ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪೈಲಟ್ ಸ್ಮಿತ್ ಮಚ್ಚಾರ್‌ ಕುಟುಂಬದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ: ಕ್ಯಾಪ್ಟನ್ ಧೈರ್ಯ, ಸಮಯಪ್ರಜ್ಞೆಗೆ ಮೆಚ್ಚುಗೆ

PM Speaks to Pilot Machchhar’s Family: ಪೈಲಟ್‌ ಸ್ಮಿತ್‌ ಮಚ್ಚಾರ್‌ ಕುಟುಂಬದೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಶ್ಲಾಘಿಸಿದರು. ತಾವು ಮಚ್ಚಾರ್‌ ಅವರ ತಂದೆ-ತಾಯಿ ಮತ್ತು ಪತ್ನಿಯೊಂದಿಗೆ ಮಾತನಾಡಿರುವುದಾಗಿ ತಿಳಿಸಿದರು. ಅಲ್ಲದೆ, ಪೈಲಟ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ದೇಶದ ಜನರು ಪ್ರಾರ್ಥಿಸುವಂತೆ ಅವರು ಮನವಿ ಮಾಡಿದರು.

ಸ್ಮಿತ್‌ ಮಚ್ಚಾರ್‌ ಮತ್ತು ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ನವದೆಹಲಿ, ಅ. 1: ಪ್ರಧಾನಿ ನರೇಂದ್ರ ಮೋದಿ (PM Narendra Modi) 180 ಜನರ ಜೀವ ಉಳಿಸಿದ ಫ್ಲೈದುಬೈ ವಿಮಾನದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ (Smit Machchhar) ಅವರ ಪತ್ನಿ ಮತ್ತು ಪೋಷಕರೊಂದಿಗೆ ಮಾತನಾಡಿದರು. ಫ್ಲೈದುಬೈ ವಿಮಾನದಲ್ಲಿ ಇಸ್ರೇಲ್‌ನ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ ನೂರಾರು ಪ್ರಯಾಣಿಕರ ಜೀವಗಳನ್ನು ಉಳಿಸಲು ಸಹಾಯ ಮಾಡಿದ ಅವರ ಧೈರ್ಯವನ್ನು ಶ್ಲಾಘಿಸಿದರು. ದುಬೈಯಿಂದ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ವಿಮಾನ FZ1073ರ ಕ್ಯಾಪ್ಟನ್ ಮಚ್ಚಾರ್‌, ಪ್ರಸ್ತುತ ಸೌದಿ ಅರೇಬಿಯಾದ ತಬುಕ್‌ನಲ್ಲಿರುವ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಚ್ಚಾರ್‌ ಕುಟುಂಬದೊಂದಿಗೆ ಮಾತನಾಡಿದ ಪ್ರಧಾನಿ ಪೈಲಟ್ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಶ್ಲಾಘಿಸಿದರು. ಜತೆಗೆ, ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿಗೆ ಅಗತ್ಯವಿರುವ ಎಲ್ಲ ರೀತಿಯ ನೆರವನ್ನು ಭಾರತೀಯ ರಾಯಭಾರ ಕಚೇರಿಗಳು ಒದಗಿಸುತ್ತಿವೆ ಎಂದು ಒತ್ತಿ ಹೇಳಿದರು.

ಕೇಂದ್ರ ಲೋಕಸೇವಾ ಆಯೋಗದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಮೋದಿ, ತಾವು ಮಚ್ಚಾರ್‌ ಅವರ ತಂದೆ-ತಾಯಿ ಮತ್ತು ಪತ್ನಿಯೊಂದಿಗೆ ಮಾತನಾಡಿರುವುದಾಗಿ ತಿಳಿಸಿದರು. ಅಲ್ಲದೆ, ಪೈಲಟ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ದೇಶದ ಜನರು ಪ್ರಾರ್ಥಿಸುವಂತೆ ಅವರು ಮನವಿ ಮಾಡಿದರು.

ಫ್ಲೈದುಬೈ ಮೇಲಿನ ದಾಳಿಯಲ್ಲಿ ಇರಾನ್ ಕೈವಾಡ ? ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದೇನು?

