#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

President's Rule: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ

ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ರಾಜೀನಾಮೆ ನೀಡಿದ 5 ದಿನಗಳ ಬಳಿಕ ಗುರುವಾರ (ಫೆ. 13) ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿದೆ. 1951ರ ಬಳಿಕ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತಿರುವುದು ಇದು 11ನೇ ಬಾರಿ ಎನ್ನುವುದು ವಿಶೇಷ.

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ

ಬಿರೇನ್‌ ಸಿಂಗ್‌ .

Profile Ramesh B Feb 13, 2025 8:46 PM

ಇಂಫಾಲ: ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ (N. Biren Singh) ರಾಜೀನಾಮೆ ನೀಡಿದ 5 ದಿನಗಳ ಬಳಿಕ ಗುರುವಾರ (ಫೆ. 13) ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ (President's Rule) ಜಾರಿಗೊಳಿಸಲಾಗಿದೆ. ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ನಡೆದು ಸುಮಾರು 250 ಮಂದಿ ಮೃತಪಟ್ಟ 21 ತಿಂಗಳ ಬಳಿಕ ಫೆ. 9ರಂದು ಅವರು ರಾಜೀನಾಮೆ ಸಲ್ಲಿಸಿದ್ದರು. ಬಿರೇನ್‌ ಸಿಂಗ್‌ ರಾಜೀನಾಮೆ ನೀಡಿ ಇಷ್ಟು ದಿನವಾದರೂ ಮತ್ತೊಬ್ಬ ಮುಖ್ಯಮಂತ್ರಿಯನ್ನು ಬಿಜೆಪಿ (BJP) ಸೂಚಿಸದ ಹಿನ್ನೆಲೆಯಲ್ಲಿ ಇದೀಗ ರಾಷ್ಟ್ರಪತಿ ಆಡಳಿತ ಜಾರಿಗಳಿಸಲಾಗಿದೆ.

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಸುತ್ತೋಲೆ ಹೊರಡಿಸಿದ್ದಾರೆ. ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ನೀಡಿದ ವರದಿ ಪ್ರಕಾರ, ರಾಜ್ಯದಲ್ಲಿ ಉದ್ಭವಿಸಿದ ರಾಜಕೀಯ ಬೆಳವಣಿಗೆಯಿಂದ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇನ್ನುಮುಂದೆ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ಪರಮಾಧಿಕಾರ ಇರಲಿದೆ. 1951ರ ಬಳಿಕ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತಿರುವುದು ಇದು 11ನೇ ಬಾರಿ ಎನ್ನುವುದು ವಿಶೇಷ.



ಸದ್ಯ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಹಿಂದಿರುಗಿದ ಬಳಿಕ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ನಿರೀಕ್ಷೆ ಇದೆ. ಮಣಿಪುರದಲ್ಲಿ 2023ರ ಮೇಯಲ್ಲಿ ಆರಂಭವಾದ ಜನಾಂಗೀಯ ಹಿಂಸಾಚಾರ ಇನ್ನೂ ಬೂದಿ ಮುಚ್ಚಿದ ಕಡಂಡದಂತಿದೆ. ಮೈಟಿ ಮತ್ತು ಕುಕಿ ಸಮುದಾಯಗಳ ನಡುವಿನ ಈ ಸಂಘರ್ಷದಲ್ಲಿ ಈವರೆಗೆ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿ ವಿಪಕ್ಷಗಳು ಬಿರೇನ್‌ ಸಿಂಗ್‌ ವಿರುದ್ಧ ಕಿಡಿಕಾರಿದ್ದವು. ಅಲ್ಲದೆ ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್‌ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಮುಂದಾದ ಹಿನ್ನೆಲೆಯಲ್ಲಿ ಬಿರೇನ್‌ ಸಿಂಗ್‌ ರಾಜೀನಾಮೆ ನೀಡಿದ್ದರು.

ರಾಜೀನಾಮೆ ನೀಡಿದ್ದ ಬಿರೇನ್‌ ಸಿಂಗ್‌ ಹೇಳಿದ್ದೇನು?

