ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Waqf Amendment Bill: ವಕ್ಫ್ ತಿದ್ದುಪಡಿ ಮಸೂದೆಗೆ ವಿರೋಧವೇಕೆ? ವಕ್ಫ್ ಹೊಂದಿರುವ ಭೂಮಿ ಎಷ್ಟು ಗೊತ್ತೇ?

Waqf Amendment Bill: 2024ರ ವಕ್ಫ್ ತಿದ್ದುಪಡಿ ಮಸೂದೆಯು 1995ರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಗುರಿಯನ್ನು ಹೊಂದಿದೆ. ಇದರ ಮುಖ್ಯ ಉದ್ದೇಶ ವಕ್ಫ್ ಮಂಡಳಿಗಳ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಈ ಕಾನೂನು ಮೂಲಕ ವಕ್ಫ್ ಮಂಡಳಿಗಳಲ್ಲಿ ಮಹಿಳೆಯರನ್ನು ಕಡ್ಡಾಯವಾಗಿ ಸೇರಿಸುವುದು ಮುಸ್ಲಿಂ ಸಮುದಾಯದ ವಿರೋಧಕ್ಕೆ ಕಾರಣವಾಗಿದೆ.

ವಕ್ಫ್ ತಿದ್ದುಪಡಿ ಮಸೂದೆಗೆ ವಿರೋಧವೇಕೆ?

Profile Vidhya Iravathur Apr 2, 2025 11:38 AM

ನವದೆಹಲಿ: ಲೋಕಸಭೆಯಲ್ಲಿ ವಿವಾದಾತ್ಮಕ ವಕ್ಫ್ ತಿದ್ದುಪಡಿ ಮಸೂದೆ 2024(Waqf Amendment Bill) ಮಂಡನೆ ಇನ್ನೇನು ಕೆಲವೇ ನಿಮಿಷಗಳಲ್ಲಿ ನಡೆಯಲಿದೆ. ಈ ಮಸೂದೆಯನ್ನು ಜಾರಿಗೆಗೊಳಿಸಲು ಸರ್ಕಾರ ದೃಢ ನಿರ್ಧಾರ ಹೊಂದಿದ್ದರೆ ವಿರೋಧ ಪಕ್ಷಗಳು ಇದನ್ನು ಅಸಾಂವಿಧಾನಿಕ ಎಂದು ಖಂಡಿಸಲು ಮುಂದಾಗಿದೆ. 2024ರ ವಕ್ಫ್ ತಿದ್ದುಪಡಿ ಮಸೂದೆಯು 1995ರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಗುರಿಯನ್ನು ಹೊಂದಿದೆ. ಇದರ ಮುಖ್ಯ ಉದ್ದೇಶ ವಕ್ಫ್ ಮಂಡಳಿಗಳ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಪ್ರಸ್ತಾವಿತ ಕಾನೂನಿನ ಕುರಿತು ಚರ್ಚೆ ನಡೆಸಲು ಉಭಯ ಸದನಗಳಿಗೆ ತಲಾ ಎಂಟು ಗಂಟೆಗಳ ಕಾಲ ಅವಕಾಶ ನೀಡಲಾಗಿದೆ. ಇನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಮತ್ತು ಸದ್ದು ಮಾಡುತ್ತಿರುವ ಈ ಮಸೂದೆಗೆ ಇಷ್ಟೊಂದು ವಿರೋಧ ವ್ಯಕ್ತವಾಗಲು ಕಾರಣವೇನು?