“ಭಾರತದ ಪೈಲಟ್ ಸ್ಮಿತ್‌ ತಮ್ಮ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಪ್ರದರ್ಶಿಸಿದ್ದಾರೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ, ಒಬ್ಬ ಭಾರತೀಯ 9/11 ರೀತಿಯ ದಾಳಿಯನ್ನು ತಡೆಯಲು ಸಹಾಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ಯಾಪ್ಟನ್‌ ಸ್ಮಿತ್‌ ಬಗ್ಗೆ ನಮಗೆ ಹೆಮ್ಮೆ ಇದೆ. ನಾನು ಅವರ ತಂದೆ-ತಾಯಿ ಮತ್ತು ಪತ್ನಿಯೊಂದಿಗೆ ಮಾತನಾಡಿದ್ದೇನೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಡೀ ಜಗತ್ತು ಅವರ ಬಗ್ಗೆ ಹೆಮ್ಮೆಪಡುತ್ತಿದೆ. ಸ್ಮಿತ್‌ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ದೇಶದ ಜನರು ಪ್ರಾರ್ಥಿಸಬೇಕು ಎಂದು ನಾನು ಮನವಿ ಮಾಡುತ್ತೇನೆ” ಎಂಬುದಾಗಿ ಪ್ರಧಾನಿ ಹೇಳಿದರು.

ಫ್ಲೈದುಬೈ ವಿಮಾನದಲ್ಲಿ ಏನಾಯಿತು?

ವಿಮಾನ ಹಾರಾಟದ ಸಮಯದಲ್ಲಿ ಸಹ-ಪೈಲಟ್‌ನಿಂದ ಹಲ್ಲೆಗೊಳಗಾದ ಭಾರತೀಯ ಸ್ಮಿತ್ ಮಚ್ಚಾರ್‌ ಗಂಭೀರವಾಗಿ ಗಾಯಗೊಂಡರು. ಅವರು ಗಂಭೀರ ಗಾಯಗೊಂಡರೂ ಸಹ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಪ್ರಯಾಣಿಕರು ಮತ್ತು ಸಿಬ್ಬಂದಿ ಕಾಕ್‌ಪಿಟ್‌ಗೆ ಪ್ರವೇಶಿಸಲು ಮತ್ತು ದಾಳಿಕೋರನನ್ನು ಹಿಡಿಯಲು ಸಾಧ್ಯವಾಯಿತು. ನಂತರ ವಿಮಾನವನ್ನು ಸೌದಿ ಅರೇಬಿಯಾದ ತಬುಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು.

ಸಹ ಪೈಲಟ್‌ ಕಾಕ್‌ಪಿಟ್‌ನಲ್ಲಿ ಮಚ್ಚಾರ್‌ ಅವರ ಮೇಲೆ ಹಲ್ಲೆ ನಡೆಸಿದ ನಂತರ ವಿಮಾನವು ಏಕಾಏಕಿಯಾಗಿ ಇಳಿಯಲು ಆರಂಭಿಸಿತು. ಪ್ರಯಾಣಿಕರು ಮಧ್ಯ ಪ್ರವೇಶಿಸಿ, ಹಲ್ಲೆ ನಡೆಸುತ್ತಿದ್ದ ವ್ಯಕ್ತಿಯನ್ನು ನಿಯಂತ್ರಿಸಿದರು. ಬಳಿಕ ವಿಮಾನದಲ್ಲಿದ್ದ ಹೆಚ್ಚುವರಿ ಪೈಲಟ್‌ಗಳು ನಿಯಂತ್ರಣವನ್ನು ಮರಳಿ ಪಡೆದು, ಸುರಕ್ಷಿತವಾಗಿ ಲ್ಯಾಂಡಿಂಗ್‌ ಮಾಡಿದರು.

ಮಚ್ಚಾರ್‌ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಓಮನ್‌ ಮೂಲದ ಪೈಲಟ್‌ನ ಹೆಸರನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ಈ ಘಟನೆಯ ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಅವರ ಗುರುತನ್ನು ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ.

