T Devidas Column: ಪೇಜಾವರರ ಜನಪ್ರಿಯತೆಯ ವ್ಯಾಪ್ತಿ ಬಹುದೊಡ್ಡದು ಎಂದವರು ಅವರು !
ಪೇಜಾವರ ಶ್ರೀಗಳನ್ನು ಪರಮಪೂಜ್ಯರು ಎಂದು ಭಕ್ತಿಪೂರ್ಣ ಗೌರವದಿಂದ ಪಲಿಮಾರು ಶ್ರೀಗಳು, ಅದಮಾರು ಶ್ರೀಗಳು ಬಹಿರಂಗವಾಗಿ ಸಂಬೋಧಿಸಿ ದ್ದನ್ನು ಯಾರು ಕೇಳಿಲ್ಲ? ಪೇಜಾವರ ಶ್ರೀಗಳು ನಮ್ಮನ್ನಗಲಿದ ಸಂದರ್ಭದಲ್ಲಿ ಪೇಜಾವರ ದೇವರು ಎಂಬ ನನ್ನ ಲೇಖನವನ್ನು ಓದಿ ಬಹುವಾಗಿ ಮೆಚ್ಚಿ ‘ಚೆನ್ನಾಗಿ ಬರೆದಿದ್ದೀಯ’ ಎಂದು ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದ್ದರು.
-
ಮನದಾಳ
ಟಿ.ದೇವಿದಾಸ್
ಉಡುಪಿ ಶ್ರೀ ಅದಮಾರು ಮಠದ ಹಿಂದಿನ ಪರ್ಯಾಯ (ಅಂದರೆ 2020-2022ರ ಅವಧಿ) ಪೀಠಾ ರೋಹಣಕ್ಕೂ ಹತ್ತು ಹದಿನೈದು ದಿನಗಳ ಹಿಂದೆ ಮಠದ ಹಿರಿಯ ಪೀಠಾಧಿಪತಿಗಳಾದ ಶ್ರೀ ವಿಶ್ವ ಪ್ರಿಯತೀರ್ಥ ಶ್ರೀಪಾದರು ಮತ್ತು ನನ್ನ ನಡುವೆ ನಡೆದ ಒಂದು ಸಣ್ಣ ಮಾತುಕತೆಯ ಸಂದರ್ಭ ವನ್ನು ಇಲ್ಲಿ ದಾಖಲಿಸುತ್ತೇನೆ.
ಪರ್ಯಾಯ ಸರ್ವಜ್ಞ ಪೀಠವನ್ನು ಏರುವ ಯತಿಗಳು ನಾಡಿನ ಹಲವು ಭಾಗಗಳಿಗೆ ಭೇಟಿ ಕೊಡುವುದು ಪರಂಪರೆ ಮತ್ತು ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ನಡೆಯುವಂಥ ಪುಣ್ಯ ಸಂಪಾದನೆಯ ಸತ್ಕಾರ್ಯ. ಹಾಗೆ ಭೇಟಿ ನೀಡಿದ ಪ್ರದೇಶಗಳಲ್ಲಿ ನಾಗರಿಕ ಅಭಿವಂದನೆ ಹಾಗೂ ಸಂಮಾನಗಳಿಗೆ ಪರ್ಯಾಯ ಸ್ವೀಕರಿಸುವ ಯತಿಗಳು ಭಾಜನರಾಗುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ.
