Pak Based Hackers: ಇನ್ನೂ ಬುದ್ಧಿ ಕಲಿಯದ ಪಾಕಿಸ್ತಾನ; ಗುಂಡಿನ ದಾಳಿ ಬಳಿಕ ಇದೀಗ ಸೈಬರ್ ಆಕ್ರಮಣ
Pahalgam Attack: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಪಾಕಿಸ್ತಾನ ಇದೀಗ ಸೈಬರ್ ದಾಳಿಗೆ ಮುಂದಾಗಿದೆ. ಆರ್ಮಿ ಪಬ್ಲಿಕ್ ಸ್ಕೂಲ್ ಸೇರಿದಂತೆ ಹಲವು ಭಾರತೀಯ ವೆಬ್‌ಸೈಟ್‌ಗಳನ್ನು ಪಾಕಿಸ್ತಾನದ ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಏ. 22ರಂದು ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ 26 ಉಗ್ರರನ್ನು ಹತ್ಯೆ ಮಾಡುವ ಮೂಲಕ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡಿದ ಪಾಕಿಸ್ತಾನಿ ಮೂಲದ ಉಗ್ರರಿಗೆ ಭಾರತ ದಿಟ್ಟ ಉತ್ತರ ನೀಡಿದೆ. ಸಿಂಧೂ ನದಿ ನೀರು ಒಪ್ಪಂದ ರದ್ದು, ತಾತ್ಕಾಲಿಕ ವೀಸಾ ಅಮಾನತು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಇಷ್ಟಾದರೂ ಬುದ್ಧಿ ಕಲಿಯದ ಪಾಕಿಸ್ತಾನ ಇದೀಗ ಸೈಬರ್ ದಾಳಿಗೆ ಮುಂದಾಗಿದೆ. ಆರ್ಮಿ ಪಬ್ಲಿಕ್ ಸ್ಕೂಲ್ ಸೇರಿದಂತೆ ಹಲವು ಭಾರತೀಯ ವೆಬ್‌ಸೈಟ್‌ಗಳನ್ನು ಪಾಕಿಸ್ತಾನದ ಹ್ಯಾಕರ್‌ಗಳು (Pak Based Hackers) ಹ್ಯಾಕ್ ಮಾಡಿದ್ದಾರೆ.
ಶ್ರೀನಗರದ ಆರ್ಮಿ ಪಬ್ಲಿಕ್ ಸ್ಕೂಲ್ (APS), ಉತ್ತರಾಖಂಡದ ರಾಣಿಖೇತ್‌ನ ಎಪಿಎಸ್, ಆರ್ಮಿ ವೆಲ್‌ಫೇರ್ ಹೌಸಿಂಗ್ ಆರ್ಗೈಸೇಷನ್ (AWHO)ನ ಡಾಟಾಬೇಸ್ ಮತ್ತು ಇಂಡಿಯನ್ ಏರ್ ಫೋರ್ಸ್ ಪ್ಲೇಸ್‌ಮೆಂಟ್ ಆರ್ಗೈಸೇಷನ್ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಲಾಗಿದೆ. ಐಒಕೆ ಹ್ಯಾಕರ್ (IOK Hacker) ಹೆಸರಿನ ಹ್ಯಾಕರ್‌ಗಳು ಈ ವೆಬ್‌ಸೈಟ್ ಮೇಲೆ ದಾಳಿ ನಡೆಸಿವೆ.
ಭಾರತೀಯ ವೆಬ್‌ಸೈಟ್ ಹ್ಯಾಕ್ ಆಗಿರುವ ಕುರಿತು ಮಾಹಿತಿ ನೀಡುವ ಎಕ್ಸ್ ಪೋಸ್ಟ್:
coward Pakistan
— Dheeraj Choudhary (@_dheerajrakho) April 29, 2025
APS Ranikhet website hacked. pic.twitter.com/Io5NfJbXzT
ಈ ಸುದ್ದಿಯನ್ನೂ ಓದಿ: ಭಾರತದ ಪೌರತ್ವ ಪಡೆಯದ 5 ಲಕ್ಷ ಪಾಕಿಸ್ತಾನಿ ಮಹಿಳೆಯರು ಇಲ್ಲಿದ್ದಾರೆ; ಇದು ಪಾಕ್ ಭಯೋತ್ಪಾದನೆಯ ಹೊಸ ಮುಖ ಎಂದ ಸಂಸದ
ಶ್ರೀನಗರದ ಎಪಿಎಸ್ ವೆಬ್‌ಸೈಟ್ ಅನ್ನು ಸಿಷ್ಕ್ರಿಯಗೊಳಿಸುವ ಉದ್ದೇಶದೊಂದಿಗೆ ಆರಂಭವಾದ ಈ ದಾಳಿ ಸೇವೆಗಳಿಗೆ ಅಡ್ಡಿಪಡಿಸುವ ಮತ್ತು ವೈಯಕ್ತಿಕ ಮಾಹಿತಿಗೂ ಕನ್ನ ಹಾಕಲು ಮುಂದಾಗಿತ್ತು ಎಂದು ಮೂಲಗಳು ತಿಳಿಸಿವೆ.