ವಿವಾದಕ್ಕೆ ಕಾರಣದ ಅಂಶಗಳು

  • ಈ ಮಸೂದೆಯು ಮುಸ್ಲಿಮೇತರರನ್ನು ಅದರ ಸದಸ್ಯರನ್ನಾಗಿ ಸೇರಿಸಿಕೊಳ್ಳುವುದನ್ನು ಕಡ್ಡಾಯಗೊಳಿಸುತ್ತದೆ.
  • ವಿವಾದಿತ ಪ್ರಕರಣಗಳಲ್ಲಿ, ವಕ್ಫ್ ಆಸ್ತಿಯಾಗಿದ್ದರೆ ಅಥವಾ ಸರ್ಕಾರಕ್ಕೆ ಸೇರಿದ್ದರೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರ ನಿರ್ಧಾರವೇ ಅಂತಿಮ ಎಂದು ವಕ್ಫ್‌ ತಿದ್ದುಪಡಿ ಮಸೂದೆ ಹೇಳುತ್ತದೆ. ವಿವಾದಿತ ಪ್ರಕರಣಗಳಲ್ಲಿ ಸರ್ಕಾರಿ ಅಧಿಕಾರಿ ಎಂದಿಗೂ ಸರ್ಕಾರದ ವಿರುದ್ಧ ತೀರ್ಪು ನೀಡುವುದಿಲ್ಲ ಎಂದು ವಿರೋಧ ಪಕ್ಷಗಳು ಮತ್ತು ಮುಸ್ಲಿಂ ಸಂಘಟನೆಗಳು ವಾದಿಸಿವೆ.
  • ಈ ಕಾನೂನು ಜಾರಿಗೆ ಬಂದ 6 ತಿಂಗಳೊಳಗೆ ಪ್ರತಿ ವಕ್ಫ್ ಆಸ್ತಿಯನ್ನು ಕೇಂದ್ರ ಪೋರ್ಟಲ್‌ನಲ್ಲಿ ನೋಂದಾಯಿಸುವುದು ಕಡ್ಡಾಯ. ನಂತರ ಜನರು ಅಂತಹ ಆಸ್ತಿಗಳ ಮಾಲೀಕತ್ವಕ್ಕಾಗಿ ನ್ಯಾಯಾಲಯಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಕಾನೂನು ಪ್ರಕ್ರಿಯೆಗಳು ಮತ್ತು ಅವುಗಳ ಕಾಲಮಿತಿಯನ್ನು ನ್ಯಾಯಾಲಯಗಳ ತೀರ್ಪಿಗೆ ಬಿಡಬೇಕು ಎಂದು ಜೆಪಿಸಿ ಹೇಳಿದೆ.
  • ವಿರೋಧಕ್ಕೆ ಕಾರಣವಾದ ವಕ್ಫ್ ತಿದ್ದುಪಡಿ ಮಸೂದೆಯ ಮತ್ತೊಂದು ನಿಬಂಧನೆ ಎಂದರೆ ‘ಬಳಕೆದಾರರಿಂದ ವಕ್ಫ್’ ಷರತ್ತನ್ನು ತೆಗೆದುಹಾಕುವುದು. ಈ ಷರತ್ತಿನ ಪ್ರಕಾರ, ಒಂದು ಆಸ್ತಿಯನ್ನು ದೀರ್ಘಕಾಲದವರೆಗೆ ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಬಳಸಿದರೆ ಔಪಚಾರಿಕ ದಾಖಲೆಗಳಿಲ್ಲದೆಯೂ ಸಹ ಅದನ್ನು ವಕ್ಫ್ ಎಂದು ಪರಿಗಣಿಸಬಹುದು.
  • ಈ ಕಾನೂನು ಮೂಲಕ ವಕ್ಫ್ ಮಂಡಳಿಗಳಲ್ಲಿ ಮಹಿಳೆಯರನ್ನು ಕಡ್ಡಾಯವಾಗಿ ಸೇರಿಸುವುದು ಮುಸ್ಲಿಂ ಸಮುದಾಯದ ವಿರೋಧಕ್ಕೆ ಕಾರಣವಾಗಿದೆ.

ವಕ್ಫ್ ಎಂದರೇನು?

ಮುಸ್ಲಿಂ ಕಾನೂನಿನಿಂದ ಗುರುತಿಸಲ್ಪಟ್ಟ ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ನೀಡಿರುವ ಚರ ಅಥವಾ ಸ್ಥಿರ ಆಸ್ತಿಗಳ ಮೇಲೆ ಅಧಿಕಾರ ಹೊಂದಿರುವ ಸಂಘಟನೆ.