ಹೀಗೆ, ಪುಣ್ಯಕ್ಷೇತ್ರಗಳಿಗೆ, ಆಹ್ವಾನಿತ ಸ್ಥಳಗಳಿಗೆ ಭೇಟಿಯನ್ನಿತ್ತು ಕೊನೆಗೆ ಉಡುಪಿ ಪುರಪ್ರವೇಶವನ್ನು ಮಾಡುವುದು ಪರ್ಯಾಯ ಮಹೋತ್ಸವದ ಅನೂಚಾನವಾದ ರೂಢಿಗತ ನಡೆಯಾಗಿದೆ. 2020-2022ರ ಶ್ರೀ ಅದಮಾರು ಮಠದ ಪರ್ಯಾಯ ಅವಧಿಯಲ್ಲಿ ಶ್ರೀ ವಿಶ್ವಪ್ರಿಯತೀರ್ಥರು ಪರ್ಯಾಯ ಪೀಠವನ್ನು ಅಲಂಕರಿಸುತ್ತಾರೆಂಬ ವಿಷಯವನ್ನು ತಿಳಿದು ಚಿಕ್ಕಮಗಳೂರಿನ ಡಾ. ಬೆಳವಾಡಿ ಮಂಜುನಾಥ ಅವರು, ಶ್ರೀಗಳನ್ನು ಚಿಕ್ಕಮಗಳೂರಿಗೆ ಆಹ್ವಾನಿಸಿ, ಚಿಕ್ಕಮಗಳೂರು ನಾಗರಿಕ ಮತ್ತು ಬ್ರಾಹ್ಮಣ ಮಹಾಸಭಾದಿಂದ ನಾಗರಿಕ ಸಂಮಾನ ಮಾಡುವ ಆಲೋಚನೆಯ ಬಗ್ಗೆ ನನ್ನಲ್ಲಿ ಹೇಳಿಕೊಂಡಿದ್ದರು. ಈ ವಿಚಾರವನ್ನು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರಿಗೆ ತಿಳಿಸಿ ಅವರು ಚಿಕ್ಕಮಗಳೂರಿಗೆ ಬರುವಂತೆ ಮಾಡಲು ಸಾಧ್ಯವೇ ಎಂದು ನನ್ನಲ್ಲಿ ಮಾತಾಡಿದ್ದರು.
ಇದನ್ನೂ ಓದಿ: T Devidas Column: ಸಿಬಿಎಸ್‌ಸಿ ಮತ್ತು ಸ್ಟೇಟ್ ಸಿಲಬಸ್: ಯಾವುದು ಉತ್ತಮ ಆಯ್ಕೆ ?
ಶ್ರೀಗಳು ಬರಲು ಒಪ್ಪುತ್ತಾರಾದರೆ ಚಿಕ್ಕಮಗಳೂರು ನಾಗರಿಕ ಸಂಮಾನವನ್ನು ದೊಡ್ಡಮಟ್ಟದಲ್ಲಿ ಮಾಡಬೇಕೆನ್ನುವ ಆಲೋಚನೆ ಡಾ.ಬೆಳವಾಡಿ ಮಂಜುನಾಥರ ಮಾತಲ್ಲಿ ಇದ್ದುದನ್ನು ಗ್ರಹಿಸಿಯೇ ಶ್ರೀ ವಿಶ್ವಪ್ರಿಯತೀರ್ಥರಲ್ಲಿ ಈ ವಿಚಾರವನ್ನು ತಿಳಿಸಿದೆ. ಹಾಗೆ ವಿಚಾರವನ್ನು ತಿಳಿಸುವಾಗ, ಹಿಂದೆ, ಪೇಜಾವರ ಶ್ರೀಗಳ ಐದನೆಯ ಬಾರಿಯ ಐತಿಹಾಸಿಕ ಪರ್ಯಾಯದ ಸಂದರ್ಭದಲ್ಲೂ ಇದೇ ಚಿಕ್ಕಮಗಳೂರು ನಾಗರಿಕ ಮತ್ತು ಬ್ರಾಹ್ಮಣ ಮಹಾಸಭಾದವರು ಬಹು ಅದ್ದೂರಿಯಾಗಿ ಪೇಜಾವರ ಶ್ರೀಗಳಿಗೆ ನಾಗರಿಕ ಸಂಮಾನ ಮಾಡಿದ್ದನ್ನು ಶ್ರೀ ವಿಶ್ವಪ್ರಿಯತೀರ್ಥರಿಗೆ ಹೇಳಿದೆ.
“ತಮ್ಮನ್ನೂ ಹಾಗೆ ಸಂಮಾನಿಸಬೇಕೆಂಬುದು ಅವರ ಬಯಕೆ" ಎಂದೂ ತಿಳಿಸಿದೆ. ಆಗ ಶ್ರೀ ವಿಶ್ವ ಪ್ರಿಯತೀರ್ಥ ಶ್ರೀಪಾದರು ನನ್ನಲ್ಲಿ ಆಡಿದ ಮಾತಿದು: “ಪೇಜಾವರ ಶ್ರೀಗಳ ಜನಪ್ರಸಿದ್ಧಿಯ ವ್ಯಾಪ್ತಿ ಬಹುದೊಡ್ಡದು. ಅವರ ಜನಸಂಪರ್ಕವೂ ತುಂಬಾ ವಿಸ್ತಾರವಾದುದು. ಅವರ ಜನಪ್ರಸಿದ್ಧಿಯ ಮುಂದೆ ನಾನು ಏನೇನೂ ಅಲ್ಲ. ಅವರು ಏರಿದ ಎತ್ತರವನ್ನು ನಾನು ಏರಿದವನಲ್ಲ. ನನಗೆ ಅವರು ಗುರುಗಳಿದ್ದಂತೆ".
