ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗ್ತಾರಾ ನಿತಿನ್ ನಬಿನ್? ಕಾರ್ಯಾಧ್ಯಕ್ಷ ಹುದ್ದೆಯ ಹಿಂದಿದೆ ಮಾಸ್ಟರ್ ಪ್ಲ್ಯಾನ್
Nitin Nabin: ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬಿನ್ ನೇಮಕಗೊಂಡಿದ್ದಾರೆ. ಇದರೊಂದಿಗೆ ಬಿಜೆಪಿಯ ಇತಿಹಾಸದಲ್ಲಿ ಈ ಹುದ್ದೆಯನ್ನು ಅಲಂಕರಿಸಿದ ಎರಡನೇ ವ್ಯಕ್ತಿ ಎನಿಸಿಕೊಂಡಿದ್ದಾರೆ. ಮುಂದೆ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನಿತಿನ್ ನಬಿನ್ (ಸಂಗ್ರಹ ಚಿತ್ರ) -
ದೆಹಲಿ, ಡಿ. 15: ಭಾರತೀಯ ಜನತಾ ಪಾರ್ಟಿಯ (BJP) ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬಿನ್ (Nitin Nabin) ನೇಮಕಗೊಂಡಿದ್ದಾರೆ. ಇದರೊಂದಿಗೆ ಬಿಜೆಪಿಯ ಇತಿಹಾಸದಲ್ಲಿ ಈ ಹುದ್ದೆಯನ್ನು ಅಲಂಕರಿಸಿದ ಎರಡನೇ ವ್ಯಕ್ತಿ ಎನಿಸಿಕೊಂಡಿದ್ದಾರೆ. ಬಿಜೆಪಿಯ ಮೂಲ ನಿಯಮದ ಪ್ರಕಾರ ಕಾರ್ಯಾಧ್ಯಕ್ಷರ ನೇಮಕಾತಿಗೆ ಯಾವುದೇ ಅವಕಾಶವಿಲ್ಲ. ಅದಾಗ್ಯೂ 2019ರ ಜೂನ್‌ನಲ್ಲಿ ಅಮಿತ್ ಶಾ ಕೇಂದ್ರ ಗೃಹ ಸಚಿವರಾದ ಬಳಿಕ ಜಯ ಪ್ರಕಾಶ್ ನಡ್ಡಾ (ಜೆ.ಪಿ. ನಡ್ಡಾ) ಅವರನ್ನು ಬಿಜೆಪಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಆ ಬಳಿಕ ಅವರು 6 ತಿಂಗಳ ಕಾಲ ಈ ಹುದ್ದೆಯಲ್ಲಿದ್ದರು. ನಂತರ ಅವರು 2020ರಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡರು. ಬಳಿಕ ನಡ್ಡಾ ಸುಮಾರು 6 ವರ್ಷಗಳ ಕಾಲ ಪಕ್ಷದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿಜೆಪಿಯ ಮೂಲ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ತಲಾ ಮೂರು ವರ್ಷಗಳ ಎರಡು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಬಹುದು.
ಡಿಸೆಂಬರ್ 16ರಂದು ಖಾರ್ ಮಾಸ ಆರಂಭವಾಗಲಿದೆ. ಈ ಒಂದು ತಿಂಗಳು ಹಿಂದೂಗಳಿಗೆ ಅಶುಭವಿರುತ್ತದೆ. ಆದ್ದರಿಂದ ಡಿಸೆಂಬರ್ 14ರಂದು ನಬಿನ್ ಅವರನ್ನು ಈ ಹುದ್ದೆಗೆ ನೇಮಿಸಲಾಯಿತು ಎನ್ನಲಾಗಿದೆ. ಈ ಅವಧಿ ಜನವರಿ 14ರಂದು ಮುಕ್ತಾಗೊಳ್ಳಲಿದ್ದು, ಸಂಕ್ರಾಂತಿಯ ಬಳಿಕ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ ಎನ್ನುವ ಚರ್ಚೆ ಹರಿದಾಡುತ್ತಿದೆ. ಈಗಾಗಲೇ ಬಿಜೆಪಿ 37 ರಾಜ್ಯಗಳು ಮತ್ತು ಕೆಲ ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆ ಪೂರ್ಣಗೊಳಿಸಿದೆ. ಏಕೆಂದರೆ ದೇಶದ ಕನಿಷ್ಠ ಅರ್ಧದಷ್ಟೂ ರಾಜ್ಯಗಳಲ್ಲಿ ಚುನಾವಣೆ ಪೂರ್ಣಗೊಳಿಸುವುದು ಪಕ್ಷದ ಮುಖ್ಯಸ್ಥರ ಪ್ರಮುಖ ಜವಬ್ದಾರಿ. ಬಿಜೆಪಿ ನಾಯಕರ ಪ್ರಕಾರ, ಅಧ್ಯಕ್ಷರ ಚುನಾವಣೆ ಜನವರಿ 14ರ ನಂತರ ಪೂರ್ಣಗೊಳ್ಳಬಹುದು. ವರದಿಯೊಂದರ ಪ್ರಕಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಬಿನ್ ನೇಮಕಗೊಳ್ಳುವುದು ಖಚಿತ.
