''ಪಾಕಿಸ್ತಾನಕ್ಕೆ ಒಂದು ಹನಿ ನೀರು ಕೂಡ ಹರಿಯುವುದಿಲ್ಲ": ಸಿಂಧು ನದಿ ಜಲ ಒಪ್ಪಂದದ ಬಗ್ಗೆ ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಹೇಳಿದ್ದೇನು?
Indus Water Treaty: ಸಿಂಧೂ ನದಿಯಿಂದ ಒಂದು ಹನಿ ನೀರು ಪಾಕಿಸ್ತಾನಕ್ಕೆ ಹರಿಯುವುದಿಲ್ಲ ಎಂದು ಕೇಂದ್ರ ಜಲಶಕ್ತಿ (ಜಲ ಸಂಪನ್ಮೂಲ) ಸಚಿವ ಸಿ.ಆರ್. ಪಾಟೀಲ್ ಹೇಳಿದ್ದಾರೆ. ಪಹಲ್ಗಾಮ್ ದಾಳಿ ನಂತರ ಭಾರತವು ಪಾಕಿಸ್ತಾನದೊಂದಿಗೆ ಸಿಂಧೂ ನದಿ ಒಪ್ಪಂದವನ್ನು ಸ್ಥಗಿತಗೊಳಿಸಿತು.
ಸಾಂದರ್ಭಿಕ ಚಿತ್ರ -
ನವದೆಹಲಿ, ಜೂ. 10: ʼʼಸಿಂಧೂ ನದಿ ನೀರು ಒಪ್ಪಂದ ಕಳೆದ ವರ್ಷದಿಂದ ಸ್ಥಗಿತಗೊಂಡಿರುವುದರಿಂದ, ಸಿಂಧೂ ನದಿಯಿಂದ (Indus Water Treaty) ಒಂದು ಹನಿ ನೀರು ಪಾಕಿಸ್ತಾನಕ್ಕೆ ಹರಿಯುವುದಿಲ್ಲʼʼ ಎಂದು ಕೇಂದ್ರ ಜಲಶಕ್ತಿ (ಜಲ ಸಂಪನ್ಮೂಲ) ಸಚಿವ ಸಿ.ಆರ್. ಪಾಟೀಲ್ (CR Patil) ಹೇಳಿದ್ದಾರೆ. ʼʼಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಿರ್ದೇಶನದ ಮೇರೆಗೆ ಗೃಹ ಸಚಿವ ಅಮಿತ್ ಶಾ ಈ ವಿಷಯವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆʼʼ ಎಂದು ಅವರು ತಿಳಿಸಿದ್ದಾರೆ.
ʼʼಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ನಿರ್ಧಾರ ಕೈಗೊಂಡ ಬಳಿಕ, ಒಂದು ಹನಿ ನೀರೂ ಅಲ್ಲಿಗೆ ಹರಿಯದಂತೆ ನೋಡಿಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಪ್ರಧಾನಿ ಅವರ ನಿರ್ದೇಶನದಂತೆ ಗೃಹ ಸಚಿವ ಅಮಿತ್ ಶಾ ಈ ವಿಷಯವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ನಾವು ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆʼʼ ಎಂದು ಸಿಂಧು ಜಲ ಒಪ್ಪಂದದ ಕುರಿತು ಮಾತನಾಡುತ್ತ ಪಾಟೀಲ್ ವಿವರಿಸಿದ್ದಾರೆ.
“ಈ ಕೆಲಸ ನಿಗದಿತ ಅವಧಿಯೊಳಗೆ ನಡೆಯುತ್ತಿದೆ. ಸಿಂಧು ನದಿ ನೀರು ಪಾಕಿಸ್ತಾನಕ್ಕೆ ಹರಿಯುವುದನ್ನು ನಿಲ್ಲಿಸಲಾಗುವುದು ಎಂಬುದನ್ನು ನಾನು ಹೇಳಬಲ್ಲೆ. ಮುಂದಿನ ವರ್ಷಗಳಲ್ಲಿ ಒಂದು ಹನಿ ನೀರೂ ಅಲ್ಲಿಗೆ ಹೋಗುವುದಿಲ್ಲ ಎಂಬುದು ಖಚಿತ. ಅಷ್ಟು ಮಾತ್ರ ನಾನು ನಿಮಗೆ ಹೇಳಬಲ್ಲೆ” ಎಂದು ಅವರು ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.