ಹೀಗೆ ಅವರು ತಮಗೆ ಸಂಮಾನ ಬೇಡ ಅಂತ ನಯವಾಗಿ, ಪ್ರೀತಿಯಿಂದ ಹೇಳಿದ್ದು ನನಗಿನ್ನೂ ನೆನಪಿದೆ. ಪೇಜಾವರ ಅಂದಾಕ್ಷಣ ನೆನಪಾಗುವುದು ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು. ಇವರನ್ನು ಪೇಜಾವರ ಶ್ರೀಗಳು ಅಥವಾ ಪೇಜಾವರರು ಅಂತಲೇ ಕರೆಯುವುದು ವಾಡಿಕೆ. ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಕೂಡ ಹಾಗೆಯೇ ಹೇಳುವಾಗ, ಅವರಲ್ಲಿ ಭಕ್ತಿಪೂರ್ವಕ ಪ್ರೀತಿ ಮತ್ತು ಗೌರವವನ್ನು ನಾನು ಪ್ರತ್ಯಕ್ಷ ಕಂಡವನಿದ್ದೇನೆ.
“ಪೇಜಾವರ ಶ್ರೀಗಳು ಯಾರಿಗೂ ಆಗೊಲ್ಲ ಅಂತ ಇಲ್ಲ. ಎಲ್ಲರಿಗೂ ಅವರು ಬೇಕು. ರಾಜಕೀಯ ದವರಿಗೂ ಬೇಕು, ವಿದ್ವಾಂಸರಿಗೂ ಬೇಕು. ಯಕ್ಷಗಾನದವರಿಗೂ ಬೇಕು, ಅಧ್ಯಾತ್ಮದವರಿಗೂ ಬೇಕು. ಲೌಕಿಕದವರಿಗೂ, ಹಿಂದೂಗಳಿಗೂ-ಅಹಿಂದುಗಳಿಗೂ-ಅಹಿಂದದವರಿಗೂ ಬೇಕು. ದಲಿತ ಎಂಬ ಹಣೆಪಟ್ಟಿಯನ್ನು ಹೊತ್ತ ನತದೃಷ್ಟರ ಮನೆಗೂ ಅವರು ಬರಿಗಾಲಲ್ಲಿ ನಡೆದು ಹೋದವರು. ಇಫ್ತಾರ್ ಕೂಟವನ್ನು ಆಯೋಜಿಸಿ ಕೋಮು ಸೌಹಾರ್ದತೆಯೆಂಬುದು ಭಾರತದಂಥ ಗತಿಶೀಲ ಸಮಾಜಕ್ಕೆ ಅತಿ ಮಹತ್ವದ್ದು ಎಂದು ತೋರಿಸಿಕೊಟ್ಟವರು. ಅವರು, ಕ್ರಾಂತಿಕಾರಿ ನಿಲುವಿಗೆ, ಅನುಕರಣೀಯ, ಅನುಸರಣೀಯ ನಡೆಗೆ ಮೇಲ್ಪಂಕ್ತಿಯಾಗಿ ಬದುಕಿ ಬಾಳಿದವರು. ‘ದುಷ್ಟಾಹಾರ, ದುರ್ನಡತೆ, ದುಃಶೀಲ ಬಿಟ್ಟುಬರುವವರಿಗೆ ವೈಷ್ಣವದೀಕ್ಷೆ ಕೊಡಲು ಸಿದ್ಧ’ ಎಂದು ಬಹುದೊಡ್ಡ ಕ್ರಾಂತಿಯ ಮಾತುಗಳನ್ನಾಡಿದವರು ಅವರೇ" ಎಂದು ವಿಶ್ವಪ್ರಿಯ ತೀರ್ಥ ಶ್ರೀಪಾದರು ನನ್ನಲ್ಲಿ ಹೇಳಿದ್ದಿದೆ.
