ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತರಗತಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದಾಗಲೇ ಕುಸಿದು ಬಿದ್ದ ವಿದ್ಯಾರ್ಥಿನಿ ಸಾವು; ಕೊನೆಯ ಕ್ಷಣ ಕ್ಯಾಮರಾದಲ್ಲಿ ಸೆರೆ

Heart Attack: ತರಗತಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದ ವೇಳೆ ವಿದ್ಯಾರ್ಥಿನಿಯೊಬ್ಬಳು ಏಕಾಏಕಿ ಕುಸಿದುಬಿದ್ದು ಹೃದಯಾಘಾತದಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಆಂಧ್ರ ಪ್ರದೇಶದ ಕೊನಸೀಮಾ ಜಿಲ್ಲೆಯ ರಾಮಚಂದ್ರಪುರಂನಲ್ಲಿ ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.

ತರಗತಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದಾಗಲೇ ಕುಸಿದು ಬಿದ್ದ ವಿದ್ಯಾರ್ಥಿನಿ

ಸಾಂದರ್ಭಿಕ ಚಿತ್ರ -

Priyanka P
Priyanka P Dec 14, 2025 6:38 PM

ಹೈದರಾಬಾದ್, ಡಿ. 14: ಇತ್ತೀಚಿನ ದಿನಗಳಲ್ಲಿ, ಯುವ ಪೀಳಿಗೆಯಲ್ಲಿ ಹೃದಯಾಘಾತದ (Heart Attack) ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಜಿಮ್‌ನಲ್ಲಿ, ಕುಟುಂಬ ಕಾರ್ಯಕ್ರಮಗಳ ಸಮಯದಲ್ಲಿ ಅಥವಾ ನೃತ್ಯ ಮಾಡುವಾಗ ಜನರು ಹೃದಯಾಘಾತದಿಂದ ಕುಸಿದು ಬೀಳುತ್ತಿರುವ ದೃಶ್ಯಗಳ ವಿಡಿಯೊಗಳು ವೈರಲ್ (Viral Video) ಆಗುತ್ತಿವೆ. ಇದೀಗ ವಿದ್ಯಾರ್ಥಿನಿಯೊಬ್ಬಳು ತರಗತಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದಾಗ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಆಂಧ್ರ ಪ್ರದೇಶದ (Andhra Pradesh) ಕೊನಸೀಮಾ ಜಿಲ್ಲೆಯ ರಾಮಚಂದ್ರಪುರಂನಲ್ಲಿ ಈ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ನಲ್ಲಮಿಲ್ಲಿ ಸಿರಿ ಎಂದು ಗುರುತಿಸಲಾಗಿದೆ. ತರಗತಿಯಲ್ಲಿ ಪ್ರಾಧ್ಯಾಪಕರು ಪಾಠ ಮಾಡುತ್ತಿದ್ದರೆ ಈಕೆ ಶ್ರದ್ಧೆಯಿಂದ ಕುಳಿತು ಕೇಳುತ್ತಿದ್ದಳು. ಈ ವೇಳೆ ಹೃದಯಾಘಾತ ಸಂಭವಿಸಿದೆ. ಈ ಆಘಾತಕಾರಿ ಘಟನೆ ತರಗತಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶನಿವಾರ ಬೆಳಗ್ಗೆ 9:45ರ ಸುಮಾರಿಗೆ ಈ ಘಟನೆ ನಡೆದಿದೆ.

ಇಸ್ಪಿಟ್‌ ಅಡ್ಡದ ಮೇಲೆ ದಾಳಿ; ಪೊಲೀಸ್‌ ರಿವಾಲ್ವರ್‌ ನೋಡಿ ವ್ಯಕ್ತಿಗೆ ಹೃದಯಾಘಾತ

ಮೊದಲ ಬೆಂಚಿನಲ್ಲಿ ಕುಳಿತಿದ್ದ ಹುಡುಗಿ ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು ವಿಡಿಯೊದಲ್ಲಿ ನೋಡಬಹುದು. ಬೋರ್ಡ್ ಮೇಲೆ ಬರೆಯುತ್ತಿದ್ದ ಪ್ರಾಧ್ಯಾಪಕರು, ಕೂಡಲೇ ಧಾವಿಸಿ ಬಂದು ಆಕೆಯನ್ನು ಎತ್ತಿಕೊಂಡಿದ್ದಾರೆ. ಇತರ ವಿದ್ಯಾರ್ಥಿಗಳು ಸಹ ಅವರಿಗೆ ಸಹಾಯ ಮಾಡುತ್ತಾರೆ.