ಸಿ.ಆರ್. ಪಾಟೀಲ್ ವಿಡಿಯೊ ಇಲ್ಲಿದೆ:
#WATCH | Delhi: On the decision to terminate the Indus Waters Treaty, Union Minister C.R. Patil says, “It still stands; rather, the treaty has been kept in abeyance. And since Prime Minister Modi took this decision, every effort is being made to ensure not a single drop flows… pic.twitter.com/vnEGNpvD0K
— ANI (@ANI) June 9, 2026
2025ರ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ನಂತರ ಭಾರತವು ಪಾಕಿಸ್ತಾನದೊಂದಿಗಿನ ಸಿಂಧು ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತು.
ಪಾಕ್‌ನ ಗೊಡ್ಡು ಬೆದರಿಕೆ ಸಿಂಧೂ ನದಿ ನೀರು ಬಿಡಲ್ಲ; ಜಲಶಕ್ತಿ ಸಚಿವ
ಸಿಂಧು ಜಲ ಒಪ್ಪಂದವು ಭಾರತ ಮತ್ತು ಪಾಕಿಸ್ತಾನದ ನಡುವೆ ಹರಿಯುವ ಸಿಂಧು ನದಿ ಹಾಗೂ ಅದರ ಐದು ಉಪನದಿಗಳಾದ ಸಟ್ಲೆಜ್, ಬಿಯಾಸ್, ರಾವಿ, ಜೆಹ್ಲಂ ಮತ್ತು ಚಿನಾಬ್‌ನ ನೀರಿನ ಬಳಕೆ ಹಾಗೂ ನೀರು ಹಂಚಿಕೆ ವ್ಯವಸ್ಥೆಯನ್ನು ನಿರ್ಧರಿಸುತ್ತದೆ. ಈ ಒಪ್ಪಂದಕ್ಕೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿದ್ದು, ಅದು ಒಪ್ಪಂದಕ್ಕೆ ಸಹಿ ಹಾಕಿದೆ. ಕಾಶ್ಮೀರದ ಕುರಿತ ಮೊದಲ ಭಾರತ-ಪಾಕಿಸ್ತಾನ ಯುದ್ಧದ ನಂತರ ಆರಂಭವಾದ ಒಂಬತ್ತು ವರ್ಷಗಳಿಗೂ ಹೆಚ್ಚು ಕಾಲ ನಡೆದ ಮಾತುಕತೆಗಳ ಬಳಿಕ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಇದು ಪಶ್ಚಿಮ ನದಿಗಳಿಂದ (ಚೆನಾಬ್, ಝೀಲಂ ಮತ್ತು ಸಿಂಧು) ಪಾಕಿಸ್ತಾನಕ್ಕೆ ಮತ್ತು ಪೂರ್ವ ನದಿಗಳಿಂದ (ರವಿ, ಬಿಯಾಸ್ ಮತ್ತು ಸಟ್ಲೆಜ್) ಭಾರತಕ್ಕೆ ನೀರನ್ನು ಹಂಚಿಕೆ ಮಾಡುತ್ತದೆ. ಪಶ್ಚಿಮದ ನದಿಗಳ ನೀರನ್ನು ಭಾರತವು ಕೆಲವು ನಿರ್ದಿಷ್ಟ ಉದ್ದೇಶಗಳಿಗಾಗಿ ಅಂದರೆ ಕೃಷಿ, ಗೃಹ ಬಳಕೆ ಹಾಗೂ ಜಲವಿದ್ಯುತ್ ಉತ್ಪಾದನೆಗಾಗಿ ಬಳಸಲು ಅನುಮತಿ ನೀಡಲಾಗಿದೆ.