ಪೇಜಾವರ ಶ್ರೀಗಳನ್ನು ಪರಮಪೂಜ್ಯರು ಎಂದು ಭಕ್ತಿಪೂರ್ಣ ಗೌರವದಿಂದ ಪಲಿಮಾರು ಶ್ರೀಗಳು, ಅದಮಾರು ಶ್ರೀಗಳು ಬಹಿರಂಗವಾಗಿ ಸಂಬೋಧಿಸಿ ದ್ದನ್ನು ಯಾರು ಕೇಳಿಲ್ಲ? ಪೇಜಾವರ ಶ್ರೀಗಳು ನಮ್ಮನ್ನಗಲಿದ ಸಂದರ್ಭದಲ್ಲಿ ಪೇಜಾವರ ದೇವರು ಎಂಬ ನನ್ನ ಲೇಖನವನ್ನು ಓದಿ ಬಹುವಾಗಿ ಮೆಚ್ಚಿ ‘ಚೆನ್ನಾಗಿ ಬರೆದಿದ್ದೀಯ’ ಎಂದು ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದ್ದರು.
ಯಾವುದನ್ನೂ ಭರಿಸಬಹುದಾದ, ಧರಿಸಬಹುದಾದ, ಎದುರಿಸಬಹುದಾದ ಸಾಮರ್ಥ್ಯ ಮತ್ತು ಶಕ್ತಿ ಪೇಜಾವರ ಶ್ರೀಗಳಲ್ಲಿದೆ ಎಂಬುದು ಶ್ರೀ ವಿಶ್ವಪ್ರಿಯತೀರ್ಥರ ನಂಬಿಕೆ. ಪೇಜಾವರ ಶ್ರೀಗಳ ಮೇಲೆ ಯಾವಜ್ಜೀವಕ್ಕೂ ಎತ್ತರದ ಗುರು ಪ್ರೀತಿಯನ್ನು, ಗೌರವವನ್ನು, ಉತ್ಕಟ ಗುರುಭಕ್ತಿ-ಭಾವವನ್ನು, ಪರಮಾದರವನ್ನು ಹೊಂದಿರುವ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಎಂದಿಗೂ ಅವರನ್ನು ಅವಮಾನಿಸಿ ಮಾತನಾಡಲು ಸಾಧ್ಯವೇ ಇಲ್ಲ!
ನೋ ವೇ. ಚಾನ್ಸೇ ಇಲ್ಲ. ಹಾಗೆ ಭಾವಿಸುವುದೇ ಹಿರಿದಾದ ಪೆದ್ದುತನ. ಅಂಥ ಪೆದ್ದುತನವನ್ನು ಅಭಿವ್ಯಕ್ತಿಸಿ, ಸುದೀರ್ಘವಾದ ಚರಿತ್ರೆಯುಳ್ಳ ಜನಪ್ರಿಯ ಮಠವೊಂದರ ಹಿರಿಯ ಯತಿಯನ್ನು ಇಷ್ಟು ಮಾತ್ರಕ್ಕೆ ಕಣ್ಣೀರು ಹಾಕಿ ಕ್ಷಮೆಯಾಚಿಸುವಂತೆ ಮಾಡಿದ್ದು ಯಾರಿಗೂ ಆಪ್ಯಾಯಮಾನ ವಲ್ಲ!
ಇದರಿಂದ ಯಾವ ಮಹತ್ಸಾಧನೆಯೂ ಆದಂತಲ್ಲ. ಯಾವುದು ನಡೆಯಬಾರದಿತ್ತೋ ಅಂಥದ್ದು ನಡೆದು ಹೋಯಿತು, ಅಷ್ಟೆ! ಬಹಿರಂಗವಾಗಿ ಕ್ಷಮೆ ಯಾಚಿಸಿ ಸಾತ್ವಿಕ ಸಜ್ಜನರ ಮನಸಲ್ಲಿ ವಿಶ್ವ ಪ್ರಿಯತೀರ್ಥರು ದೊಡ್ಡವರಾಗಿ ಉಳಿದು ಬಿಟ್ಟರು. ಐದು ಪರ್ಯಾಯವನ್ನು ಪೂರೈಸಿದ್ದಾರೆ ಅಥವಾ ಪೂರೈಸಿಲ್ಲ ಎಂಬ ಮಾತಿಗೆ ಬೇಕಾಗಿ ತಾತ್ವಿಕವಾದ ಅಂಶಗಳನ್ನು ಶ್ರೀಗಳು ಹೇಳಿದರು ಎಂಬಲ್ಲಿಗೆ ಪೇಜಾವರ ಶ್ರೀಗಳನ್ನು ಅವಮಾನಿಸಿದ್ದಾರೆ ಎಂದು ವಿರೋಧಿಸುವುದು, ಖಂಡಿಸುವುದು ಜನಸಾಮಾನ್ಯರ ಬುದ್ಧಿಗೆ, ವೈಚಾರಿಕತೆಗೆ ಸ್ವೀಕಾರವಾದೀತು.