ಬಿಜೆಪಿ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ನಿತಿನ್ ನಬಿನ್:
#WATCH | Newly appointed working president of the BJP, Nitin Nabin, pays tributes to Dr Shyama Prasad Mukherjee and Pandit Deen Dayal Upadhyaya at the party headquarters in Delhi pic.twitter.com/T00IffW9Ys
— ANI (@ANI) December 15, 2025
ನಿತಿನ್ ನಬಿನ್ ಹಿನ್ನೆಲೆ
ಐದು ಬಾರಿ ಬಂಕಿಪುರದಿಂದ ಆಯ್ಕೆಯಾಗಿರುವ 45 ವರ್ಷದ ನಿತಿನ್ ನಬಿನ್ ಪ್ರಸ್ತುತ ಬಿಹಾರ ಸರ್ಕಾದಲ್ಲಿ ಲೋಕೋಪಯೋಗಿ ಸಚಿವರಾಗಿದ್ದಾರೆ. ಅವರ ತಂದೆ ಬಿಜೆಪಿಯ ಹಿರಿಯ ನಾಯಕ ನವೀನ್ ಕಿಶೋರ್ ಸಿನ್ಹಾ. ಅವರ ನಿಧನದ ಬಳಿಕ ತೆರವಾದ ಪಾಟ್ನಾ ಪಶ್ಚಿಮ ವಿಧಾನಸಭಾಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ನಬಿನ್ ವಿಧಾನಸಭೆ ಪ್ರವೇಶಿಸಿದರು. ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಅಲಂಕರಿಸಿದರೆ, ಈ ಹುದ್ದೆಯನ್ನು ನಿರ್ವಹಿಸಲಿರುವ ಅತ್ಯಂತ ಕಿರಿಯ ಮುಖಂಡ ಎನಿಸಿಕೊಳ್ಳಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬಿನ್ ಆಯ್ಕೆ
ಶುಭ ಕೋರಿದ ನರೇಂದ್ರ ಮೋದಿ
ನಿತಿನ್ ನಬಿನ್ ಬಿಜೆಪಿಯ ನೂತನ ಕಾರ್ಯಾಧ್ಯಕ್ಷರಾಗಿ ನೇಮಕವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, "ಜನರ ಆಶೋತ್ತರಗಳನ್ನು ಅರ್ಥ ಮಾಡಿಕೊಂಡು ತಕ್ಷಣ ಈಡೇರಿಸುವ ಉತ್ಸಾಹಿ ನಾಯಕ, ವಿನಯವಂತ, ಉತ್ತಮ ಸಂಘಟನಕಾರ ಹಲವು ಬಾರಿ ಶಾಸಕರಾಗಿ, ಸಚಿವರಾಗಿ ಉತ್ತಮ ಜನಪ್ರಿಯತೆ ಗಳಿಸಿರುವ ನಿತಿನ್ ಅವರಿಗೆ ಶುಭ ಹಾರೈಕೆಗಳು. ನಿತಿನ್ ಅವರನ್ನು ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಸಂಘಟನೆ ಮಾಡಲಿದ್ದಾರೆ ಎನ್ನುವ ವಿಶ್ವಾಸವಿದೆ" ಎಂದು ಬರೆದುಕೊಂಡಿದ್ದಾರೆ.