ಅನುಮತಿಯಿಲ್ಲದೆ ಖಾಲಿ ನಿವಾಸದಲ್ಲಿ ನಮಾಜ್; ಉತ್ತರ ಪ್ರದೇಶದಲ್ಲಿ 12 ಮಂದಿಯ ಬಂಧನ: ಯೋಗಿ ಸರ್ಕಾರದಿಂದ ದಿಟ್ಟ ಕ್ರಮ
ಅನುಮತಿ ಇಲ್ಲದೆ ಖಾಲಿ ನಿವಾಸದಲ್ಲಿ ನಮಾಜ್ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀರು ಕಠಿಣ ಕ್ರಮ ಕೈಗೊಂಡಿದ್ದು, 12 ಮಂದಿಯನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಲಖನೌ, ಜ. 18: ಅನುಮತಿ ಇಲ್ಲದೆ ಖಾಲಿ ನಿವಾಸದಲ್ಲಿ ನಮಾಜ್ ಮಾಡಿದ ಆರೋಪದ ಮೇಲೆ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ (Uttar Pradesh) ಬರೇಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಮನೆಯೊಳಗೆ ಜನರು ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (viral video) ಆಗಿದೆ.
ಹಲವು ವಾರಗಳಿಂದ ಖಾಲಿ ನಿವಾಸವನ್ನು ತಾತ್ಕಾಲಿಕ ಮದರಸಾವಾಗಿ ಬಳಸಲಾಗುತ್ತಿದೆ ಎಂಬ ಮಾಹಿತಿ ಮೊಹಮ್ಮದ್‌ಗಂಜ್ ಗ್ರಾಮದ ಜನರಿಂದ ಬಂದ ನಂತರ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ ಎಂದು ಎಸ್‌ಪಿ (ದಕ್ಷಿಣ) ಅಂಶಿಕಾ ವರ್ಮಾ ತಿಳಿಸಿದ್ದಾರೆ.
ಅನುಮತಿ ಇಲ್ಲದೆ ಯಾವುದೇ ಹೊಸ ಧಾರ್ಮಿಕ ಚಟುವಟಿಕೆ ಅಥವಾ ಸಭೆ ನಡೆಸುವುದು ಕಾನೂನಿನ ಉಲ್ಲಂಘನೆ. ಅಂತಹ ಚಟುವಟಿಕೆಗಳು ಪುನರಾವರ್ತನೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಜನರು ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ.
ಬಂಧಿತ 12 ಜನರ ಮೇಲೆ ಶಾಂತಿ ಉಲ್ಲಂಘನೆಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಬಳಿಕ ಅವರು ಜಾಮೀನು ಪಡೆದು ಬಿಡುಗಡೆಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಇತರ ಮೂವರು ವ್ಯಕ್ತಿಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ.
ಸಿಎಂ ಯೋಗಿ- ಬಾಲಕನ ಮಧ್ಯೆ ನಡೆದ 'ಚಿಪ್ಸ್ ಡೀಲ್' ಸಕ್ಸಸ್
ಪೊಲೀಸರ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ನಿರ್ಮಾಣ ಹಂತದ ಖಾಲಿ ನಿವಾಸವು ಹನೀಫ್ ಎಂಬವರಿಗೆ ಸೇರಿದ್ದು, ಶುಕ್ರವಾರದ ನಮಾಜ್‌ಗೆ ತಾತ್ಕಾಲಿಕವಾಗಿ ಬಳಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಅಧಿಕಾರಿಗಳು ಕೇಳಿದಾಗ ಯಾವುದೇ ಲಿಖಿತ ಅನುಮತಿ ಅಥವಾ ಮಾನ್ಯ ದಾಖಲೆಗಳನ್ನು ತೋರಿಸಲಿಲ್ಲ ಎಂದು ತಿಳಿದುಬಂದಿದೆ.
ಇಲ್ಲಿದೆ ವಿಡಿಯೊ:
12 people arrested for offering Namaz in their own home in Bareilly.
— هارون خان (@iamharunkhan) January 18, 2026
Is praying Namaz a crime in India?
What law did they violate?@bareillypolice pic.twitter.com/X2tsfZL9UX
ಮನೆಯಲ್ಲಿ ಅನುಮತಿಯಿಲ್ಲದೆ ನಿಯಮಿತವಾಗಿ ಪ್ರಾರ್ಥನೆ ನಡೆಸುವುದಕ್ಕೆ ಕೆಲವು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ಧಾವಿಸಿ ಕ್ರಮ ಕೈಗೊಂಡಿದ್ದಾರೆ. ತನಿಖೆಯ ಭಾಗವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ವಿಡಿಯೊವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಖನೌದಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ
ಭಾನುವಾರ (ಜ. 18) ಬೆಳಗ್ಗೆ ದೆಹಲಿಯಿಂದ ಬಾಗ್ಡೋಗ್ರಾಗೆ ತೆರಳುತ್ತಿದ್ದ ಇಂಡಿಗೋ ಏರ್‌ಲೈನ್ಸ್‌ಗೆ ಬಾಂಬ್ ಬೆದರಿಕೆ ಬಂದ ನಂತರ ವಿಮಾನ ಹಾರಾಟದಲ್ಲಿ ಅಡಚಣೆ ಉಂಟಾಯಿತು. ನಂತರ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಲಖನೌದಲ್ಲಿ ಇಳಿಸಲಾಯಿತು. ವಿಮಾನವು 222 ವಯಸ್ಕರು ಮತ್ತು 8 ಮಕ್ಕಳು ಸೇರಿದಂತೆ 230 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಇದಲ್ಲದೆ, 2 ಪೈಲಟ್‌ಗಳು ಮತ್ತು 5 ಸಿಬ್ಬಂದಿ ಕೂಡ ಇದ್ದರು.
ಪ್ರಯಾಣಿಕರು, ಸಿಬ್ಬಂದಿ ಮತ್ತು ವಿಮಾನದ ಸುರಕ್ಷತೆಯೇ ತನ್ನ ಪ್ರಮುಖ ಆದ್ಯತೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಪೊಲೀಸರ ಪ್ರಕಾರ, ವಿಮಾನದ ಶೌಚಾಲಯದಲ್ಲಿ ಬಾಂಬ್ ಇರುವುದನ್ನು ಸೂಚಿಸುವ ಟಿಶ್ಯೂ ಪೇಪರ್‌ನಲ್ಲಿ ಬರೆಯಲಾದ ಸಂದೇಶ ಕಂಡುಬಂತು.