ವಕ್ಫ್‌ ಆಸ್ತಿಗಳು ಯಾವುವು?

ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಇಸ್ಲಾಂ ಧರ್ಮದ ಅನುಯಾಯಿಗಳು ಆಸ್ತಿಗಳನ್ನು ವಕ್ಫ್ ಗೆ ದಾನ ಮಾಡುತ್ತಾರೆ. ಇದನ್ನು ಸಮುದಾಯದ ಸದಸ್ಯರು ನಿರ್ವಹಿಸುತ್ತಾರೆ. ಪ್ರತಿಯೊಂದು ರಾಜ್ಯವು ವಕ್ಫ್ ಮಂಡಳಿಯನ್ನು ಹೊಂದಿದೆ. ಇದು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು, ಹಿಡಿದಿಟ್ಟುಕೊಳ್ಳಬಹುದು ಮತ್ತು ವರ್ಗಾಯಿಸಬಹುದು ಎಂಬ ಕಾನೂನು ಘಟಕವಾಗಿದೆ. ವಕ್ಫ್ ಆಸ್ತಿಗಳನ್ನು ಶಾಶ್ವತವಾಗಿ ಮಾರಾಟ ಮಾಡಲು ಅಥವಾ ಗುತ್ತಿಗೆಗೆ ನೀಡಲು ಸಾಧ್ಯವಿಲ್ಲ.

ಎಷ್ಟು ಭೂಮಿ ವಕ್ಫ್ ಮಂಡಳಿ ನಿಯಂತ್ರಣದಲ್ಲಿದೆ?

ದೇಶಾದ್ಯಂತ ವಕ್ಫ್ ಮಂಡಳಿಗಳು 9.4 ಲಕ್ಷ ಎಕರೆ ಭೂಮಿಯಲ್ಲಿ 8.7 ಲಕ್ಷ ಎಕರೆ ಆಸ್ತಿಗಳ ಮೇಲೆ ಸಂಪೂರ್ಣ ಅಧಿಕಾರವನ್ನು ಹೊಂದಿದೆ. ಇದರ ಅಂದಾಜು ಮೌಲ್ಯ 1.2 ಲಕ್ಷ ಕೋಟಿ ರೂ. ಈ ಆಸ್ತಿಯಿಂದಾಗಿ ವಕ್ಫ್ ಮಂಡಳಿಯನ್ನು ಭಾರತೀಯ ರೈಲ್ವೆ ಮತ್ತು ಸಶಸ್ತ್ರ ಪಡೆಗಳ ಅನಂತರ ಭಾರತದ ಮೂರನೇ ಅತಿದೊಡ್ಡ ಭೂಮಾಲೀಕ ಸ್ಥಾನವನ್ನು ಪಡೆದಿದೆ.

ಇದನ್ನೂ ಓದಿ: Waqf amendment bill: ವಕ್ಫ್‌ ಕದನಕ್ಕೆ ಕೆಲವೇ ಕ್ಷಣದಲ್ಲಿ ರಣಕಹಳೆ; ತೀವ್ರ ವಿರೋಧಕ್ಕೆ INDI ಬಣ ಸಜ್ಜು

ವಕ್ಫ್ ಕಾನೂನು ತಿದ್ದುಪಡಿ ಯಾಕೆ?

1995ರ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಯು ವಕ್ಫ್ ಮಂಡಳಿಗಳು ತಮ್ಮ ಆಸ್ತಿಗಳನ್ನು ಜಿಲ್ಲಾಧಿಕಾರಿ ಮುಂದೆ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸುತ್ತದೆ. ಇದರಿಂದಾಗಿ ಅವುಗಳ ಸರಿಯಾದ ಮೌಲ್ಯಮಾಪನ ನಡೆಸಬಹುದು. ಪ್ರಸ್ತುತ ವಕ್ಫ್ ಮಂಡಳಿಯ ಬಹುಪಾಲು ಸದಸ್ಯರು ಚುನಾಯಿತರಾಗಿದ್ದಾರೆ. ಆದರೆ ಹೊಸ ಮಸೂದೆ ಜಾರಿಯಾದ ಬಳಿಕ ಎಲ್ಲಾ ಸದಸ್ಯರನ್ನು ಸರ್ಕಾರ ನಾಮನಿರ್ದೇಶನ ಮಾಡುತ್ತದೆ.

