Pawan Kalyan: ಬೆಂಕಿ ಅವಘಡದ ನಂತರ ಮಗನನ್ನು ಹೈದರಾಬಾದ್‌ಗೆ ಕರೆದುಕೊಂಡು ಬಂದ ಪವನ್ ಕಲ್ಯಾಣ್
Pawan Kalyan: ಸಿಂಗಾಪುರ ಶಾಲೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಗಾಯಗೊಂಡ ಪುತ್ರನನ್ನು ಕರೆದುಕೊಂಡು ನಟ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಹೈದರಾಬಾದ್ ಗೆ ಆಗಮಿಸಿದ್ದಾರೆ. ಸಿಂಗಾಪುರದಿಂದ ಹಿಂದಿರುಗುವಾಗ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಅವರು ತಮ್ಮ ಮಗ ಮಾರ್ಕ್ ನನ್ನು ತೋಳುಗಳಲ್ಲಿ ಎತ್ತಿಕೊಂಡು ಬರುತ್ತಿರುವುದು ಕಂಡುಬಂದಿದೆ.


ಹೈದರಾಬಾದ್: ಸಿಂಗಾಪುರ ಶಾಲೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ (Fire accident) ಗಾಯಗೊಂಡ ಪುತ್ರನನ್ನು ಕರೆದುಕೊಂಡು ನಟ (actor) ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ (Andhra Pradesh Deputy Chief Minister) ಪವನ್ ಕಲ್ಯಾಣ್ (pawan kalyan) ಅವರು ಹೈದರಾಬಾದ್‌ಗೆ ಆಗಮಿಸಿದ್ದಾರೆ. ಸಿಂಗಾಪುರದಿಂದ ಹಿಂದಿರುಗುವಾಗ ಹೈದರಾಬಾದ್ (Hyderabad ) ವಿಮಾನ ನಿಲ್ದಾಣದಲ್ಲಿ ಅವರು ತಮ್ಮ ಮಗ ಮಾರ್ಕ್ (Mark Shankar Pawanovich) ನನ್ನು ತೋಳುಗಳಲ್ಲಿ ಎತ್ತಿಕೊಂಡು ಬರುತ್ತಿರುವುದು ಕಂಡುಬಂದಿದೆ. ಇವರೊಂದಿಗೆ ಪತ್ನಿ ಅನ್ನಾ ಲೆಜ್ನೆವಾ ಅವರೂ ಕೂಡ ಇದ್ದರು. ಕಳೆದ ಸೋಮವಾರ ಸಿಂಗಾಪುರದ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದರಲ್ಲಿ ಪವನ್ ಕಲ್ಯಾಣ್ ಅವರ ಪುತ್ರ ಮಾರ್ಕ್ ಶಂಕರ್ ಪವನೋವಿಚ್ ಗಾಯಗೊಂಡಿದ್ದನು.
ಏಪ್ರಿಲ್ 7ರಂದು ಸಿಂಗಾಪುರದ ಶಾಲೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅದರಲ್ಲಿ ಮಾರ್ಕ್ ಸೇರಿದಂತೆ 19 ಮಂದಿ ಗಾಯಗೊಂಡಿದ್ದರು. ಒಬ್ಬಳು ಬಾಲಕಿ ಮಾತ್ರ ಮೃತಪಟ್ಟಿದ್ದಾಳೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಹಿತಿ ತಿಳಿದ ತಕ್ಷಣ ಪವನ್ ಕಲ್ಯಾಣ್ ಸಿಂಗಾಪುರಕ್ಕೆ ತೆರಳಿದ್ದರು. ಇದೀಗ ಪವನ್ ಅವರ ಪುತ್ರ ಮಾರ್ಕ್ ಶಂಕರ್ ಪವನೋವಿಚ್ ಸಂಪೂರ್ಣ ಚೇತರಿಸಿಕೊಂಡಿದ್ದರಿಂದ ಆತನನ್ನು ಕರೆದುಕೊಂಡು ಪವನ್ ಕಲ್ಯಾಣ್ ಸಿಂಗಾಪುರದಿಂದ ಹೈದರಾಬಾದ್ ನಲ್ಲಿರುವ ಮನೆಗೆ ಆಗಮಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಕೆಮರಾ ಕಣ್ಣಿಗೆ ಪುತ್ರನೊಂದಿಗೆ ಕಾಣಿಸಿಕೊಂಡ ಪವನ್ ಕಲ್ಯಾಣ್ ಮಗನನ್ನು ಬಿಗಿಯಾಗಿ ಹಿಡಿದುಕೊಂಡಿದ್ದರು. ಅವರ ಜೊತೆ ಪತ್ನಿ ಅನ್ನಾ ಲೆಜ್ನೆವಾ ಮತ್ತು ಮಗಳು ಪೋಲೆನಾ ಅಂಜನಾ ಪವನೋವಾ ಕೂಡ ಇದ್ದರು. ವಿಮಾನ ನಿಲ್ದಾಣದಲ್ಲಿ ಅವರು ಕಾಣಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಂಗಾಪುರದ ರಿವರ್ ವ್ಯಾಲಿ ಪ್ರದೇಶದ ಶಾಲೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಕಟ್ಟಡದ ಎರಡು ಮತ್ತು ಮೂರನೇ ಮಹಡಿಗಳು ಸಂಪೂರ್ಣವಾಗಿ ಹೊತ್ತಿ ಉರಿದಿದೆ ಎನ್ನಲಾಗಿದೆ.
