‘ಸಂಸತ್ ಚಲೋ’ ಮೆರವಣಿಗೆ ವೇಳೆ ಪ್ರತಿಭಟನಾಕಾರರ ಮೇಲೆ ಆರ್‌ಎಎಫ್ ಪೆಲೆಟ್ ಗನ್ ಬಳಕೆ: ತನಿಖೆಗೆ ಆದೇಶ
pellet gun firing: ಜುಲೈ 20ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಂಸತ್ ಚಲೋ ಮೆರವಣಿಗೆ ವೇಳೆ ಆರ್‌ಎಎಫ್ ಸಿಬ್ಬಂದಿ ಪೆಲೆಟ್ ಗುಂಡುಗಳನ್ನು ಹಾರಿಸಿದ್ದಾರೆ ಎಂಬ ವರದಿಗಳನ್ನು ಸಿಆರ್‌ಪಿಎಫ್ ವಿವರವಾಗಿ ಪರಿಶೀಲನೆ ನಡೆಸಲು ಆರಂಭಿಸಿದೆ. ಪ್ರತಿಭಟನೆಯ ಸಮಯದಲ್ಲಿ ಪೆಲೆಟ್ ಗನ್‌ಗಳನ್ನು ಬಳಸಲಾಗಿದೆ ಎಂದು ಪೊಲೀಸರು ಮತ್ತು ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದ ಮಧ್ಯೆ ಈ ಬೆಳವಣಿಗೆಗಳು ನಡೆದಿವೆ.
ಪ್ರತಿಭಟನಾಕಾರರ ಮೇಲೆ ಆರ್‌ಎಎಫ್ ಪೆಲೆಟ್ ಗನ್ ಬಳಕೆ -
ನವದೆಹಲಿ, ಜು.27: ಜುಲೈ 20ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ (Delhi protest) ನಡೆದ ಸಂಸತ್ ಚಲೋ ಮೆರವಣಿಗೆ (Sansad Chalo march) ವೇಳೆ ಆರ್‌ಎಎಫ್ ಸಿಬ್ಬಂದಿ ಪೆಲೆಟ್ ಗುಂಡುಗಳನ್ನು ಹಾರಿಸಿದ್ದಾರೆ ಎಂಬ ವರದಿಗಳನ್ನು ಸಿಆರ್‌ಪಿಎಫ್ ವಿವರವಾಗಿ ಪರಿಶೀಲನೆ ನಡೆಸಲು ಆರಂಭಿಸಿದೆ. ನೆಲಕ್ಕೆ ಬಡಿದ ಪೆಲೆಟ್‌ಗಳಿಂದ ಕೆಲ ಪ್ರತಿಭಟನಾಕಾರರು ಗಾಯಗೊಂಡ ನಂತರ ಈ ಬೆಳವಣಿಗೆ ನಡೆದಿದೆ. ಪೆಲೆಟ್‌ಗಳನ್ನು ಬಳಸಲಾಗಿದೆ ಎಂದು ಮೂಲಗಳು ಸೂಚಿಸಿವೆ.
ಪ್ರತಿಭಟನೆಯ ಸಮಯದಲ್ಲಿ ಪೆಲೆಟ್ ಗನ್‌ಗಳನ್ನು ಬಳಸಲಾಗಿದೆ ಎಂದು ಪೊಲೀಸರು ಮತ್ತು ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದ ಮಧ್ಯೆ ಈ ಬೆಳವಣಿಗೆಗಳು ನಡೆದಿವೆ. ಪ್ರತಿಭಟನಾನಿರತರು ಪೆಲೆಟ್‌ನಿಂದ ಉಂಟಾದ ಗಾಯಗಳ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ. ಸಿಆರ್‌ಪಿಎಫ್ ಘಟನೆಯ ಕುರಿತು ವಿವರವಾದ ವರದಿಯನ್ನು ಸಿದ್ಧಪಡಿಸುತ್ತಿದ್ದು, ಪರಿಶೀಲನೆಯ ನಂತರ ಅಧಿಕೃತ ಸಿಆರ್‌ಪಿಎಫ್/ಆರ್‌ಎಎಫ್ ತನಿಖಾ ವರದಿ ಹೊರಬರುವ ನಿರೀಕ್ಷೆಯಿದೆ.
