ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಪೇಜಾವರ ಶ್ರೀ; ವಿಶ್ವೇಶ ತೀರ್ಥ ಶ್ರೀಪಾದರ ಜನ್ಮ ಶತಮಾನೋತ್ಸವದ ಪಂಚವಾರ್ಷಿಕ ಯೋಜನೆಯ ಲಾಂಛನ ಅನಾವರಣ

Narendra Modi: ಉಡುಪಿಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ದೆಹಲಿಯಲ್ಲಿ ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ 2031ರಲ್ಲಿ ನಡೆಯಲಿರುವ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಜನ್ಮ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಪಂಚವಾರ್ಷಿಕ ಯೋಜನೆಯ ಲಾಂಛನವನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಪೇಜಾವರ ಶ್ರೀ

ನರೇಂದ್ರ ಮೋದಿ ಮತ್ತು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು -

Ramesh Ballamoole
Ramesh Ballamoole Sep 22, 2026 11:07 PM

ದೆಹಲಿ, ಸೆ. 22: ಉಡುಪಿಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು (Sri Vishwaprasanna Tirtha Swamiji) ದೆಹಲಿಯಲ್ಲಿ ನಡೆಸುತ್ತಿರುವ ಇಂದ್ರಪ್ರಸ್ಥ ಚಾತುರ್ಮಾಸ್ಯ ವ್ರತದ ಸಮಾಪ್ತಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ 2031ರಲ್ಲಿ ನಡೆಯಲಿರುವ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಜನ್ಮ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಪಂಚವಾರ್ಷಿಕ ಯೋಜನೆಯ ಲಾಂಛನವನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು. ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಭೇಟಿಯ ವಿಚಾರವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ʼʼಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಇತರ ಗಣ್ಯರನ್ನು ಭೇಟಿಯಾದೆ. ಪದ್ಮವಿಭೂಷಣ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಜನ್ಮ ಶತಮಾನೋತ್ಸವ ಆಚರಣೆಯ ಲಾಂಛನವನ್ನು ಅನಾವರಣಗೊಳಿಸಲಾಯಿತು. ಭಕ್ತಿ, ಜ್ಞಾನ ಮತ್ತು ಸೇವೆಯಿಂದ ಕೂಡಿದ ಅವರ ಜೀವನವು ಅಸಂಖ್ಯಾತ ಜನರಿಗೆ ನಿರಂತರ ಸ್ಫೂರ್ತಿ. ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಕೈಗೊಳ್ಳಲಾಗುತ್ತಿರುವ ವಿವಿಧ ಚಟುವಟಿಕೆಗಳು ಅವರ ಉದಾತ್ತ ಆದರ್ಶಗಳನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲಿವೆʼʼ ಎಂದು ಮೋದಿ ಬರೆದುಕೊಂಡಿದ್ದಾರೆ.

ನರೇಂದ್ರ ಮೋದಿ ಅವರ ಎಕ್ಸ್‌ ಪೋಸ್ಟ್‌:



ಯಕ್ಷಗಾನ ರಾಜಕಿರೀಟ ಗೌರವ

ಇದೇ ವೇಳೆ ಸ್ವಾಮೀಜಿ ಕರಾವಳಿಯ ಪ್ರತೀಕ ಯಕ್ಷಗಾನದ ಸಾಂಪ್ರದಾಯಿಕ ರಾಜ ಕಿರೀಟವನ್ನು ಮೋದಿ ಅವರಿಗೆ ತೊಡಿಸಿದರು. ಜತೆಗೆ ಸ್ವರ್ಣ ಲೇಪಿತ ಕೃಷ್ಣನ ಪ್ರತಿಮೆ ಹಾಗೂ ಮಂತ್ರಾಕ್ಷತೆ ನೀಡಿದರು. ಮೋದಿ ಅವರ ಜನ್ಮ ದಿನದ ಅಂಗವಾಗಿ ವೇದವ್ಯಾಸ ಗುರುಕುಲದಲ್ಲಿ ನೆರವೇರಿಸಲಾಗಿದ್ದ ಹೋಮದ ಪ್ರಸಾದವನ್ನೂ ನೀಡಲಾಯಿತು. ಸದ್ಯ ಈ ಅಪೂರ್ವ ಭೇಟಿಯ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಅಕ್ಷರಾಭ್ಯಾಸಕ್ಕೆ ಪೇಜಾವರ ಶ್ರೀಗಳ ಆಶೀರ್ವಾದ; ನೂತನ ಕಟ್ಟಡ ಉದ್ಘಾಟನೆ

