ನವದೆಹಲಿ, ಡಿ. 15: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಇಂದಿನಿಂದ (ಡಿಸೆಂಬರ್ 15) ಡಿಸೆಂಬರ್ 18ರವರೆಗೆ ವಿದೇಶ ಪ್ರವಾಸ (Foreign Trip)ದಲ್ಲಿರಲಿದ್ದಾರೆ. ಈ ಬಾರಿ ಜೋರ್ಡಾನ್ (Jordan), ಇಥಿಯೋಪಿಯಾ (Ethiopia) ಮತ್ತು ಒಮಾನ್ (Oman)ಗೆ ಭೇಟಿ ನೀಡಲಿದ್ದಾರೆ. ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ ಅಂತಿಮ ಸ್ವರೂಪ ನೀಡುವುದು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದು ಈ ಪ್ರವಾಸದ ಪ್ರಮುಖ ಗುರಿ. ಅದರಲ್ಲೂ ವಿಶೇಷವಾಗಿ ವ್ಯಾಪಾರ, ರಕ್ಷಣಾ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಪ್ರಧಾನಿ ತಮ್ಮ ಪ್ರಯಾಣ ಪೂರ್ವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಜೋರ್ಡಾನ್‌ನ ಹಾಶಿಮೈಟ್ ಸಾಮ್ರಾಜ್ಯ, ಫೆಡರಲ್ ಡೆಮೊಕ್ರಾಟಿಕ್ ರಿಪಬ್ಲಿಕ್ ಆಫ್ ಇಥಿಯೋಪಿಯಾ ಹಾಗೂ ಒಮಾನ್‌ನ ಸಲ್ತಾನೇಟ್- ಈ ಮೂರು ರಾಷ್ಟ್ರಗಳ ಪ್ರವಾಸಕ್ಕೆ ನಾನು ಹೊರಟಿದ್ದೇನೆ. ಈ ದೇಶಗಳೊಂದಿಗೆ ಭಾರತಕ್ಕೆ ಶತಮಾನಗಳ ನಾಗರಿಕ ಸಂಬಂಧಗಳ ಜತೆಗೆ ಬಲವಾದ ಸಮಕಾಲೀನ ದ್ವಿಪಕ್ಷೀಯ ಸಹಕಾರವೂ ಇದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಮೊದಲು ಜೋರ್ಡಾನ್‌ಗೆ ಭೇಟಿ ನೀಡಲಿದ್ದು, ರಾಜ ಅಬ್ದುಲ್ಲ ದ್ವಿತೀಯ ಇಬ್ನ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ ಮೋದಿ ಈ ರಾಷ್ಟ್ರಕ್ಕೆ ತೆರಳುತ್ತಿದ್ದಾರೆ. “ಈ ಐತಿಹಾಸಿಕ ಭೇಟಿ ಭಾರತ–ಜೋರ್ಡಾನ್ ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿದೆʼʼ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಮೋದಿ ಜೋರ್ಡಾನ್‌ನಲ್ಲಿ ರಾಜ ಅಬ್ದುಲ್ಲಾ II, ಪ್ರಧಾನ ಮಂತ್ರಿ ಜಾಫರ್ ಹಸನ್ ಹಾಗೂ ಕ್ರೌನ್ ಪ್ರಿನ್ಸ್ ಅಲ್ ಹುಸೇನ್ ಬಿನ್ ಅಬ್ದುಲ್ಲಾ ಅವರೊಂದಿಗೆ ವಿಸ್ತೃತ ಮಾತುಕತೆ ನಡೆಸಲಿದ್ದಾರೆ.
ಅಮ್ಮಾನ್‌ನಿಂದ ಪ್ರಧಾನಿ ಮೋದಿ ಇಥಿಯೋಪಿಯಾಗೆ ಪ್ರಯಾಣಿಸಲಿದ್ದು,ಅಲ್ಲಿನ ಪ್ರಧಾನ ಮಂತ್ರಿ ಅಬಿಯ್ ಅಹ್ಮದ್ ಅಲಿ ಅವರ ಆಹ್ವಾನದ ಮೇರೆಗೆ ಈ ಭೇಟಿ ನಡೆಯುತ್ತಿದೆ. ಇದು ಮೋದಿ ಅವರ ಇಥಿಯೋಪಿಯಾದ ಮೊದಲ ಅಧಿಕೃತ ಭೇಟಿ. ಪ್ರಯಾಣಕ್ಕೂ ಮುನ್ನ ಇಥಿಯೋಪಿಯಾದ ಬಗ್ಗೆ ಮಾತಾನಾಡಿರುವ ಮೋದಿ, ಆ ದೇಶವನ್ನು ಉಲ್ಲೇಖಿಸಿ ಸಕಾರಾತ್ಮಕವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಅಡಿಸ್ ಅಬಾಬಾ ಆಫ್ರಿಕನ್ ಯೂನಿಯನ್‌ನ ಕೇಂದ್ರ ಕಚೇರಿಯಾಗಿದೆ. 