ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Kisan: ಪಿಎಂ ಕಿಸಾನ್ 21ನೇ ಕಂತು ಬಿಡುಗಡೆ ಯಾವಾಗ? ಇಲ್ಲಿದೆ ನೋಡಿ ಡಿಟೇಲ್ಸ್‌

PM Kisan 21st Installment: ರೈತರಿಗೆ ಆರ್ಥಿಕ ಸವಾಲುಗಳನ್ನು ಎದುರಿಸಲು ಕೇಂದ್ರ ಸರ್ಕಾರವು ಆರಂಭಿಸಿದ್ದ ಪ್ರಧಾನ ಮಂತ್ರಿ ಕಿಸಾನ್ ಯೋಜನೆ 21ನೇ ಕಂತಿನ ಹಣ ಬಿಡುಗಡೆ ಶೀಘ್ರದಲ್ಲೇ ಆಗಲಿದೆ. ದೇಶಾದ್ಯಂತ ಲಕ್ಷಾಂತರ ರೈತರು ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ದೀಪಾವಳಿಗೂ ಮುನ್ನವೇ ಈ ಹಣ ಬರುತ್ತದೆ ಎಂದುಕೊಂಡು ನಿರಾಸೆ ಅನುಭವಿಸಿದ್ದ ರೈತರಿಗೆ ಇದೀಗ ಶುಭ ಸುದ್ದಿ ಸಿಕ್ಕಿದೆ. ಈ ವಾರಾಂತ್ಯದೊಳಗೆ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಶೀಘ್ರದಲ್ಲೇ  ಪಿಎಂ ಕಿಸಾನ್ 21ನೇ ಕಂತು ಬಿಡುಗಡೆ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 21ನೇ ಕಂತಿನ ಹಣ ಶೀಘ್ರದಲ್ಲೇ ರೈತರ ಖಾತೆಗಳಿಗೆ ಜಮಾ ಆಗಲಿದೆ (ಸಂಗ್ರಹ ಚಿತ್ರ) -

ಬೆಂಗಳೂರು: ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 21ನೇ ಕಂತಿನ ಹಣ (Prime Minister Kisan 21st Installment) ಶೀಘ್ರದಲ್ಲೇ ರೈತರ ಕೈಸೇರಲಿದೆ. ಆರ್ಥಿಕ ಸವಾಲುಗಳನ್ನು ಎದುರಿಸಲು ರೈತರಿಗಾಗಿ ಕೇಂದ್ರ ಸರ್ಕಾರ (Ministry of Agriculture and Farmers Welfare ) ಪ್ರಾರಂಭಿಸಿದ್ದ ಪ್ರಧಾನ ಮಂತ್ರಿ (Prime Minister) ಕಿಸಾನ್ ಯೋಜನೆಯಡಿಯಲ್ಲಿ (PM Kisan Yojana) 2,000 ರೂ. ಅನ್ನು ನೀಡಲಾಗುತ್ತದೆ. ದೀಪಾವಳಿಗೂ ಮುನ್ನವೇ ರೈತರ ಕೈಸೇರಬೇಕಿದ್ದ ಹಣ ಇದೀಗ ಈ ವಾರಂತ್ಯದೊಳಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 21ನೇ ಕಂತಿನ ಹಣ ಶೀಘ್ರದಲ್ಲೇ ರೈತರ ಖಾತೆಗಳಿಗೆ ಜಮಾ ಆಗಲಿದೆ. ಹಲವು ರಾಜ್ಯಗಳಲ್ಲಿ ಈಗಾಗಲೇ ಈ ಹಣವು ರೈತರ ಖಾತೆಗಳಿಗೆ ವರ್ಗಾಯಿಸಿದೆ. ವಿಶೇಷವಾಗಿ ಪ್ರವಾಹ ಅಥವಾ ಭೂಕುಸಿತದಿಂದ ಪೀಡಿತ ಪ್ರದೇಶಗಳ ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ 2,000 ರೂ. ನ 21ನೇ ಕಂತಿನ ಹಣವನ್ನು ವಿತರಿಸಲಾಗಿದೆ.

ಸರ್ಕಾರಿ ಮೂಲಗಳ ಮಾಹಿತಿ ಪ್ರಕಾರ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 2,000 ರೂ. ಅನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದರೆ ಇನ್ನೂ ಯಾವುದೇ ಅಧಿಕೃತ ದಿನಾಂಕವನ್ನು ಘೋಷಣೆ ಮಾಡಲಾಗಿಲ್ಲ.

ಇದನ್ನೂ ಓದಿ: Women's World Cup: ವಿಶ್ವ ಗೆದ್ದ ಭಾರತದ ಮಹಿಳಾ ತಂಡಕ್ಕೆ ಭರ್ಜರಿ ಗಿಫ್ಟ್ ಘೋಷಿಸಿದ ಟಾಟಾ ಮೋಟಾರ್ಸ

ಯಾರಿಗೆ ಸಿಕ್ಕಿದೆ?