ನಾಳೆಯಿಂದ 2 ದಿನಗಳ ಚಿಂತನ ಶಿಬಿರ

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ದೆಹಲಿಯ 'ಸೇವಾ ತೀರ್ಥ'ದಲ್ಲಿ ಸೆಪ್ಟೆಂಬರ್ 23 ಮತ್ತು 24ರಂದು ಕೇಂದ್ರ ಸಚಿವ ಮಂಡಳಿಯ ಎರಡು ದಿನಗಳ ಚಿಂತನ ಶಿಬಿರ ನಡೆಯದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಹಿಂದಿನ ಸಮಾಲೋಚನಾ ಸಭೆಗಳಿಗಿಂತ ಭಿನ್ನವಾಗಿ, ಈ ನಿರ್ದಿಷ್ಟ ಅಧಿವೇಶನವು ಕೇವಲ ಸಂಪುಟ ದರ್ಜೆಯ ಸಚಿವರನ್ನು ಮಾತ್ರ ಒಳಗೊಂಡಿರಲಿದ್ದು, ಇದು ಸರ್ಕಾರದ ಅತ್ಯುನ್ನತ ಮಟ್ಟದಲ್ಲಿ ನಡೆಯಲಿರುವ ಅತ್ಯಂತ ಕೇಂದ್ರೀಕೃತ ಚರ್ಚೆಗಳಲ್ಲಿ ಒಂದಾಗಲಿದೆ.

ಪ್ರಧಾನಿ ಮೋದಿ ತಮ್ಮ ಕಚೇರಿಯಲ್ಲಿ ರಾಜ್ಯ ಸಚಿವರೊಂದಿಗೆ ಪ್ರತ್ಯೇಕ ಸರಣಿ ಸಭೆಗಳನ್ನು ನಡೆಸಿದ ಬೆನ್ನಲ್ಲೇ ಈ ಶಿಬಿರ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆಯು ಮಂತ್ರಿಮಂಡಲದ ಪ್ರತಿಯೊಂದು ಹಂತವನ್ನು ಒಳಗೊಂಡ ಒಂದು ವ್ಯವಸ್ಥಿತ ಹಾಗೂ ಹಂತ-ಹಂತದ ಪ್ರಕ್ರಿಯೆಯನ್ನು ಸೂಚಿಸಿದೆ. ಇದೀಗ ಕ್ಯಾಬಿನೆಟ್ ಸಚಿವರು ಕೂಡ ತಮ್ಮದೇ ಆದ ಪ್ರತ್ಯೇಕ ಎರಡು ದಿನಗಳ ಸಭೆಯಲ್ಲಿ ಪಾಲ್ಗೊಳ್ಳಲು ಸಿದ್ಧರಾಗಿದ್ದಾರೆ.

ರಾಮ ಮಂದಿರದಿಂದ ರಕ್ಷಣಾ ರಫ್ತುವರೆಗೆ: ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿನ 11 ಮಹತ್ವದ ಸಾಧನೆಗಳಿವು

ಸರ್ಕಾರಿ ಮೂಲಗಳ ಪ್ರಕಾರ, ಈ ಸಭೆಯು ಮೂರು ಪ್ರಮುಖ ಉದ್ದೇಶಗಳತ್ತ ಕೇಂದ್ರೀಕರಿಸಿದೆ: ಈಗಾಗಲೇ ನಡೆಯುತ್ತಿರುವ ಕೆಲಸಗಳ ಪ್ರಗತಿ ಪರಿಶೀಲನೆ, ಮುಂದಿನ ಕಾರ್ಯಯೋಜನೆಯ ಸಿದ್ಧತೆ ಹಾಗೂ 'ವಿಕಸಿತ ಭಾರತ 2047' ಯೋಜನೆಯ ಮುಂದಿನ ಹಂತದ ಸುಧಾರಣೆ ಮತ್ತು ಆದ್ಯತೆಗಳನ್ನು ಗುರುತಿಸುವುದು. ಒಟ್ಟಿನಲ್ಲಿ ಈ ಸಭೆ ಭಾರಿ ಕುತೂಹಲ ಮೂಡಿಸಿದೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.