2023ರಲ್ಲಿ ಭಾರತದ ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ಆಫ್ರಿಕನ್ ಯೂನಿಯನ್ ಜಿ20ರ ಶಾಶ್ವತ ಸದಸ್ಯತ್ವವನ್ನು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಗೆ ಅವಹೇಳನ, ಕೊಡಗಿನಲ್ಲಿ ಮೂವರ ಸೆರೆ
ಇಥಿಯೋಪಿಯಾದಲ್ಲಿ ಮೋದಿ ಪ್ರಧಾನಿ ಅಬಿಯ್ ಅಹ್ಮದ್ ಅಲಿ ಅವರೊಂದಿಗೆ ವಿಸ್ತೃತ ಚರ್ಚೆ ನಡೆಸಲಿದ್ದು, ಅಲ್ಲಿನ ಭಾರತೀಯ ವಲಸಿಗರನ್ನೂ ಭೇಟಿಯಾಗಲಿದ್ದಾರೆ. ಜತೆಗೆ ಸಂಸತ್ತಿನ ಸಂಯುಕ್ತ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವ ಅವಕಾಶವೂ ನನಗೆ ದೊರೆಯಲಿದೆ ಎಂದು ಪ್ರಧಾನಿ ಹೇಳಿದ್ದಾರೆ. “ಭಾರತವನ್ನು ‘ಪ್ರಜಾಪ್ರಭುತ್ವದ ತಾಯಿ’ ಎಂದು ಪರಿಗಣಿಸುವ ನಮ್ಮ ಪಯಣ ಮತ್ತು ಭಾರತ–ಇಥಿಯೋಪಿಯಾ ಸಹಭಾಗಿತ್ವವು ಗ್ಲೋಬಲ್ ಸೌತ್‌ಗೆ ನೀಡಬಹುದಾದ ಮೌಲ್ಯಗಳ ಬಗ್ಗೆ ಮಾತಾನಾಡಲು ನಾನು ಆಸಕ್ತನಾಗಿದ್ದೇನೆʼʼ ಎಂದು ತಿಳಿಸಿದ್ದಾರೆ.
ಇನ್ನು ಕಡೆಯದಾಗಿ ಪ್ರವಾಸದ ಅಂತಿಮ ಹಂತದಲ್ಲಿ ಮೋದಿ ಒಮಾನ್‌ಗೆ ಭೇಟಿ ನೀಡಲಿದ್ದಾರೆ. ಭಾರತ ಮತ್ತು ಒಮಾನ್ ದ್ವಿಪಕ್ಷೀಯ ಸಂಬಂಧ 70 ವರ್ಷಗಳನ್ನು ಪೂರೈಸಿದ್ದು, ಇದರ ಸ್ಮರಣಾರ್ಥವಾಗಿ ಪ್ರಧಾನಿ ಮೋದಿ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ʼʼಈ ಭೇಟಿಯ ಭಾಗವಾಗಿ ಮಸ್ಕಾಟ್‌ನಲ್ಲಿ ಒಮಾನ್‌ನ ಸುಲ್ತಾನರೊಂದಿಗೆ ಚರ್ಚೆ ನಡೆಸಿ, ನಮ್ಮ ತಂತ್ರಾತ್ಮಕ ಸಹಭಾಗಿತ್ವ ಹಾಗೂ ವಾಣಿಜ್ಯ–ಆರ್ಥಿಕ ಸಂಬಂಧಗಳನ್ನು ಗಟ್ಟಿಗೊಳಿಸಲು ಪೂರಕ ಆಗುವಂತೆ ಮಾತುಕತೆ ನಡೆಸಲಿದ್ದೇನೆʼʼ ಎಂದು ಪ್ರಧಾನಿ ಹೇಳಿದ್ದಾರೆ.
ಅಲ್ಲದೆ ಒಮಾನ್‌ನಲ್ಲಿ ಭಾರತೀಯ ವಲಸಿಗರ ಸಮಾವೇಶವನ್ನೂ ಪ್ರಧಾನಿ ಮೋದಿ ಉದ್ದೇಶಿಸಿ ಮಾತನಾಡಲಿದ್ದಾರೆ. “ಒಮಾನ್‌ನ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿರುವ ಹಾಗೂ ನಮ್ಮ ದ್ವಿಪಕ್ಷೀಯ ಸಹಭಾಗಿತ್ವವನ್ನು ಬಲಪಡಿಸಿರುವ ಭಾರತೀಯ ಸಮುದಾಯವನ್ನು ಭೇಟಿಯಾಗಲಿರುವುದು ನನಗೆ ಸಂತೋಷ ತಂದಿದೆ” ಎಂದು ಅವರು ಹೇಳಿದ್ದಾರೆ.
ಈ ಮೂರು ರಾಷ್ಟ್ರಗಳ ಪ್ರವಾಸವು ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾ ಪ್ರದೇಶದ ದೇಶಗಳೊಂದಿಗೆ ಭಾರತದ ರಾಜತಾಂತ್ರಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶವನ್ನು ಸ್ಪಷ್ಟಪಡಿಸಲಿದೆ ಎಂಬ ಅಭಿಪ್ರಾಯವನ್ನು ಮೋದಿ ಹಂಚಿಕೊಂಡಿದ್ದಾರೆ.