ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ನರೇಂದ್ರ ಮೋದಿ ನಮ್ಮ ಆತ್ಮೀಯ ಸ್ನೇಹಿತ, ಭಾರತದ ಬೆಂಬಲ ಅವಿಸ್ಮರಣೀಯ": ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೆಚ್ಚುಗೆ

Benjamin Netanyahu: ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅತ್ಯಂತ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು ಎಂದು ಬಣ್ಣಿಸಿದ್ದು, ಭಾರತದ ಬೆಂಬಲ ಅವಿಸ್ಮರಣೀಯ ಎಂದು ಹೇಳಿದ್ದಾರೆ. ಭಾರತ–ಇಸ್ರೇಲ್ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ತಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಭಾರತದ ಬೆಂಬಲಕ್ಕೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಮೆಚ್ಚುಗೆ

ಬೆಂಜಮಿನ್ ನೆತನ್ಯಾಹು - ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) -

Profile
Sushmitha Jain Aug 4, 2026 8:42 PM

ನವದೆಹಲಿ, ಆ. 4: ಇಸ್ರೇಲ್ (Israel) ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು (PM Benjamin Netanyahu) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು "ನಮ್ಮ ಅತ್ಯಂತ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು" ಎಂದು ಬಣ್ಣಿಸಿದ್ದು, ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ತಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಹೇಳಿದ್ದಾರೆ. ಸೋಮವಾರ ಪ್ರಕಟವಾದ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಸ್ತುತ ಜಾಗತಿಕ ರಾಜಕೀಯ ಬೆಳವಣಿಗೆಗಳು ಹಾಗೂ ಇರಾನ್‌ ಸಂಘರ್ಷದಂತಹ ಸವಾಲುಗಳ ನಡುವೆ ಇಸ್ರೇಲ್‌ಗೆ ಹೊಸ ಜಾಗತಿಕ ಮೈತ್ರಿಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ಭಾರತದೊಂದಿಗಿನ ಸಂಬಂಧವನ್ನು ಮತ್ತಷ್ಟು ವಿಸ್ತರಿಸಲು ತಾವು ವಿಶೇಷ ಒತ್ತು ನೀಡುತ್ತಿರುವುದಾಗಿ ಹೇಳಿದರು.

"ನನ್ನ ಸ್ನೇಹಿತ ನರೇಂದ್ರ ಮೋದಿ ನಮ್ಮ ಅತ್ಯಂತ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು. ಭಾರತದೊಂದಿಗೆ ನಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ನಾನು ಹೆಚ್ಚಿನ ಹೂಡಿಕೆ ಮಾಡುತ್ತಿದ್ದೇನೆ" ಎಂದು ನೆತನ್ಯಾಹು ತಿಳಿಸಿದರು.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹೇಳಿಕೆ:



ಇದೇ ವೇಳೆ, "ಇಸ್ರೇಲ್ ವಿಶ್ವದಲ್ಲಿ ಏಕಾಂಗಿಯಾಗಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಭಾರತದಲ್ಲಿ ಇಸ್ರೇಲ್‌ಗೆ ಹಾಗೂ ನನಗೆ ವೈಯಕ್ತಿಕವಾಗಿ ದೊರೆಯುತ್ತಿರುವ ಬೆಂಬಲ ನಿಜಕ್ಕೂ ಅದ್ಭುತ" ಎಂದು ಅವರು ಹೇಳಿದರು. ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ನೆತನ್ಯಾಹು ಅವರ ಈ ಹೇಳಿಕೆಗಳು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಇತ್ತೀಚೆಗೆ ನೀಡಿದ್ದ "ಇಸ್ರೇಲ್‌ಗೆ ಉಳಿದಿರುವ ಏಕೈಕ ಶಕ್ತಿಶಾಲಿ ಮಿತ್ರ ರಾಷ್ಟ್ರ ಅಮೆರಿಕ" ಎಂಬ ಹೇಳಿಕೆಯ ಬೆನ್ನಲ್ಲೇ ಹೊರ ಬಿದ್ದಿದೆ. ವ್ಯಾನ್ಸ್ ಕೆಲವು ತಿಂಗಳಿಂದ ಇಸ್ರೇಲ್‌ಗೆ ಅಗತ್ಯವಿರುವ ಬಹುತೇಕ ರಕ್ಷಣಾ ಶಸ್ತ್ರಾಸ್ತ್ರಗಳನ್ನು ಅಮೆರಿಕವೇ ಒದಗಿಸುತ್ತಿದೆ ಎಂದು ಹೇಳಿದ್ದರು.

ಕೇಂದ್ರ ಸರ್ಕಾರದ 2.5 ಲಕ್ಷ ರುಪಾಯಿ ಮಾಸಿಕ ಆದಾಯದ ಭರವಸೆ; ವೈರಲ್ ಸುದ್ದಿಯ ಅಸಲಿಯತ್ತೇನು?

ಇದಕ್ಕೆ ಪರೋಕ್ಷ ಪ್ರತಿಕ್ರಿಯೆಯಂತೆ ಮಾತನಾಡಿದ ನೆತನ್ಯಾಹು, ʼʼ140 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಿಂದ ಇಸ್ರೇಲ್‌ಗೆ ಅಪಾರ ಬೆಂಬಲ ದೊರೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರತೀಯರು ಇಸ್ರೇಲ್‌ ಪರ ನಿಲುವು ಹೊಂದಿದ್ದಾರೆʼʼ ಎಂದು ಒತ್ತಿ ಹೇಳಿದರು.

ಇದಕ್ಕೂ ಮುನ್ನ ಫಾಕ್ಸ್ ನ್ಯೂಸ್‌ಗೆ ನೀಡಿದ್ದ ಸಂದರ್ಶನದಲ್ಲಿಯೂ ನೆತನ್ಯಾಹು, "ಭಾರತ ಒಂದು ಜಾಗತಿಕ ಶಕ್ತಿ. ಭಾರತದಿಂದ ನಮಗೆ ದೊರೆಯುತ್ತಿರುವ ಬೆಂಬಲ ಅತ್ಯಂತ ಮಹತ್ವದ್ದಾಗಿದೆ" ಎಂದು ಹೇಳಿದ್ದರು.

ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧ ಕಳೆದ ಕೆಲವು ವರ್ಷಗಳಲ್ಲಿ ಮತ್ತಷ್ಟು ಬಲಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬೆಂಜಮಿನ್ ನೆತನ್ಯಾಹು ನಡುವಿನ ವೈಯಕ್ತಿಕ ಸ್ನೇಹದ ಜತೆಗೆ ರಕ್ಷಣಾ, ಕೃಷಿ, ತಂತ್ರಜ್ಞಾನ, ನೀರಾವರಿ, ವ್ಯಾಪಾರ ಹಾಗೂ ಭದ್ರತಾ ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಹಕಾರ ಗಮನಾರ್ಹವಾಗಿ ವಿಸ್ತರಿಸಿದೆ. ಉಭಯ ರಾಷ್ಟ್ರಗಳ ನಾಯಕರು ಪರಸ್ಪರ ಭೇಟಿಗಳ ಮೂಲಕ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಬಲಪಡಿಸುವತ್ತ ನಿರಂತರ ಪ್ರಯತ್ನಿಸುತ್ತಿದ್ದಾರೆ.