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 21ನೇ ಕಂತಿನ ಹಣ ಈಗಾಗಲೇ ಕೆಲವು ರಾಜ್ಯಗಳ ರೈತರಿಗೆ ಮುಂಗಡವಾಗಿ ಪಾವತಿಸಲಾಗಿದೆ. ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡದ ಸುಮಾರು 2.7 ಮಿಲಿಯನ್ ರೈತರ ಖಾತೆಗಳಿಗೆ 2,000 ರೂ.ಗಳನ್ನು ಈಗಾಗಲೇ ವರ್ಗಾಯಿಸಲಾಗಿದೆ. ಇತ್ತೀಚಿನ ಪ್ರವಾಹದಿಂದಾಗಿ ಈ ರಾಜ್ಯಗಳ ರೈತರು ಭಾರಿ ಪ್ರಮಾಣದ ನಷ್ಟವನ್ನು ಅನುಭವಿಸಿದ್ದರಿಂದ ಇಲ್ಲಿಗೆ ಪರಿಹಾರವಾಗಿ ಮುಂಗಡ ಕಂತನ್ನು ಬಿಡುಗಡೆ ಮಾಡಲಾಗಿದೆ.

ಇದರೊಂದಿಗೆ ಜಮ್ಮು ಮತ್ತು ಕಾಶ್ಮೀರದ ರೈತರು ಕೂಡ 21ನೇ ಕಂತಿನ ಹಣವನ್ನು ಸ್ವೀಕರಿಸಿದ್ದಾರೆ. ಅಕ್ಟೋಬರ್ 7ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು 85,000ಕ್ಕೂ ಹೆಚ್ಚು ಮಹಿಳಾ ರೈತರು ಸೇರಿದಂತೆ 8.55 ಲಕ್ಷ ರೈತರ ಖಾತೆಗಳಿಗೆ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ 171 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾರೆ. ಇಲ್ಲಿಯವರೆಗೆ ಈ ಯೋಜನೆಯಡಿ ಜಮ್ಮು ಮತ್ತು ಕಾಶ್ಮೀರದ ರೈತರಿಗೆ ಒಟ್ಟು 4,052 ಕೋಟಿ ರೂ.ಗಳನ್ನು ವಿತರಿಸಲಾಗಿದೆ.

2019 ರಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 20ನೇ ಕಂತುಗಳನ್ನು ಈಗಾಗಲೇ ರೈತರಿಗೆ ನೀಡಲಾಗಿದೆ. ಈ ಯೋಜನೆಯಡಿಯಲ್ಲಿ ರೈತರಿಗೆ ವಾರ್ಷಿಕವಾಗಿ 6,000 ರೂ. ಗಳನ್ನು ನೀಡಲಾಗುತ್ತದೆ. ಈ ಮೊತ್ತವನ್ನು ಮೂರು ಕಂತುಗಳಲ್ಲಿ ವಿತರಿಸಲಾಗುತ್ತದೆ, ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ. ಗಳ ಸಮಾನ ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ.

ಇದನ್ನೂ ಓದಿ: Mumbai Monorail: ಹಳಿ ತಪ್ಪಿದ ಮೋನೋ ರೈಲು- ಮೋಟಾರ್ ಮ್ಯಾನ್‌ಗೆ ಗಾಯ, ಇಲ್ಲಿದೆ ವಿಡಿಯೊ

ಇ-ಕೆವೈಸಿ ಪೂರ್ಣಗೊಳಿಸಿದ್ದೀರಾ?

ಕಿಸಾನ್ ಸಮ್ಮಾನ್ ಯೋಜನೆಯ ಪ್ರಯೋಜನ ಪಡೆಯಲು ಇ-ಕೆವೈಸಿ ಅನ್ನು ಪೂರ್ಣಗೊಳಿಸುವುದು ಬಹುಮುಖ್ಯವಾಗಿದೆ. ಇದನ್ನು ಮಾಡದೇ ಇದ್ದರೆ ಕೂಡಲೇ ಆನ್‌ಲೈನ್ ಅಥವಾ ಸಿಎಸ್‌ಸಿ ಕೇಂದ್ರದ ಮೂಲಕ ಪೂರ್ಣಗೊಳಿಸಬಹುದು. ಇದರೊಂದಿಗೆ ಆಧಾರ್ ಅನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಕೂಡ ಮಾಡಬೇಕು. ಇದಕ್ಕಾಗಿ ಪಿಎಂ ಕಿಸಾನ್ ವೆಬ್‌ಸೈಟ್ (pmkisan.gov.in) ಗೆ ಭೇಟಿ ನೀಡಿ ಒಟಿಪಿ ಬಳಸಿ ಇ-ಕೆವೈಸಿ ಪೂರ್ಣಗೊಳಿಸಬಹುದಾಗಿದೆ.

ಆಧಾರ್ ಅನ್ನು ತಮ್ಮ ಮೊಬೈಲ್‌ಗೆ ಲಿಂಕ್ ಮಾಡದವರು ಸಾಮಾನ್ಯ ಸೇವಾ ಕೇಂದ್ರಕ್ಕೆ (ಸಿಎಸ್‌ಸಿ) ಹೋಗಿ ಬೆರಳಚ್ಚು ಅಥವಾ ಮುಖದ ದೃಢೀಕರಣದ ಮೂಲಕ ಪೂರ್ಣಗೊಳಿಸಬಹುದಾಗಿದೆ.