Delhi CM: ಬಿಜೆಪಿ ಶಾಸಕಾಂಗ ಸಭೆ ಮುಂದೂಡಿಕೆ- ಫೆ.20 ದೆಹಲಿ ನೂತನ ಸಿಎಂ ಪ್ರಮಾಣವಚನ ಸಮಾರಂಭ?
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಗೆಲುವು ಸಾಧಿಸಿದ ಬಿಜೆಪಿಯಲ್ಲಿ ಇದೀಗ ಮುಖ್ಯಮಂತ್ರಿ ಆಯ್ಕೆಯ ಕಸರತ್ತು ಪ್ರಾರಂಭವಾಗಿದೆ. ಪ್ರಧಾನಿ ಮೋದಿ ಅಮೆರಿಕ ಪ್ರವಾಸದಿಂದ ಹಿಂತಿರುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸೇರಿದಂತೆ ಇತರೆ ಸಚಿವ ಸಂಪುಟ ರಚನೆ ಬಗ್ಗೆ ಸಭೆ ನಡೆದಿದೆ. ಇನ್ನು ಫೆ.20 ರಂದು ದೆಹಲಿ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭವಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ(Assembly Election) ದಾಖಲೆಯ ಗೆಲುವು ಸಾಧಿಸಿದ ಬಿಜೆಪಿಯಲ್ಲಿ ಇದೀಗ ಮುಖ್ಯಮಂತ್ರಿ(Delhi CM) ಆಯ್ಕೆಯ ಕಸರತ್ತು ಪ್ರಾರಂಭವಾಗಿದೆ. ಪ್ರಧಾನಿ ಮೋದಿ ಅಮೆರಿಕ ಪ್ರವಾಸದಿಂದ ಹಿಂತಿರುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸೇರಿದಂತೆ ಇತರೆ ಸಚಿವ ಸಂಪುಟ ರಚನೆ ಬಗ್ಗೆ ಸಭೆ ನಡೆದಿದೆ. ಇನ್ನು ಫೆ.20 ರಂದು ದೆಹಲಿ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭವಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದ ಶಾಸಕಾಂಗ ಸಭೆಯ ನಂತರ ಫೆಬ್ರವರಿ 19ರಂದು ದೆಹಲಿಯ ಮುಖ್ಯಮಂತ್ರಿಯನ್ನು ಬಿಜೆಪಿ ಘೋಷಿಸುವ ಸಾಧ್ಯತೆಯಿದ್ದು, ಫೆಬ್ರವರಿ 20ರಂದು ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದೆ ಎಂದು ಹೇಳಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದ 48 ಬಿಜೆಪಿ ಶಾಸಕರ ಪೈಕಿ 15 ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಅದರಲ್ಲಿ ಪ್ರಭಾವಿ ನಾಯಕರನ್ನು ಮುಖ್ಯಮಂತ್ರಿ, ರಾಜ್ಯ ಕ್ಯಾಬಿನೆಟ್ ಸಚಿವರು ಮತ್ತು ಸ್ಪೀಕರ್‌ನಂತಹ ಪ್ರಮುಖ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ. ಮುಖ್ಯಮಂತ್ರಿ ರೇಸ್‌ನಲ್ಲಿ ಪ್ರಮುಖ ನಾಯಕರು ಮುಂಚೂಣಿಯಲ್ಲಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರನ್ನು ಹೀನಾಯವಾಗಿ ಸೋಲಿಸಿದ ಪರ್ವೇಶ್ ವರ್ಮಾ, ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಶಿಶ್ ಸೂದ್, ಮಹಿಳಾ ನಾಯಕಿ ರೇಖಾ ಗುಪ್ತಾ, ದೆಹಲಿ ವಿಧಾನಸಭೆಯ ಮಾಜಿ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ, ಬ್ರಾಹ್ಮಣ ನಾಯಕ ಮಾಜಿ ರಾಜ್ಯಾಧ್ಯಕ್ಷ ಸತೀಶ್ ಉಪಾಧ್ಯಾಯ, ವೈಶ್ಯ ಸಮುದಾಯದ ಪ್ರಬಲ ಮತ್ತು ಆರ್‌ಎಸ್‌ಎಸ್ ಪ್ರತಿನಿಧಿ ಜಿತೇಂದ್ರ ಮಹಾಜನ್ ಹೆಸರು ರೇಸ್‌ನಲ್ಲಿದೆ.
ಈ ಸುದ್ದಿಯನ್ನೂ ಓದಿ:Aravind Kejriwal: ದೆಹಲಿ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಕೇಜ್ರಿವಾಲ್‌ಗೆ ಪಂಜಾಬ್ ಸಿಎಂ ಗಾದಿ?
ಬಿಜೆಪಿ ಶಾಸಕಾಂಗ ಸಭೆ ಮುಂದೂಡಿಕೆ
ದೆಹಲಿಯಲ್ಲಿ ಇಂದು(ಫೆ.17) ಮಧ್ಯಾಹ್ನ ನಡೆಯಬೇಕಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಮುಂದೂಡಲಾಗಿದೆ. ಇದೇ ಫೆಬ್ರವರಿ 20ರಂದು ದೆಹಲಿಯಲ್ಲಿ ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಬಿ.ಎಲ್. ಸಂತೋಷ್ ಪಕ್ಷದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಿಜೆಪಿ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವೀರೇಂದ್ರ ಸಚ್‌ದೇವ, ರಾಜ್ಯ ಸಂಘಟನಾ ಸಚಿವ ಪವನ್ ರಾಣಾ ಮತ್ತು ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
BJP Legislature Party meeting scheduled for tomorrow, 17th February, has been postponed. Now this meeting will be held on 19th February. The swearing-in ceremony of the #ChiefMinister will also be held on 20th February instead of 18th February. @BJP4India pic.twitter.com/fMZr9HOqDH
— Upendrra Rai (@UpendrraRai) February 17, 2025
ಇಂದಿನ ಸಭೆಯಲ್ಲಿ ಮುಖ್ಯಮಂತ್ರಿಯ ಆಯ್ಕೆಯ ಕುರಿತು ಮಾತನಾಡಲು ಪಕ್ಷದ ವರಿಷ್ಠರು ನಿರ್ಧರಿಸಿದ್ದರು. ಪ್ರಮುಖ ಸಚಿವ ಸ್ಥಾನಗಳಿಗೂ ಪ್ರಮುಖರ ಹೆಸರನ್ನು ಆಯ್ಕೆ ಮಾಡುವ ಸಾಧ್ಯತೆಯಿತ್ತು. ಆದರೆ ಕಾರಣಾಂತರಗಳಿಂದ ಇಂದು ನಡೆಯಬೇಕಿದ್ದ ಪಕ್ಷದ ಶಾಸಕಾಂಗ ಸಭೆಯನ್ನು ಮುಂದೂಡಲಾಗಿದೆ.