ಆದರೆ, ಸಾತ್ವಿಕ ಸಜ್ಜನ ವಿದ್ವಾಂಸರ ವೈಚಾರಿಕತೆಗೆ ಏನಾಗಿದೆ? ಅಂಥವರಿಗಿದು ಖಂಡಿತವಾಗಿಯೂ ಯೋಗ್ಯವಲ್ಲ. ಮೇಲಾಗಿ ಶೋಭೆಯಲ್ಲ. ಅಷ್ಟಕ್ಕೂ ‘ಯತಿಕುಲ ಚಕ್ರವರ್ತಿ’ ಎಂಬ ಅಭಿದಾನವನ್ನು ಕೊಡುವುದಕ್ಕೆ ಮಾನದಂಡ ಅಂತ ನಿರ್ದಿಷ್ಟವಾಗಿ ಏನಾದರೂ ಇದೆಯೇ? ಪೇಜಾವರರು ಐದು ಬಾರಿ ಪರ್ಯಾಯ ಪೀಠಾರೋಹಣ ಮಾಡಿದ್ದಾರೆಂಬುದು ಬೆಳಕಿನಷ್ಟು ಸತ್ಯ.
ಆದರೆ, 3600 (360X10) ದಿನಗಳ ಕಾಲ ಶ್ರೀಕೃಷ್ಣಪೂಜೆಯನ್ನು ಮಾಡಿಲ್ಲ ಎಂಬುದೂ ಅಷ್ಟೇ ಸತ್ಯ. ಈ ಅರ್ಥದಲ್ಲಿ ಐದು ಬಾರಿ ಪರ್ಯಾಯವನ್ನು ಪೇಜಾವರ ಶ್ರೀಗಳು ಮಾಡಿದಂತಾಗುವುದಿಲ್ಲ ಎಂದು ವಿಶ್ವಪ್ರಿಯತೀರ್ಥರು ಹೇಳಿದ್ದೂ ಸರಿಯೇ ಹೊರತು ತಪ್ಪಲ್ಲ. ತಾತ್ವಿಕ ಅಂಶಗಳು ಇಲ್ಲಿ ಮುಖ್ಯವೇ ಹೊರತು ಪೇಜಾವರ ದೇವರಿಗೆ ವಿಶ್ವಪ್ರಿಯತೀರ್ಥರು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ, ಆಕ್ಷೇಪಿಸಿ ವಿರೋಧಿಸುವುದು ತೀರಾ ದುರಾಭಾಸವೂ, ಕಡು ದುರಾಗ್ರಹವೂ ಆಗಿ ಕಾಣುತ್ತದೆ.
ಪೇಜಾವರ ಶ್ರೀಗಳು ಐದು ಬಾರಿ ಪರ್ಯಾಯ ಪೂಜೆಯನ್ನು ಪೂರ್ಣವಾಗಿ ಮಾಡಲಾಗಲಿಲ್ಲ ಅಂತ ಹೇಳಿದ ಮಾತ್ರಕ್ಕೆ ಅವರಿಗೆ ಅವಮಾನವಾಯಿತು ಎಂದು ತಿಳಿಯುವುದೇ ಕುತ್ಸಿತ ಬುದ್ಧಿಯ ಪೂರ್ವಾಗ್ರಹವೂ ಅಹುದು, ಹಿಡಿದ ಪೂರ್ವಗ್ರಹವೂ ಅಹುದು. ವೈಚಾರಿಕತೆಗೆ ಕಿಲುಬು ಹಿಡಿದಾಗ ಇಂಥ ಅನರ್ಥಗಳು ಘಟಿಸುತ್ತವೆ.
