PM Surya Ghar Yojana: ಪಿಎಂ ಸೂರ್ಯಘರ್ ಯೋಜನೆಗೆ ಭರ್ಜರಿ ಸ್ಪಂದನೆ; 10 ಲಕ್ಷ ಸೌರ ಘಟಕ ಸ್ಥಾಪನೆ
PM Surya Ghar Yojana: ಪಿಎಂ ಸೂರ್ಯ ಘರ್ ಫಲಾನುಭವಿ 3 KW ಸಾಮರ್ಥ್ಯದ ಸೌರ ಮೇಲ್ಛಾವಣಿ ಘಟಕವನ್ನು ₹15,000ಕ್ಕಿಂತ ಕಡಿಮೆ ಹೂಡಿಕೆಯೊಂದಿಗೆ ಸ್ಥಾಪಿಸಬಹುದು. ಅಲ್ಲದೇ ಇದರಿಂದ 25 ವರ್ಷಗಳಲ್ಲಿ ₹15 ಲಕ್ಷದವರೆಗೆ ಆದಾಯ ಸಹ ಪಡೆಯಲು ಸಾಧ್ಯವಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ತಿಳಿಸಿದೆ.


ನವದೆಹಲಿ: ವಿಶ್ವದ ಅತಿ ದೊಡ್ಡ ಸೌರ ಶಕ್ತಿ ಯೋಜನೆ ಹೆಗ್ಗಳಿಕೆಗೆ ಪಾತ್ರವಾದ ‘ಪಿಎಂ ಸೂರ್ಯಘರ್’ (PM Surya Ghar Yojana) ಈಗ 10 ಲಕ್ಷ ಸೌರ ಮೇಲ್ಛಾವಣಿ ಸ್ಥಾಪನೆಯ ಹೊಸ ಮೈಲಿಗಲ್ಲು ಸಾಧಿಸಿದೆ. ಜತೆಗೆ ದೇಶದ ನಾಗರಿಕರಿಗೆ ವಿದ್ಯುತ್ ವೆಚ್ಚ ಉಳಿತಾಯ ಹಾಗೂ ದೀರ್ಘ ಕಾಲದ ಆದಾಯಕ್ಕೂ ದಾರಿ ಮಾಡಿಕೊಡುತ್ತಿದೆ. ದೇಶದ ನಾಗರಿಕರನ್ನು ಸುಲಭವಾಗಿ ತಲುಪುವಂತೆ ಈ ಯೋಜನೆ ರೂಪಿಸಿರುವ ಕೇಂದ್ರ ಸರ್ಕಾರ, ಫಲಾನುಭವಿಗಳಿಗೆ ಸರಳ ಸಾಲ ಸೌಲಭ್ಯ ಸಹ ಕಲ್ಪಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ತಿಳಿಸಿದೆ. ಸೂರ್ಯ ಘರ್ ಫಲಾನುಭವಿ 3 KW ಸಾಮರ್ಥ್ಯದ ಸೌರ ಮೇಲ್ಛಾವಣಿ ಘಟಕವನ್ನು 15,000 ರೂ.ಕ್ಕಿಂತ ಕಡಿಮೆ ಹೂಡಿಕೆಯೊಂದಿಗೆ ಸ್ಥಾಪಿಸಬಹುದು. ಅಲ್ಲದೇ ಇದರಿಂದ 25 ವರ್ಷಗಳಲ್ಲಿ 15 ಲಕ್ಷ ರೂ.ವರೆಗೆ ಆದಾಯ ಸಹ ಪಡೆಯಲು ಸಾಧ್ಯವಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 2024ರ ಫೆಬ್ರವರಿ 13ರಂದು ಪ್ರಾರಂಭಿಸಿದ ಈ ಮಹತ್ವಾಕಾಂಕ್ಷೆಯ ಯೋಜನೆ 1 ಕೋಟಿ ಮನೆಗಳಿಗೆ ಸೌರ ಮೇಲ್ಛಾವಣಿ ಅಳವಡಿಕೆ ಮೂಲಕ ಉಚಿತ ವಿದ್ಯುತ್ ಒದಗಿಸುವ ಗುರಿ ಹೊಂದಿದೆ. 12 ಸಾರ್ವಜನಿಕ ವಲಯದ ಬ್ಯಾಂಕ್‌ಗಳ (PSB) ಮೂಲಕ ₹2 ಲಕ್ಷವರೆಗಿನ ಸಾಲಗಳಿಗೆ ಶೇ. 6.75 ಸಬ್ಸಿಡಿ ಬಡ್ಡಿ ದರದಲ್ಲಿ ಮೇಲಾಧಾರ-ಮುಕ್ತ ಸಾಲ ಒದಗಿಸಲಾಗುತ್ತಿದೆ.
