ಶ್ರೀನಗರ: ಪಾಕಿಸ್ತಾನ (Pakistan) ಎಂದು ಬರೆದಿರುವ ಬಲೂನ್ (Balloon) ಭಾರತದ ಅಂತಾರಾಷ್ಟ್ರೀಯ ಗಡಿ ಪ್ರದೇಶವಾದ (International Border) ಜಮ್ಮುವಿನ (Jammu) ಬಳಿ ಪತ್ತೆಯಾಗಿದೆ. ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶವಾದ ಜಮ್ಮುವಿನೊಳಗೆ ಸುಮಾರು ಮೂರು ಕಿಲೋ ಮೀಟರ್ ದೂರದಲ್ಲಿರುವ ರಂಜನ್ ಪ್ರದೇಶದಲ್ಲಿ ಹಸಿರು ಮತ್ತು ಬಿಳಿ ಬಣ್ಣದ ಬಲೂನ್ ಪತ್ತೆಯಾಗಿದೆ. ಘರೋಟಾ ಪೊಲೀಸ್ ಠಾಣೆ (Gharota Police Station) ವ್ಯಾಪ್ತಿಯಲ್ಲಿ ಕಂಡು ಬಂದಿರುವ ಬಲೂನ್ ಅನ್ನು ಸೇನಾ ಸಿಬ್ಬಂದಿಯೊಂದಿಗೆ ತೆರಳಿದ ಪೊಲೀಸ್ ತಂಡ ವಶಕ್ಕೆ ಪಡೆದಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಶುಕ್ರವಾರ ಗಡಿ ಭದ್ರತಾ ಪಡೆ (ಬಿಎಸ್ಎಫ್) ಪಂಜಾಬ್ ಗಡಿ ಭಾಗದಲ್ಲಿ ಹಲವಾರು ಗಡಿಯಾಚೆಗಿನ ಕಳ್ಳಸಾಗಣೆ ಪ್ರಯತ್ನಗಳನ್ನು ತಡೆದಿದೆ.
ಇದನ್ನೂ ಓದಿ: Viral Video: ವಯಸ್ಸಾಯ್ತು ಬಿಟ್ ಬಿಡಮ್ಮ ಅಂದ್ರೂ ಬಿಡಲಿಲ್ಲ ಈ ಮಹಾತಾಯಿ! ಈಕೆ ಮಾಡಿದ ಕೃತ್ಯ ಏನ್ ಗೊತ್ತಾ?
ಮತ್ತೊಂದು ಪ್ರಕರಣದಲ್ಲಿ ಫಿರೋಜ್‌ಪುರದ ಕಲುವಾಲಾ ಗ್ರಾಮದ ಬಳಿ ಗುರುವಾರ ಬಿಎಸ್‌ಎಫ್ ಪಡೆಗಳು ಕೃಷಿ ಪ್ರದೇಶದಲ್ಲಿ ಡಿಜೆಐ ಮಾವಿಕ್ 3 ಕ್ಲಾಸಿಕ್ ಡ್ರೋನ್ ಅನ್ನು ವಶಪಡಿಸಿಕೊಂಡಿವೆ.
ಗುಪ್ತಚರ ಇಲಾಖೆಯ ನಿಖರವಾದ ಮಾಹಿತಿ ಮೇರೆಗೆ ಬಿಎಸ್‌ಎಫ್ ಸಿಬ್ಬಂದಿ, ಪಂಜಾಬ್ ಪೊಲೀಸರೊಂದಿಗೆ ಸೇರಿ ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಫಜಿಲ್ಕಾ ಜಿಲ್ಲೆಯ ಹಜಾರ ರಾಮ್ ಸಿಂಗ್ ವಾಲಾ ಗ್ರಾಮದ ಪಕ್ಕದ ಕೃಷಿ ಹೊಲಗಳಲ್ಲಿ 552 ಗ್ರಾಂ ತೂಕದ ಒಂದು ಪ್ಯಾಕೆಟ್ ಹೆರಾಯಿನ್ ವಶಪಡಿಸಿಕೊಂಡಿದೆ.
ಮಾದಕವಸ್ತು ಕಳ್ಳಸಾಗಣೆ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ನವೆಂಬರ್ 6ರಂದು ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ 53 ಲಕ್ಷ ರೂ. ಮೌಲ್ಯದ ಮಾದಕ ವಸ್ತುವನ್ನು ವಶ ಪಡಿಸಿಕೊಂಡ ಪೊಲೀಸರು ಕಳ್ಳಸಾಗಣೆದಾರರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳಲ್ಲಿ ಬಿಷ್ಣಾದ ಲಾಸ್ವಾರಾ ಮೂಲದ ಮೊಹಮ್ಮದ್ ಬರು ಒಡೆತನದ ಮನೆ ಮತ್ತು ದನದ ಕೊಟ್ಟಿಗೆ ಸೇರಿವೆ. ಆತನಿಂದ 16,58,660 ರೂ. ನಗದು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬರು ಅಕ್ರಮವಾಗಿ ಸಂಪಾದಿಸಿದ ಆಸ್ತಿಗಳು ಮತ್ತು ವಶಪಡಿಸಿಕೊಂಡ ನಗದು ಒಟ್ಟು ಮೌಲ್ಯ ಸುಮಾರು 70 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಸಾಂಬಾ ಮತ್ತು ಜಮ್ಮು ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಬರು ವಿರುದ್ಧ ಮೂರು ಪ್ರಕರಣಗಳು ಸೇರಿದಂತೆ ಒಟ್ಟು 12 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಈ ಕುರಿತು ಎನ್‌ಡಿಪಿಎಸ್ ಕಾಯ್ದೆಯ ವಿಭಾಗಗಳ ಅಡಿಯಲ್ಲಿ ಬರಿ ಬ್ರಾಹ್ಮಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Viral Video: ಬೀದಿನಾಯಿಗಳ ಡೆಡ್ಲಿ ಅಟ್ಯಾಕ್‌ಗೆ ಪ್ರಾಣಪಕ್ಷಿಯೇ ಹಾರಿಹೋಯ್ತು! ಶಾಕಿಂಗ್ ವಿಡಿಯೊ ಫುಲ್ ವೈರಲ್
ಬೆಂಗಳೂರಿನಲ್ಲಿ ಡ್ರಗ್ಸ್ ಪತ್ತೆ
ವಿದೇಶದಿಂದ ರಾಜ್ಯಕ್ಕೆ ತರುತ್ತಿದ್ದ 52.87 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ದೇವನಹಳ್ಳಿಯ ವಿಮಾನ ನಿಲ್ದಾಣದಲ್ಲಿ ಅ. 29 ರಿಂದ ನ. 5ವರೆಗೆ ಪ್ರತ್ಯೇಕವಾಗಿ ನಡೆದ ಈ ಕಾರ್ಯಾಚರಣೆಯಲ್ಲಿ ಬ್ಯಾಂಕಾಕ್‌ನಿಂದ ಬಂದಿಳಿದ ನಾಲ್ವರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.