9/11 ಮಾದರಿ ದಾಳಿ ಸಂಚು ವಿಫಲಗೊಳಿಸಿ 180 ಪ್ರಯಾಣಿಕರ ಜೀವ ಉಳಿಸಿದ ಫ್ಲೈದುಬೈ ವಿಮಾನದ ಭಾರತೀಯ ಪೈಲಟ್‌

ಕ್ಯಾಪ್ಟನ್‌ ಸ್ಮಿತ್‌ ಅವರ ಧೈರ್ಯಕ್ಕೆ ನಾಯಕರ ಶ್ಲಾಘನೆ

ಈ ಘಟನೆ ಬಳಿಕ ಮಚ್ಚಾರ್‌ ಅವರ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿವಿಧ ರಾಜಕೀಯ ಪಕ್ಷಗಳ ನಾಯಕರು ಅವರ ಕಾರ್ಯವನ್ನು ಶ್ಲಾಘಿಸಿ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ದೇಶವು ಮಚ್ಚಾರ್‌ ಅವರ ಧೈರ್ಯ, ಸ್ಥೈರ್ಯಕ್ಕೆ ಹೆಮ್ಮೆಪಡುತ್ತದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ಗಣ್ಯರು ಮಚ್ಚಾರ್‌ ಅವರನ್ನು ಶ್ಲಾಘಿಸಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಭಾರತೀಯ ಪೈಲಟ್ ಅನ್ನು ಹೊಗಳಿದ್ದಾರೆ. “ಅಸಾಧಾರಣ ಧೈರ್ಯ ಪ್ರದರ್ಶಿಸಿದ ಭಾರತೀಯ ಪೈಲಟ್‌ ಕ್ಯಾಪ್ಟನ್‌ ಸ್ಮಿತ್‌ ಮಚ್ಚಾರ್‌ ಅವರಿಗೆ ನನ್ನ ವಂದನೆಗಳು. ಚಾಕುವಿನಿಂದ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರೂ ಅವರು ಪ್ರತಿರೋಧ ತೋರಿ, ಹೋರಾಡಿದರು. ಕಾಕ್‌ಪಿಟ್‌ನ ಬಾಗಿಲು ತೆರೆದರು. ಇದರಿಂದ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿಗೆ ದಾಳಿಕೋರನನ್ನು ನಿಯಂತ್ರಿಸಲು ಸಾಧ್ಯವಾಯಿತು. ಆ ಮೂಲಕ ಸಂಭವಿಸಬಹುದಾಗಿದ್ದ ಭೀಕರ ದುರಂತ ತಪ್ಪಿತು” ಎಂದು ನೆತನ್ಯಾಹು ಹೇಳಿದ್ದಾರೆ.

ಅಂದಹಾಗೆ, ಮಚ್ಚಾರ್‌ 13 ವರ್ಷಕ್ಕೂ ಹೆಚ್ಚು ವಾಣಿಜ್ಯ ವಿಮಾನಯಾನ ಅನುಭವ ಹೊಂದಿರುವ ಅನುಭವಿ ಪೈಲಟ್‌. ಅವರು ಸುಮಾರು 9,750 ಗಂಟೆಗಳ ಕಾಲ ವಿಮಾನ ಹಾರಾಟ ನಡೆಸಿದ್ದಾರೆ. ಫ್ಲೈದುಬೈಗೆ ಸೇರುವ ಮೊದಲು ಅವರು 11 ವರ್ಷಕ್ಕೂ ಹೆಚ್ಚು ಕಾಲ ಸ್ಪೈಸ್‌ಜೆಟ್‌ನಲ್ಲಿ ಕೆಲಸ ಮಾಡಿದ್ದರು. ಅಲ್ಲಿ ಅವರು ಲೈನ್‌ ಟ್ರೈನಿಂಗ್‌ ಕ್ಯಾಪ್ಟನ್‌ ಆಗಿ ಸೇವೆ ಸಲ್ಲಿಸಿದ್ದರು.