ಗಮನಿಸಬೇಕಾದ ವಿಚಾರವೇನೆಂದರೆ, ನಾಲ್ಕು ಪರ್ಯಾಯವನ್ನು ಮುಗಿಸಿದ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ (ಹಿಂದಿನ ಪುತ್ತಿಗೆ ಪರ್ಯಾಯ ಕಾಲದಲ್ಲಿ ಶ್ರೀಕೃಷ್ಣನ ಪೂಜಾ ಕೈಂಕರ್ಯ ವನ್ನು ಎರಡು ವರ್ಷವೂ ಪೂರೈಸಿದ್ದು ಇದೇ ವಿಶ್ವಪ್ರಿಯತೀರ್ಥ ಶ್ರೀಪಾದರು. ಯಾಕೆಂದರೆ, ಆಗ ಪುತ್ತಿಗೆ ಶ್ರೀಗಳವರು ಶಿಷ್ಯ ಸ್ವೀಕಾರ ಮಾಡಿರಲಿಲ್ಲ. ಆದರೆ, ಕೃಷ್ಣಪೂಜೆಯಲ್ಲಿ ವಿಶೇಷ ಆಸಕ್ತಿ ಯಿರುವ ವಿಶ್ವಪ್ರಿಯತೀರ್ಥರೇ ಆ ಎರಡು ವರ್ಷಗಳ ಕಾಲ ಕೃಷ್ಣಪೂಜೆಯ ಜವಾಬ್ದಾರಿಯನ್ನು ನಿರ್ವಹಿಸಿದ್ದು ಈಗಲೂ ನಿಗೂಢವೇ ಆಗಿದೆ.
ಮೊನ್ನೆಯಷ್ಟೇ ಮುಗಿದ ಪುತ್ತಿಗೆಯವರ ಈ ಪರ್ಯಾಯದಲ್ಲೂ ನಿರಂತರವಾಗಿ ಎರಡು ವರ್ಷ ಕೃಷ್ಣಪೂಜೆ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂq೦ವರು ಇದೇ ವಿಶ್ವಪ್ರಿಯತೀರ್ಥ ಶ್ರೀಪಾದರು) ಶ್ರೀಪಾದರಿಗೆ ‘ಯತಿಕುಲ ಚಕ್ರವರ್ತಿ’ (ಪೇಜಾವರ ಶ್ರೀಗಳಿಗೆ ಈ ಅಭಿದಾನವನ್ನು ನೀಡಲಾಗಿದೆ ಎಂಬ ವಿಚಾರ ನನಗೆ ಗೊತ್ತಾಗಿದ್ದು ಕೂಡ ಈ ಸಂದರ್ಭದ) ಎಂಬ ಅಭಿದಾನವನ್ನು ಕೊಡುವಾಗಿನ ಸಂದರ್ಭದಲ್ಲಿ ಯಾರೋ ನನ್ನನ್ನು ಕೇಳಿದರು ಎಂಬ ಮಾತಿಗೆ ಬೇಕಾಗಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಒಂದು ಕ್ಲಾರಿಟಿಯನ್ನೋ, ಸಮರ್ಥನೆಯನ್ನೋ ಪುಷ್ಟೀಕರಣಕ್ಕಾಗಿ ನೀಡುವಂಥ ಸಂದರ್ಭದಲ್ಲಿ ಐದು ಪರ್ಯಾಯವನ್ನು ಅಂದರೆ ಕೃಷ್ಣಪೂಜಾ ಕೈಂಕರ್ಯವನ್ನು 3600(360X10) ದಿನಗಳ ಕಾಲ ಪೂರೈಸಿಲ್ಲ ಎಂಬರ್ಥದಲ್ಲಿ ಹೇಳಿದ್ದು ಬಿಟ್ಟರೆ ಪೇಜಾವರ ದೇವರನ್ನು ಅವಮಾನಿಸಬೇಕೆಂದು ಆಡಿಲ್ಲ, ಆಡಿದ್ದೂ ಅಲ್ಲ ಎಂಬುದನ್ನು ಆ ಸಂದರ್ಭದಲ್ಲಿ ಅವರಾಡಿದ ಮಾತುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಎಂಥ ದಡ್ದನಿಗೂ ಅರ್ಥವಾಗುತ್ತದೆ.
