26ನೇ ವರ್ಷದಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಬಳಿಕ ಬಂಕಿಪುರ ಕ್ಷೇತ್ರದಲ್ಲಿ ಸತತ 4 ಬಾರಿ (2010, 2015, 2020 ಮತ್ತು 2025) ಶಾಸಕರಾದರು. 2025ರ ಚುನಾವಣೆಯಲ್ಲಿ ನಿತಿನ್‌ 98,299 ಮತಗಳನ್ನು ಗಳಿಸಿ ರಾಷ್ಟ್ರೀಯ ಜನತಾ ದಳದ (RJD) ಅಭ್ಯರ್ಥಿ ರೇಖಾ ಕುಮಾರಿ ಅವರನ್ನು 51,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು.

ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರದಲ್ಲಿ ನಿತಿನ್‌ ಸಚಿವರಾಗಿ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ. 2021ರ ಫೆಬ್ರವರಿಯಿಂದ 2022ರ ಆಗಸ್ಟ್‌ವರೆಗೆ ರಸ್ತೆ ನಿರ್ಮಾಣ ಸಚಿವರಾಗಿ ಸೇವೆ ಸಲ್ಲಿಸಿದರು. 2025ರ ಫೆಬ್ರವರಿಯಿಂದ ಡಿಸೆಂಬರ್‌ವರೆಗೆ ಅದೇ ಖಾತೆಗೆ ಮರಳಿದರು. 2024ರ ಮಾರ್ಚ್‌ನಿಂದ 2025ರ ಫೆಬ್ರವರಿ ನಡುವೆ ಕಾನೂನು ಮತ್ತು ನ್ಯಾಯ ಸಚಿವಾಲಯದ ಜತೆಗೆ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಯನ್ನು ನಿರ್ವಹಿಸಿದರು.

ಬಿಜೆಪಿಯ ಯುವ ಘಟಕದ ಮೂಲಕ ಪ್ರವರ್ಧಮಾನಕ್ಕೆ ಬಂದ ನಿತಿನ್‌ ಪಕ್ಷದ ಸಾಂಸ್ಥಿಕ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಈ ಹಿಂದೆ ಅವರು ಭಾರತೀಯ ಜನತಾ ಯುವ ಮೋರ್ಚಾ (BJYM)ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಬಿಜೆವೈಎಂನ ಬಿಹಾರ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.