ಹ್ಯಾಕ್ ಆದ ರಾಣಿಖೇತ್ ಎಪಿಎಸ್ ವೆಬ್‌ಸೈಟ್ ಪೇಜ್‌ನ ಮಧ್ಯದಲ್ಲಿ ಪಾಕ್ ಧ್ವಜ ಕಾಣಿಸಿಕೊಂಡಿದ್ದು, ಸೈಟ್ ಹ್ಯಾಕ್ ಆಗಿದೆ (SITE HACKED) ಎನ್ನು ಸಂದೇಶ ಮೂಡಿದೆ. ಜತೆಗೆ ಕಾಶ್ಮೀರದ ಕುರಿತಾಗಿ ಪ್ರಚೋದನಕಾರಿ ಹೇಳಿಕೆಯನ್ನೂ ಇದು ಒಳಗೊಂಡಿದೆ. ಪೇಜ್‌ನ ಕೊನೆಯಲ್ಲಿ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಬೆಟ್ಟು ಮಾಡಿ ತೋರಿಸುವ ಚಿತ್ರವಿದೆ. ಅದರ ಕೆಳಗೆ ಹ್ಯಾಕ್ಡ್ ಬೈ ಐಒಕೆ ಹ್ಯಾಕರ್ಸ್ ಎಂದು ಬರೆಯಲಾಗಿದೆ.
ʼʼಇಂಡಿಯನ್ ಆರ್ಮಿ ಹೌಸಿಂಗ್ ಸೊಸೈಟಿಯ ಸಂಪೂರ್ಣ ಮಾಹಿತಿ ಸೋರಿಕೆಯಾಗಿದೆ. ನಿಮ್ಮ ಮನೆ ವಿಳಾಸ ಇದೀಗ ನಮ್ಮ ಬಳಿ ಇದೆʼʼ ಎನ್ನುವ ಮೆಸೇಜ್‌ನೊಂದಿಗೆ ಪಾಕ್ ಧ್ವಜ, ಮಾಸ್ಕ್ ಧರಿಸಿದ ಹ್ಯಾಕರ್ಸ್‌ನ ಚಿತ್ರ ಕಾಣಿಸಿಕೊಂಡಿದೆ.
ಭಾರತದ ಸೈಬರ್ ಭದ್ರತಾ ವ್ಯವಸ್ಥೆಗಳು ಪಾಕಿಸ್ತಾನದ ಈ ಪ್ರಯತ್ನವನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ಸಮಸ್ಯೆ ನಿವಾರಿಸಿವೆ. ಸೈಬರ್ ದಾಳಿಗೆ ಒಳಗಾದ ಎಲ್ಲ ವೆಬ್‌ಸೈಟ್‌ಗಳನ್ನು ಪ್ರತ್ಯೇಕಿಸಲಾಗಿದ್ದು, ಪುನಃಸ್ಥಾಪಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ. ʼʼಭಾರತೀಯ ಸೇನೆ ತನ್ನ ಸೈಬರ್ ಭದ್ರತೆಯನ್ನು ಬಲಪಡಿಸಲು ಮುಂದಾಗಿದೆ. ಆ ಮೂಲಕ ಮಾಹಿತಿಯನ್ನು ಸಂರಕ್ಷಿಸುತ್ತಿದೆ. ವೈಯಕ್ತಿಕ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳುತ್ತಿದೆʼʼ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಕಳೆದ ವಾರ ಟೀಮ್ ಇನ್‌ಸ್ಯಾನ್ ಪಿಕೆ (Team Insane PK) ಹೆಸರಿನ ಪಾಕಿಸ್ತಾನ ಮೂಲದ ಹ್ಯಾಕರ್ಸ್ ಗುಂಪೊಂದು ಆರ್ಮಿ ವೆಲ್‌ಫೇರ್ ಎಜುಕೇಷನ್ ಸೊಸೈಟಿ ನಡೆಸುವ ಆರ್ಮಿ ಕಾಲೇಜ್ ಆಫ್ ನರ್ಸಿಂಗ್‌ನ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿತ್ತು. ಪ್ರಚೋದನಕಾರಿ ಸಂದೇಶವನ್ನೂ ಇದು ಹಂಚಿಕೊಂಡಿತ್ತು. ಜತೆಗೆ ರಾಜಸ್ಥಾನದ ಸರ್ಕಾರಿ ಮೂಲದ ವೆಬ್‌ಸೈಟ್ ಅನ್ನೂ ಪಾಕಿಸ್ತಾನ ಹ್ಯಾಕ್ ಮಾಡಿತ್ತು.