Snakebite: ಒಡಿಶಾದಲ್ಲಿ ಮೌಢ್ಯತೆ ಇನ್ನೂ ಜೀವಂತ; ಹೆತ್ತವರ ಮೂಢನಂಬಿಕೆಗೆ ಕಂದಮ್ಮಗಳು ಬಲಿ
21ನೇ ಶತಮಾನದಲ್ಲಿಯೂ ಮೂಢನಂಬಿಕೆ ಪ್ರಚಲಿತದಲ್ಲಿರುವುದಕ್ಕೆ ಒಡಿಶಾ ಸಾಕ್ಷಿಯಾಗಿದೆ. ಇಲ್ಲಿನ ನವರಂಗ್‌ಪುರ ಜಿಲ್ಲೆಯ ರಾಜ್‌ಪುರ ಗ್ರಾಮದಲ್ಲಿ ಹಾವು ಕಚ್ಚಿದ ಮಕ್ಕಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸುವ ಬದಲು ಮಂತ್ರವಾದಿ ಬಳಿ ಕರೆದೊಯ್ಯುದ ವಿಚಿತ್ರ ಘಟನೆ ನಡೆದಿದೆ. ಪರಿಣಾಮ ಇಬ್ಬರು ಮಕ್ಕಳು ಇಹಲೋಕ ತ್ಯಜಿಸಿದ್ದಾರೆ.

ಸಾಂಧರ್ಬಿಕ ಚಿತ್ರ -

ಭುವನೇಶ್ವರ: ಒಡಿಶಾದ (Odisha) ನವರಂಗ್‌ಪುರ (Nabarangpur) ಜಿಲ್ಲೆಯ ರಾಜ್‌ಪುರ ಗ್ರಾಮದಲ್ಲಿ ಸೋಮವಾರ (ಸೆಪ್ಟೆಂಬರ್ 8) ರಾತ್ರಿ ಹಾವು ಕಚ್ಚಿ (Snakebite) ಒಂಬತ್ತು ತಿಂಗಳ ಮಗು ರಿತುರಾಜ್ ಹರಿಜನ್ ಮತ್ತು ಆತನ 11 ವರ್ಷದ ಅಕ್ಕ ಅಮಿತಾ ಹರಿಜನ್ ಸಾವನ್ನಪ್ಪಿದ್ದಾರೆ. ಕುಟುಂಬವು ಆಸ್ಪತ್ರೆಗೆ ಕರೆದೊಯ್ಯುವ ಬದಲು ಗುನಿಯಾ ಎಂದು ಕರೆಯಲ್ಪಡುವ ಕಾಳಿಮಂತ್ರವಾದಿಯ ಬಳಿಗೆ ಮಕ್ಕಳನ್ನು ಕರೆದೊಯ್ದಿದ್ದು, ಈ ಮೂಢನಂಬಿಕೆಯಿಂದಾಗಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಮಕ್ಕಳು ಮೃತಪಟ್ಟಿದ್ದಾರೆ.