ಹಾಗಂತ ಪೇಜಾವರ ಶ್ರೀಗಳು ಐದು ಬಾರಿ ಪೀಠಾರೋಹಣ ಮಾಡಿಲ್ಲ ಅಂತ ಎಲ್ಲಿಯೂ ಶ್ರೀ ವಿಶ್ವಪ್ರಿಯತೀರ್ಥರು ಹೇಳಿಲ್ಲ. ಮೇಲಾಗಿ, ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ‘ಯತಿಕುಲ ಚಕ್ರವರ್ತಿ’ ಎಂಬ ಅಭಿದಾನವನ್ನು ನಾವೆಲ್ಲರೂ ಸೇರಿಕೊಂಡು ಕೊಡುತ್ತಿದ್ದೇವೆ ಎಂದು ಸಮಷ್ಟಿ ಯ ಭಾವದಲ್ಲಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅಭಿವ್ಯಕ್ತಿಸುವಾಗ ಬಹುವಚನದಲ್ಲಿ ಮಾತಾಡಿದ್ದೂ ಕೂಡ ಗಮನಾರ್ಹವೇ.
ಇದೊಂದು ಸಣ್ಣ ಸಂಗತಿಯಷ್ಟೆ. ಇದರಲ್ಲಿ ಅವಮಾನ ಎಂಬುದು ಹೇಗೆ ಕಂಡಿತೋ ಆ ಸಕಲ ಭಾಷಾ ವ್ಯಾಖ್ಯಾನ ರತ್ನ ವಿಜಯಿ ಇಂದ್ರನೇ ಬಲ್ಲ!
ಸುದೀರ್ಘವಾದ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಚಾರಿತ್ರಿಕ ಹಿನ್ನೆಲೆಯುಳ್ಳ ಮಠವೊಂದರ ಹಿರಿಯ ಯತಿಯೊಬ್ಬರ ಸಾಂದರ್ಭಿಕ ಮಾತನ್ನು ಅಪಾರ್ಥವೂ ಅನರ್ಥವೂ ಆಗುವಂತೆ ಅರ್ಥೈಸಿ ವಿರೋಽಸಿ, ಅಪಾರ್ಥದ ಅನರ್ಥದ ಸಂದೇಶವನ್ನು ಸುಖಾಸುಮ್ಮನೆ ತಲೆ ಯಲ್ಲಿ ತುಂಬಿಸಿಕೊಂಡು, ಇತರರಲ್ಲೂ ತುಂಬಿಸಿ ಮಾತಿನ ಬೆಂಕಿ ಹಚ್ಚಿದ್ದರಿಂದಾಗಿ, ವಿಶ್ವಪ್ರಿಯ ತೀರ್ಥ ಶ್ರೀಪಾದರು ಸ್ವರ್ಗೀಯರಾದ ಪೇಜಾವರ ದೇವರನ್ನು ಹೃದಯದಲ್ಲಿಟ್ಟು, ಸಜ್ಜನರ ಕ್ಷಮೆ ಕೇಳಿ ಕಣ್ಣೀರು ಹಾಕುವಂತಾದುದು ಮಾತ್ರ ಆತ್ಯಂತಿಕ ದುರಂತವೇ ಸರಿ!
ಇದು ಸಾಮಾಜಿಕವಾಗಿ ಆರೋಗ್ಯಯುತ ಬೆಳವಣಿಗೆಯಲ್ಲ. ನೋ ಡೌಟ್. ಎಂಟು ಮಠಗಳು ಮಧ್ವರ ಸಾಕ್ಷಾತ್ ಎಂಟು ಶಿಷ್ಯರಿಂದಲೇ ಬೆಳೆದುಬಂದಂಥವು. ಇವುಗಳಲ್ಲಿ ಸಣ್ಣದು ದೊಡ್ಡದೆಂಬ ಭೇದ ಸಲ್ಲ. ಯತಿಗಳಲ್ಲೂ ಅವರು ಹೆಚ್ಚು ಇವರು ಕಡಿಮೆಯೆಂಬ ತರತಮ ಭಾವ ಯಾರಿಗೂ ಇಲ್ಲ. ಭಕ್ತಿಯ ಪರಿಕಲ್ಪನೆಯನ್ನು ವಿಶ್ವಕ್ಕೆ ಕೊಟ್ಟ ದಾರ್ಶನಿಕ ಆಚಾರ್ಯತ್ರಯರಲ್ಲಿ ಶ್ರೀಮಧ್ವರು ಅಪ್ಪಟ ಕನ್ನಡಿಗರು ಎಂಬ ಹೆಮ್ಮೆ ಮತ್ತು ಅಭಿಮಾನ ನಮ್ಮೆಲ್ಲರಲ್ಲೂ ಯಾವತ್ತೂ ಇರಲೇಬೇಕು.