ಕನ್ನಾಟ್ ಪ್ಲೇಸ್ ಪ್ರದೇಶದಲ್ಲಿ 47 ಕ್ಕೂ ಹೆಚ್ಚು ಆರ್‌ಎಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಪ್ರತಿಭಟನೆಯ ಸಮಯದಲ್ಲಿ ದೆಹಲಿ ಪೊಲೀಸರು ಮತ್ತು ಆರ್‌ಎಎಫ್ ಅಶ್ರುವಾಯು ಮತ್ತು ಲಾಠಿ ಚಾರ್ಜ್ ಸೇರಿದಂತೆ ಜನಸಂದಣಿ ನಿಯಂತ್ರಣ ಕ್ರಮಗಳನ್ನು ಬಳಸಿದ್ದವು.
ಪ್ರತಿಭಟನೆಯ ಬಳಿಕ ಆರ್‌ಎಎಫ್ ಸಿಬ್ಬಂದಿಯ ಕ್ರಮಗಳ ಕುರಿತು ಸಿಆರ್‌ಪಿಎಫ್ ಇದೀಗ ಆಂತರಿಕ ವೃತ್ತಿಪರ ಪರಿಶೀಲನೆ ನಡೆಸುತ್ತಿದೆ. ಪ್ರತಿ ಪ್ರಮುಖ ಕಾರ್ಯಾಚರಣೆಯ ನಂತರ ಇಂತಹ ಘಟನೆ ನಂತರದ ಮೌಲ್ಯಮಾಪನಗಳನ್ನು ನಡೆಸುವುದು ಪಡೆಯ ಪ್ರಮಾಣಿತ ಕಾರ್ಯಾಚರಣಾ ವಿಧಾನದ ಭಾಗವಾಗಿದೆ. ಈ ಪರಿಶೀಲನೆಯಲ್ಲಿ ಆರ್‌ಎಎಫ್ ಸಿಬ್ಬಂದಿಯ ಕ್ರಮಗಳು ಮತ್ತು ಸಂಪೂರ್ಣ ಕಾರ್ಯಾಚರಣೆಯ ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗುತ್ತದೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರಿಗೆ ಪೆಲೆಟ್ ಗನ್‌ನಿಂದ ಗಾಯಗಳಾದ ಕನಿಷ್ಠ ನಾಲ್ಕು ಪ್ರಕರಣಗಳು ಇದುವರೆಗೆ ವರದಿಯಾಗಿವೆ. ಜುಲೈ 20ರಂದು ಸಿಜೆಪಿ ಆಯೋಜಿಸಿದ್ದ ಸಂಸತ್ ಚಲೋ ಮೆರವಣಿಗೆ ವೇಳೆ ಅವರಿಗೆ ಪೆಲೆಟ್‌ಗಳಿಂದ ಗಾಯಗಳಾಗಿವೆ ಎಂಬುದನ್ನು ಅವರ ವೈದ್ಯಕೀಯ ದಾಖಲೆಗಳು ದೃಢಪಡಿಸಿವೆ. ಶುಕ್ರವಾರ (ಜು.24), ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದೇಹ ಮತ್ತು ಮುಖದಾದ್ಯಂತ ಗಾಯಗಳಾಗಿದ್ದ ಸಂತ್ರಸ್ತರಲ್ಲಿ ಒಬ್ಬರಾದ ಸಾಹಿಲ್ ಲೋಚಾಬ್ ಅವರೊಂದಿಗೆ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ್ದರು.
ಪೆಲೆಟ್ ಗುಂಡು ಹಾರಿಸಿರುವುದನ್ನು ಸರ್ಕಾರ ನಿರಾಕರಿಸುತ್ತಿದೆ. ಆದರೆ ಸಾಕ್ಷ್ಯ ಇಲ್ಲಿದೆ ಎಂದು ರಾಹುಲ್ ಗಾಂಧಿ ಸಾಹಿಲ್ ಅವರ ಟಿ-ಶರ್ಟ್ ಎತ್ತಿ, ಅವರ ದೇಹದ ಮೇಲ್ಭಾಗದಲ್ಲಿ ಪೆಲೆಟ್ ಗುಂಡು ಹಾರಿಸಲಾದ ಗಾಯದ ಗುರುತುಗಳ ಬಗ್ಗೆ ತೋರಿಸಿದ್ದರು. ಒಂದು ಪೆಲೆಟ್ ಗುಂಡು ತಗುಲಿ ಸಾಹಿಲ್‌ನ ಒಂದು ಕಣ್ಣಿಗೆ ತೀವ್ರ ಹಾನಿಯಾಗಿದೆ ಎಂದು ಅವರು ಹೇಳಿದರು. “ಸರ್ಕಾರ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಅವರು ಭಾರತದ ಭವಿಷ್ಯದ ಮೇಲೆ ಗುಂಡು ಹಾರಿಸಿದ್ದಾರೆ” ಎಂದು ರಾಹುಲ್ ಆಕ್ರೋಶ ಹೊರಹಾಕಿದರು.