ಕೂಡಲೇ ನಲ್ಲಮಿಲ್ಲಿ ಸಿರಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಆಕೆ ಈಗಾಗಲೇ ಮೃತಪಟ್ಟಿದ್ದಾಳೆಂದು ಘೋಷಿಸಿದರು. ನಲ್ಲಮಿಲ್ಲಿ ಸಿರಿ ಕೊನಸೀಮಾ ಜಿಲ್ಲೆಯ ಪಸಲಪುಡಿ ಗ್ರಾಮದವಳಾಗಿದ್ದು, 15 ವರ್ಷ ವಯಸ್ಸು. ಸದ್ಯ, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ವಿಡಿಯೊ ವೀಕ್ಷಿಸಿ:



ಈ ತಿಂಗಳ ಆರಂಭದಲ್ಲಿ, ಉತ್ತರ ಪ್ರದೇಶದ ಲಖನೌದಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ, ಆರನೇ ತರಗತಿಯ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆಯುವಾಗ ಹೃದಯಾಘಾತದಿಂದ ಮೃತಪಟ್ಟಿದ್ದ. ಹಿಂದೆಲ್ಲ ವಯಸ್ಸಾದ ಬಳಿಕ ಬರುತ್ತಿದ್ದ ಹೃದಯ ಕಾಯಿಲೆ, ಇಂದು ಚಿಕ್ಕ ವಯಸ್ಸಿನವರನ್ನೇ ಕಾಡುತ್ತಿರುವುದು ದುರಂತ. ಅದರಲ್ಲೂ ಯಾವುದೇ ಹೃದಯ ಕಾಯಿಲೆಯಿಲ್ಲದೆ, ಹೃದಯಾಘಾತ ಸಂಭವಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ನಿಜಕ್ಕೂ ಕಳವಳಕಾರಿ.

ಇತ್ತೀಚೆಗಷ್ಟೇ ಸ್ಯಾಂಡಲ್‍ವುಡ್ ನಿರ್ದೇಶಕ‌, ಸಂಗೀತ ನಿರ್ದೇಶಕ ಸಂಗೀತ್‌ ಸಾಗರ್‌ ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಹರಿಹರಪುರದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಹೃದಯಾಘಾತದಿಂದ ಸಂಗೀತ್‌ ಸಾಗರ್‌ ಕುಸಿದು ಬಿದ್ದಿದ್ದರು ತಕ್ಷಣ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು.

ಇನ್ನೊಂದೆಡೆ ಸ್ಕೂಟರ್ ರಿಪೇರಿಗಾಗಿ ತೆರಳುತ್ತಿದ್ದ 27 ವರ್ಷದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದ ಘಟನೆ ಮಧ್ಯ ಪ್ರದೇಶದ ಪರ್ದೇಶಿಪುರದಲ್ಲಿ ನಡೆದಿತ್ತು. ಯುವಕ ತನ್ನ ದ್ವಿಚಕ್ರ ವಾಹನವನ್ನು ಕಾಲ್ನಡಿಗೆಯಲ್ಲಿ ತಳ್ಳುತ್ತಾ ಹೋಗಿದ್ದ. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದ. ವಿನೀತ್ ಕುಚೇಕರ್ (27) ಮೃತ ದುರ್ದೈವಿ. ಈತ ಬೆಳಗ್ಗೆ 11:30ಕ್ಕೆ ತನ್ನ ಸ್ಕೂಟರ್‌ ಸರಿಪಡಿಸಲು ತೆರಳುತ್ತಿದ್ದ. ಕೇವಲ 300 ಮೀಟರ್ ದೂರ ಕ್ರಮಿಸುತ್ತಿದ್ದಾಗಲೇ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕುಸಿದು ಬಿದ್ದಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಿದರೂ, ಅದಾಗಲೇ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದರು.