#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Biren Singh: ಮಣಿಪುರದಲ್ಲಿ ಅವಿಶ್ವಾಸ ನಿಲುವಳಿ ಮಂಡನೆಗೆ ಕಾಂಗ್ರೆಸ್‌ ಸಿದ್ಧತೆ; ಡ್ಯಾಮೇಜ್‌ ಕಂಟ್ರೋಲ್‌ಗೆ ಸಿಎಂ ಬಿರೇನ್‌ ಸಿಂಗ್‌ ರಾಜೀನಾಮೆ?

ಮಣಿಪುರದಲ್ಲಿ ಭಾನುವಾರ (ಫೆ. 9) ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ದಿಲ್ಲಿಗೆ ಧಾವಿಸಿದ್ದಾರೆ. ಸರ್ಕಾರದ ವಿರುದ್ಧ ವಿಪಕ್ಷ ಕಾಂಗ್ರೆಸ್‌ ಅವಿಶ್ವಾಸ ನಿರ್ಣಯ ಮಂಡಿಸಲು ತಯಾರಾದ ಹಿನ್ನೆಲೆಯಲ್ಲಿ ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಮಣಿಪುರ: ಡ್ಯಾಮೇಜ್‌ ಕಂಟ್ರೋಲ್‌ಗೆ ಸಿಎಂ ಬಿರೇನ್‌ ಸಿಂಗ್‌ ರಾಜೀನಾಮೆ?

ಬಿರೇನ್‌ ಸಿಂಗ್‌ .

Profile Ramesh B Feb 9, 2025 8:04 PM

ಇಂಫಾಲ: ಬೂದಿ ಮುಚ್ಚಿದ ಕೆಂಡದಂತಿರುವ ಮಣಿಪುರದಲ್ಲಿ ಭಾನುವಾರ (ಫೆ. 9) ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ (Biren Singh) ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸರ್ಕಾರದ ವಿರುದ್ಧ ವಿಪಕ್ಷ ಕಾಂಗ್ರೆಸ್‌ (Congress) ಅವಿಶ್ವಾಸ ನಿರ್ಣಯ ಮಂಡಿಸಲು ತಯಾರಾದ ಹಿನ್ನೆಲೆಯಲ್ಲಿ ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಸದ್ಯ ಬಿರೇನ್‌ ಸಿಂಗ್‌ ಪಕ್ಷದ ಉನ್ನತ ನಾಯಕರನ್ನು ಭೇಟಿಯಾಗಲು ದಿಲ್ಲಿಗೆ ತೆರಳಿದ್ದಾರೆ. ಸೋಮವಾರ (ಫೆ. 10) ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ಪಕ್ಷವು ಅವಿಶ್ವಾಸ ನಿರ್ಣಯವನ್ನು ಮಂಡಿಸಲಿದೆ ಎಂದು ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಕೀಶಮ್ ಮೇಘಚಂದ್ರ ಸಿಂಗ್ ತಿಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡು ಬಂದಿದೆ.

ಹಿರಿಯ ಬಿಜೆಪಿ ನಾಯಕ ಸಂಬಿತ್ ಪಾತ್ರಾ ಅವರು ರಾಜ್ಯ ರಾಜಧಾನಿ ಇಂಫಾಲ್‌ಗೆ ಧಾವಿಸಿದ್ದಾರೆ. 2023ರ ಮೇ 3ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಪ್ರಾರಂಭವಾದ ನಂತರ ಬಿಜೆಪಿ ಸರ್ಕಾರದ ವಿರುದ್ಧ ಮಂಡನೆಯಾಗುವ ಮೊದಲ ಅವಿಶ್ವಾಸ ಗೊತ್ತುವಳಿ ಇದಾಗಲಿದೆ. ಕಳೆದ ನವೆಂಬರ್‌ನಲ್ಲಿ ಕಾನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ಬಿರೇನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿತ್ತು. ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅದು ಆರೋಪಿಸಿತ್ತು.