ಸಿದ್ಧಾಂತವೇನೇ ಇದ್ದರೂ ಆಯಾ ಸಿದ್ಧಾಂತದ ಅನುಯಾಯಿಗಳು ತಮ್ಮ ತಮ್ಮ ನಿತ್ಯದ ಆಚರಣೆ ಗಳಲ್ಲಿ ಆಚರಿಸಿಕೊಳ್ಳಲಿ. ಎಲ್ಲಕ್ಕಿಂತ ಮುಖ್ಯವಾಗಿ, ಹಿಂದೂ ಐಕ್ಯತೆಯೇ ಮುಖ್ಯ. ಹಿಂದೂ ಸಮಾಜದ ಜಾಗೃತಿಗೆ, ಐಕ್ಯತೆಗೆ ಇಂಥ ಕುಟಿಲತನವು ಈಗಾಗಲೇ ನಮ್ಮ ನಮ್ಮ ಇರುವ ಒಡಕನ್ನು ಹೆಚ್ಚಿಸಿ ಅನೂಹ್ಯವಾದ ಅನಾಹುತವನ್ನು ಭವಿಷ್ಯದಲ್ಲಿ ಸೃಷ್ಟಿಸಿ ಬಿಡುತ್ತದೆಂಬುದು ಅಷ್ಟು ಸುಲಭವಾಗಿ ಯಾರಿಗೂ ಈಗ ಅರ್ಥವಾಗುವುದಿಲ್ಲ.
ವೈಯಕ್ತಿಕವಾಗಿ, ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರನ್ನು ಹತ್ತಿರದಿಂದ ಬಲ್ಲವನು ನಾನು. ಅವರು ಮುಗ್ಧರು. ವಾಕ್ಪಟುತ್ವ ಅವರಿಗೆ ಒಲಿದು ಬಂದ ತಾಕತ್ತು. ಎಲ್ಲವನ್ನೂ ಎಲ್ಲರನ್ನೂ ಬೇಗ ನಂಬಿ ಬಿಡುತ್ತಾರೆ ಎಂಬುದು ನಿಸ್ಸಂದೇಹ. ಯಾರಿಗೂ ‘ಇಲ್ಲ, ಆಗೊಲ್ಲ’ ಅಂತ ಅವರು ನಕಾರಾತ್ಮಕವಾಗಿ ಹೇಳಿದ್ದನ್ನು ನಾನು ಕಂಡಿಲ್ಲ. ದಾನದಲ್ಲಿ ವಿಬುಧೇಶ ತೀರ್ಥರಿಗಿಂತ ಮೂರು ಪಟ್ಟು ಮೇಲೆಯೇ ಅಂತ ಭಾವಿಸಿದ್ದೇನೆ.
ಮಾತಿನ ಭರದಲ್ಲಿ ತಾವಾಡಿದ ಮಾತಿಗೆ ಸ್ವಲ್ಪವೂ ಹಿಂದು ಮುಂದು ಆಲೋಚಿಸದೆ ಕ್ಷಮೆ ಯಾಚಿಸಿ ಅವರು ದೊಡ್ಡವರಾದರು ಎಂಬ ಹೆಮ್ಮೆಯಿಂದ ಇಷ್ಟನ್ನೂ ಬೇಸರಗೊಂಡು ಬರೆದಿದ್ದೇನೆ. ಇಂಥ ಘಟನೆಗಳು ಮತ್ತೆ ಮರುಕಳಿಸದಿರಲಿ ಎಂದು ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ಬೇಡಿಕೊಳ್ಳುತ್ತೇನೆ. ಅಂಧಾಭಿಮಾನಿಗಳ, ಬಾಲಬಡುಕರ ಪ್ರಭೆಯಿಂದ ಹೊರ ಬಂದು ಅಷ್ಟ ಮಠಾಧೀಶರು ತಮ್ಮೊಳಗೆ ಐಕ್ಯತೆಯನ್ನು ಸಾಧಿಸಲಿ. ಸಮಸ್ತ ಆಸ್ತಿಕ ಹಿಂದೂ ಸಮಾಜಕ್ಕೆ ಮಾರ್ಗದರ್ಶನವನ್ನು ಕಾಯೇನ ವಾಚಾ ಮನಸಾ ಸದಾ ನೀಡುತ್ತಿರಲಿ ಎಂದು ಆಶಿಸುತ್ತೇನೆ.
(ಲೇಖಕರು ಹಿರಿಯ ಪತ್ರಕರ್ತರು)