ಸಾಲಕ್ಕೆ ಅರ್ಜಿ ಸಲ್ಲಿಕೆ ಸಂಪೂರ್ಣ ಸ್ವಯಂ ಚಾಲಿತ ಮತ್ತು ಆನ್‌ಲೈನ್ ಪ್ರಕ್ರಿಯೆಯಾಗಿದೆ. ಈವರೆಗೆ 3.10 ಲಕ್ಷ ಫಲಾನುಭವಿಗಳಿಂದ ಸಾಲದ ಅರ್ಜಿಗಳನ್ನು ಸ್ವೀಕರಿಸಲಾಗಿದೆ. 1.58 ಲಕ್ಷ ಘಟಕಗಳಿಗೆ ಸಾಲ ಮಂಜೂರು ಮಾಡಲಾಗಿದೆ ಮತ್ತು 1.28 ಲಕ್ಷ ಫಲಾನುಭವಿಗಳಿಗೆ ಸಾಲವನ್ನು ವಿತರಿಸಲಾಗಿದೆ.
47.3 ಲಕ್ಷ ಅರ್ಜಿ ಸಲ್ಲಿಕೆ
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ಜಾರಿಗೆ ತಂದಿರುವ ಈ ಯೋಜನೆಗೆ ಈಗಾಗಲೇ ಬರೋಬ್ಬರಿ 47.3 ಲಕ್ಷ ಅರ್ಜಿಗಳು ಬಂದಿವೆ. 6.13 ಲಕ್ಷ ಫಲಾನುಭವಿಗಳು ₹ 4,770 ಕೋಟಿ ಮೊತ್ತದ ಸಬ್ಸಿಡಿಯನ್ನು ಯಶಸ್ವಿಯಾಗಿ ಪಡೆದಿದ್ದಾರೆ. ಸಂಪೂರ್ಣ ಸ್ವಯಂಚಾಲಿತ ಅರ್ಜಿಯೊಂದಿಗೆ www.pmsuryaghar.gov.in ಮೂಲಕ ಮಾರಾಟಗಾರರ ಆಯ್ಕೆ ಮತ್ತು ಸಬ್ಸಿಡಿ ರಿಡೀಮ್ ಪ್ರಕ್ರಿಯೆಗೆ 15 ದಿನಗಳಲ್ಲಿ ಅರ್ಜಿದಾರರ ಬ್ಯಾಂಕ್ ಖಾತೆಗಳಿಗೆ ₹ 78000 ವರೆಗೆ ಸಬ್ಸಿಡಿ ಜಮಾ ಆಗುತ್ತದೆ.
ರಾಜ್ಯಗಳಲ್ಲಿ ಗಮನಾರ್ಹ ಪ್ರಗತಿ
ಈ ಯೋಜನೆ ಹಲವು ರಾಜ್ಯಗಳಲ್ಲಿ ಗಮನಾರ್ಹ ಪ್ರಗತಿ ಕಂಡಿದೆ. ಚಂಡೀಗಢ, ದಮನ್ ಮತ್ತು ಡಿಯುಗಳು ಸರ್ಕಾರಿ ಕಟ್ಟಡಗಳೂ ಸೌರ ಮೇಲ್ಛಾವಣಿ ಅಳವಡಿಸಿ ನೂರಕ್ಕೆ ನೂರು ಪ್ರಗತಿ ಸಾಧಿಸಿವೆ. ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡಿನಂತಹ ರಾಜ್ಯಗಳು ಸಹ ಉತ್ತಮ ಕಾರ್ಯನಿರ್ವಹಿಸುತ್ತಿವೆ.
ಈ ಸುದ್ದಿಯನ್ನೂ ಓದಿ | Pralhad Joshi: ಕೆಂಪು ಮೆಣಸಿನಕಾಯಿಗೆ ಬೆಂಬಲ ಬೆಲೆ; ಕರ್ನಾಟಕಕ್ಕೂ ವಿಸ್ತರಿಸಲು ಸಚಿವ ಪ್ರಲ್ಹಾದ್ ಜೋಶಿ ಒತ್ತಾಯ
2027ಕ್ಕೆ ಹೆಚ್ಚುವರಿಯಾಗಿ 27 GW ಗುರಿ
ಸುಲಭ ಹಣಕಾಸು ಒದಗಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ₹ 75,021 ಕೋಟಿ ಅನುದಾನ ತೆಗೆದಿರಿಸಿದೆ. 2025ರ ಮಾರ್ಚ್ 10ರ ಹೊತ್ತಿಗೆ, ಈ ಯೋಜನೆ 3 GW ಗಿಂತ ಹೆಚ್ಚಿನ ಮೇಲ್ಛಾವಣಿ ಸೌರಶಕ್ತಿ ಸ್ಥಾಪನೆಗೆ ಅನುಕೂಲ ಮಾಡಿಕೊಟ್ಟಿದೆ. 2027ರ ಮಾರ್ಚ್ ವೇಳೆಗೆ ಹೆಚ್ಚುವರಿಯಾಗಿ 27 GW ಗುರಿ ಸಾಧನೆಯತ್ತ ಮುನ್ನಡೆಯುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.