ಈ ಮಸೂದೆಯಡಿ ಅಧಿಕಾರದಲ್ಲಿರುವವರು ಮಂಡಳಿಯ ಸಂಪೂರ್ಣ ನಿಯಂತ್ರಣ ಹೊಂದಿರುವುದು ಸಾಧ್ಯವಿಲ್ಲ. ಯಾಕೆಂದರೆ ಹೊಸ ಮಸೂದೆಯ ಪ್ರಕಾರ ಮುಸ್ಲಿಮೇತರರು ಕೂಡ ಇದಕ್ಕೆ ಸಿಇಒ ಆಗಿ ನೇಮಕಗೊಳ್ಳಬಹುದು. ಕನಿಷ್ಠ ಇಬ್ಬರು ಸದಸ್ಯರು ಮುಸ್ಲಿಮೇತರರಾಗಿರಬೇಕು ಎಂಬ ನಿಬಂಧನೆ ಇದರಲ್ಲಿ ಇದೆ.

ವಕ್ಫ್ ಮಂಡಳಿಗಳು ಮತ್ತು ಅದರ ವಿವಿಧ ರೀತಿಯ ಆಸ್ತಿಗಳು

ಭಾರತದಲ್ಲಿ ಒಟ್ಟು 30 ವಕ್ಫ್ ಮಂಡಳಿಗಳಿವೆ. ಅವುಗಳಲ್ಲಿ ಮುಖ್ಯವಾಗಿ ಕೃಷಿ ಭೂಮಿ, ಕಟ್ಟಡ, ದರ್ಗಾ/ಮಜಾರ್‌, ಸ್ಮಶಾನ, ಈದ್ಗಾ, ಖಾನ್‌ಖಾ, ಮದರಸಾ, ಮಸೀದಿ, ಫ್ಲ್ಯಾಟ್, ಕೊಳ, ಶಾಲೆ, ಅಂಗಡಿಗಳು ಮತ್ತು ಇತರ ಹಲವಾರು ಸಂಸ್ಥೆಗಳು ಸೇರಿವೆ.

ಪ್ರಕರಣಗಳು

ಸರ್ಕಾರದ ಪ್ರಕಾರ ವಕ್ಫ್ ನ್ಯಾಯಮಂಡಳಿಗಳಲ್ಲಿ 40,951 ವಕ್ಫ್ ಆಸ್ತಿಗೆ ಸಂಬಂಧಿಸಿದ ಪ್ರಕರಣಗಳು ಬಾಕಿ ಉಳಿದಿವೆ. ವಕ್ಫ್ ನ್ಯಾಯಮಂಡಳಿಯು ವಕ್ಫ್ ಅಥವಾ ವಕ್ಫ್ ಆಸ್ತಿಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸುವ ಅರೆ-ನ್ಯಾಯಾಂಗ ಸಂಸ್ಥೆಗಳಾಗಿವೆ. ಇವುಗಳಲ್ಲಿ, ವಕ್ಫ್ ಅನ್ನು ನಿರ್ವಹಿಸುವ ಸಂಸ್ಥೆಗಳ ವಿರುದ್ಧ ಮುಸ್ಲಿಂ ಸಮುದಾಯವು 9,942 ಪ್ರಕರಣಗಳನ್ನು ದಾಖಲಿಸಿವೆ.

ವಕ್ಫ್ ಮಂಡಳಿಯು ಆಸ್ತಿ ನಿರ್ವಹಣೆ, ಕಾನೂನು ವಿವಾದ, ಮಹಿಳಾ ಪ್ರಾತಿನಿಧ್ಯ ಮತ್ತು ಸುಧಾರಣೆಗಳ ಅಗತ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ಹಲವಾರು ಪ್ರಕರಣಗಳ ವಿಚಾರಣೆ ನಡೆಸುತ್ತಿದೆ

ತೀರ್ಪುಗಳನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದೇ?

