Ceasefire Violation: ಮತ್ತೆ ಪಾಕ್ ಕಿಡಿಗೇಡಿ ಕೃತ್ಯ; ಭಾರತದ ಗಡಿ ಮೇಲೆ ಅಪ್ರಚೋದಿತ ಗುಂಡಿನ ದಾಳಿ
Pakistan Violates LoC Ceasefire:ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿ ನಂತರ ಗಡಿಯಲ್ಲಿ ಪಾಕಿಸ್ತಾನ ಸೇನೆಯ ಉಪಟಳ ಮತ್ತೆ ಹೆಚ್ಚಾಗಿದೆ. ಇಂದು ಮತ್ತೆ ಪಾಕ್ ಸೇನೆ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ದಾಳಿ ನಡೆಸಿದ್ದು, ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.


ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಪ್ರವಾಸಿ ತಾಣವೊಂದರಲ್ಲಿ 26 ನಾಗರಿಕರನ್ನು ಬಲಿ ಪಡೆದ ಉಗ್ರರ ದಾಳಿ(Pahalagam Terror Attack) ನಂತರ ಪಾಕಿಸ್ತಾನ ಮತ್ತು ಭಾರತದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಇದೀಗ ಇದರ ಬೆನ್ನಲ್ಲೇ, ನಿನ್ನೆ ರಾತ್ರಿ ಪಾಕಿಸ್ತಾನಿ ಪಡೆಗಳು ನಿಯಂತ್ರಣ ರೇಖೆಯಾದ್ಯಂತ ಭಾರತೀಯ ಪೋಸ್ಟ್‌ಗಳ ಮೇಲೆ "ಅಪ್ರಚೋದಿತ" ಗುಂಡಿನ ದಾಳಿ(Ceasefire Violation) ನಡೆಸಿದೆ. ನಿನ್ನೆ ತಡರಾತ್ರಿಯೂ ಪಾಕಿಸ್ತಾನಿ ಪಡೆಗಳು ಭಾರತೀಯ ಸೇನೆಯನ್ನು ಕೆಣಕಿವೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿದೆ.
ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಭಾರತ ಮತ್ತು ಪಾಕಿಸ್ತಾನಿ ಸೈನ್ಯವನ್ನು ಬೇರ್ಪಡಿಸುವ ವಾಸ್ತವಿಕ ಗಡಿಯಾದ ನಿಯಂತ್ರಣ ರೇಖೆಯಾದ್ಯಂತದ ಅನೇಕ ಪೋಸ್ಟ್‌ಗಳಿಂದ ಗುಂಡಿನ ದಾಳಿ ನಡೆಸಲಾಗಿದೆ ಎಂದು ಭಾರತೀಯ ಸೇನೆ ವರದಿ ಮಾಡಿದೆ. ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತೀಯ ಪಡೆಗಳು ಸೂಕ್ತವಾಗಿ ಪ್ರತಿದಾಳಿ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Pahalgam terror Attack: ಪಹಲ್ಗಾಂ ದಾಳಿ ಸಮರ್ಥಿಸಿಕೊಂಡ ಮಂಗಳೂರಿನ ವ್ಯಕ್ತಿಯ ಬಂಧನ
ಇನ್ನು ಕಳೆದ ಎರಡು ದಿನಗಳ ಎರಡನೇ ದಾಳಿ ಇದಾಗಿದೆ. ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ (LOC) ಉದ್ದಕ್ಕೂ ಪಾಕಿಸ್ತಾನಿ ಪಡೆಗಳು ಭಾರತೀಯ ಪೋಸ್ಟ್‌ಗಳ ಮೇಲೆ ಗುರುವಾರ ತಡರಾತ್ರಿ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿರಲಿಲ್ಲ. ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಶುಕ್ರವಾರ ಶ್ರೀನಗರ ಮತ್ತು ಉಧಂಪುರಕ್ಕೆ ಭೇಟಿ ನೀಡಲಿರುವ ಕೆಲವೇ ಗಂಟೆಗಳ ಮೊದಲು ಈ ಘಟನೆ ನಡೆದಿತ್ತು.