Terrorist Killed: ಭಾರೀ ಗುಂಡಿನ ಚಕಮಕಿ- ಮೂವರು ಜೈಶ್ ಉಗ್ರರನ್ನು ಹೊಡೆದುರುಳಿಸಿದ ಸೇನೆ
Pulwama Encounter: ಜಮ್ಮು ಮತ್ತು ಕಾಶ್ಮೀರದ ಅವಂತಿಪೋರದಲ್ಲಿ ಇಂದು ಬೆಳಿಗ್ಗೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಕೆಲವು ಭಯೋತ್ಪಾದಕರು ಅಡಗಿರುವ ಬಗ್ಗೆ ಮಾಹಿತಿ ಇದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ತೀವ್ರಗೊಂಡಿದೆ.


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir)ದ ಪುಲ್ವಾಮದಲ್ಲಿ ಇಂದು ಬೆಳ್ಳಬೆಳಗ್ಗೆ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ(Terrorist Encounter) ಸೇನೆ ಯಶಸ್ವಿಯಾಗಿದೆ. ಉಗ್ರರು ಅವಿತಿರುವ ಬಗ್ಗೆ ಗುಪ್ತಚರ ಇಲಾಖೆಯಿಂದ ಖಚಿತ ಮಾಹಿತಿ ಮೇರೆಗೆ ಸೇನೆ, ಅವಂತಿಪೋರದ ನಾಡರ್ ಮತ್ತು ತ್ರಾಲ್ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಕಳೆದ 48 ಗಂಟೆಗಳಲ್ಲಿ ಎರಡನೇ ಸೇನಾ ಕಾರ್ಯಾಚರಣೆ ಇದಾಗಿದ್ದು, ಈವರೆಗೆ ಒಟ್ಟು ಆರು ಉಗ್ರರು ಹತರಾಗಿದ್ದಾರೆ. ಇನ್ನೂ ಕೆಲವು ಉಗ್ರರು ಅವಿತಿರುವ ಬಗ್ಗೆ ಮಾಹಿತಿ ಇದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.
#Encounter has started at Nader, Tral area of #Awantipora. Police and security forces are on the job. Further details shall follow.@JmuKmrPolice
— Kashmir Zone Police (@KashmirPolice) May 15, 2025
ಶೋಪಿಯಾನ್‌ನಲ್ಲಿ ಮೂವರು ಭಯೋತ್ಪಾದಕರು ಹತ
ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳೊಂದಿಗಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ಈ ಚಕಮಕಿ ಮೊದಲಿಗೆ ಕುಲ್ಗಾಮ್‌ನಲ್ಲಿ ಆರಂಭವಾಗಿ, ಬಳಿಕ ಶೋಪಿಯಾನ್‌ನ ಕಾಡುಪ್ರದೇಶದಲ್ಲೂ ನಡೆದಿತ್ತು. ಗುಪ್ತಚರ ಮಾಹಿತಿಯ ಆಧಾರದಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರನ್ನು ತಡೆಗಟ್ಟಿದ್ದವು.
ಈ ಸುದ್ದಿಯನ್ನು ಓದಿ: Black Forest operation: ಬ್ಲ್ಯಾಕ್ ಫಾರೆಸ್ಟ್ ಕಾರ್ಯಾಚರಣೆ- 31 ನಕ್ಸಲರ ಎನ್‌ಕೌಂಟರ್
ಭಾರತೀಯ ಸೇನೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವಂತೆ, "ಮೇ 13, 2025 ರಂದು, ಶೋಪಿಯಾನ್‌ನ ಶೋಕಲ್ ಕೆಲ್ಲರ್ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ರಾಷ್ಟ್ರೀಯ ರೈಫಲ್ಸ್ ಘಟಕದಿಂದ ನಿಖರವಾದ ಗುಪ್ತಚರ ಮಾಹಿತಿ ಆಧರಿಸಿ, ಭಾರತೀಯ ಸೇನೆಯು ಶೋಧ ಕಾರ್ಯಾಚರಣೆ ಆರಂಭಿಸಿತು. ಕಾರ್ಯಾಚರಣೆಯ ವೇಳೆ ಭಯೋತ್ಪಾದಕರು ಭಾರಿ ಗುಂಡಿನ ದಾಳಿ ನಡೆಸಿದರು, ತೀವ್ರ ಗುಂಡಿನ ಕಾಳಗದಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಯ್ತು" ಎಂದು ತಿಳಿಸಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಾಗೆ ಹಲವಾರು ಕಾರ್ಯಾಚರಣೆಗಳು ನಡೆಯುತ್ತಿವೆ, ವಿಶೇಷವಾಗಿ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ, ಮೇ 7 ರಂದು ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ಒಂಬತ್ತು ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿ ಆಪರೇಷನ್ ಸಿಂದೂರ್ ಆರಂಭಿಸಿತು. ಈ ಕಾರ್ಯಾಚರಣೆಯಿಂದ ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹೆಚ್ಚಾಯಿತು, ದಾಳಿಗಳು ಮತ್ತು ಪ್ರತಿದಾಳಿಗಳು ನಡೆದವು.
ಮೇ 10 ರಂದು, ಭಾರತ ಮತ್ತು ಪಾಕಿಸ್ತಾನವು ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಗೆ ನೀಡಿ, ಸಂಜೆ 5 ಗಂಟೆಯಿಂದ ಸೈನಿಕ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದವು. ಆದರೆ, ಒಪ್ಪಂದ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನವು ಒಪ್ಪಂದವನ್ನು ಉಲ್ಲಂಘಿಸಿತ್ತು.