ವಕ್ಫ್ ನ್ಯಾಯಮಂಡಳಿಯು ನೀಡುವ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು. ನ್ಯಾಯಮಂಡಳಿಯ ನಿರ್ಣಯಕ್ಕೆ ಹೈಕೋರ್ಟ್ ಒಪ್ಪಿಗೆ ನೀಡಬಹುದು ಅಥವಾ ಅದನ್ನು ತಡೆ ಹಿಡಿಯಬಹುದು, ಬದಲಾಯಿಸಬಹುದು.

ವಕ್ಫ್ ಆಸ್ತಿಗಳನ್ನು ಹೇಗೆ ನಿರ್ವಹಿಸಲಾಗುತ್ತದೆ?

ವಕ್ಫ್‌ ಆಸ್ತಿಗಳನ್ನು 1995 ರ ವಕ್ಫ್ ಕಾಯ್ದೆಯ ಮೂಲಕ ನಿಯಂತ್ರಿಸಲಾಗುತ್ತದೆ. ಸರ್ವೇ ಆಯುಕ್ತರು ಸ್ಥಳೀಯ ತನಿಖೆಗಳನ್ನು ನಡೆಸಿ, ಸಾಕ್ಷಿಗಳನ್ನು ಕರೆಸಿ, ಸಾರ್ವಜನಿಕ ದಾಖಲೆಗಳನ್ನು ಪರಿಶೀಲಿಸಿ ವಕ್ಫ್ ಎಂದು ಘೋಷಿಸಲಾದ ಎಲ್ಲಾ ಆಸ್ತಿಗಳನ್ನು ಪಟ್ಟಿ ಮಾಡುತ್ತಾರೆ. ಈ ಆಸ್ತಿಗಳಿಗೆ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಲು ವಕ್ಫ್ ಗೆ ಅನುಮತಿಯನ್ನು ನೀಡುತ್ತಾರೆ.

ವಕ್ಫ್ ಮಂಡಳಿಯು ತನಗೆ ಇಷ್ಟವಾದ ಆಸ್ತಿಯ ಮೇಲೆ ಹಕ್ಕು ಸಾಧಿಸಬಹುದೇ?

ವಕ್ಫ್ ಕಾಯ್ದೆಯ ಸೆಕ್ಷನ್ 40 ರ ಅಡಿಯಲ್ಲಿ ಧಾರ್ಮಿಕ ಕಾರ್ಯಗಳಿಗಾಗಿ ದಾನ ಮಾಡಲಾದ ಇಸ್ಲಾಂ ಅನುಯಾಯಿಗಳ ಆಸ್ತಿಗಳ ಮೇಲೆ ವಕ್ಫ್ ಮಂಡಳಿಯು ಹಕ್ಕು ಸಾಧಿಸಬಹುದು. ಯಾವುದೇ ಆಸ್ತಿಗಳನ್ನು ನೇರವಾಗಿ ಹಕ್ಕು ಸಾಧಿಸುವ ಬಗ್ಗೆ ಅಥವಾ ಖಾಸಗಿ ಆಸ್ತಿಗಳ ಬಗ್ಗೆಯೂ ಈ ಕಾನೂನು ಏನನ್ನೂ ಹೇಳುವುದಿಲ್ಲ. ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಹೇಳಲು ಸಾಧ್ಯವಿಲ್ಲ. ಧಾರ್ಮಿಕ ಅಥವಾ ಸಾಮಾಜಿಕ ಕಾರ್ಯಗಳಿಗಾಗಿ ದಾನ ಮಾಡಲಾದ ಆದರೆ ಈ ಉದ್ದೇಶಕ್ಕಾಗಿ ಬಳಸದ ಆಸ್ತಿಗಳನ್ನು ಒಳಗೊಂಡಿರುತ್ತದೆ.