ಎನ್‌ಪಿಪಿ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿದ್ದು ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಯಾಕೆಂದರೆ ಬಿಜೆಪಿ 37 ಶಾಸಕರನ್ನು ಹೊಂದಿದೆ. ಜತೆಗೆ ನಾಗಾ ಪೀಪಲ್ಸ್ ಫ್ರಂಟ್(NPF)ನ 5 ಶಾಸಕರು ಮತ್ತು ಮೂವರು ಸ್ವತಂತ್ರರು ಬೆಂಬಲ ನೀಡಿದ್ದಾರೆ. ಮಣಿಪುರದಲ್ಲಿ ಒಟ್ಟು 60 ವಿಧಾನಸಭಾ ಕ್ಷೇತ್ರಗಳಿವೆ.



ನಾಯಕತ್ವ ಬದಲಾವಣೆಯ ಕೂಗು

ಅದಾಗ್ಯೂ, ಸುಮಾರು 12 ಶಾಸಕರು ನಾಯಕತ್ವ ಬದಲಾವಣೆಗೆ ಆಗ್ರಹಿಸುತ್ತಲೇ ಬಂದಿದ್ದಾರೆ. ಈ ಮಧ್ಯೆ ಸ್ಪೀಕರ್ ಮತ್ತು ಮುಖ್ಯಮಂತ್ರಿ ನಡುವೆ ಭಿನ್ನಾಭಿಪ್ರಾಯಗಳಿದ್ದವು ಎಂದು ಮೂಲಗಳು ತಿಳಿಸಿವೆ. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಈ ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿದರೆ ಸರ್ಕಾರ ಇಕ್ಕಟ್ಟಿಗೆ ಸಿಲುಕಲಿದೆ. ಆದ್ದರಿಂದ ವಿಶ್ವಾಸಮತ ಯಾಚನೆಯನ್ನು ತಪ್ಪಿಸಲು ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಸಂಬಿತ್ ಪಾತ್ರಾ ಅವರನ್ನು ಇಂಫಾಲ್‌ಗೆ ಕಳುಹಿಸಲಾಗಿದೆ ಎಂದು ಬಿಜೆಪಿ ಹೇಳಿದೆ.

ಬಿರೇನ್ ಸಿಂಗ್ ಸರ್ಕಾರವನ್ನು ಬೆಂಬಲಿಸುವ 5 ಜೆಡಿಯು ಮತ್ತು ನಾಲ್ವರು ಎನ್‌ಪಿಪಿ ಶಾಸಕರ ವಿರುದ್ಧ ಕಾಂಗ್ರೆಸ್ ಅನರ್ಹತೆ ಅರ್ಜಿ ಸಲ್ಲಿಸಿದೆ. ರಾಜ್ಯ ವಿಧಾನಸಭೆಯ ಸ್ಪೀಕರ್ ಸತ್ಯಬ್ರತಾ ಸಿಂಗ್ ತಮ್ಮ ತೀರ್ಪನ್ನು ಕಾಯ್ದಿರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Droupadi Murmu: ನಾಳೆ ಮಹಾಕುಂಭ ಮೇಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪುಣ್ಯಸ್ನಾನ!

ಬಿಜೆಪಿಯ ಪ್ರಮುಖ ಮಿತ್ರ ಪಕ್ಷವಾದ ನಾಗಾ ಪೀಪಲ್ಸ್ ಫ್ರಂಟ್ (NPF) ಅವಿಶ್ವಾಸ ಗೊತ್ತುವಳಿ ಮಂಡನೆ ವೇಳೆ ಯಾವ ರೀತಿಯ ತೀರ್ಮಾನ ಕೈಗೊಳ್ಳಲಿದೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ. ರಾಜ್ಯ ಬಿಜೆಪಿ ಮುಖ್ಯಸ್ಥೆ ಎ.ಸರ್ದಾ ದೇವಿ ಅವರನ್ನು ಇಂಫಾಲದಲ್ಲೇ ಉಳಿಯಲು ಸೂಚಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 60 ಸದಸ್ಯಬಲದ ಮಣಿಪುರ ವಿಧಾನಸಭೆಯಲ್ಲಿ ಸದ್ಯ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ 49 ಸ್ಥಾನ ಹೊಂದಿದೆ.