ರಾಜೀನಾಮೆ ಸಲ್ಲಿಸಿದ ಬಳಿಕ ಬಿರೇನ್‌ ಸಿಂಗ್‌, "ಮಣಿಪುರದ ಜನತೆಗೆ ಸೇವೆ ಸಲ್ಲಿಸಲು ಸಾಧ್ಯವಾಗಿದ್ದಕ್ಕೆ ಹೆಮ್ಮೆ ಇದೆ. ಪ್ರತಿಯೊಬ್ಬ ಮಣಿಪುರ ಪ್ರಜೆಯ ಹಿತಾಸಕ್ತಿಯನ್ನು ಕಾಪಾಡಲು ಸಮಯೋಚಿತ ಕ್ರಮಗಳು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ವಿವಿಧ ಯೋಜನೆಗಳ ಅನುಷ್ಠಾನಗೊಳಿಸಿದ ಕೇಂದ್ರ ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ" ಎಂದು ತಿಳಿಸಿದ್ದರು.

ಕ್ಷಮೆಯಾಚಿಸಿದ್ದ ಸಿಎಂ

2024ರ ಡಿ. 31ರಂದು ಬಿರೇನ್‌ ಸಿಂಗ್‌ ರಾಜ್ಯದ ಜನತೆಯ ಕ್ಷಮೆ ಕೋರಿದ್ದರು. ಜನಾಂಗೀಯ ಘರ್ಷಣೆಯಿಂದಾಗಿ ಈಶಾನ್ಯ ರಾಜ್ಯ ಮಣಿಪುರದಲ್ಲಿ ಸಂಭವಿಸಿದ ದುರದೃಷ್ಟಕರ ಬೆಳವಣಿಗೆಗಳಿಗೆ ಮುಖ್ಯಮಂತ್ರಿ ಅವರು “ನನ್ನನ್ನು ಕ್ಷಮಿಸಿ” ಎಂದು ಹೇಳಿದ್ದರು. ಈ ವರ್ಷವು ಆಶಾದಾಯಕದೊಂದಿಗೆ ಕೊನೆಗೊಳ್ಳುತ್ತದೆ ಮತ್ತು 2025ರಲ್ಲಿ ರಾಜ್ಯವು ಸಹಜ ಸ್ಥಿತಿಗೆ ಮರಳುತ್ತದೆ ಎಂದು ಆಶಿಸಿತ್ತೇನೆ ಎಂಬುದಾಗಿ ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Biren Singh: ಮಣಿಪುರದಲ್ಲಿ ಅವಿಶ್ವಾಸ ನಿಲುವಳಿ ಮಂಡನೆಗೆ ಕಾಂಗ್ರೆಸ್‌ ಸಿದ್ಧತೆ; ಡ್ಯಾಮೇಜ್‌ ಕಂಟ್ರೋಲ್‌ಗೆ ಸಿಎಂ ಬಿರೇನ್‌ ಸಿಂಗ್‌ ರಾಜೀನಾಮೆ?

ಯಾಕಾಗಿ ಹಿಂಸಾಚಾರ?

ಪರಿಶಿಷ್ಟ ಪಂಗಡದ (ST) ಸ್ಥಾನಮಾನಕ್ಕಾಗಿ ಮೈಟಿ ಸಮುದಾಯ ಬೇಡಿಕೆ ಮುಂದಿಟ್ಟ ಬಳಿಕ ಬುಡಕಟ್ಟು ಸಮುದಾಯ ಕುಕಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಹಿಂಸಾಚಾರ ಭುಗಿಲೆದ್ದಿತ್ತು. ಮಣಿಪುರದ ಜನಸಂಖ್ಯೆಯ ಶೇ. 53ರಷ್ಟಿರುವ ಮೈಟಿ ಸಮುದಾಯದವರು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಆದಿವಾಸಿಗಳು ಮಣಿಪುರ ಜನಸಂಖ್ಯೆಯ ಶೇ. 40ರಷ್ಟಿದ್ದಾರೆ ಮತ್ತು ಮುಖ್ಯವಾಗಿ ಬೆಟ್ಟಗಳಲ್ಲಿ ವಾಸಿಸುತ್ತಿದ್ದಾರೆ.