ಘಟನೆಯ ವಿವರ
ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ರಾಜ್‌ಪುರ ಗ್ರಾಮದಲ್ಲಿ ಕುಟುಂಬದೊಂದಿಗೆ ಮಲಗಿದ್ದ ರಿತುರಾಜ್ ಮತ್ತು ಅಮಿತಾಗೆ ವಿಷಕಾರಿ ಸರ್ಪ ಕಚ್ಚಿದೆ. ಮನೆಯವರು ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವ ಬದಲು ಸ್ಥಳೀಯ ಕಾಳಿ ಮಂತ್ರವಾದಿಯ ಬಳಿಗೆ ಕರೆದುಕೊಂಡು ಹೋದರು. ಗುನಿಯಾನ ಆಚರಣೆಗಳು ಸುಮಾರು ಮೂರು ಗಂಟೆಗಳ ಕಾಲ ನಡೆದವು. ಆದರೆ ಮಕ್ಕಳ ಸ್ಥಿತಿ ಕ್ಷೀಣಿಸಿತು. ಬೆಳಗ್ಗೆ 4 ಗಂಟೆಗೆ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಅವರನ್ನು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. “ನಾವು ಮಕ್ಕಳನ್ನು ಗುನಿಯಾ ಬಳಿಗೆ ಕರೆದೊಯ್ದೆವು, ಆದರೆ ಸ್ಥಿತಿ ಹದಗೆಟ್ಟಾಗ ಆಸ್ಪತ್ರೆಗೆ ತಂದೆವು” ಎಂದು ಮಕ್ಕಳ ತಂದೆ ಕೃಷ ಹರಿಜನ್ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಊಟ ಹೇಗಿದೆ ಎಂದು ಕೇಳಿದ ವೇಟರ್‌ಗೆ ಮಹಿಳೆ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ
ವೈದ್ಯಕೀಯ ಎಚ್ಚರಿಕೆ
ನವರಂಗ್‌ಪುರದ ಮುಖ್ಯ ಜಿಲ್ಲಾ ವೈದ್ಯಾಧಿಕಾರಿ (CDMO) ಸಂತೋಷ್ ಕುಮಾರ್ ಪಾಂಡಾ, “ಮಕ್ಕಳಿಗೆ ಕಚ್ಚಿದ್ದು ಅತ್ಯಂತ ವಿಷಕಾರಿ ಸರ್ಪ. ಎರಡು ಗಂಟೆಗಳ ಒಳಗೆ ಚಿಕಿತ್ಸೆ ನೀಡಬೇಕಿತ್ತು, ಆದರೆ ಕುಟುಂಬವು ಗುನಿಯಾ ಬಳಿಗೆ ಕರೆದೊಯ್ದು ವಿಳಂಬ ಮಾಡಿತು” ಎಂದು ತಿಳಿಸಿದ್ದಾರೆ. ಆಸ್ಪತ್ರೆಗೆ ತಕ್ಷಣ ಕರೆದೊಯ್ಯುವಂತೆ ಜನರಿಗೆ ಮನವಿ ಮಾಡಿದ್ದಾರೆ. “ಗ್ರಾಮೀಣ ಪ್ರದೇಶಗಳಲ್ಲಿ ಮೂಢನಂಬಿಕೆಗಳ ವಿರುದ್ಧ ಜಾಗೃತಿ ಅಭಿಯಾನ ನಡೆಸುತ್ತಿದ್ದೇವೆ. ಆದರೆ ಜನರಲ್ಲಿ ಸಂಪೂರ್ಣ ಅರಿವು ಇನ್ನೂ ಬಂದಿಲ್ಲ” ಎಂದು ಪಾಂಡಾ ಹೇಳಿದ್ದಾರೆ.
ವಿಶೇಷ ರಿಲೀಫ್ ಕಮಿಷನರ್ ಕಚೇರಿಯ ಅಧಿಕಾರಿಯೊಬ್ಬರ ಪ್ರಕಾರ, ಒಡಿಶಾದಲ್ಲಿ ವಾರ್ಷಿಕವಾಗಿ ಸುಮಾರು 3,000 ಹಾವು ಕಡಿತದ ಪ್ರಕರಣಗಳು ವರದಿಯಾಗುತ್ತವೆ. ಇದರಲ್ಲಿ 40% ಜನರು ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ಮೃತಪಡುತ್ತಾರೆ. “ವೈದ್ಯಕೀಯ ಸೌಲಭ್ಯಗಳ ಲಭ್ಯತೆಯ ಕೊರತೆ, ಸಾಂಪ್ರದಾಯಿಕ ಚಿಕಿತ್ಸೆಗಳ ಮೇಲಿನ ಅವಲಂಬನೆ ಮತ್ತು ಗ್ರಾಮೀಣ ಮಟ್ಟದಲ್ಲಿ ತರಬೇತಿಪಡೆದ ವೈದ್ಯರ ಕೊರತೆಯಿಂದ ಸಾವಿನ ಪ್ರಮಾಣ ಹೆಚ್ಚಾಗಿದೆ” ಎಂದು ಅವರು ತಿಳಿಸಿದ್ದಾರೆ.