ಪವನ್ ಕಲ್ಯಾಣ್ ಮತ್ತು ಪುತ್ರನ ವಿಡಿಯೊ ಇಲ್ಲಿದೆ
ಅಗ್ನಿಶಾಮಕ ದಳದ ಸಿಬ್ಬಂದಿ ಕಿಟಕಿಗಳನ್ನು ಒಡೆದು ಹೊಗೆಯಿಂದ ತುಂಬಿದ ತರಗತಿ ಕೋಣೆಗಳಲ್ಲಿ ಸಿಕ್ಕಿ ಹಾಕಿ ಭಯಭೀತರಾಗಿದ್ದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದಿದ್ದರು. ಈ ಬೆಂಕಿ ಅವಘಡದಲ್ಲಿ ಒಂದು ಮಗು ಸಾವನ್ನಪ್ಪಿದ್ದು, ಮಾರ್ಕ್ ಶಂಕರ್ ಸೇರಿದಂತೆ 19 ಮಂದಿ ಗಾಯಗೊಂಡಿದ್ದರು. ಸಿಂಗಾಪುರ ನಾಗರಿಕ ರಕ್ಷಣಾ ಪಡೆ (SCDF) ಸೇರಿದಂತೆ ತುರ್ತು ಸಿಬ್ಬಂದಿ ಬಳಿಕ ಬೆಂಕಿಯನ್ನು ನಿಯಂತ್ರಿಸಿದ್ದರು.
ಮೂರು ಅಂತಸ್ತಿನ ರಿವರ್ ವ್ಯಾಲಿ ಶಾಲೆಯಲ್ಲಿ ಸುಮಾರು 30 ಮಕ್ಕಳು ಅಡುಗೆ, ರಂಗಭೂಮಿ ಮತ್ತು ರೊಬೊಟಿಕ್ಸ್ ತರಗತಿಗಳಿಗೆ ಹಾಜರಾಗುತ್ತಿದ್ದರು ಎಂದು ಸಿಂಗಾಪುರದ ಗೃಹ ಸಚಿವ ಕೆ. ಷಣ್ಮುಗಮ್ ದೃಢಪಡಿಸಿದ್ದಾರೆ. ಘಟನೆಯಲ್ಲಿ ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜ್ನೆವಾ ಅವರ ಕಿರಿಯ ಪುತ್ರ ಮಾರ್ಕ್ ಶಂಕರ್ ನ ತೋಳು ಮತ್ತು ಕಾಲುಗಳಿಗೆ ಸುಟ್ಟ ಗಾಯಗಳಾಗಿದ್ದು, ಹೊಗೆಯಿಂದಾಗಿ ಉಸಿರಾಟದ ತೊಂದರೆ ಉಂಟಾಗಿತ್ತು. ಹೀಗಾಗಿ ಅವನಿಗೆ ಅಲ್ಲೇ ವೈದ್ಯಕೀಯ ಚಿಕಿತ್ಸೆ ನೀಡಿ ಈಗ ಹೈದರಾಬಾದ್ ಗೆ ಮರಳಿ ಕರೆದುಕೊಂಡು ಬಂದಿದ್ದಾರೆ.